ಜೂನ್ ಮಾಸಾಂತ್ಯದವರೆಗಷ್ಟೇ ಹೇಮಾವತಿ ಲಭ್ಯ

ತುಮಕೂರು

ವಿಶೇಷ ವರದಿ:ಆರ್.ಎಸ್.ಅಯ್ಯರ್

      ತುಮಕೂರು ನಗರದ ಜನತೆಗೆ ಕುಡಿಯುವ ಸಲುವಾಗಿ ಹೇಮಾವತಿ ನೀರನ್ನು ಪೂರೈಸುವ ಏಕೈಕ ಜಲಮೂಲವಾದ ಬುಗುಡನಹಳ್ಳಿಯ `ಹೇಮಾವತಿ ಜಲಸಂಗ್ರಹಾಗಾರ’ದಲ್ಲಿ ದಿನೇ ದಿನೇ ಹೇಮಾವತಿ ನೀರಿನ ಸಂಗ್ರಹ ಇಳಿಮುಖವಾಗುತ್ತಿದ್ದು, ಜೂನ್ ಮಾಸಾಂತ್ಯದವರೆಗಷ್ಟೇ ಆ ನೀರು ತುಮಕೂರು ನಗರದ ನಾಗರಿಕರ ಬಳಕೆಗೆ ಲಭಿಸಬಹುದು ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ.

      ಈಗ ಮಳೆ ಬರಬೇಕು. ಮಳೆ ನೀರಿನಿಂದ ಹಾಸನ ಜಿಲ್ಲೆ ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ ನೀರು ಹರಿಯಬೇಕು. ಜಲಾಶಯದಲ್ಲಿ ಮೊದಲಿಗೆ ನೀರು ಸಂಗ್ರಹವಾಗಬೇಕು. ನಂತರ ಸರ್ಕಾರಿ ಪ್ರಕ್ರಿಯೆಗಳನುಸಾರ ನಾಲೆಗಳಿಗೆ ನೀರನ್ನು ಬಿಡುಗಡೆ ಮಾಡಬೇಕು. ಆ ರೀತಿ ತುಮಕೂರು ನಾಲೆಯಲ್ಲಿ ಹರಿದುಬರುವ ನೀರು ಮತ್ತೆ ಸಕಾಲಕ್ಕೆ ಬುಗುಡನಹಳ್ಳಿ ಜಲಸಂಗ್ರಹಾಗಾರ ತಲುಪಬೇಕು.

        ಈ ಪ್ರಕ್ರಿಯೆ ಆಗುವವರೆಗೂ ಹೇಮಾವತಿ ನೀರಿಗಾಗಿ ಚಾತಕ ಪಕ್ಷಿಗಳಂತೆ ತುಮಕೂರು ನಗರದ ನಾಗರಿಕರು ಕಾಯುತ್ತಿರಬೇಕು” ಎಂಬ ಆತಂಕದ ಚರ್ಚೆಯೂ ಇದೀಗ ಪಾಲಿಕೆಯ ಒಳಗೆ ಮತ್ತು ಹೊರಗೆ ಆರಂಭವಾಗಿದೆ.ನಗರದಲ್ಲಿ ಬೇಸಿಗೆಯ ಬಿಸಿಲಿನ ತಾಪ ಅಧಿಕವಾಗುತ್ತಿದೆ. ನೀರಿನ ಬಳಕೆಯೂ, ಬೇಡಿಕೆಯೂ ಸಹಜವಾಗಿ ಹೆಚ್ಚುತ್ತಿದೆ.

       ಎಲ್ಲರ ಚಿತ್ತ ಹೇಮಾವತಿ ನೀರಿನತ್ತಲೇ ಕೇಂದ್ರೀಕರಿಸಲ್ಪಡುತ್ತಿದೆ. “ಬುಗುಡನಹಳ್ಳಿ ಹೇಮಾವತಿ ಜಲಸಂಗ್ರಹಾಗಾರದಲ್ಲಿ ನೀರು ಎಷ್ಟಿದೆ? ಇನ್ನೆಷ್ಟು ದಿನ ಲಭಿಸಬಹುದು?” ಎಂಬ ಪ್ರಶ್ನೆಗಳು ಪ್ರಜ್ಞಾವಂತರನ್ನು ಕಾಡತೊಡಗಿದೆ.

