ಚಿತ್ರದುರ್ಗ:
ಸತತ ಪ್ರಯತ್ನ ಹಾಗೂ ದೃಡ ಮನಸ್ಸಿನಿಂದ ಮಾತ್ರ ಕಲೆಯನ್ನು ಸಿದ್ದಿಸಿಕೊಳ್ಳಬಹುದು ಎಂದು ವನ್ಯಜೀವಿ ಛಾಯಚಿತ್ರಗಾರ ಎಂ.ಕಾರ್ತಿಕ್ ಹೇಳಿದರು.
ಬೆಸ್ಟ್ ಅಮೂಲ್ಯ ಎಂಟರ್‍ಟೈನ್‍ಮೆಂಟ್ ಪ್ರಸೆಂಟ್ ವಾಯ್ಸ್ ಆಫ್ ಫೋರ್ಟ್ ಸಿಟಿ ವತಿಯಿಂದ ತ.ರಾ.ಸು.ರಂಗಮಂದಿರದಲ್ಲಿ ಭಾನುವಾರ ನಡೆದ ಕರೋಕೆ ಗಾಯನ ಸ್ಪರ್ಧೆ ಗ್ರಾಂಡ್ ಫಿನಾಲೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಗಾಯನ ಸಂಗೀತ ಕಲೆ ಸಿದ್ದಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಎಲ್ಲರಲ್ಲೂ ಕಲೆ ಇದ್ದೇ ಇರುತ್ತದೆ. ಹೊರತರಲು ಪ್ರೋತ್ಸಾಹಿಸಬೇಕು. ಯುವ ಜನಾಂಗದಲ್ಲಿರುವ ಕಲೆಯನ್ನು ಬೆಳಕಿಗೆ ತರಲು ಇಂತಹ ವೇದಿಕೆಗಳು ಅಗತ್ಯವಾಗಿ ಬೇಕು. ಬೆಸ್ಟ್ ಸ್ಟುಡಿಯೋ ಧರ್ಮ ಮತ್ತು ಅವರ ತಂಡದವರು ಪ್ರತಿ ವರ್ಷವೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯುವ ಪ್ರತಿಭೆಗಳನ್ನು ಗುರುತಿಸುತ್ತಿರುವುದು ಶ್ಲಾಘನೀಯ ಎಂದರು.
ಬಿಜೆಪಿ.ಮುಖಂಡ ಭದ್ರಿನಾಥ್ ಮಾತನಾಡುತ್ತ ಉತ್ತೇಜನವಿಲ್ಲದಿದ್ದರೆ ಕಲೆಯಿದ್ದರು ಹೊರತರಲು ಆಗುವುದಿಲ್ಲ. ಸಾರ್ವಜನಿಕರು ಹಾಗೂ ಪೋಷಕರುಗಳು ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಕಲೆ ಅರಳಲು ಸಾಧ್ಯ. ಸಂಗೀತ ಗಾಯನದಿಂದ ಮನಸ್ಸಿಗೆ ಶಾಂತಿ ಖುಷಿ ಸಿಗುತ್ತದೆ. ದೃಶ್ಯಮಾಧ್ಯಮದ ಹಾವಳಿಯಿಂದ ನೈಜ ಕಲೆ ನಶಿಸಿ ಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತೀರ್ಪುಗಾರರಾಗಿ ಆಗಮಿಸಿದ್ದ ಆರ್.ಜೆ.ದಿವ್ಯಶ್ರೀ ಮಾತನಾಡಿ ಕಲೆಯಲ್ಲಿ ಆಸಕ್ತಿಯಿರುವವರು ಇದ್ದಾರೆ. ಹುರಿದುಂಬಿಸುವವರು ಕಡಿಮೆಯಿದ್ದಾರೆ. ಸಂಗೀತ ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಸರಸ್ವತಿ ಕೃಪೆಯಿರಬೇಕು ಎಂದು ತಿಳಿಸಿದರು.ಮತ್ತೊಬ್ಬ ತೀರ್ಪುಗಾರರಾದ ಆರ್ಷಿಕ್ ಬಿ.ರಾವ್ ಮಾತನಾಡುತ್ತ ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ಪೋಷಕರು ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್‍ಗಳಾಗಬೇಕು. ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆಯಬೇಕೆನ್ನುವುದೇ ಗುರಿಯಾಗಿರುತ್ತದೆ.
ಶಿಕ್ಷಣದ ಜೊತೆ ಮಕ್ಕಳಲ್ಲಿ ಯಾವ ರಂಗದಲ್ಲಿ ಆಸಕ್ತಿ ಇದೆ ಎನ್ನುವುದನ್ನು ತಿಳಿದುಕೊಂಡು ಪ್ರೋತ್ಸಾಹಿಸಿ ಬೆಂಬಲಿಸಿ ಎಂದು ಮನವಿ ಮಾಡಿದರು.ನಗರಸಭೆ ಸದಸ್ಯ ಎನ್.ಚಂದ್ರಶೇಖರ್, ಜೆಡಿಎಸ್.ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ಕೃಷ್ಣಮೂರ್ತಿ, ನಟ ಎನ್.ವಿನಾಯಕ, ಮಾಯಣ್ಣ, ಪೂರ್ಣಿಮ ಇನ್ನು ಮೊದಲಾದವರು ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
