ದಾವಣಗೆರೆ :
ಹಿಂದಿನ ಯುಪಿಎ ಮತ್ತು ರಾಜ್ಯದ ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರದ ಜನಪರ ಯೋಜನೆಗಳು ನಾವೇ ಮಾಡಿದ್ದೇವೆ ಎಂಬ ಸುಳ್ಳಿನ ಸರಮಾಲೆ ಕಟ್ಟುವ ಬಿಜೆಪಿಯ ಮುಖವಾಡ ಕಳಚಿ ಬೀಳಲಿದೆ ಎಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ಚನ್ನಗಿರಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಲೋಕಸಭಾ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರ ಪರವಾಗಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಸುಳ್ಳಿನ ಸರಮಾಲೆಯನ್ನು ಕಟ್ಟುವ ಬಿಜೆಪಿಯನ್ನು ಮನೆಗೆ ಕಳುಹಿಸಿ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರಿಗೆ ಕರೆ ನೀಡಿದ ಅವರು ನುಡಿದಂತೆ ನಡೆವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕೆಂದರು.
96 ಕೆರೆಗಳಿಗೆ ನೀರು ಕಾಂಗ್ರೆಸ್ ಪಕ್ಷದ ಘೋಷಣೆ: ಚನ್ನಗಿರಿ ತಾಲ್ಲೂಕಿನ 96 ಕೆರೆಗಳಿಗೆ ನೀರೋದಗಿಸುವ ಕಾರ್ಯಕ್ಕೆ ಮೊದಲು ನಾಂದಿ ಹಾಡಿದ್ದು, ಕಾಂಗ್ರೆಸ್ ಸರ್ಕಾರ. ಕಳೆದ ಬಜೆಟ್‍ನಲ್ಲಿ ಈ ಯೋಜನೆ ಘೋಷಣೆ ಆಗಿದ್ದು, ಶೀಘ್ರ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಆದರೆ ಈ ಯೋಜನೆಯನ್ನು ನಾವೇ ಮಾಡಿದ್ದು ಎಂದು ಬಿಜೆಪಿಗರು ಹೇಳುತ್ತಾ ಸುಳ್ಳಿನ ವ್ಯೂಹ ಸೃಷ್ಟಿ ಮಾಡಲು ಹೊರಟಿದ್ದಾರೆ ಎಂದು ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣನವರು ದೂರಿದರು.
ಜೆಡಿಎಸ್ ಮುಖಂಡ ಹೊದಿಗೆರೆ ರಮೇಶ್ ಮಾತನಾಡಿ ನನ್ನ ಮತ್ತು ರಾಜಣ್ಣನವರ ಸೋಲಿನ ನೋವನ್ನು ಮರೆಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರುಗಳು ಒಟ್ಟಾಗಿ ಕೆಲಸ ಮಾಡಿ ಲೋಕಸಭೆಗೆ ಮಂಜಪ್ಪನವರನ್ನು ಆಯ್ಕೆ ಮಾಡಲು ಶ್ರಮಿಸಬೇಕೆಂದರು.
ಇದೇ ವೇಳೆ ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ, ಮತ್ತಿತರರು ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ಅಮಾನುಲ್ಲಾ, ವಡ್ನಾಳ್ ಜಗದೀಶ್, ಬಲ್ಕೀಶ್ ಬಾನು, ಯೋಗಿಶ್, ಡಿ.ಜಿ.ನಾಗರಾಜ್, ಭೈರನಹಳ್ಳಿ ಮಂಜಪ್ಪ, ಶಿವರಾಜ್, ರಂಗನಾಥ್, ಅಶೋಕ್, ನಾಗರಾಜ್, ವಡ್ನಾಳ್ ಅಶೋಕ್, ಜಬೀವುಲ್ಲಾ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಾಬು ಬುಳಸಾಗರ, ರಾಜು, ನಯಾಜ್, ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು.