ಕಳ್ಳಂಬೆಳ್ಳ ಹೋಬಳಿಯು ಮೂರು ನದಿ ಮೂಲದ ನೀರಿನ ತ್ರಿವೇಣಿ ಸಂಗಮವಾಗಲಿದೆ :ಟಿ.ಬಿ.ಜಯಚಂದ್ರ

ಶಿರಾ:

     ಕಳೆದ 40 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಸೋಲು-ಗೆಲುವುಗಳೆರಡನ್ನೂ ಕಂಡಿದ್ದೇನೆ. ಜಯ ಹಾಗೂ ಅಪಜಯಗಳ ನಡುವೆ ಶಿರಾ ಕ್ಷೇತ್ರದ ವ್ಯಾಪಕ ಅಭಿವೃದ್ಧಿಗೆ ಪಣತೊಟ್ಟು ಆ ಕೆಲಸವನ್ನೂ ಮಾಡಿದ್ದು ಶಾಶ್ವತ ನೀರಾವರಿ ಹೋರಾಟದ ನನ್ನ ಕನಸು ಒಂದೆರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದ್ದು ಕಳ್ಳಂಬೆಳ್ಳ ಹೋಬಳಿಯು ಹೇಮಾವತಿ, ಭದ್ರಾ ಹಾಗೂ ಎತ್ತಿನ ಹೊಳೆ ನೀರಿನ ತ್ರಿವೇಣಿ ಸಂಗಮವಾಗಲಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ಬಿ.ಜಯಚಂದ್ರ ಹೇಳಿದರು.

    ತಾಲ್ಲೂಕಿನ ಕಳ್ಳಂಬೆಳ್ಳದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಪಕ್ಷದ ಸೇರ್ಪಡೆ ಕಾರ್ಯಕ್ರಮದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನಾಮಪತ್ರ ಸಲ್ಲಿಕೆಯ ನಂತರ ಚುನಾವಣೆ ರಂಗೇರಿದೆ. ಶಿರಾ ಕ್ಷೇತ್ರದಲ್ಲಿ ಸರ್ಕಾರವೇ ಬಂದು ಕೂರಲಿದೆ. ನಾನು ಸಚಿವನಾಗಿದ್ದಾಗ 2500 ಕೋಟಿ ರೂಗಳ ಅನುಧಾನದಲ್ಲಿ ಕ್ಷೇತ್ರದ ಅಭಿವೃದ್ಧಿ ಕೈಗೊಂಡಿದ್ದೇನೆ. ಚೆಕ್ ಡ್ಯಾಂಗಳು, ರಸ್ತೆಗಳು, ತಾಯಿ-ಮಗು ಆಸ್ಪತ್ರೆ, ಮಿನಿ ವಿಧಾನಸೌದ, ಪಾಲಿಟೆಕ್ನಿಕ್ ಹೀಗೆ ನೂರಾರು ಕಾಮಗಾರಿಗಳು ಇದಕ್ಕೆ ಜ್ವಲಂತ ಸಾಕ್ಷಿ ಎಂದರು.

   ಮುಖ್ಯಮಂತ್ರಿಗಳ ಪುತ್ರ ಶಿರಾ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿದ್ದು ಬಿ.ಜೆ.ಪಿ. ಪರ ವ್ಯಾಪಕ ಪ್ರಚಾರದಲ್ಲಿದ್ದಾರೆ. ರಾಜಕಾರಣದಲ್ಲಿ ಮತ ಯಾಚನೆ ಅನಿವಾರ್ಯ ಆದರೆ ಈ ಹಿಂದೆ ಶಿರಾ ಕ್ಷೇತ್ರದಲ್ಲಿ ಈ ಜಯಚಂದ್ರ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೋಡಿಕೊಂಡು ಹೋಗಿ ರಾಜ್ಯದ ಹಿಂದುಳಿದ ತಾಲ್ಲೂಕುಗಳಲ್ಲಿ ಯಾವ ರೀತಿ ಅಭಿವೃದ್ಧಿ ಕೈಗೊಳ್ಳಬಹುದೆಂದು ಯತೀಂದ್ರ ಅವರು ಅವರ ತಂದೆ ಸಿ.ಎಂ. ಯಡಿಯೂರಪ್ಪ ಅವರಿಗೆ ಮಾಹಿತಿ ನೀಡುತ್ತಾರೆ. ಮಾಹಿತಿ ಸಂಗ್ರಹಿಸುವ ಸಲುವಾಗಿಯೇ ಅವರು ಈ ಕ್ಷೇತ್ರಕ್ಕೆ ಬಂದಿದ್ದಾರೆ. ವಿಜಯೇಂದ್ರ ಅವರಿಗೆ ಈ ಕ್ಷೇತ್ರದಲ್ಲಿ ಬಿ.ಜೆ.ಪಿ.ಗೆ ನೆಲೆ ಇಲ್ಲ ಎಂಬುದು ಅರ್ಥವಾದಂತೆ ಕಾಣುತ್ತಿಲ್ಲ ಎಂದು ಕುಟುಕಿದರು.

