ಕಲಿಯುಗದಲ್ಲಿ ಕೃತಜ್ಞತೆ ಎಂಬುದೇ ಇಲ್ಲದಾಗಿದೆ

ಹುಳಿಯಾರು:

    ಇತ್ತೀಚೆಗೆ ನಡೆದ ತುಮುಲು ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನಿಂದ ಹಳೆಮನೆ ಶಿವನಂಜಪ್ಪ ಅವರು ಗೆದ್ದಿದ್ದರೂ ಕೂಡ ಬಿದ್ದ ಮತಗಳ ಬಗ್ಗೆ ಅಸಮಧಾನವಿದ್ದು ಇದನ್ನು ಕಂದಿಕೆರೆಯ ಹಾಲಿನ ಡೇರಿಯ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಹೊರಹಾಕಿದ್ದಾರೆ.

       ಹೌದು ಸತತ ನಾಲ್ಕನೆ ಬಾರಿ ತುಮುಲು ನಿರ್ದೇಶಕರಾಗಿ ಆಯ್ಕೆಯಾಗಿರುವ ಹಳೆಮನೆ ಶಿವನಂಜಪ್ಪ ಅವರು ಈ ಬಾರಿ ಪುನರಾಯ್ಕೆಗೊಂಡ ನಂತರ ಮೊದಲ ಸಭೆಯಾಗಿ ಕಂದಿಕೆರೆಯ ಹಾಲಿನ ಡೇರಿಯ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಬುಧವಾರ ಭಾಗವಹಿಸಿದ್ದರು.

       ಈ ಸಭೆಯಲ್ಲಿ ಮಾತನಾಡಿದ ಅವರು ತಾನು ಮೊದಲು ಹಾಲು ಒಕ್ಕೂಟಕ್ಕೆ ತಾಲೂಕಿನಿಂದ ನಿರ್ದೆಶಕನಾಗಿ ಆಯ್ಕೆಯಾಗಿ ಹೋದ ಸಂದರ್ಭದಲ್ಲಿ ತಾಲೂಕಿನಲ್ಲಿ 30 ಡೇರಿಗಳಿದ್ದು 6 ಸಾವಿರ ಲೀಟರ್ ಮಾತ್ರ ನಿತ್ಯ ಹಾಲು ಶೇಖರಣೆಯಾಗುತ್ತಿತ್ತು. ತಾನು ಜಾತಿ, ಪಕ್ಷ ನೋಡದೆ ಡೇರಿಗಳನ್ನು ಆರಂಭಿಸಿದ ಫಲವಾಗಿ ನೂರಕ್ಕೂ ಹೆಚ್ಚು ಡೇರಿಗಳು ಸ್ಥಾಪನೆಗೊಂಡು ನಿತ್ಯ 70 ಸಾವಿರ ಲೀಟರ್ ಹಾಲು ಶೇಖರಣೆಯಾಗುತ್ತಿದೆ.

       ಅಲ್ಲದೆ ಹಾಲು ಒಕ್ಕೂಟದಿಂದ ಸಿಗಬೇಗಾದ ಸಹಾಯಧನ, ರಾಸುಗಳಿಗೆ ಔಷಧೋಪಚಾರ, ಡೇರಿ ಕಟ್ಟಡಕ್ಕೆ ಸಹಾಯಧನ, ಬಿಎಂಸಿ ಸೆಂಟರ್, ಅಧ್ಯಯನ ಪ್ರವಾಸ ಹೀಗೆ ಅನೇಕ ಸವಲತ್ತುಗಳನ್ನು ಜಾತಿ, ಪಕ್ಷ ನೋಡದೆ ನೀಡಿದೆ. 115 ಮತಗಳಲ್ಲಿ ನೂರಕ್ಕೂ ಹೆಚ್ಚು ಮತಗಳನ್ನು ನನಗೆ ಹಾಕಿ ಗೆಲ್ಲಿಸಬೇಕಿತ್ತು. ಆದರೆ ಕೇವಲ 65 ಡೇರಿಯವರು ಮಾತ್ರ ನನ್ನ ಪರವಾಗಿ ಮತ ಹಾಕಿದ್ದಾರೆ.

       ಸತತ ನಾಲ್ಕನೆ ಬಾರಿ ಗೆದ್ದಿದ್ದರೂ ಕೂಡ ಕಡಿಮೆ ಮತಗಳಿಂದ ಗೆದ್ದಿರುವುದು ನನಗೆ ಬೇಸರ ಮೂಡಿಸಿದೆ. ತಾನೂ ಎಷ್ಟೇ ಸಹಾಯ ಮಾಡಿದರೂ ಚುನಾವಣೆಯಲ್ಲಿ ನನ್ನ ಪರ ಇಲ್ಲದಿರುವುದನ್ನು ನೋಡಿದರೆ ಕಲಿಯುಗದಲ್ಲಿ ಕೃತಜ್ಞತೆ ಎನ್ನುವದೇ ಇಲ್ಲದಾಗಿದೆಯೇನೋ ಎನ್ನುವ ಅನುಮಾನ ಮೂಡಿದೆ. ಒಳ್ಳೆಯ ಕೆಲಸಗಳನ್ನು ಮಾಡುವುದೋ ಬಿಡುವುದೋ ಎನ್ನುವ ಜಿಜ್ಞಾಸೆಗೆ ತಾನು ಒಳಗಾಗಿದ್ದೇನೆ ಎಂದು ಮನ ಬಿಚ್ಚಿ ಮಾತನಾಡಿದರು.

       ನಂತರ ಮಾತನಾಡಿದ ಅವರು ತಾನು ಮೊದಲ ಬಾರಿ ಗೆದ್ದ ಸಂದರ್ಭದಲ್ಲಿ ಕಂದಿಕೆರೆ ಹೋಬಳಿಯಲ್ಲಿ ಕೇವಲ ಒಂದೇ ಒಂದು ಡೇರಿ ಇತ್ತು. ನಾನು ಹಳ್ಳಿಹಳ್ಳಿ ತಿರುಗಿ ರೈತರ ಮನೊಲಿಸಿ 13 ಡೇರಿ ಆರಂಭಿಸಿದೆ. ಆದರೆ ಇದರಲ್ಲಿ ಈಗಾಗಲೇ 3 ಡೇರಿ ಮುಚ್ಚಿವೆ. ಮಳೆಬೆಳೆಯಿಲ್ಲದ ಈ ಸಂದರ್ಬದಲ್ಲಿ ರೈತ ನೆಮ್ಮದಿಯಿಂದ ಬಾಳಲು ಹೈನುಗಾರಿಗೆಯೊಂದೆ ಆಸರೆಯಾಗಿದ್ದು ಡೇರಿಯಲ್ಲಿ ಜಾತಿ, ಪಕ್ಷ ತಂದು ಕಿತ್ತಾಡಿ ಮುಚ್ಚುವ ಬದಲು ಮತ್ತೊಷ್ಟು ಡೇರಿ ತೆರೆದು ನೆಮ್ಮದಿಯಾಗಿ ಬಾಳಿ ಎಂದು ಕಿವಿ ಮಾತು ಹೇಳಿದರು.

      ಶಾಸಕ ಜೆ.ಸಿ.ಮಾಧುಸ್ವಾಮಿ, ತುಮುಲು ವ್ಯವಸ್ಥಾಪಕ ಡಾ.ನರಸಿಂಹನ್, ಕಂದಿಕೆರೆ ಡೇರಿ ಅಧ್ಯಕ್ಷ ಎಸ್.ಧನಂಜಯ್, ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಧಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪ್ರಶಾಂತ್, ತುಮುಲು ನಸಹಾಯಕ ವ್ಯವಸ್ಥಾಪಕ ಎ.ಪಿ.ಯರಗುಂಟಪ್ಪ, ವಿಸ್ತರಣಾಧಿಕಾರಿ ಎಂ.ಎನ್.ಮಹೇಶ್, ಸಿ.ಎಸ್.ರಾಜು, ಆರ್,ವೈ.ಸುನಿಲ್ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link