ಪಾಲಿಕೆ ಮೇಯರ್ ವಾರ್ಡ್ ವೀಕ್ಷಣೆ : ಜನರಿಂದ ಆಕ್ರೋಶ ವ್ಯಕ್ತ
ತುಮಕೂರು
ವಿಶೇಷ ವರದಿ: ರಾಕೇಶ್.ವಿ
ನಗರದ ಸ್ಮಾರ್ಟ್ ಸಿಟಿಯ ವಿವಿಧ ಕಾಮಗಾರಿಗಳು ಭರದಲ್ಲಿ ಸಾಗಿವೆ. ಅದರಲ್ಲಿ ಯುಟಿಲಿಟಿ ಚೆಂಬರ್ ಕಾಮಗಾರಿಯೂ ಒಂದಾಗಿದೆ. ಈ ಕಾಮಗಾರಿಯು ಸಂಪೂರ್ಣವಾಗಿ ಕಳಪೆಯಿಂದ ಕೂಡಿದೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.
ಕಳೆದ ಒಂದು ವರ್ಷದಲ್ಲಿ ತುಮಕೂರು ನಗರದ ವಿವಿಧ ಭಾಗಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಕೆಲ ಕಾಮಗಾರಿಗಳು ನಡೆಯುತ್ತಿದೆ. ಇನ್ನೂ ಕೆಲ ಕಾಮಗಾರಿಗಳು ಮುಕ್ತಾಯಗೊಂಡಿವೆ. ಅಶೋಕ ರಸ್ತೆಯಲ್ಲಿರುವ ಎಂಪ್ರೆಸ್ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ರೂಂ, ಡಿಜಿಟಲ್ ಲೈಬ್ರರಿ ಸೆಲ್ಯೂಷನ್ಸ್, ಉಪ್ಪಾರಹಳ್ಳಿ ಮೇಲ್ಸೇತುವೆ ಕೆಳಗಿನ ಪ್ರದೇಶದ ಅಭಿವೃದ್ಧಿ, ಐಸಿಎಂಸಿ ತಾತ್ಕಾಲಿಕ ಕಟ್ಟಡದ ಇಂಟಿರಿಯರ್ ಕೆಲಸ ಪೂರ್ಣಗೊಂಡಿದ್ದು, ಶುಕ್ರವಾರವಷ್ಟೇ ಉದ್ಘಾಟನೆ ಗೊಂಡಿವೆ.
ಉಳಿದಂತೆ ನಗರದಲ್ಲಿ ಜನರಿಗೆ ಅರ್ಥವಾಗದ ಕೆಲ ಕಾಮಗಾರಿಗಳು ನಡೆಯುತ್ತಿವೆ. ಅದರಲ್ಲಿ ಪ್ರಮುಖವಾಗಿ ಯುಟಿಲಿಟಿ ಚೇಂಬರ್ ಕಾಮಗಾರಿ. ಈ ಕಾಮಗಾರಿಯ ಹೆಸರಿನಲ್ಲಿ ನಗರದ ಹಲವೆಡೆ ರಸ್ತೆಯ ಪಕ್ಕದಲ್ಲಿ ಗುಂಡಿಗಳನ್ನು ತೋಡಲಾಗಿದ್ದು, ಸಿಮೆಂಟ್‍ನ ಚೌಕಾಕಾರದ ಬಾಕ್ಸ್‍ಗಳನ್ನು ತಯಾರು ಮಾಡಲಾಗುತ್ತಿದೆ. ಇದರ ಮೂಲಕ ವಿವಿಧ ಕೇಬಲ್ ಲೈನ್‍ಗಳನ್ನು ಅಳವಡಿಸಲಾಗುತ್ತದೆ ಎಂಬುದು ಅಧಿಕಾರಿಗಳಿಂದ ದೊರೆತ ಮಾಹಿತಿಯಾಗಿದೆ.
