ಚಿತ್ರದುರ್ಗ
ಗೊಲ್ಲರಹಟ್ಟಿ, ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವ ಪ್ರಕ್ರಿಯೆಗೆ ಹಿನ್ನಡೆಯಾಗುತ್ತಿದ್ದು, ಈ ವಿಚಾರದಲ್ಲಿ ಸರ್ಕಾರದ ಮೇಲೆ ಒತ್ತಡ ತರಲು ಜನಾಂಗದ ಎಲ್ಲಾ ಮುಖಂಡರು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಮುಖಂಡ ಕುಣಿಗಲ್‌ನ ಜಿ.ಕೆ.ನಾಗಣ್ಣ ಸಲಹೆ ನೀಡಿದರು ಇಲ್ಲಿನ ಪತ್ರಕರ್ತರ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸಮುದಾಯದ ಸ್ಥಿತಿಗತಿಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು
ಗೊಲ್ಲರಹಟ್ಟಿಗಳಿಗೆ ಕಂದಾಯ ಗ್ರಾಮದ ಸ್ಥಾನಮಾನ ನೀಡುವ ವಿಚಾರದಲ್ಲಿ ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಿರಾಸಕ್ತಿ ತೋರುತ್ತಿರುವುದು ತರವಲ್ಲವೆಂದು ಅವರು ಇದೇ ವೇಳೆ ಅಸಮಧಾನ ವ್ಯಕ್ತಪಡಿಸಿದರುಹಟ್ಟಿ, ಆಡಿ, ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಬೇಕೆಂಬ ಕೂಗು ಕಳೆದ ಅನೇಕ ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ ಪದೇ ಪದೇ ಈ ಕೆಲಸಕ್ಕೆ ಹಿನ್ನಡೆಯಾಗುತ್ತಿದೆ. ಇದಕ್ಕೆ ಅಧಿಕಾರಿಗಳ ಮನಸ್ಥಿತಿಯೂ ಕಾರಣವಾಗಿದೆ ಎಂದು ಹೇಳಿದರು.
ಸಮಾಜದ ಕೆಲವು ಜನರು ಸಮುದಾಯದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇದು ಸಾಲದು. ರಾಜಕಾರಣಿಗಳು ಒಂದೊAದು ವೇದಿಕೆಯಲ್ಲಿ ಒಂದೊಂದು ರೀತಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಹೋರಾಟಗಳಲ್ಲಿ ಸ್ಪಷ್ಟ ನಿಲುವಿಗೆ ಬರಲು ಆಗುತ್ತಿಲ್ಲ. ಅಲ್ಲದೇ ಆರ್ಥಿಕತೆಯ ಕೊರತೆ ಸಹ ಕಾಡುತ್ತಿದೆ. ಇದನ್ನು ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕು. ಸಮಾಜದ ಜನರು ಯಾವುದೇ ರಾಜಕೀಯ ಪಕ್ಷದಲ್ಲಿರಲಿ ಸಮಾಜದ ವಿಚಾರ ಬಂದಾಗ ಎಲ್ಲರೂ ಒಂದಾಗಬೇಕು. ಸಮಾಜದ ಪರವಾದ ಬೇಡಿಕೆಗಳನ್ನು ಸರ್ಕಾರದ ಮುಂದಿಡಬೇಕು ಎಂದು ಹೇಳಿದರು.
