ಕಕ್ಷಿದಾರರಿಗೆ ನ್ಯಾಯ ಕೊಡಿಸುವ ಮನಸ್ಸಿರಬೇಕು

ಚಿತ್ರದುರ್ಗ:

      ಕಕ್ಷಿದಾರರಿಗೆ ನ್ಯಾಯ ಕೊಡಿಸಬೇಕೆಂಬ ಮನಸ್ಸಿದ್ದರೆ ತಾನಾಗಿಯೇ ದಾರಿಗಳು ಗೋಚರಿಸುತ್ತವೆ. ಇದರಿಂದ ಸಮಾಜಕ್ಕೆ ಒಳ್ಳೆಯದು ಮಾಡಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ ಹೇಳಿದರು.

        ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆಗೊಂಡಿರುವ ಅವರು ಮೆದೇಹಳ್ಳಿ ರಸ್ತೆಯಲ್ಲಿರುವ ಮರುಳಪ್ಪ ಬಡವಾಣೆಯ ಚೈತನ್ಯ ಕ್ಷೇಮಾಭಿವೃದ್ದಿ ಸಂಘದಿಂದ ಶುಕ್ರವಾರ ರೋಟರಿ ಆದಿಶೇಷ ಭವನದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

       ನ್ಯಾಯಾಂಗ ಇಲಾಖೆಯಲ್ಲಿ ಕೆಲಸ ಮಾಡುವಾಗ ನಿಸ್ಪಕ್ಷಪಾತವಾಗಿರಬೇಕು. ಇಲಾಖೆ ಸೇರಿದಾಗಿನಿಂದಲೂ ಈವರೆಗೂ ಸ್ವಂತ ಜಿಲ್ಲೆಯಲ್ಲಿ ಸೇವೆ ಮಾಡಿಲ್ಲ. ಇಪ್ಪತ್ತು ವರ್ಷಗಳ ಮೊಳಕಾಲ್ಮುರುವಿನಲ್ಲಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿ ಎರಡು ತಾಸು ಹೆಚ್ಚು ಕೆಲಸ ಮಾಡಿ ಸಾಕಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸಿ ನೊಂದು ಬರುವ ಕಕ್ಷಿದಾರರಿಗೆ ನ್ಯಾಯ ಒದಗಿಸಿದ್ದೇನೆಂದು ತಮ್ಮ ಸೇವಾವಧಿಯಲ್ಲಿನ ಕೆಲವು ಸ್ವಾರಸ್ಯಕರ ಘಟನೆಗಳನ್ನು ಮೆಲುಕು ಹಾಕಿದರು.

         ದ್ವಿತೀಯ ಪಿ.ಯು.ಸಿ.ಫಲಿತಾಂಶದಲ್ಲಿ ಚಿತ್ರದುರ್ಗ ಜಿಲ್ಲೆ ಕೊನೆ ಸ್ಥಾನಕ್ಕೆ ಹೋಗಿರುವುದು ಅತ್ಯಂತ ಕಳವಳಕಾರಿ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ ಎಸ್.ಬಿ.ವಸ್ತ್ರಮಠರವರು ಹಿಂದುಳಿದಿರುವ ಚಿತ್ರದುರ್ಗ ಜಿಲ್ಲೆ ಶಿಕ್ಷಣದಲ್ಲಾದರೂ ಮುಂಚೂಣಿಯಲ್ಲಿರಬೇಕು. ಫಲಿತಾಂಶ ಸುಧಾರಣೆಗೆ ಅನೇಕ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದ್ದರು ಕಳಪೆ ಫಲಿತಾಂಶ ಬಂದಿದೆ ಎಂದು ವಿಷಾಧಿಸಿದರು.

         ಮುಂದಿನ ವರ್ಷವಾದರೂ ಫಲಿತಾಂಶ ಸುಧಾರಣೆಯಾಗಲು ಜಿಲ್ಲಾಧಿಕಾರಿ ಜೊತೆ ಚರ್ಚಿಸುತ್ತೇನೆ. ಲೋಕಸಭೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಫಲಿತಾಂಶ ಸುಧಾರಣೆಗಾಗಿ ಕ್ರಿಯಾ ಯೋಜನೆ ರೂಪಿಸಲು ಜಿಲ್ಲಾಧಿಕಾರಿಗೆ ಸೂಚಿಸುವುದಾಗಿ ತಿಳಿಸಿದರು.

         ಚೈತನ್ಯ ಕ್ಷೇಮಾಭಿವೃದ್ದಿ ಸಂಘದವರು ಎಸ್.ಬಿ.ವಸ್ತ್ರಮಠರವರನ್ನು ಗೌರವಿಸಿದರು. ಜಿಲ್ಲಾ ನ್ಯಾಯಾಲಯದ ವ್ಯವಸ್ಥಾಪಕ ದೋನಿ, ಸಂಘದ ಅಧ್ಯಕ್ಷ ರಾಜ್‍ಕುಮಾರ್, ಗೌರವಾಧ್ಯಕ್ಷ ವಿಜಯಕುಮಾರ್, ಕಾರ್ಯದರ್ಶಿ ರವೀಶ್ ಶಿವಪುರ, ಖಜಾಂಚಿ ನುಲೇನೂರು ಮಲ್ಲಿಕಾರ್ಜುನ್, ಕೋಟೆ ಸಂಘದ ನಿರ್ದೇಶಕರು, ಸದಸ್ಯರು ಹಾಗೂ ಮರುಳಪ್ಪ ಬಡವಾಣೆಯ ನಿವಾಸಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link