ಮೇವು ಬ್ಯಾಂಕುಗಳಿಗೆ ಕಳಪೆ ಮೇವು ಸರಬರಾಜು

ಶಿರಾ

   ತಾಲ್ಲೂಕಿನಲ್ಲಿ 5 ಮೇವು ಬ್ಯಾಂಕುಗಳನ್ನು ಸ್ಥಾಪಿಸಲಾಗಿದ್ದು, ಸದರಿ ಮೇವು ಬ್ಯಾಂಕಿಗೆ ಮೇವನ್ನು ಪೂರೈಸುವ ಟೆಂಡರ್‍ದಾರ ಕಳಪೆ ಮೇವನ್ನು ಸರಬರಾಜು ಮಾಡುತ್ತಿದ್ದು, ಮೇವನ್ನು ಒದಗಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ ಎಂದು ಪಶು ವೈದ್ಯಾಧಿಕಾರಿ ಡಾ.ರಂಗನಾಥ್ ತಾ.ಪಂ. ಸಾಮಾನ್ಯ ಸಭೆಯಲ್ಲಿ ತಮ್ಮ ಇಲಾಖೆಯ ಬಹು ಮುಖ್ಯ ಸಮಸ್ಯೆಯೊಂದನ್ನು ನಿವೇದಿಸಿಕೊಂಡ ಪ್ರಸಂಗ ನಡೆಯಿತು.

      ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ತಾ.ಪಂ. ಅಧ್ಯಕ್ಷೆ ಹಂಸವೇಣಿಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ತಾ.ಪಂ. ಸಾಮಾನ್ಯ ಸಭೆ ನಡೆಯಿತು. ತಾಲ್ಲೂಕಿನಾದ್ಯಂತ ಸಮರ್ಪಕವಾಗಿ ಮಳೆ ಬಾರದ ಪರಿಣಾಮ ತಾಲ್ಲೂಕಿನ ಪ.ನಾ.ಹಳ್ಳಿ, ಗಂಡಿಹಳ್ಳಿ, ಬೆಂಚೆಗೇಟ್, ಶಿರಾ ಎಪಿಎಂಸಿ ಆವರಣ ಹಾಗೂ ಚಿಕ್ಕನಹಳ್ಳಿಯಲ್ಲಿ ಮೇವು ಬ್ಯಾಂಕ್ ಆರಂಭಿಸಲಾಗಿದ್ದು, ರೈತರಿಗೆ ಮೇವನ್ನು ವಿತರಿಸಲಾಗುತ್ತಿತ್ತು. ಈ ನಡುವೆ ಮೇವು ಬ್ಯಾಂಕ್‍ಗಳಿಗೆ ಟೆಂಡರ್‍ದಾರ ಪೂರೈಸುತ್ತಿದ್ದ ಮೇವು ಅತ್ಯಂತ ಕಳಪೆ ಗುಣಮಟ್ಟದ್ದಾಗಿದ್ದು, ಅನೇಕ ಬಾರಿ ಮೇವನ್ನು ವಾಪಸ್ ಕಳುಹಿಸಲಾಗಿದೆ ಎಂದು ವೈದ್ಯಾಧಿಕಾರಿ ತಿಳಿಸಿದರು.

      ಈ ಸಂಬಂಧ ಟೆಂಡರ್‍ದಾರನ ವರ್ತನೆಯಿಂದ ಬೇಸತ್ತು ಇಲಾಖೆಯ ಮೇಲಾಧಿಕಾರಿಗಳಿಗೂ ದೂರು ನೀಡಿದ್ದು, ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ತಿಳುವಳಿಕೆ ಪತ್ರ ಕೂಡ ನೀಡಲಾಗಿದೆ. ಆದರೂ ಟೆಂಡರ್‍ದಾರ ಉತ್ತಮ ಮೇವನ್ನು ನೀಡಲಿಲ್ಲ. ನಾನು ಮೇವನ್ನು ಸರಬರಾಜು ಮಾಡುವುದಿಲ್ಲ ಎಂದು ಟೆಂಡರ್‍ದಾರ ಅರ್ಜಿಯನ್ನೂ ಬರೆದು ಕೊಟ್ಟಿದ್ದಾನೆಂದು ಪಶು ವೈದ್ಯಾಧಿಕಾರಿ ಅಳಲು ತೋಡಿಕೊಂಡರು.

      ಮೇವು ಬ್ಯಾಂಕಿನಲ್ಲಿ ಸಹ ಸಮರ್ಪಕವಾಗಿ ಮೇವನ್ನು ವಿತರಣೆ ಮಾಡುತ್ತಿಲ್ಲ. ಇನ್ನೂ ಮೂರು ಕಡೆ ಮೇವು ಬ್ಯಾಂಕನ್ನು ಆರಂಭಿಸಬೇಕಿತ್ತು. ಗುಣಮಟ್ಟದ ಮೇವನ್ನು ಪೂರೈಸದ ಟೆಂಡರ್‍ದಾರನ ಟೆಂಡರ್ ರದ್ದುಪಡಿಸಿ ಹೊಸ ಟೆಂಡರ್ ಕರೆಯಿರಿ ಎಂದು ತಾ.ಪಂ.ಸದಸ್ಯರು ಸಭೆಯಲ್ಲಿ ಸೂಚನೆ ನೀಡಿದರು.

ಸ್ಕ್ಯಾನಿಂಗ್ ಯಂತ್ರಕ್ಕೆ ಮುಕ್ತಿ ಇಲ್ಲ:

       ಕಳೆದ ಐದು ವರ್ಷಗಳ ಹಿಂದೆ ನಗರದ ಸರ್ಕಾರಿ ಆಸ್ಪತ್ರೆಗೆ ಮಂಜೂರಾದ ಸ್ಕ್ಯಾನಿಂಗ್ ಯಂತ್ರವು ವೈದ್ಯರಿಲ್ಲದೆ ತುಕ್ಕು ಹಿಡಿಯುತ್ತಿದೆ. ಈ ಯಂತ್ರಕ್ಕೆ ಮುಕ್ತಿ ಕಾಣಿಸುವರೇ ಇಲ್ಲವಾಗಿದೆ ಎಂದು ತಾ.ಪಂ. ಅಧ್ಯಕ್ಷೆ ಹಂಸವೇಣಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವನ್ನು ಖಂಡಿಸಿದರು.

      ಕಳೆದ ಮೂರು ವರ್ಷಗಳ ಪ್ರತಿಯೊಂದು ತಾ.ಪಂ. ಸಭೆಯಲ್ಲೂ ಸ್ಕ್ಯಾನಿಂಗ್ ಯಂತ್ರದ ಬಗ್ಗೆ ಚರ್ಚೆ ನಡೆಸಿ ಒತ್ತಡ ಹೇರಿದರೂ, ಈ ಯಂತ್ರಕ್ಕೆ ಮುಕ್ತಿಯೇ ಇಲ್ಲವೆಂದು ಆರೋಗ್ಯ ಇಲಾಖೆಯ ವೈದ್ಯರನ್ನು ತಾ.ಪಂ. ಅಧ್ಯಕ್ಷರು ತರಾಟೆಗೆ ತೆಗೆದುಕೊಂಡರು.

        ಸದರಿ ಸಭೆಗೆ ನಗರ ಆಸ್ಪತ್ರೆಯ ಆಡಳಿತ ವೈದ್ಯರಾಗಲಿ, ತಾಲ್ಲೂಕು ವೈದ್ಯಾಧಿಕಾರಿಗಳಾಗಲಿ ಬಾರದೆ ಮತ್ತೋರ್ವ ವೈದ್ಯರನ್ನು ಸಭೆಗೆ ಕಳುಹಿಸಿಕೊಟ್ಟ ಪರಿಣಾಮ ಸರಿಯಾದ ಮಾಹಿತಿಯೇ ಇಲ್ಲದ ವೈದ್ಯರು ಸಭೆಗೆ ಸ್ಪಷ್ಟ ಉತ್ತರ ನೀಡಲು ಸಾಧ್ಯವಾಗಲಿಲ್ಲ. ಸ್ಕ್ಯಾನಿಂಗ್ ಯಂತ್ರದ ವೈದ್ಯರ ಹುದ್ದೆ ಖಾಲಿ ಇದ್ದು ಈವರೆಗೂ ಯಾರೂ ಕೂಡ ಬಂದಿಲ್ಲ ಎಂಬ ವಿಷಯ ಮಾತ್ರ ಸಭೆಗೆ ಮನವರಿಕೆಯಾಯಿತು.

