ತುಮಕೂರು
ತುಮಕೂರು ಮಹಾನಗರ ಪಾಲಿಕೆಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಹಾಗೂ ಹಾಲಿ ಕೊರಟಗೆರೆ ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ಇಂಜಿನಿಯರ್ ಟಿ.ಆರ್.ರಘುನಾಥ ಅವರನ್ನು ಸೇವೆಯಿಂದ ವಜಾಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿರುವ ಬೆಳವಣಿಗೆಯೊಂದು ನಡೆದಿದೆ.
ಇಲಾಖಾ ವಿಚಾರಣೆಯ ವರದಿಯನ್ನು ಒಪ್ಪಿ ಉಪಲೋಕಾಯುಕ್ತರು ಮಾಡಿದ ಶಿಫಾರಸ್ಸಿನನ್ವಯ ಇವರಿಗೆ ದಂಡನೆಯನ್ನು ವಿಧಿಸಲು ಸರ್ಕಾರ ಶಿಫಾರಸು ಮಾಡಿದೆ. ಅದರಂತೆ ಇವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ವಿಚಾರಣಾ ವರದಿಯನ್ನು ಅಂಗೀಕರಿಸಿ ಇವರನ್ನು ತಕ್ಷಣದಿಂದ ಸೇವೆಯಿಂದ ತೆಗೆದು ಹಾಕುವ ದಂಡನೆ ವಿಧಿಸಿ ಆದೇಶ (ನಅಇ/07/ತುಮಪಾ/2017, ಬೆಂಗಳೂರು, ದಿನಾಂಕ: 18-01-2020) ಹೊರಡಿಸಲಾಗಿದೆ. ಈ ಆದೇಶಕ್ಕೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ವೆಂಕಟೇಶ್ ಸಹಿ ಹಾಕಿದ್ದಾರೆ. ಸೇವೆಯಿಂದ ವಜಾಗೊಂಡಿರುವ ರಘುನಾಥ ಸಮಾನ ಕೆಲಸಕ್ಕೆ ಸಮಾನ ವೇತನ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ರಘುನಾಥ ಅವರು ಲಿಖಿತ ಹೇಳಿಕೆಯನ್ನು ಸಲ್ಲಿಸಿ ಅವರ ಮೇಲಿನ ಆರೋಪಗಳನ್ನು ನಿರಾಕರಿಸಿ ಲೋಕಾಯುಕ್ತ ಶಿಫಾರಸ್ಸನ್ನು ಕೈಬಿಡುವಂತೆ ಕೋರಿದ್ದರಾದರೂ, ಅವರ ಲಿಖಿತ ಹೇಳಿಕೆಯಲ್ಲಿ ಪರಿಗಣಿಸಬಹುದಾದ ಅಂಶಗಳು ಕಂಡುಬರುವುದಿಲ್ಲ. ಹಾಗೂ ಆರೋಪಗಳನ್ನು ನಿರಾಕರಿಸುವಂತಹ ದಾಖಲೆಗಳನ್ನು ಹಾಜರುಪಡಿಸಲು ವಿಫಲರಾಗಿರುತ್ತಾರೆಂದು ಸದರಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಪ್ರಕರಣದ ಹಿನ್ನೆಲೆ
ಪಾಲಿಕೆ ವ್ಯಾಪ್ತಿಯ ಜಗನ್ನಾಥಪುರದಲ್ಲಿ ಅನಧಿಕೃತ ಮನೆ ನಿರ್ಮಾಣ ಹಾಗೂ ಒತ್ತುವರಿ ಆಗಿರುವ ಬಗ್ಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದೆ ಕರ್ತವ್ಯಲೋಪ ಎಸಗಿದ್ದಾರೆಂದು ಎಂ.ಶಿವಾನಂದಯ್ಯ ಎಂಬುವವರು ಪಾಲಿಕೆಯ ಕಿರಿಯ ಇಂಜಿನಿಯರ್‍ಗಳಾದ ಎನ್.ಕೆ. ವಿಶ್ವನಾಥ ಮತ್ತು ಟಿ.ಆರ್.ರಘುನಾಥ ಇವರ ವಿರುದ್ಧ ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಅದರಂತೆ ತನಿಖೆ ಕೈಗೊಳ್ಳಲಾಗಿತ್ತು. ಇಲಾಖಾ ವಿಚಾರಣೆ ಕೈಗೊಳ್ಳಲು ಉಪಲೋಕಾಯುಕ್ತರಿಗೆ ವಹಿಸಲಾಗಿತ್ತು. ವಿಶ್ವನಾಥ ಮತ್ತು ರಘುನಾಥ ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸಿ ಅವರು ಸಲ್ಲಿಸಿದ ವರದಿಯನ್ನು ಹಾಗೂ ಉಪಲೋಕಾಯುಕ್ತರ ಶಿಫಾರಸ್ಸನ್ನು ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು.
ರಘುನಾಥ ಅವರು ಸಮಾನ ಕೆಲಸಕ್ಕೆ ಸಮಾನ ವೇತನದಾರರಾಗಿರುವುದರಿಂದ ಅವರನ್ನು ಸೇವೆಯಿಂದ ವಜಾ ಮಾಡಲು ಉಪಲೋಕಾಯುಕ್ತರು ಶಿಫಾರಸ್ಸು ಮಾಡಿದ್ದರು. ನಂತರದಲ್ಲಿ ರಘುನಾಥ ಅವರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿ, ಲಿಖಿತ ಹೇಳಿಕೆ ಪಡೆಯಲಾಗಿತ್ತು. ಇವೆಲ್ಲ ಬೆಳವಣಿಗೆಗಳ ಬಳಿಕ ಅಂತಿಮವಾಗಿ ಅವರನ್ನು ವಜಾಗೊಳಿಸಿ ಆದೇಶಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