ಚಳ್ಳಕೆರೆ
ಕಳೆದ 2019ರ ಬೆಳೆ ವಿಮೆ ಪಾವತಿಗೆ ಸಂಬಂಧಪಟ್ಟಂತೆ ಸಮೀಕ್ಷಾ ಸಮಯದಲ್ಲಿ ಆದ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಜ.30ರ ತನಕ ಅವಕಾಶ ನೀಡಲಾಗಿದ್ದು, ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ತಾವು ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಸಲ್ಲಿಸಿ ಮಾಹಿತಿಯನ್ನು ಪರಿಶೀಲಿಸಿ ದೃಢೀಕರಿ ಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ರೈತ ಬಾಂಧವರಲ್ಲಿ ಮನವಿ ಮಾಡಿದರು.
ಅವರು ಈ ಬಗ್ಗೆ ಮಂಗಳವಾರ ಇಲ್ಲಿನ ರೈತ ಸಂಘದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕಳೆದ 2018ರಲ್ಲಿ ಒಟ್ಟು 4ಸಾವಿರ ಲೋಪದೋಷಗಳು ಕಂಡು ಬಂದಿದ್ದು, ಮತ್ತೆ ದೋಷಗಳು ಎದುರಾದಲ್ಲಿ ರೈತರಿಗೆ ಪರಿಹಾರ ದೊರಕುವುದು ವಿಳಂಬವಾಗುತ್ತದೆ. ಆದ್ದರಿಂದ ಕೂಡಲೇ ರೈತರು ತಮ್ಮ ದಾಖಲಾತಿಗಳೊಂದಿಗೆ ರೈತ ಸಂಪರ್ಕ ಕೇಂದ್ರಕ್ಕೆ ಬೇಟಿ ನೀಡಿ ಪರಿಶೀಲಿಸುವಂತೆ ಅವರು ಮನವಿ ಮಾಡಿದ್ದಾರೆ.
ಪ್ರಸ್ತುತ ವರ್ಷದಲ್ಲಿ ಶೇಂಗಾ ಬೆಳೆಯೂ ಸೇರಿದಂತೆ ಎಲ್ಲಾ ಬೆಳೆಯೂ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆಯಾಗದ ಹಿನ್ನೆಲೆಯಲ್ಲಿ ರೈತರು ಶೇಂಗಾ ಬಿಟ್ಟು ಈಗ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ತರುವ ಕಡ್ಲೆ ಬಿತ್ತನೆ ಮಾಡಿದ್ಧಾರೆ. ಆದ್ದರಿಂದ ಸರ್ಕಾರ ಈ ಕೂಡಲೇ ಕಡ್ಲೆ ಖರೀದಿ ಕೇಂದ್ರವನ್ನು ಆರಂಭಿಸುವಂತೆ ಅವರು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ದಯಾನಂದಮೂರ್ತಿ, ಪಿಲ್ಲಹಳ್ಳಿ ಸಿ.ಚಿತ್ರಲಿಂಗಪ್ಪ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
