ದಾವಣಗೆರೆ:
ದೇವಸ್ಥಾನದ ಗೋಪುರದ ಮೇಲೆ ಕಳಶ ಪ್ರತಿಷ್ಠಾಪಿಸುವುದರಿಂದ, ದೇವರು ಮತ್ತು ಭಕ್ತರ ನಡುವೆ ಶಕ್ತಿ ಸಂಚರಿಸಲಿದೆ ಎಂದು ಬಸವಾಪಟ್ಟಣ ಶ್ರೀಕ್ಷೇತ್ರ ರಾಂಪುರದ ಶ್ರೀವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಅಭಿಪ್ರಾಯಪಟ್ಟರು.
ಬುಧವಾರ ನಗರದ ದೇವರಾಜ ಅರಸ್ ಬಡಾವಣೆಯ ‘ಎ’ ಬ್ಲಾಕ್‍ನಲ್ಲಿರುವ ಶ್ರೀಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದ ಮಹಾದ್ವಾರ, ರಾಜಗೋಪುರದ ಕಳಶ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.
ಯಾವುದೇ ದೇವಸ್ಥಾನದ ಗೋಪುರಗಳ ಮೇಲೆ ಕಳಶ ಪ್ರತಿಷ್ಠಾಪನೆ ಮಾಡುವುದರಿಂದ ದೇವರು ಹಾಗೂ ಭಕ್ತರ ನಡುವೆ ಶಕ್ತಿ ಸಂಚರಿಸಲಿದೆ.
ಭಕ್ತರು ದೇವಸ್ಥಾನದ ಹೊರ ಭಾಗದಲ್ಲಿ ನಿಂತು ಕೈ ಮುಗಿದರೂ, ಭಕ್ತನಿಗೆ ದೇವರ ಕರುಣೆ ಪ್ರಾಪ್ತಿಯಾಗಲಿದೆ ಎಂದರು.
ಎಲ್ಲಿ ಸತ್ಯ ಇರುವುದಿಲ್ಲವೋ, ಅಂತಹ ಮನೆಗಳಲ್ಲಿ ಶಾಂತಿ, ನೆಮ್ಮದಿ, ಸಮಾಧಾನ ಇರುವುದಿಲ್ಲ. ಹೀಗಾಗಿ ಮನುಷ್ಯ ಮನಸ್ಸಿಗೆ ಶಾಂತಿ, ನೆಮ್ಮದಿ ಹಾಗೂ ಸಮಾಧಾನ ದೊರೆಯಲಿ ಎಂಬುದಾಗಿ ದೇವಸ್ಥಾನಗಳಿಗೆ ಎಡತಾಕುತ್ತಾನೆ. ಸತ್ಯ ಇರುವ ಕಡೆಗಳಲ್ಲಿ ಈ ಮೂರು ದೊರೆಯಲು ಸಾಧ್ಯವಾಗಲಿದೆ. ಆದ್ದರಿಂದ ಪ್ರತಿಯೊಬ್ಬರೂ ಸತ್ಯವಂತರಾಗಿ ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಮನುಷ್ಯನ ಬಳಿಯಲ್ಲಿ ಕೇವಲ ಹಣ, ಆಸ್ತಿ ಇದ್ದರೆ ಸಾಲದು, ಇವುಗಳಿಂದ ವೈಭೋಗಯುತವಾಗಿ ಬದುಕಬಹುವುದು. ಆದರೆ, ನೆಮ್ಮದಿ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಮನುಷ್ಯ ಸತ್ಯತೆಯನ್ನು ಜೀವನದಲ್ಲಿ ಒಳಗೊಂಡಿರಬೇಕು ಎಂದರು.
ನಮ್ಮ ಕೈಯಲ್ಲಿಯೇ ಸರಸ್ವತಿ, ಲಕ್ಷ್ಮೀ, ಅನ್ನಪೂರ್ಣೇಶ್ವರಿ ದೇವರು ಇದ್ದರೂ, ನಾವುಗಳು ಆ ದೇವತೆಗಳನ್ನು ಹುಡುಕಿಕೊಂಡು ನಾನಾ ಕ್ಷೇತ್ರಗಳಿಗೆ ಹೋಗಿ ಜಪ ಮಾಡುತ್ತೇವೆ. ಹೀಗೆ ಬರೀ ಜಪ ಮಾಡುವುದರಿಂದ ದೇವಾನು-ದೇವತೆಗಳು ಒಲಿಯುವುದಿಲ್ಲ. ಇವುಗಳ ಕರುಣೆ ನಮಗೆ ಸಿಗಬೇಕಾದರೆ, ಸಚ್ಚಾರಿತ್ರ್ಯ ಮತ್ತು ಸಂಸ್ಕಾರಯುತ ವ್ಯಕ್ತಿತ್ವವನ್ನು ಹೊಂದಬೇಕೆಂದು ಸಲಹೆ ನೀಡಿದರು.
ಮನುಷ್ಯನ ಮನಸ್ಸಿನಲ್ಲಿ ಕಸ ತುಂಬಿಕೊಳ್ಳದೇ, ಶುದ್ಧತೆಯನ್ನು ಕಾಪಾಡಿಕೊಳ್ಳಬೇಕು. ಬೇರೆಯವರಿಗೆ ಸಹಾಯ ಮಾಡವು ಗುಣ ಬೆಳೆಸಿಕೊಳ್ಳಬೇಕು. ನೀವು ತನು, ಮನ, ಧನದಿಂದ ಮಾಡುವ ಸಹಾಯವು, ನಿಮ್ಮಲ್ಲಿರುವ ಪಾಪಾಗಳು ನಿವಾರಣೆಯಾಗುತ್ತವೆ ಎಂದರು.
ಶ್ರೀಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನ ಕಮಿಟಿಯ ಅಧ್ಯಕ್ಷ ಆರ್.ಜಿ.ನಾಗೇಂದ್ರ ಪ್ರಸಾದ್ ಮಾತನಾಡಿ, ಇಲ್ಲಿ ಶ್ರೀಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನ ಆರಂಭಗೊಂಡಾಗಿನಿಂದಲೂ ಪ್ರಸಿದ್ಧಿ ಪಡೆದಿದೆ. ಹೊರನಾಡು ಶ್ರೀಮಾತಾ ಅಸನ್ನಪೂರ್ಣೇಶ್ವರಿ ದೇವಸ್ಥಾನವನ್ನು ಹೊರತು ಪಡಿಸಿದರೆ, ನಮ್ಮ ದಾವಣಗೆರೆಯ ದೇವಸ್ಥಾನವು ಪ್ರಸಿದ್ಧಿ ಪಡೆದಿರುವುದು ನಮ್ಮೆಲ್ಲರ ಸುದೈವವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಮಿಟಿಯ ಉಪಾಧ್ಯಕ್ಷ ಬಿ.ವಿ.ಗಂಗಾಧರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವೆಂಕಟಚಲಪತಿ, ಖಜಾಂಚಿ ನಾಗಭೂಷಣ್ ಕಡೇಕೊಪ್ಪ, ಪ್ರಕಾಶ್ ಪಾಟೀಲ್, ವೈ.ಬಿ.ಸತೀಶ್, ನಟರಾಜ್, ಪಿ.ವಿ.ಶ್ರೀಧರಮೂರ್ತಿ, ಕೆ.ಸಿ.ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.