       ಶಿರಾ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ಆಸ್ಪತ್ರೆಗೆ ಬರುವ ಗರ್ಭಿಣಿ ಮಹಿಳೆಯರಿಗೆ ತುರ್ತು ಚಿಕಿತ್ಸೆಗೆ ಟೋಕನ್ ಕೂಡ ನೀಡುವುದಿಲ್ಲ. ಹೊಟ್ಟೆ ನೋವಿನಿಂದ ಮಹಿಳೆಯರು ನರಳುವಂತಹ ಸ್ಥಿತಿ ಇದೆ. ಆಕಸ್ಮಿಕವಾಗಿ ಹಾವು ಕಚ್ಚಿಸಿಕೊಂಡ ಇಲ್ಲವೆ ವಿಷ ಸೇವಿಸಿದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದು ತಂದರೆ ಇಲ್ಲಿ ಪ್ರಥಮ ಚಿಕಿತ್ಸೆ ನೀಡದೆಯೇ ಜಿಲ್ಲಾ ಕೇಂದ್ರಕ್ಕೆ ಕಳುಹಿಸಿಕೊಡುತ್ತಾರೆ. ದಾರಿ ಮಧ್ಯದಲ್ಲಿಯೇ ಕೆಲವರು ಸಾವನ್ನಪ್ಪಿದ ನಿದರ್ಶನಗಳೂ ಇವೆ. ಮೊದಲು ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸದಸ್ಯರಾದ ಮಂಜುಳಾ ಬಾಯಿ, ಮಂಜುನಾಥ್, ಶ್ರೀನಿವಾಸ್ ಒತ್ತಾಯಿಸಿದರು.

 ಆಯುಷ್ಮಾನ್ ಕಾರ್ಡ್:

        ಕೇಂದ್ರ ಸರ್ಕಾರದ ಆಯುಷ್ಮಾನ್ ಆರೋಗ್ಯ ಕಾರ್ಡ್‍ನ್ನು ಶಿರಾ ನಗರದ ಆಸ್ಪತ್ರೆಯಲ್ಲಿ ಮಾತ್ರ ನೀಡಲಾಗುತ್ತಿದ್ದು, ಇಲ್ಲಿನ ಕೇವಲ ಒಂದು ಕಂಪ್ಯೂಟರ್‍ನಿಂದ ತುರ್ತಾಗಿ ಕಾರ್ಡ್ ವಿತರಣೆ ಮಾಡಲಾಗುತ್ತಿಲ್ಲ ಎಂದು ಸ್ಥಾಯಿ ಸಮಿತಿಯ ಅಧ್ಯಕ್ಷ ತಿಮ್ಮಯ್ಯ, ಉಪಾಧ್ಯಕ್ಷ ರಂಗನಾಥಪ್ಪ, ಸದಸ್ಯರಾದ ಪಾಂಡುರಂಗಪ್ಪ, ಚಂದ್ರಪ್ಪ, ಮಂಜುಳಾ ಬಾಯಿ ಸೇರಿದಂತೆ ಹಲವು ಸದಸ್ಯರು ಆರೋಪಿಸಿದರು. ತಾಲ್ಲೂಕಿನ ಎಲ್ಲಾ ಪಿ.ಹೆಚ್.ಸಿ.ಗಳಲ್ಲೂ ಕಾರ್ಡ್ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಯಿತು.

