ಶಿಲ್ಪಕಲೆಗೆ ಜೀವ ತುಂಬಿದ ವಿಶ್ವಕರ್ಮರು

ದಾವಣಗೆರೆ:

       ಲಕ್ಷಾಂತರ ಶಿಲ್ಪ ಕಲಾಕೃತಿಗೆ ವಿಶ್ವಕರ್ಮ ಸಮಾಜದವರು ಜೀವ ತುಂಬಿದ್ದಾರೆಂದು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು.ನಗರದ ಕಾಳಿಕಾದೇವಿ ರಸ್ತೆಯ ಶ್ರೀಕಾಳಿಕಾದೇವಿ ದೇವಸ್ಥಾನದಲ್ಲಿ ಭಾನುವಾರ ಶ್ರೀಕಾಳಿಕಾದೇವಿ ದೇವಸ್ಥಾನ ಗೋಪುರ ಸಮಿತಿಯಿಂದ ಏರ್ಪಡಿಸಿದ್ದ ಶ್ರೀಕಾಳಿಕಾದೇವಿ ದೇವಸ್ಥಾನದ ಕಲಶ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಜಗತ್ತಿಗೆ ಶಿಲ್ಪಕಲಾ ಶಾಸ್ತ್ರವನ್ನು ಪರಿಚಯಿಸಿದ ಕೀರ್ತಿ ವಿಶ್ವಕರ್ಮ ಸಮಾಜಕ್ಕೆ ಸಲ್ಲುತ್ತದೆ. ಅಲ್ಲದೇ, ಈ ಸಮಾಜದವರು ಲಕ್ಷಾಂತರ ಕಲಾಕೃತಿಗಳಿಗೆ ಜೀವ ತುಂಬಿರುವುದ ಬಗೆಗಿನ ಉಲ್ಲೇಖಗಳು ವೇದ, ಆಗಮ ಉಪನಿಷತ್ತುಗಳಲ್ಲಿವೆ ಎಂದರು.

         ಕುಲಕಸುಬನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿರುವ ವಿಶ್ವಕರ್ಮ ಸಮಾಜದವರು, ಅತ್ಯದ್ಭುತ ಕಲಾಕೃತಿಗಳು, ದೇವಾಲಯಗಳನ್ನು ನಿರ್ಮಿಸುವ ಮೂಲಕ ದೇವರ ಬಗ್ಗೆ ನಂಬಿಕೆ ಇಲ್ಲದಂತ ನಾಸ್ತಿಕರನ್ನು ಆಸ್ತಿಕರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದರೆ ಅತಿಶಯೋಕ್ತಿ ಆಗಲಾರದು ಎಂದು ಹೇಳಿದರು.

         ನಂದಿಗ್ರಾಮದ ಜ್ಞಾನಾನಂದ ಆಶ್ರಮದ ಶ್ರೀಶಿವಾತ್ಮಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಇಲ್ಲಿರುವ ಕಾಳಿಕಾದೇವಿ ದೇವಾಲಯವು ಮುಂದೆ ಜಿಲ್ಲೆಯ ಸರ್ವಧರ್ಮಗಳ ಶ್ರದ್ಧಾ ಕೇಂದ್ರವಾಗಲಿದೆ. ಈ ದೇವಸ್ಥಾನಕ್ಕೆ ಸುಮಾರು 50 ವರ್ಷಗಳ ಇತಿಹಾಸವಿದ್ದು, ಅತ್ಯಂತ ಪುರಾತನ ದೇವಾಲಯವಾಗಿದೆ. ಆರಂಭದಲ್ಲಿ ಸಣ್ಣದಾಗಿದ್ದ ದೇವಸ್ಥಾನ ಇಂದು ವಿಶ್ವಕರ್ಮ ಸಮಾಜ ಬಾಂಧವರ ತನು, ಮನ, ಧನದ ನಿಸ್ವಾರ್ಥ ಸೇವೆಯೊಂದಿಗೆ ಅತ್ಯಂತ ಸುಂದರವಾದ ಭವ್ಯ ದೇವಸ್ಥಾನ ನಿರ್ಮಾಣಗೊಂಡಿದೆ ಎಂದರು

         ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಸಣ್ಣದಾಗಿದ್ದ ಕಾಳಿಕಾದೇವಿ ದೇವಸ್ಥಾನವನ್ನು ಇಂದು ಭವ್ಯವಾಗಿ ನಿರ್ಮಿಸಿರುವುದು ಅಭಿನಂದನಾರ್ಹ. ದಾವಣಗೆರೆಗೆ ಬಂದ ಜನರು ದುಗ್ಗಮ್ಮನ ದೇವಸ್ಥಾನಕ್ಕೆ ಬಂದು ಹೋಗದೆ ವಾಪಸ್ ಆಗಲ್ಲ. ಅದೇ ರೀತಿ ಮುಂದಿನ ದಿನಗಳಲ್ಲಿ ಶ್ರೀ ಕಾಳಿಕಾದೇವಿ ದೇವಸ್ಥಾನಕ್ಕೂ ಜನರು ಬಂದು ಹೋಗುವಂತಾಗಬೇಕೆಂದು ಆಶಿಸಿದರು.
ಕಾರ್ಯಕ್ರಮವನ್ನು ಜವಳಿ ವರ್ತಕ ಬಿ.ಸಿ. ಉಮಾಪತಿ ಉದ್ಘಾಟಿಸಿದರು.

           ಶ್ರೀವಿಶ್ವಕರ್ಮ ಪೀಠದ ಶ್ರೀಶಿವಸುಜ್ಞಾನ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೇಯರ್ ಶೋಭಾ ಪಲ್ಲಾಗಟ್ಟೆ, ಗೋಪುರ ನಿರ್ಮಾಣ ಸಮಿತಿ ಅಧ್ಯಕ್ಷ ಬಿ. ನಾಗೇಂದ್ರಚಾರ್ ಬಸಾಪುರ, ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಕೆ.ಪಿ.ಮರಿಯಾಚಾರ್, ಪಿ.ಬಿ.ಬಡಿಗೇರ್, ಬಿ.ಎಲ್.ಸೀತಾರಾಮಚಾರ್ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link