ಬ್ರಾಹ್ಮಣರಿಗೆ ಅಥವಾ ಇತರೆ ಮುಂದುವರಿದ ಜಾತಿಗಳ ಬಡವರಿಗೆ ಮೀಸಲಾತಿ ನೀಡಬೇಕೆಂದು ಸಂವಿಧಾನ ಹೇಳಿಲ್ಲ. ಅವರು ಅಸ್ಪೃಶ್ಯತೆಯ ನೋವನ್ನು ಅನುಭವಿಸಿಲ್ಲ. ಆದರೂ ಕೇಂದ್ರ ಸರ್ಕಾರ ಮೇಲ್ಜಾತಿಯ ಬಡವರಿಗೆ ಶೇಕಡಾ 10 ರಷ್ಟು ಮೀಸಲಾತಿ ನೀಡಲು ಮುಂದಾಗಿದೆ. ಮನುವಾದಿಗಳು, ಮೀಸಲಾತಿ ವಿರೋಧಿಗಳಿಂದ ಬಿಡುಗಡೆ ಹೊಂದಬೇಕೆಂದು ಅಂಬೇಡ್ಕರ್ ಬಯಸಿದ್ದರು. ಆದರೆ ನಮ್ಮ ಸಮುದಾಯದ ರಾಜಕಾರಣಿಗಳು ಅವರ ಹಿಂದೆ ಹೋಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾಗಪ್ಪ ಅವರು ಕಾಡುಗೊಲ್ಲ ಸಮುದಾಯ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದರು. ಅದನ್ನು ಮುಂದುವರಿಸಿಕೊಂಡು ಹೋಗುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಸಮುದಾಯದವರು ಮುಂದಾಗಬೇಕು. ಆದರೆ ಸಮುದಾಯದ ಜನರಲ್ಲಿ ನಾವು ಯಾದವರ ಜೊತೆ ಗುರುತಿಸಿಕೊಳ್ಳಬೇಕೋ, ಇಲ್ಲವೇ ಕಾಡುಗೊಲ್ಲರ ಜೊತೆ ಗುರುತಿಸಿಕೊಳ್ಳಬೇಕೋ ಎಂಬ ಗೊಂದಲ ಉಂಟಾಗಿದೆ. ಈ ಕುರಿತು ಅವರಿಗೆ ಸ್ಪಷ್ಟತೆ ನೀಡಬೇಕು. ಕಾಡುಗೊಲ್ಲ ಎಂಬ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ಪಡೆಯುವ ಕೆಲಸವಾಗಬೇಕು ಎಂದರು.
ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ದೊರೆಯದ ಕಾರಣ ಕಾಡುಗೊಲ್ಲರು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಆಗುತ್ತಿಲ್ಲ. ಮೇಲ್ಜಾತಿಯವರಿಗೆ ಕುರಿ, ಮೇಕೆ ಸಾಕಲು ಹಣ ನೀಡಲಾಗುತ್ತಿದೆ. ಆದರೆ ಗೊಲ್ಲರಿಗೆ ಸೌಲಭ್ಯ ದೊರೆಯುತ್ತಿಲ್ಲ. ಹಾಗಾಗಿ ಕಾಡುಗೊಲ್ಲ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಮೂಲಕ ಸೌಕರ್ಯಗಳನ್ನು ನೀಡಬೇಕು. ರಾಜಕಾರಣಿಗಳು ಈ ಕುರಿತು ಗಂಭೀರ ಚಿಂತನೆ ನಡೆಸಬೇಕು. ಕೇವಲ ವಾಟ್ಸಾಪ್, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸಿದರೆ ಸಾಲದು. ಸಮಾಜದ ಪರವಾಗಿ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.
ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸಿ. ಶಿವುಯಾದವ್ ಪ್ರಾಸ್ತಾವಿಕವಾಗಿ ಮಾತನಾಡಿ, ನಾಗಪ್ಪನವರು ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘವನ್ನು ಸ್ಥಾಪಿಸಿದರು. ಅದನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮ ಜವಾಬ್ಧಾರಿ. ಹಾಗಾಗಿ ಹಳ್ಳಿ ಹಳ್ಳಿಗೆ ಹೋಗಿ ಜನ ಜಾಗೃತಿ ಮೂಡಿಸಬೇಕು. ಕಾಡುಗೊಲ್ಲ ಸಮುದಾಯವನ್ನು ಅಲೆಮಾರಿ ಪಟ್ಟಿಗೆ ಸೇರಿಸುವಲ್ಲಿ ಶ್ರಮಿಸಬೇಕು. ಪೆಮ್ಮನಹಳ್ಳಿಯಂತಹ ಘಟನೆಗಳ ಕುರಿತು ಚರ್ಚೆ ನಡೆಯಬೇಕು ಎಂದರು.
ಕೂನಿಕೆರೆ ರಾಮಣ್ಣ ಮಾತನಾಡಿದರು. ಜಿ.ಪಂ. ಮಾಜಿ ಸದಸ್ಯ ಹನುಮಂತಪ್ಪ, ಚಿತ್ತಯ್ಯ, ಪಾತಣ್ಣ, ರಂಗಪ್ಪ, ಪ್ರವೀಣ್ ಕುಮಾರ್, ಹನುಮಂತರಾಜ್, ಹೊಳಲ್ಕೆರೆ ಚಿತ್ತಯ್ಯ, ಸಂಪತ್‌ಕುಮಾರ್, ನ್ಯಾಯವಾದಿ ಮಂಜುನಾಥ್, ಸುರೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಡಾ.ಪ್ರೇಮ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