ಸ್ಮಾರ್ಟ್ ರಸ್ತೆ ಯೋಜನೆ ಒಂದು ಭಾಗ
ನಗರದಲ್ಲಿ ತೆರೆಯಲಾಗುತ್ತಿರುವ ಗುಂಡಿಗಳು ಯುಟಿಲಿಟಿ ಚೇಂಬರ್‍ಗಳಾಗಿ ಮಾಡಲಾಗುತ್ತಿದ್ದು, ಈ ಕಾಮಗಾರಿ ಸ್ಮಾರ್ಟ್ ರಸ್ತೆ ಯೋಜನೆ ಅಡಿಯಲ್ಲಿ ಮಾಡಲಾಗುತ್ತಿದೆ. ನಿರ್ದಿಷ್ಠ ಅಳತೆಯಲ್ಲಿ ತೆಗೆಯಲಾದ ಗುಂಡಿಯಲ್ಲಿ ಚೌಕಾಕಾರದಲ್ಲಿ ಬಾಕ್ಸ್ ರೀತಿಯಲ್ಲಿ ಕಬ್ಬಿಣದ ರಾಡ್‍ಗಳನ್ನು ಬಳಸಿ ನೆಲಹಾಸು ಹಾಕಿ ನಾಲ್ಕು ದಿಕ್ಕುಗಳಲ್ಲಿ ಗೋಡೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಹಲವು ಕಡೆ ನಿರ್ಮಾಣ ಕಾರ್ಯ ಮುಕ್ತಾಯವಾಗಿದೆ. ಕೆಲ ಕಡೆಗಳಲ್ಲಿ ಕೆಲಸ ನಡೆಯುತ್ತಿದೆ. ಇನ್ನೂ ಕೆಲ ಭಾಗಗಳಲ್ಲಿ ಗುಂಡಿ ಅಗೆಯುವ ಕಾರ್ಯ ಮಾಡಲಾಗುತ್ತಿದೆ.
ಚೇಂಬರ್ ಮೂಲಕ ಕೇಬಲ್‍ಗಳ ಅಳವಡಿಕೆ
ಯುಟಿಲಿಟಿ ಚೇಂಬರ್ ಜಂಕ್ಷನ್ ಮಾದರಿಯಾಗಿದ್ದು, ಈ ಚೇಂಬರ್‍ಗಳ ಮೂಲಕ ವಿದ್ಯುತ್ ಲೈನ್, ದಿನದ 24 ಗಂಟೆಗಳ ಕುಡಿಯುವ ನೀರಿನ ವ್ಯವಸ್ಥೆ, ಇಂಟರ್‍ನೆಟ್ ಕೇಬಲ್. ಗ್ಯಾಸ್ ಪೈಪ್‍ಲೈನ್ ಸೇರಿದಂತೆ ಇನ್ನಿತರ ಕೇಬಲ್‍ಗಳ ಅಳವಡಿಕೆಯನ್ನು ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಯಾವುದೇ ಕೆಲಸ ಕಾರ್ಯ ಮಾಡಬೇಕಾದರೆ, ರಸ್ತೆಯನ್ನು ಅಗೆಯುವ ಅವಶ್ಯಕತೆ ಇರುವುದಿಲ್ಲ. ಕೇವಲ ಚೇಂಬರ್‍ಗಳ ಮುಚ್ಚಳಿಕೆಯನ್ನು ತೆರೆದರೆ ಸಾಕು ಎಂಬುದು ಮೂಲಗಳ ಮಾಹಿತಿ.
ಕಳಪೆ ಕಾಮಗಾರಿ ಆರೋಪ
ನಗರದಲ್ಲಿ ನಡೆಯುತ್ತಿರುವ ಚೇಂಬರ್ ಕಾಮಗಾರಿಯಲ್ಲಿ ಬಳಸಲಾಗುತ್ತಿರುವ ಕಬ್ಬಿಣದ ರಾಡ್‍ಗಳು ಉತ್ತಮ ಗುಣಮಟ್ಟದಲ್ಲ. ಇದು ತುಂಬಾ ತೆಳುವಾಗಿದೆ. ಇದರಿಂದು ಮುಂದಿನ ದಿನಗಳಲ್ಲಿ ಇದೇ ಕಾಮಗಾರಿಯನ್ನು ಮತ್ತೊಮ್ಮೆ ಮಾಡಬೇಕಾಗುತ್ತದೆ. ಮೇಲ್ಭಾಗದಲ್ಲಿ ಕಾಣುವ ರಾಡ್‍ಗಳು ತೆಳುವಾಗಿದ್ದು ಇದು ಕಳಪೆಯಿಂದ ಕೂಡಿದೆ. ಇದು ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗುತ್ತಿದೆ. ಇದು ಸಂಪೂರ್ಣ ಕಳಪೆ ಕಾಮಗಾರಿಯಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಚಿಕ್ಕಪೇಟೆ ರಸ್ತೆಯಲ್ಲಿ ಅಗೆದ ಗುಂಡಿಗಳಿಂದ ತೊಂದರೆ
ನಗರದ ನಾಲ್ಕನೇ ವಾರ್ಡ್‍ಗೆ ಸೇರುವ ಚಿಕ್ಕಪೇಟೆಯ ರಾಸ್ತೆ ಚಿಕ್ಕದಾಗಿದ್ದು, ಈ ರಸ್ತೆಯಲ್ಲಿ ಬೃಹತ್ ವಾಹನವೊಂದು ಬಂದರೆ ಮತ್ತೊಂದು ವಾಹನ ಹೋಗುವುದು ಕಷ್ಟಕರವಾಗುತ್ತದೆ. ಇಂತಹ ರಸ್ತೆಯಲ್ಲಿ ಗುಂಡಿಗಳನ್ನು ತೆಗದು ಸುಮಾರು ಒಂದೂವರೆ ತಿಂಗಳಾಗುತ್ತಾ ಬಂದಿದ್ದರೂ ಇನ್ನೂ ಕಾಮಗಾರಿ ನಡೆಯುತ್ತಲೇ ಇದೆ. ಇದರಿಂದ ನಿತ್ಯ ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿದೆ. ಸಾರ್ವಜನಿಕರು ಓಡಾಡಲು ಕೂಡ ಆಗದ ಸ್ಥಿತಿ ನಿರ್ಮಾಣವಾಗಿದೆ
ಹೊಡೆದ ಯುಜಿಡಿ ಪೈಪ್‍ಗಳು
ಕಾಮಗಾರಿಯ ವೇಳೆ ಜೆಸಿಬಿ ಬಳಕೆ ಮಾಡಲಾಗುತ್ತಿದ್ದು, ಎಂಜಿನಿಯರ್ ಹಾಕಿಕೊಟ್ಟ ಪಾಯಿಂಟ್‍ಗಳಲ್ಲಿ ಗುಂಡಿ ತೆಗೆಯಲಾಗುತ್ತದೆ. ಈ ವೇಳೆ ಗುಂಡಿ ತೆಗೆಯುವ ಪ್ರದೇಶದಲ್ಲಿ ಈ ಹಿಂದೆ ಹಾಕಲಾಗಿದ್ದ ಯುಜಿಡಿ ಪೈಪ್‍ಲೈನ್‍ಗಳು ಹೊಡೆದುಹೋಗುತ್ತಿದ್ದು, ಇದರಿಂದ ಯುಜಿಡಿ ನೀರು ಹೊರಬರುತ್ತಿದೆ. ಜೊತೆಗೆ ಚರಂಡಿ ನೀರು ಗುಂಡಿಗಳ ತುಂಬಿಕೊಂಡು ಇನ್ನಷ್ಟು ಸಮಸ್ಯೆ ಎದುರಾಗುತ್ತಿದೆ. ಇದರಿಂದ ದುರ್ವಾಸನೆ ಬೀರುವುದರ ಜೊತೆಗೆ ಮಣ್ಣು ಕುಸಿದು ಹಳ್ಳಗಳು ಸೃಷ್ಟಿಯಾಗುತ್ತಿವೆ.
ಪಾಲಿಕೆ ಮೇಯರ್ ವಾರ್ಡ್ ವಿಸಿಟ್
ಸ್ಮಾರ್ಟ್ ಸಿಟಿಯ ವಿವಿಧ ಕಾಮಗಾರಿಗಳಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಪಾಲಿಕೆ ಸದಸ್ಯರಿಗೆ ಹಾಗೂ ಮಹಾಪೌರರಿಗೆ ದೂರುಗಳು ಬರುತ್ತಿದ್ದರ ಹಿನ್ನೆಲೆಯಲ್ಲಿ ಪಾಲಿಕೆ ಮೇಯರ್ ಲಲಿತರವೀಶ್ ಅವರು ಸ್ಥಳೀಯ ಸದಸ್ಯರೊಂದಿಗೆ ವಾರ್ಡ್‍ಗಳಲ್ಲಿ ಭೇಟಿ ಮಾಡುತ್ತಿದ್ದಾರೆ. ಇತ್ತೀಚೆಗೆ 15ನೇ ವಾರ್ಡ್‍ಗೆ ಭೇಟಿ ನೀಡಿದ್ದರು. ಇದೀಗ 4ನೇ ವಾರ್ಡ್‍ಗೆ ಭೇಟಿ ನೀಡಿದ್ದಾರೆ. ಹೀಗೆ ನಗರದ ಎಲ್ಲಾ ವಾರ್ಡ್‍ಗಳ ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.
ತುಮಕೂರು ಸ್ಮಾರ್ಟ್ ಸಿಟಿಯಾಗುತ್ತಿರುವುದು ಸಂತಸವೇ ಸರಿ. ಆದರೆ ಸ್ಮಾರ್ಟ್ ಹೆಸರಿನಲ್ಲಿ ಕಳಪೆ ಕಾಮಗಾರಿಗಳನ್ನು ಮಾಡುತ್ತಿರುವುದು ಸರಿಯಲ್ಲ. ಕಳೆದ ಒಂದೂವರೆ ತಿಂಗಳ ಹಿಂದೆ ತೋಡಿದ್ದ ಗುಂಡಿಗಳನ್ನು ಮುಚ್ಚುವ ಕಾರ್ಯ ಇನ್ನೂ ಮಾಡಿಲ್ಲ. ಹಿರಿಯರು ಮಕ್ಕಳು ಈ ಗುಂಡಿಯೊಳಗೆ ಬಿದ್ದರೆ ಯಾರದು ಜವಾಬ್ದಾರಿ? ಈಗಾಗಲೇ ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಕೂಡ ಸಾಧ್ಯವಾಗುತ್ತಿಲ್ಲ.
