ದಾವಣಗೆರೆ:
ನಗರದ ಎಆರ್‍ಜಿ ಕಲಾ ಮತ್ತು ವಾಣಿಜ್ಯ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ವತಿಯಿಂದ ಕಾಲೇಜಿನಲ್ಲಿ ಇಂದು (ಏ.10ರಂದು) ಎ.ಆರ್.ಜಿ. ಕಲಾ ವೈಭವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ಬಸವರಾಜಪ್ಪ ತಿಳಿಸಿದರು.
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಹಾಗೂ ಜಾನಪದ ಕಲೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ಯತ್ನಿಕ್ ಡೇಗೆ ಪರ್ಯಾಯವಾಗಿ ಕಲಾ ವೈಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಾನಪದ ಕಲಾವಿದ ಬಾರಿಕೇರ ಕರಿಯಪ್ಪ ಕಾರ್ಯಕ್ರಮ ಉದ್ಘಾಟಿಸುವರು. ವಿದ್ಯಾರ್ಥಿಗಳು ಲಾವಣಿ ಪದ, ಜಾನಪದ ಗೀತೆ, ನೃತ್ಯ, ಸಮೂಹಗಾನ, ವಿವಿಧ ವೇಷಭೂಷಣ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಜಾಗತೀಕರಣವೆಂಬ ಪಾಶ್ಚಿಮಾತ್ಯ ರಾಷ್ಟ್ರಗಳ ಆರ್ಥಿಕ ನೀತಿಯ ದುಷ್ಪರಿಣಾಮದಿಂದ ಭಾರತದಂತಹ ಸಮೃದ್ಧ ಸಾಂಸ್ಕೃತಿಕ, ಸಾಮಾಜಿಕ ಹಾಗೂ ನೈತಿಕ ಪರಿಸರ ದಿನೇದಿನೇ ಕಲುಷಿತಗೊಳ್ಳುತ್ತಿದೆ. ಅಮೇರಿಕಾ ಶಿಕ್ಷಣ ಕ್ರಮವಾದ ಸೆಮಿಸ್ಟರ್ ಪದ್ಧತಿಯ ಅಳವಡಿಕೆಯಿಂದ ನಮ್ಮ ದೇಶದಲ್ಲಿ ರೂಢಿಯಲ್ಲಿದ್ದ ಜ್ಞಾನ ಮತ್ತು ಸಂಸ್ಕೃತಿ ಕೇಂದ್ರಿತ ಶಿಕ್ಷಣ ವ್ಯವಸ್ಥೆ ನಾಶಗೊಂಡು, ಸಮೂಹ ಪ್ರಜ್ಞೆಯೇ ಇಲ್ಲವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಹಾಗೂ ಜಾನಪದ ಕಲೆಗಳ ಬಗ್ಗೆ ಜಾಗೃತಿ ನೀಡಬೇಕೆಂಬ ಉದ್ದೇಶದಿಂದ ಕಲಾವೈಭವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಉಪನ್ಯಾಸಕರಾದ ಲೋಕೇಶ್ ರೆಡ್ಡಿ, ಮಲ್ಲಿಕಾರ್ಜುನಪ್ಪ, ಮಲ್ಲಿಕಾರ್ಜುನ ಆರ್.ಹಲಸಂಗಿ, ಅನಿತಾ ಕುಮಾರಿ, ವಿದ್ಯಾರ್ಥಿನಿ ಉಷಾ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