   ಉಪ ಚುನಾವಣೆಯಲ್ಲಿ ಕಾಡುಗೊಲ್ಲರ ಓಟುಗಳನ್ನು ಪಡೆಯಲು ಬಿ.ಜೆ.ಪಿ. ಎಷ್ಟು ಕಸರತ್ತು ನಡೆಸಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಗೊಲ್ಲ ಸಮುದಾಯದ ನಿಗಮ ಮಂಡಳಿಗೆ ಆದೇಶ ನೀಡಿ ಅದೇ ದಿನ ಅದನ್ನು ಕಾಡುಗೊಲ್ಲ ಎಂದು ತಿದ್ದುಪಡಿ ಮಾಡಿ ಆದೇಶ ಹೊರಡಿಸಿದ ಪತ್ರ ಕೇವಲ ಒಂದು ಕಾಗದ ಪತ್ರವಷ್ಟೆ. ಸರ್ಕಾರದ ಈ ಪತ್ರ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದಿದ್ದಲ್ಲ. ಕೇವಲ ಚುನಾವಣೆಯಲ್ಲಿ ಈ ಪತ್ರವನ್ನು ತೋರಿಸಿ ಕಾಡುಗೊಲ್ಲರ ಮತ ಪಡೆಯುವ ಹುನ್ನಾರವಷ್ಟೆ ಎಂದು ಜಯಚಂದ್ರ ಸರ್ಕಾರದ ತಂತ್ರದ ಬಗ್ಗೆ ಲೇವಡಿ ಮಾಡಿದರು.

    1931 ರ ನಂತರ ಜಾತಿ ಸಮೀಕ್ಷೆಯು ನಡೆದಿಲ್ಲ. ಜಾತಿ ಸಮೀಕ್ಷೆ ನಡೆಸಬೇಕೆಂದು ಸುಪ್ರಿಂ ಕೋರ್ಟ್ ಆದೇಶ ನೀಡಿದೆ. ಆದರೂ ಜಾತಿ ಪಟ್ಟಿಯಲ್ಲಿ ಕಾಡುಗೊಲ್ಲ, ವೈಶ್ಯ ಸಮುದಾಯದ ಹೆಸರೇ ಇರಲಿಲ್ಲ, ಈ ಎರಡು ಸಮುದಾಯದ ಹೆಸರನ್ನು ಸಿದ್ಧರಾಮಯ್ಯ ನೇತೃತ್ವದ ಸರ್ಕಾರವಿದ್ದಾಗ ಇಬ್ಬರೂ ಒಗ್ಗೂಡಿ ಈ ಎರಡು ಜಾತಿಗಳಿಗೂ ಜಾತಿ ಸಮೀಕ್ಷೆಯಲ್ಲಿ ಪ್ರಾತಿನಿದ್ಯ ನೀಡಿದ್ದೆವು. ರಾಜ್ಯದಲ್ಲಿನ ಸಣ್ಣ ಸಣ್ಣ ಜಾತಿಗಳನ್ನು ಕೂಡಾ ಜಾತಿ ಸಮೀಪಕ್ಷೆಯಲ್ಲಿ ಸೇರ್ಪಡೆಗೊಳಿಸಲು ಕಾಂತರಾಜು ಅಧ್ಯಕ್ಷತೆಯಲ್ಲಿ ಈ ಹಿಂದೆ ಸಭೆ ಕರೆದು ಮನೆ ಮನೆ ಸಮೀಕ್ಷೆಯೂ ಆಗಿದೆ. ವರದಿ ನೀಡಿ ಒಂದು ವರ್ಷವಾದರೂ ಸರ್ಕಾರ ಕಾಂತರಾಜು ವರದಿಯನ್ನು ಜಾರಿಗೆ ತಂದಿಲ್ಲ ಎಂದು ಆರೋಪಿಸಿದರು.

    ಪ್ರಸ್ತುತ ಉಪ ಚುನಾವಣೆಯ ಬಿ.ಜೆ.ಪಿ. ಅಭ್ಯರ್ಥಿಯಾದವರು ಈ ಹಿಂದೆ ಎರಡು ಬಾರಿ ಸಂಸದರಾಗಿ ಶಾಸಕರಾಗಿ ಅಧಿಕಾರ ಅನುಭವಿಸಿದವರ ಪುತ್ರರಾಗಿದ್ದು ಅವರ ಅವಧಿಯಲ್ಲಿ ಶಿರಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನು? ಎಂದು ಮತದಾರರೇ ಪ್ರಶ್ನಿಸಬೇಕಿದೆ. ಬಿ.ಜೆ.ಪಿ. ಪಕ್ಷದ ಅಭ್ಯರ್ಥಿಯ ತಂದೆ ಈ ಕ್ಷೇತ್ರಕ್ಕೆ ನೀಡಿದ ಕೊಡುಗೆ ಶೂನ್ಯ ಎಂದು ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಅವರನ್ನು ಜಯಚಂದ್ರ ಪರೋಕ್ಷವಾಗಿ ಲೇವಡಿ ಮಾಡಿದರು.

    ಸದರಿ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಬಿ.ಜೆ.ಪಿ. ಮುಖಂಡರು ಅಡ್ಡ ದಾರಿ ಹಿಡಿದಿದ್ದಾರೆ. ದೇವಸ್ಥಾನಗಳಿಗೆ ಹಣ ನೀಡುವುದು, ಪಶುಭಾಗ್ಯ ಯೋಜನೆಯ ಆಶ್ವಾಸನೆ, ನಿವೇಶನ ಹಂಚಿಕೆ ಮಾಡುವ ಭರವಸೆಯೂ ಸೇರಿದಂತೆ ಮತದಾರರಲ್ಲಿ ಆಸೆ-ಅಮಿಷಗಳನ್ನೊಡ್ಡುತ್ತಿದ್ದು ಮತದಾರರಿಂದ ಆಧಾರ್, ಚುನಾವಣಾ ಗುರುತಿನ ಚೀಟಿಯ ನಕಲುಗಳ ಸಂಗ್ರಹಣೆ ಮಾಡಲಾಗುತ್ತಿದೆ. ಕ್ಷೇತ್ರದಲ್ಲಿ ಮತದಾರರಿಗೆ ಇಂತಹ ಅಮಿಷಗಳನ್ನೊಡ್ಡುತ್ತಿದ್ದರೂ ಚುನಾವಣಾ ಆಯೋಗ ಏನು ಮಾಡುತ್ತಿದೆ? ಎಂದು ಜಯಚಂದ್ರ ಪ್ರಶ್ನಿಸಿದರು.

    ಅಡ್ಡ ಮಾರ್ಗದಲ್ಲಿ ಚುನಾವಣೆ ಗೆಲ್ಲುವ ಹರಸಾಹಸ ಮಾಡುತ್ತಿರುವ ಬಿ.ಜೆ.ಪಿ. ತನ್ನ ಇಡೀ ಸರ್ಕಾರವನ್ನು ಈ ಕ್ಷೇತ್ರದಲ್ಲಿ ತಂದು ಕೂರಿಸುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ಹೆಣದ ಮೇಲೆ ಗಳಿಸಿದ ಭ್ರಷ್ಠಾಚಾರದ ಹಣವನ್ನು ಹೆಲಿಪ್ಯಾಡ್ ಮೂಲಕ ಮೇಲಿನಿಂದಾ ಸುರಿದು ಹಂಚುವ ಕೆಲಸ ಮಾಡಿದರೂ ಅಚ್ಚರಿ ಇಲ್ಲ ಎಂದು ಜಯಚಂದ್ರ ಆರೋಪಿಸಿದರು.ಮಾಜಿ ಜಿ.ಪಂ. ಸದಸ್ಯ ಎಂ.ಆರ್.ಪರ್ವತಪ್ಪ, ಎ.ಪಿ.ಎಂ.ಸಿ. ಸದಸ್ಯ ರುದ್ರೇಶ್, ಹನುಮಂತಯ್ಯ, ಹಾರೋಗೆರೆ ಮಹೇಶ್, ಅರೇಹಳ್ಳಿ ರಮೇಶ್, ಬೊಮ್ಮಣ್ಣ, ಕಲಾವಿದ ರಾಜಣ್ಣ ಸೇರಿದಂತೆ ಅನೇಕ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link