ನರಸಿಂಹಪ್ಪ, 4ನೇ ವಾರ್ಡ್ ನಿವಾಸಿ
ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ವಾರ್ಡ್‍ಗಳ ವಿಸಿಟ್ ಮಾಡಲಾಗುತ್ತಿದೆ. ನಾಲ್ಕನೇ ವಾರ್ಡ್‍ನ ಚಿಕ್ಕಪೇಟೆ ರಸ್ತೆಯು ತುಂಬಾ ಚಿಕ್ಕದಾಗಿದ್ದು, ಇಲ್ಲಿ ತೋಡಿದ ಗುಂಡಿಗಳಿಂದ ಓಡಾಡಲು ಆಗದ ಸ್ಥಿತಿ ನಿರ್ಮಾಣ ಆಗಿದೆ. ಗುಂಡಿ ತೆಗೆಯುವಾಗ ಯುಜಿಡಿ ಪೈಪ್‍ಗಳನ್ನು ಹೊಡೆದು ಹಾಕಲಾಗಿದ್ದು, ಇದರಿಂದ ಕೊಳಚೆ ನೀರು ಹೊರಕ್ಕೆ ನುಗ್ಗುತ್ತಿದೆ. ಸ್ಮಾರ್ಟ್ ಸಿಟಿ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸುತ್ತಿಲ್ಲ. ಏಕಾ ಏಕಿ ಬರುತ್ತಾರೆ. ಗುಂಡಿ ತೆಗದು ಹೋಗುತ್ತಾರೆ. ಸ್ಥಳೀಯರು ಪಾಲಿಕೆ ಸದಸ್ಯರಿಗೆ ಕರೆ ಮಾಡಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು
ಲಲಿತರವೀಶ್, ಮಹಾಪೌರರು
ಸ್ಮಾರ್ಟ್ ಸಿಟಿಯಲ್ಲಿ ಸ್ಮಾರ್ಟ್ ರೋಡ್ ಡೆವಲಪ್‍ಮೆಂಟ್ ಎಂಬ ಯೋಜನೆ ಅಡಿಯಲ್ಲಿ ವಿವಿಧ ಕಾಂಪೋನೆಂಟ್ಸ್‍ಗಳನ್ನು ಒಟ್ಟಿಗೆ ಸೇರಿಸುವ ಕಾಮಗಾರಿ ಇದಾಗಿದ್ದು, ಇದು ಸುಮಾರು 274 ಕೋಟಿ ರೂ.ಗಳ ಕಾಮಗಾರಿಯಾಗಿದೆ. ಇದರಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ವಿವಿಧ ಕಂಪನಿಗಳಿಗೆ ಟೆಂಡರ್ ನೀಡಲಾಗಿದೆ. ಕಾಮಗಾರಿ ನಡೆಯುವಾಗ ಯಾವುದೇ ಪೈಪುಗಳು ಹೊಡೆದುಹೋದರೂ ಅದಕ್ಕೆ ಜವಾಬ್ದಾರರು ಅವರೇ ಆಗುತ್ತಾರೆ. ಅದನ್ನು ಅವರೇ ಬದಲಾಯಿಸಬೇಕು.
ಬಿ.ಟಿ.ರಂಗಸ್ವಾಮಿ, ವ್ಯವಸ್ಥಾಪಕ ನಿರ್ದೇಶಕರು, ಸ್ಮಾರ್ಟ್ ಸಿಟಿ ಲಿಮಿಟೆಡ್
ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಸ್ವಲ್ಪ ಸಮಸ್ಯೆ ಎದುರಾಗುತ್ತದೆ. ಸಾರ್ವಜನಿಕರು ಇದಕ್ಕೆ ಹೊಂದಿಕೊಂಡು ಕಾಮಗಾರಿ ನಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಶುಕ್ರವಾರ ಎಂಜಿ ಕ್ರೀಡಾಂಗಣ ಬಳಿ ಸ್ಮಾರ್ಟ್ ಸಿಟಿಯೋಜನೆ ಕ್ರೀಡಾಂಗಣ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೂ ಮುನ್ನ ನಡೆದ ಪ್ರತಿಭಟನೆ ವೇಳೆ ಶಾಸಕ ಜ್ಯೋತಿಗಣೇಶ್‍ರವರು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡುವಾಗ ಪ್ರಸ್ಥಾಪ ಮಾಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