ಬೆಸ್ಕಾಂ ನಿರ್ಲಕ್ಷ್ಯ:

        ತಾಲ್ಲೂಕಿನ ಶಿಡ್ಲೆಕೋಣ, ಬಟ್ಟಿಗಾನಹಳ್ಳಿ ಗ್ರಾಮಗಳ ಕೆಲವು ರೈತರ ಮನೆಗಳ ವಿದ್ಯುತ್ ಕಡಿತಗೊಳಿಸಿ ಬೆಸ್ಕಾಂ ಇಲಾಖೆಯ ಸಿಬ್ಬಂದಿ ಡಿ.ಪಿ. ಸ್ವಿಚ್ ಸಮೇತ ಕಿತ್ತುಕೊಂಡು ಬಂದಿದ್ದಾರೆ. ವಿದ್ಯುತ್ ಬಳಸದಿದ್ದರೂ 11 ತಿಂಗಳ ಹಣ ಪಾವತಿಸಲು ಬಿಲ್ ಮೊತ್ತ ನೀಡಲಾಗಿದೆ. 8,000ಕ್ಕೂ ಅಧಿಕ ವಿದ್ಯುತ್ ಬಿಲ್ ಪಾವತಿಸುವಂತೆ ನೋಟೀಸ್ ಬಂದಿದೆ. ಇದು ಯಾವ ನ್ಯಾಯ ಎಂದು ಸದಸ್ಯ ಪುಟ್ಟರಾಜು ಸಭೆಯ ಗಮನ ಸೆಳೆದರು.

        ತಾಲ್ಲೂಕಿನ ಚಿಕ್ಕಸಂದ್ರ, ಕುಣಿಗಾಟನಹಳ್ಳಿಯಲ್ಲಿ 3 ಕೊಳವೆ ಬಾವಿ ಕೊರೆಯಲಾಗಿದ್ದು, ಬೆಸ್ಕಾಂ ಇಲಾಖೆ ಈವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದು ಕೆಲ ಸದಸ್ಯರು ಬೆಸ್ಕಾಂ ಇಲಾಖೆಯ ವೈಫಲ್ಯವನ್ನು ಖಂಡಿಸಿದರು.

       ಬೆಸ್ಕಾಂ ಇಲಾಖೆಯ ಅಧಿಕಾರಿ ಜಲ್ದೇಶ್ ಮಾತನಾಡಿ, ಆ ರೀತಿ ಹೆಚ್ಚು ಬಿಲ್ ಬರಲು ಸಾಧ್ಯವಿಲ್ಲ. ಅರ್ಥಿಂಗ್ ಇಲ್ಲದೇ ಇರಬಹುದು ಅಥವ ಮೀಟರ್ ನ್ಯೂನತೆ ಇರಬಹುದು. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಸಭೆಗೆ ಭರವಸೆ ನೀಡಿದರು. ಪ್ರಸಕ್ತ ವರ್ಷದ ಗಂಗಾ ಕಲ್ಯಾಣ ಯೋಜನೆಯಡಿ ಮಂಜೂರಾದ 45 ಕಾಮಗಾರಿಗಳ ಪೈಕಿ 16 ಕಾಮಗಾರಿಗಳು ಮಾತ್ರ ಬಾಕಿ ಉಳಿದಿವೆ.

      ಈ 16 ಫಲಾನುಭವಿಗಳಿಗೆ ಆದ್ಯತೆಯ ಮೇಲೆ ಸೌಲಭ್ಯ ಕಲ್ಪಸಲಾಗುವುದು ಎಂದು ಗ್ರಾಮಾಂತರ ಎಇಇ ತಿಳಿಸಿದಾಗ ಸದಸ್ಯರಾದ ಮಂಜುನಾಥ್, ಶ್ರೀನಿವಾಸ್ ಸೇರಿದಂತೆ ಕೆಲ ಸದಸ್ಯರು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಈ ಕೂಡಲೇ ಉಳಿದ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿದರು.

