ಹುಳಿಯಾರು
ಬರೀ ಪದವಿದ್ದರೆ ಕಾವ್ಯವಾಗುವುದಿಲ್ಲ. ಕಾವ್ಯ ಬರೆಯಬೇಕೆನ್ನುವವರು ಮೊದಲು ಅಧ್ಯಯನಶೀಲರಾಗಬೇಕು ಎಂದು ಹಿರಿಯ ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು ಆದ ತಿಪಟೂರಿನ ಪ್ರೊ.ಟಿ.ಎಸ್.ನಾಗರಾಜ ಶೆಟ್ಟಿಯವರು ಕಿವಿಮಾತು ಹೇಳಿದರು.
ಹುಳಿಯಾರು ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇವರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ “ಸ್ಥಳೀಯ ಹಿರಿಯ ಸಾಹಿತಿಗಳೊಂದಿಗೆ ಸಾಹಿತ್ಯ ರಚನೆ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ” ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾವ್ಯವೆನ್ನುವುದು ಹುಡುಕಾಟವಲ್ಲ, ಅದೊಂದು ಮಿಡುಕಾಟ. ಕಾವ್ಯದಲ್ಲಿ ಮನರಂಜನೆ, ಶ್ರೀಮಂತಿಕೆ ಮತ್ತು ಉದಾತ್ತತೆ ಇರಬೇಕು. ಅದನ್ನು ಓದಿದವರು ಮೊದಲಿಗಿಂತ ಬೇರೆಯದ್ದೇ ವ್ಯಕ್ತಿತ್ವ ಹೊಂದಿದವರಾಗಿರಬೇಕು.ಅಂತಹ ಕಾವ್ಯ ಶ್ರೇಷ್ಠ ಕಾವ್ಯ ಎನಿಸಿಕೊಳ್ಳುತ್ತದೆ ಎಂದರು.
ಕಾವ್ಯ ಎಂದರೇನು?, ಕಾವ್ಯ ಹುಟ್ಟುವ ಹಾಗೂ ಕಟ್ಟುವ ಬಗ್ಗೆ ಇತ್ಯಾದಿಗಳ ಬಗ್ಗೆ ನಮ್ಮ ಪ್ರಾಚೀನ ಕಾವ್ಯ ಮೀಮಾಂಸಕರಾದ ಭಾಮಹ, ರಾಜಶೇಖರ, ಅಭಿನವಗುಪ್ತ ಮುಂತಾದವರ ಹೇಳಿಕೆಯೊಂದಿಗೆ ಕುವೆಂಪು, ಬೇಂದ್ರೆ ಮುಂತಾದ ಕವಿಗಳ ಕವನಗಳ ಸಾಲುಗಳನ್ನು ಉದಾಹರಿಸುತ್ತಾ ವಿವರಿಸಿದರು
ಸಾಹಿತ್ಯದ ವಿವಿಧ ಪ್ರಕಾರಗಳಾದ ಚುಟುಕ, ಪ್ರಬಂಧ, ಗದ್ಯ, ಪದ್ಯ ಹೀಗೆ ಎಲ್ಲಾ ವಿಭಾಗಗಳ ರಚನಾ ವಿಧಾನವನ್ನು ಉದಾಹರಣೆಗಳೊಂದಿಗೆ ವಿವರಿಸಿದರು. ನಂತರ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಅವರ ಅನುಮಾನಗಳನ್ನು ಪರಿಹರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಕೃಷ್ಣಮೂರ್ತಿ ಬಿಳಿಗೆರೆ ಮಾತನಾಡಿ ಸತತ ಅಧ್ಯಯನ, ವಿದ್ವಾಂಸರ ಸಂಪರ್ಕ ಹಾಗೂ ಸಮಾಜವನ್ನು ಒಳಗಣ್ಣಿನಿಂದ ನೋಡುವ ಕಲೆ ಇದ್ದರೆ ಎಲ್ಲರೂ ಕಾವ್ಯ ರಚಿಸಬಹುದು ಎಂದರು.
ಜಾಣಜಾಣೆಯರ ಬಳಗದ ಅಧ್ಯಕ್ಷೆ ರೂಪಾ.ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ.ವಲಿ ಆರ್ ಸ್ವಾಗತಿಸಿ, ಉಪನ್ಯಾಸಕಿ ಬಿ.ವಿನಿತಾಶ್ರೀ ವಂದಿಸಿದರು. ಬಳಗದ ಸಂಚಾಲಕರಾದ ಪ್ರೊ.ಮೋಹನ್ ಕುಮಾರ್ ಎಂ.ಜೆ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕರಾದ ಮಂಜುನಾಥ್, ರೇಣುಕಮ್ಮ ಮತ್ತಿತರರು ಉಪಸ್ಥಿತರಿದ್ದರು.
