ಹೂವಿನಹಡಗಲಿ :
ತಾಲೂಕಿನ ಮಿರಾಕೊರ್ನಹಳ್ಳಿ ಹಾಗೂ ಹಂಪಸಾಗರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಳಪೆ ಆಹಾರ ನೀಡಿದ್ದರಿಂದ ಮಕ್ಕಳಿಗೆ ಜ್ವರ ಮತ್ತು ವಾಂತಿಬೇದಿ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಾಲ್ಕು ದಿನದಿಂದ ಮಕ್ಕಳಲ್ಲಿ ನಿಧಾನವಾಗಿ ವಾಂತಿಬೇದಿ ಪ್ರಕರಣ ಆರಂಭವಾಗಿ, 128 ಮಕ್ಕಳು ತೀವ್ರಜ್ವರದಿಂದ ಬಳಲಿ ಪೋಷಕರು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ. 25 ಜನ ಮಕ್ಕಳು ಈಗಲೂ ಕೂಡಾ ಜ್ವರದಿಂದ ಬಳಲುತ್ತಾ ವಸತಿ ಶಾಲೆಯಲ್ಲಿಯೇ ಮಲಗಿದ್ದಾರೆ. 12 ಜನ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ, ಗುಣಮುಖರಾದ ಕಾರಣ ಪೋಷಕರ ವಶಕ್ಕೆ ನೀಡಲಾಗಿದೆ.
ಈ ಎಲ್ಲಾ ಅವ್ಯವಸ್ಥೆಗೆ ಕಾರಣ ಆಹಾರ ಗುತ್ತಿಗೆದಾರರಿಂದ ಆಹಾರ ಸಾಮಾಗ್ರಿಗಳು ಸರಬರಾಜಾಗದೇ ಇರುವುದು ಕಾರಣ ಎಂದು ಪ್ರಾಚಾರ್ಯ ಶಶಿಧರ್‍ರವರು ಹೇಳಿದರು. ಎರಡು ತಿಂಗಳಿನಿಂದ ಸಂಬಂಧಪಟ್ಟಂತಹ ಗುತ್ತಿಗೆದಾರರು ಆಹಾರ ಸಾಮಾಗ್ರಿಗಗಳನ್ನು ಸರಬರಾಜು ಮಾಡದೇ ಇರುವುದರಿಂದ ನಮ್ಮ ವಾರ್ಡನ್‍ಗಳು ಕಳಪೆಗುಣಮಟ್ಟದ ಅಂದರೆ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ಸಿಗುವ ಅಕ್ಕಿಯನ್ನು ಖರೀದಿಸಿ, ಬಳಕೆ ಮಾಡಿದ್ದಾರೆ. ಆ ಕಾರಣಕ್ಕಾಗಿ ಮಕ್ಕಳಲ್ಲಿ ಜ್ವರ ಮತ್ತು ವಾಂತಿಬೇದಿ ಕಾಣಿಸಿಕೊಂಡಿದೆ ಎನ್ನುತ್ತಾರೆ.
ವಿದ್ಯಾರ್ಥಿಗಳಾದ ಕವಿತಾ, ರಕ್ಷಿತ ಮಾತನಾಡಿ, ಊಟ ಮತ್ತು ಉಪಹಾರ ರುಚಿಯಾಗಿಲ್ಲ, ರಾತ್ರಿಯಿಡಿ ಸೊಳ್ಳೆಗಳ ಕಾಟ, ಸರಿಯಾಗಿ ನಿದ್ದೆ ಬರುತ್ತಿಲ್ಲ. ಆ ಕಾರಣಕ್ಕಾಗಿ ಎಲ್ಲರಿಗೂ ಕೆಮ್ಮು, ಜ್ವರ ಕಾಣಿಸಿಕೊಂಡಿದೆ ಎನ್ನುತ್ತಾರೆ. ಇಂದು ಮೊರಾರ್ಜಿ ವಸತಿ ಶಾಲೆಗೆ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ತಂಡ ಬೇಟಿನೀಡಿ ಜ್ವರದಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ನೀಡಿದ್ದಾರೆ. ತಾಲೂಕು ವೈದ್ಯಾಧಿಕಾರಿ ಬದ್ಯನಾಯ್ಕರವರು ಬೇಟಿನೀಡಿ ಆಹಾರ ಸಾಮಾಗ್ರಿ ಹಾಗೂ ಕುಡಿಯುವ ನೀರಿನ್ನು ಪರಿಶೀಲನೆಗಾಗಿ ಲ್ಯಾಬ್ ಕಳಿಸಿಕೊಡಲಾಗುವುದು ಎಂದರು.
ಒಟ್ಟಾರೆ ಮೊರಾರ್ಜಿ ವಸತಿ ಶಾಲೆಯು ಒಂದು ಅವ್ಯವಸ್ಥೆಯ ಆಗರವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಸ್ವಚ್ಚತೆ ಹಾಗೂ ಮಕ್ಕಳಿಗೆ ಸೊಳ್ಳೆಪರದೆ ಸೇರಿದಂತೆ ಹಲವು ಸೌಲಭ್ಯಗಳ ಕೊರತೆ ಕೂಡಾ ಕಂಡುಬಂದಿದೆ.