  54 ಎಂ.ಸಿ.ಎï.ಟಿ. ನೀರಿದೆ

        ಬುಗುಡನಹಳ್ಳಿ ಜಲಸಂಗ್ರಹಾಗಾರದಲ್ಲಿ ಈಗ 54 ಎಂ.ಸಿ.ಎ.ಟಿ.ಯಷ್ಟು ಹೇಮಾವತಿ ನೀರು ಲಭ್ಯವಿದೆ. ಇದರಿಂದ ಪ್ರತಿನಿತ್ಯ 34 ಎಂ.ಎಲ್.ಡಿ.ಯಷ್ಟು ನೀರನ್ನು ತುಮಕೂರು ನಗರಕ್ಕೆ ಸರಬರಾಜು ಮಾಡಿಕೊಳ್ಳಲಾಗುತ್ತಿದೆ. ನಗರದ ಶಿರಾಗೇಟ್ ಹೊರವಲಯದ ಪಿ.ಎನ್.ಪಾಳ್ಯದಲ್ಲಿರುವ ಶುದ್ಧೀಕರಣ ಘಟಕದಲ್ಲಿ ಹೇಮಾವತಿ ನೀರನ್ನು ಶುದ್ಧೀಕರಿಸಿ ನಗರದ ಜನತೆಗೆ ವಿತರಿಸಲಾಗುತ್ತಿದೆ. ಸರಾಸರಿ ಪ್ರತಿ ನಾಲ್ಕು ದಿನಗಳಿಗೊಮ್ಮೆ ನಗರದಲ್ಲಿ ಹೇಮಾವತಿ ನೀರು ಪೂರೈಕೆಯಾಗುತ್ತಿದೆ. ಜಲಸಂಗ್ರಹಾಗಾರದಲ್ಲಿರುವ ನೀರು ಬಿಸಿಲಿನ ಪ್ರಭಾವದಿಂದ ಆವಿಯಾಗುವುದು ಹಾಗೂ ಭೂಮಿಯಲ್ಲಿ ನೀರು ಇಂಗುವುದು ಪ್ರಕೃತಿ ಸಹಜ ಕ್ರಿಯೆಗಳಾಗಿವೆ. ಇದನ್ನು ಹೊರತುಪಡಿಸಿ ಇದೇ ಪ್ರಮಾಣದ ನೀರು ವಿತರಣೆಯನ್ನೇ ಮುಂದುವರೆಸಿದರೆ ಜೂನ್ ಮಾಸಾಂತ್ಯದವರೆಗೂ ಹೇಮಾವತಿ ನೀರು ಲಭಿಸಬಹುದು ಎಂಬುದು ಪಾಲಿಕೆಯ ಲೆಕ್ಕಾಚಾರವಾಗಿದೆ.

ಬೇಡಿಕೆಗಿಂತ ಕಡಿಮೆ ನೀರು

        ಲಭ್ಯವಿರುವ ಮಾಹಿತಿ ಪ್ರಕಾರ, ತುಮಕೂರು ನಗರದಲ್ಲಿ ಈಗ 3 ಲಕ್ಷ 80 ಸಾವಿರದಷ್ಟು ಜನಸಂಖ್ಯೆ ಇದೆ. ಈ ಜನಸಂಖ್ಯೆಗೆ ಅನುಗುಣವಾಗಿ ಪ್ರತಿನಿತ್ಯ 57 ಎಂ.ಎಲ್.ಡಿ.ಯಷ್ಟು ನೀರು ಬೇಕಾಗುತ್ತದೆ. ಆದರೆ ದೂರದೃಷ್ಟಿಯನ್ನಿರಿಸಿಕೊಂಡು ಈಗ ಬುಗುಡನಹಳ್ಳಿಯ ಹೇಮಾವತಿ ಜಲಸಂಗ್ರಹಾಗಾರದಿಂದ ದೈನಿಕ 34 ಎಂ.ಎಲ್.ಡಿ.ಯಷ್ಟು ನೀರನ್ನು ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಮಿಕ್ಕಂತೆ ಪಾಲಿಕೆ ಸುಪರ್ದಿನ ಕೊಳವೆ ಬಾವಿಗಳಿಂದ ದೈನಿಕ 12 ಎಂ.ಎಲ್.ಡಿ.ಯಷ್ಟು ನೀರನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ.

       ಹೇಮಾವತಿ ಮತ್ತು ಕೊಳವೆಬಾವಿಗಳ ನೀರನ್ನು ಸೇರಿಸಿದರೂ ಇದರ ಪ್ರಮಾಣ 46 ಎಂ.ಎಲ್.ಡಿ.ಯಷ್ಟು ಮಾತ್ರ ಆಗುತ್ತದೆ. ಅಂದರೆ ದೈನಿಕ 57 ಎಂ.ಎಲ್.ಡಿ. ಬದಲಿಗೆ 46 ಎಂ.ಎಲ್.ಡಿ.ಯಷ್ಟು ನೀರು ಮಾತ್ರ ಸರಬರಾಜಾಗುತ್ತಿದೆ. ಪ್ರತಿನಿತ್ಯ 11 ಎಂ.ಎಲ್.ಡಿ.ಯಷ್ಟು ನೀರಿನ ಕೊರತೆಯನ್ನು ತುಮಕೂರು ನಗರ ಈಗ ಎದುರಿಸುತ್ತಿದೆ ಎಂಬುದು ಕಠೋರ ವಾಸ್ತವದ ಸಂಗತಿಯಾಗಿದೆ.

        ಮೂಲಗಳ ಪ್ರಕಾರ, ಬುಗುಡನಹಳ್ಳಿ ಜಲಸಂಗ್ರಹಾಗಾರದಲ್ಲಿರುವ ಹೇಮಾವತಿ ನೀರನ್ನು ಸಾಧ್ಯವಾದಷ್ಟು ಗರಿಷ್ಟ ದಿನಗಳವರೆಗೂ ಬಳಸಿಕೊಳ್ಳಬೇಕೆಂಬ ಉದ್ದೇಶ ಪಾಲಿಕೆಯದ್ದಾಗಿದ್ದು, ಹಿತಮಿತವಾಗಿ ಆ ನೀರನ್ನು ಸರಬರಾಜು ಮಾಡುತ್ತಿದೆ. ಮನಬಂದಂತೆ ಬಳಸಿದರೆ ಜಲಸಂಗ್ರಹಾಗಾರ ಅತಿ ಶೀಘ್ರವಾಗಿಯೇ ಬರಿದಾಗುತ್ತದೆ. ಆಗ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ. ಹೀಗಾಗದಿರಲೆಂಬ ಕಾರಣದಿಂದ ಆ ನೀರನ್ನು ಎಚ್ಚರಿಕೆಯಿಂದ ಬಳಸಲಾಗುತ್ತಿದೆ.

         ಮತ್ತೊಂದು ಜಲಮೂಲವಾದ ಮೈದಾಳ ಗ್ರಾಮದ ಕೆರೆಯಿಂದಲೂ ತುಮಕೂರು ನಗರಕ್ಕೆ ಕುಡಿಯುವ ಸಲುವಾಗಿ ಸೀಮಿತ ಪ್ರಮಾಣದಲ್ಲಿ ನೀರು ಲಭಿಸುತ್ತಿದೆಯಾದರೂ, ಹೇಮಾವತಿ ನೀರೇ ತುಮಕೂರು ನಗರಕ್ಕೆ ಏಕೈಕ ಆಸರೆಯಾಗಿದೆ. ಹೀಗಾಗಿ ಹೇಮಾವತಿ ನೀರು ಈ ವರ್ಷ ಯಾವಾಗ ಹರಿದು ಬಂದೀತು ಎಂಬುದಷ್ಟೇ ಈಗ ಎಲ್ಲರ ಚಿಂತೆ.

 ಹಿತಮಿತ ನೀರಿನ ಬಳಕೆ

         ನಗರದಲ್ಲಿ ಈಗ ಬೇಡಿಕೆಗಿಂತಲೂ ನೀರಿನ ಪೂರೈಕೆ ಕಡಿಮೆ ಇರುವುದರಿಂದ ಸಾರ್ವಜನಿಕರು ಅಮೂಲ್ಯವಾದ ನೀರನ್ನು ಕಿಂಚಿತ್ತೂ ವ್ಯರ್ಥಮಾಡದೆ, ಹಿತಮಿತವಾಗಿ ಬಳಸಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಕಳಕಳಿಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link