ಅಧ್ಯಕ್ಷರು-ಸದಸ್ಯರ ನಡುವೆ ವಾಕ್ಸಮರ:

        ಸಭೆಯ ನಡುವೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಭಾನುಮತಿ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿ ವೇತನ ಸೇರಿದಂತೆ ನಿಲಯಗಳ ಸಮಸ್ಯೆಗಳನ್ನು ಸಭೆಗೆ ತಿಳಿಸುತ್ತಿರುವಾಗ ತಾ.ಪಂ. ಅಧ್ಯಕ್ಷರು ಇಲಾಖಾಧಿಕಾರಿಗೆ ವಿದ್ಯಾರ್ಥಿ ನಿಲಯಗಳ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಒಂದು ಹಂತದಲ್ಲಿ ಅಧಿಕಾರಿಯಾದ ಭಾನುಮತಿ ಹಾಗೂ ಅಧ್ಯಕ್ಷೆ ಹಂಸವೇಣಿ ಅವರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು.

       ನ್ಯಾಪ್ಕಿನ್ ಯಂತ್ರ ಅತ್ಯಂತ ಕಡಿಮೆ ಬೆಲೆಯದ್ದಾಗಿದ್ದು, ಈ ಯಂತ್ರ ಖರೀದಿಗೆ 90,000 ರೂ. ವ್ಯಯ ಮಾಡಲಾಗಿದೆ ಎಂದು ಅಧ್ಯಕ್ಷೆ ಹಂಸವೇಣಿ ಬಿ.ಸಿ.ಎಂ. ಅಧಿಕಾರಿಗೆ ಸ್ಪಷ್ಟನೆ ನೀಡಲು ಒತ್ತಾಯಿಸಿದರು. ಅಧ್ಯಕ್ಷರು ಬಿ.ಸಿ.ಎಂ. ಅಧಿಕಾರಿಗಳ ವಿರುದ್ಧ ಪ್ರಶ್ನೆಗಳ ಸುರಿಮಳೆಗರೆಯುವುದನ್ನು ಕಂಡ ತಾ.ಪಂ. ಸದಸ್ಯ ಪುಟ್ಟರಾಜು, ಚಂದ್ರಪ್ಪ, ಶ್ರೀನಿವಾಸ್, ಮಂಜುನಾಥ್ ಸೇರಿದಂತೆ ಕೆಲ ಸದಸ್ಯರು ಅಧ್ಯಕ್ಷರ ಈ ವರ್ತನೆಯನ್ನು ಖಂಡಿಸಿದ ಘಟನೆಯೂ ನಡೆಯಿತು.

       ನಿಮ್ಮಂತೆ ಅಧಿಕಾರಿಗಳನ್ನು ನನಗೂ ಪ್ರಶ್ನೆ ಕೇಳುವ ಹಕ್ಕಿದೆ. ನಿಮಗೂ ಈ ಹಕ್ಕು ಇದ್ದು ನೀವು ಪ್ರಶ್ನೆ ಕೇಳುವಾಗ ನಾನು ಮಾತನಾಡದೇ ಸುಮ್ಮನಿರುತ್ತೇನೆ. ನನ್ನ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರಿಸುತ್ತಾರೆ. ನೀವು ನನ್ನನ್ನು ತಡೆಯುವ ಅಗತ್ಯವಿಲ್ಲ ಎಂದು ತಾ.ಪಂ. ಅಧ್ಯಕ್ಷರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಸಭೆಗೆ ತಿಳಿಸಿದರು.

     ನೀವು ಉದ್ದೇಶ ಪೂರ್ವಕವಾಗಿಯೇ ಬಿಸಿಎಂ ಅಧಿಕಾರಿಯನ್ನು ಪ್ರಶ್ನಿಸುತ್ತಿದ್ದೀರಿ. ಉಳಿದ ಇಲಾಖೆಯ ಅಧಿಕಾರಿಗಳ ಮೇಲೆ ತಮ್ಮ ಅಧಿಕಾರ ಚಲಾಯಿಸುತ್ತಿವೇಕೆ ಎಂಬ ಪ್ರಶ್ನೆಗಳು ಸಭೆಯಲ್ಲಿ ವ್ಯಕ್ತಗೊಂಡಾಗ ಅಧ್ಯಕ್ಷರು ಹಾಗೂ ಸದಸ್ಯರ ನಡುವೆ ಸದರಿ ವಿಷಯ ಚರ್ಚೆಗೆ ಗ್ರಾಸವಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap