ತುಮಕೂರು: ಗಣೇಶ ವಿಸರ್ಜನೆಗೆ ಜ್ಯೋತಿಪುರದಲ್ಲಿ ಅವಕಾಶ

ತುಮಕೂರು

    ಈ ವರ್ಷ ಗಣಪತಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಗಣಪತಿಗಳನ್ನು ವಿಸರ್ಜಿಸಲು ತುಮಕೂರು ಮಹಾನಗರ ಪಾಲಿಕೆಯು ಹೊಸ ಕ್ರಮ ಕೈಗೊಂಡಿದೆ. ತುಮಕೂರಿನ ವಿದ್ಯಾನಗರದ ವಾಟರ್ ವಕ್ರ್ಸ್ ಜಾಗದಲ್ಲಿ ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡುವುದನ್ನು ನಿರ್ಬಂಧಿಸಿದ್ದು, ಇದಕ್ಕೆ ಬದಲಿಯಾಗಿ ನಗರದ ಬೆಳಗುಂಬ ರಸ್ತೆಯಲ್ಲಿರುವ ಜ್ಯೋತಿಪುರದ ಪಂಪ್ ಹೌಸ್ ಆವರಣದಲ್ಲಿ ಗಣಪತಿ ವಿಸರ್ಜನೆಗೆ ವ್ಯವಸ್ಥೆ ಮಾಡಲಿದೆ.

  “ವಿದ್ಯಾನಗರದ ವಾಟರ್‍ವಕ್ರ್ಸ್ ಚಾಲ್ತಿಯಲ್ಲಿದೆ. ಅಲ್ಲಿ ನೀರು ಶುದ್ಧೀಕರಣವಾಗುವ ವ್ಯವಸ್ಥೆ ಇದೆ. ಇದು ಜಲಸಂಗ್ರಹಾಗಾರವೂ ಆಗಿದೆ. ಇಲ್ಲಿಂದ ಸಾರ್ವಜನಿಕರಿಗೆ ಹೇಮಾವತಿ ಹಾಗೂ ಮೈದಾಳ ಕೆರೆಯ ನೀರು ಕುಡಿಯುವ ಸಲುವಾಗಿ ಪೂರೈಕೆಯಾಗುತ್ತದೆ. ಹೀಗಾಗಿ ಈ ಸ್ಥಳದ ಸುರಕ್ಷತೆ ಮತ್ತು ನೈರ್ಮಲ್ಯವನ್ನು ಕಾಪಾಡಬೇಕು. ಪ್ರತಿವರ್ಷ ಗಣಪತಿ ವಿಸರ್ಜನೆಯ ಕಾರಣದಿಂದ ಇಲ್ಲಿನ ಸ್ವಚ್ಛತೆಗೆ ಅಡಚಣೆ ಆಗುತ್ತಿದ್ದ ಹಿನ್ನೆಲೆಯಲ್ಲಿ ಈ ವರ್ಷ ಗಣಪತಿ ವಿಸರ್ಜನೆಗೆ ಬದಲಿ ವ್ಯವಸ್ಥೆ ಮಾಡುವ ನಿಲುವಿಗೆ ಬರಲಾಗಿದೆ” ಎಂದು ಪಾಲಿಕೆಯ ಆಯುಕ್ತ ಟಿ.ಭೂಬಾಲನ್ ಹೇಳಿದ್ದಾರೆ.

    ಜ್ಯೋತಿಪುರ ಪಂಪ್‍ಹೌಸ್ ಆವರಣದಲ್ಲಿ ಗಣಪತಿ ಮೂರ್ತಿ ವಿಸರ್ಜನೆಗೆ ಅಗತ್ಯವಿರುವ ಎಲ್ಲ ಸೂಕ್ತ ವ್ಯವಸ್ಥೆಗಳನ್ನು ಮಾಡಲಿದ್ದು, ಸಾರ್ವಜನಿಕ ಗಣಪತಿಗಳನ್ನು ಅಲ್ಲೇ ವಿಸರ್ಜಿಸಬೇಕು ಎಂದು ಪಾಲಿಕೆಯು ಮನವಿ ಮಾಡಿದೆ.
ಗಣಪತಿ ವಿಗ್ರಹ ವಿಸರ್ಜನೆಗೆ

6 ಕಡೆ ಪಾಲಿಕೆ ವಾಹನ

   “ಗಣಪತಿ ಹಬ್ಬದ ದಿನ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಪ್ರತಿಷ್ಠಾಪಿಸಿರುವ ಗಣಪತಿಗಳನ್ನು ವಿಸರ್ಜಿಸಲು ಅನುಕೂಲವಾಗುವಂತೆ ತುಮಕೂರು ನಗರದ ಆರು ಪ್ರತ್ಯೇಕ ಸ್ಥಳಗಳಲ್ಲಿ ಪಾಲಿಕೆಯಿಂದ ನೀರಿನ ಡ್ರಂ ಇರುವ ವಾಹನದ ವ್ಯವಸ್ಥೆ ಮಾಡಲಾಗುತ್ತಿದೆ” ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್ ತಿಳಿಸಿದ್ದಾರೆ.

    ”ಬಟವಾಡಿಯ ಆಂಜನೇಯ ದೇವಾಲಯದ ಬಳಿ, ಶೆಟ್ಟಿಹಳ್ಳಿ ಮುಖ್ಯರಸ್ತೆಯ ರಾಘವೇಂದ್ರ ಸ್ವಾಮಿಗಳ ಮಠದ ಬಳಿ, ಮಹಾನಗರ ಪಾಲಿಕೆ ಕಚೇರಿಯ ಆವರಣದಲ್ಲಿ, ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ, ಅಗ್ರಹಾರದ ಶಿಶುವಿಹಾರ ಮೈದಾನದ ಹತ್ತಿರ, ಕ್ಯಾತಸಂದ್ರದ ಬಸ್ ನಿಲ್ದಾಣದ ಸಮೀಪ -ಹೀಗೆ ಒಟ್ಟು ಆರು ಸ್ಥಳಗಳಲ್ಲಿ ಆಯಾ ಪ್ರದೇಶದ ನಾಗರಿಕರ ಅನುಕೂಲಕ್ಕಾಗಿ ಪಾಲಿಕೆಯಿಂದ ನೀರಿನ ಟ್ಯಾಂಕ್ ಉಳ್ಳ ವಾಹನವನ್ನು ವ್ಯವಸ್ಥೆ ಮಾಡಲಾಗುವುದು. ಗಣೇಶನ ಹಬ್ಬದ ದಿನ ಸಂಜೆ 4 ರಿಂದ ರಾತ್ರಿ 10 ಗಂಟೆಯವರೆಗೂ ಈ ವಾಹನಗಳು ಸದರಿ ನಿಗದಿತ ಸ್ಥಳದಲ್ಲಿ ನಿಲುಗಡೆ ಆಗಿರುತ್ತವೆ. ಸಾರ್ವಜನಿಕರು ತಮ್ಮ ಮನೆಯ ಗಣಪತಿ ವಿಗ್ರಹಗಳನ್ನು ಇಲ್ಲಿಗೆ ತಂದು ವಿಸರ್ಜಿಸಬಹುದು” ಎಂದು ಅವರು ಹೇಳಿದ್ದಾರೆ.

   “ಇದರೊಂದಿಗೆ ಜ್ಯೋತಿ ಪುರ ಪಂಪ್‍ಹೌಸ್ ಆವರಣದಲ್ಲೂ ಪ್ರತ್ಯೇಕ ವ್ಯವಸ್ಥೆ ಇದ್ದು, ಸಾರ್ವಜನಿಕರು ಕಡ್ಡಾಯವಾಗಿ ಈ ನಿಗದಿತ ಸ್ಥಳಗಳಲ್ಲೇ ಗಣಪತಿಗಳನ್ನು ವಿಸರ್ಜಿಸಿ ಸಹಕಾರ ನೀಡಬೇಕು” ಎಂದು ಅವರು ಕೋರಿದ್ದಾರೆ.

ಪಿ.ಓ.ಪಿ. ವಿಗ್ರಹ ನಿಷೇಧ

    “ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ.) ಅಥವಾ ರಾಸಾಯನಿಕ ಬಣ್ಣ ಲೇಪಿತ ವಿಗ್ರಹಗಳನ್ನು ಪ್ರತಿಷ್ಠಾಪಿಸುವುದನ್ನು ನಿಷೇಧಿಸಲಾಗಿದೆ. ಒಂದುವೇಳೆ ಈ ರೀತಿಯ ಗಣಪನನ್ನು ಪ್ರತಿಷ್ಠಾಪಿಸಿದರೆ ದಂಡ ವಿಧಿಸಲಾಗುವುದು ಮತ್ತು ಅಂತಹ ವಿಗ್ರಹಗಳನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು” ಎಂದು ಆರೋಗ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಪೌರಾಡಳಿತ ಇಲಾಖೆಯ ನಿರ್ದೇಶಕರ ಸೂಚನೆ

    ಈ ಮಧ್ಯ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಆಗಸ್ಟ್ 23 ರಂದು ಜಿಲ್ಲಾಧಿಕಾರಿಗಳು ಮತ್ತು ಮಹಾನಗರ ಪಾಲಿಕೆಯ ಆಯುಕ್ತರುಗಳಿಗೆ ಪತ್ರ ಬರೆದಿದ್ದು, “ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈಗಾಗಲೇ ವಿಸರ್ಜಿಸದೆ ಉಳಿದಿರುವ ಪಿ.ಓ.ಪಿ. ಅಥವಾ ಬಣ್ಣದ ವಿಗ್ರಹಗಳನ್ನು ಪತ್ತೆ ಮಾಡಿ,ಸುಪರ್ದಿಗೆ ತೆಗೆದುಕೊಂಡು ಅಂತಹ ವಸ್ತುಗಳನ್ನು ಸ್ಥಳೀಯ ಸಂಸ್ಥೆಯಲ್ಲಿ ಇರುವ ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ ಸಾಗಿಸಿ ಶ್ರೆಡರ್‍ಗಳನ್ನು ಉಪಯೋಗಿಸಿಕೊಂಡು ಒಂದೇ ಸ್ಥಳದಲ್ಲಿ (ಲ್ಯಾಂಡ್‍ಫಿಲ್ ಸೈಟ್) ಧಾರ್ಮಿಕ ವಿಧಿ ವಿಧಾನಗಳಿಗೆ ಭಂಗವಾಗದಂತೆ ವಿಲೇವಾರಿ ಮಾಡಲು ಕ್ರಮ ವಹಿಸಲು” ಸೂಚಿಸಿದ್ದಾರೆ.

    “ರಾಜ್ಯದ ಜಿಲ್ಲೆ ಅಥವಾ ತಾಲ್ಲೂಕುಗಳಿಗೆ ಬೇರೆ ರಾಜ್ಯದಿಂದ ಬರುವ ಪಿ.ಓ.ಪಿ. ವಿಗ್ರಹಗಳನ್ನು ತಡೆಗಟ್ಟಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಹಾಗೂ ಅಂತಹ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಟ್ಟುನಿಟ್ಟಿನ ಕ್ರಮವನ್ನು ಜಿಲ್ಲಾಡಳಿತ ಮಟ್ಟದಲ್ಲಿ ತೆಗೆದುಕೊಳ್ಳಲು” ಸೂಚನೆ ನೀಡಿದ್ದಾರೆ.

     “ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ತಯಾರಿಸಿದ ಬಣ್ಣ ಲೇಪಿತ ವಿಗ್ರಹಗಳನ್ನು ಕೆರೆ ಮತ್ತು ಇತರೆ ಜಲಮೂಲಗಳಲ್ಲಿ ವಿಸರ್ಜನೆ ಮಾಡಿದಲ್ಲಿ ಬಣ್ಣ ಲೇಪಿತ ವಿಗ್ರಹಗಳ ವಿಷಕಾರಿ ಅಂಶಗಳು ನೀರಿನ ಜೊತೆಗೆ ಸೇರಿ ಕಲುಷಿತವಾಗುವ ಎಲ್ಲ ಸಾಧ್ಯತೆಗಳಿದ್ದು,ಇದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲು” ನಿರ್ದೇಶಿಸಿದ್ದಾರೆ.

    “ಗರಿಷ್ಟ 5 ಅಡಿ ಎತ್ತರದ ಮಣ್ಣಿನ ವಿಗ್ರಹಗಳನ್ನು ಮಾತ್ರ ತಯಾರಿಸಲು ಅನುಮತಿ ನೀಡಬೇಕು” ಎಂಬಿತ್ಯಾದಿಯಾಗಿ ನಿರ್ದೇಶಕರು ಸೂಚನೆಗಳನ್ನು ನೀಡಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap