ಹುಳಿಯಾರು:
ಉಪ್ಪಾರ ಸಂಘದವರು ಜೆಡಿಎಸ್ ಅಭ್ಯರ್ಥಿ ಎಚ್.ಡಿ.ದೇವೇಗೌಡ ಅವರಿಗೆ ಮತ ಹಾಕುವಂತೆ ಏಕಪಕ್ಷಿಯವಾಗಿ ನಿರ್ಧಾರ ಕೈಗೊಂಡು ಪತ್ರಿಕಾ ಹೇಳಿಕೆ ನೀಡಿರುವ ಉಪ್ಪಾರ ಸಂಘದ ಅಧ್ಯಕ್ಷ ಕಲ್ಲೇಶ್ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ತಾಲೂಕು ಉಪ್ಪಾರ ಸಂಘದ ಉಪಾಧ್ಯಕ್ಷ ನಂದಿಹಳ್ಳಿಮಲ್ಲೇಶಯ್ಯ ಅವರು ಸೇರಿದಂತೆ ಕೆಲ ನಿರ್ದೇಶಕರು ಒತ್ತಾಯಿಸಿದ್ದಾರಲ್ಲದೆ ಉಪ್ಪಾರ ಜನಾಂಗದ ವಿರೋಧಿಯಾದ ಜೆಡಿಎಸ್‍ಗೆ ಮತ ನೀಡದೆ ಉಪ್ಪಾರರ ಹಿತಕಾಯುವ ಬಿಜೆಪಿಗೆ ಮತ ನೀಡುವಂತೆ ಕರೆ ನೀಡಿದ್ದಾರೆ.
ಹುಳಿಯಾರಿನ ಪೇಟೆಬೀದಿಯಲ್ಲಿರುವ ಉಪ್ಪಾರ ಸಮುದಾಯ ಭವನದಲ್ಲಿ ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿದ ಉಪ್ಪಾರ ಸಂಘದ ಉಪಾಧ್ಯಕ್ಷ ನಂದಿಹಳ್ಳಿ ಮಲ್ಲೇಶಯ್ಯ ಅವರು ಹಿಂದುಳಿದ ವರ್ಗದಲ್ಲಿ ಸಣ್ಣ ಸಮುದಾಯವಾದ ಉಪ್ಪಾರ ಜನಾಂಗದ ಏಳಿಗೆಯ ದೃಷ್ಠಿಯಿಂದ ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿ ಸಂಘದ ಕಾರ್ಯಕಾರಿ ಮಂಡಳಿ ಕೆಲಸ ಮಾಡಬಾರದು. ಸಾರ್ವಜನಿಕವಾಗಿ ಇಂತಹವರಿಗೆ ಮತಚಲಾಯಿಸುವಂತೆ ಹೇಳಬಾರದೆಂಬುದು ಮೊದಲೇ ತೀರ್ಮಾನಿಸಿ ಸಂಘ ರಚಿಸಲಾಗಿತ್ತು.
ಹಾಗಾಗಿ ಹಾಲಿ ಅಧ್ಯಕ್ಷ ಕಲ್ಲೇಶ್ ಅವರಿಗೂ ಸಹ ದೇವೇಗೌಡರಿಗೆ ಮತ ಹಾಕುವಂತೆ ಕರೆಕೊಡಬಾರದೆಂದು ಹೇಳಿದ್ದರೂ ಕಾರ್ಯಕಾರಿ ಮಂಡಳಿಯ ಅಭಿಪ್ರಾಯ ದಿಕ್ಕರಿಸಿ ಕರೆ ನೀಡಿರುವ ಕಾರಣ ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ನೈತಿಕ ಹಕ್ಕು ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಮತ್ತು ದೇವೇಗೌಡರು ಎಂದೂ ಹಿಂದುಳಿದ ಜನಾಂಗ ಪರವಾಗಿಲ್ಲ. ಹುಳಿಯಾರು ಜಿಪಂ ಚುನಾವಣೆಗೆ ಇದೂವರೆವಿಗೂ ಉಪ್ಪಾರರಿಗೆ ಟಿಕೆಟ್ ಕೊಟ್ಟಿಲ್ಲ. ಕಲ್ಲೇಶ್ ಅವರನ್ನು ಜಿಪಂ ಅಧ್ಯಕ್ಷ ಮಾಡುವ ಅವಕಾಶ ಇದ್ದರೂ ವಂಚಿಸಿದರು. ಬೆಂಗಳೂರಿನ ಉಪ್ಪಾರ ಸಮಾಜ ಆಸ್ತಿಯನ್ನು ದೇವೇಗೌಡರು ಕಬಳಿಸಿದ್ದಾರೆ.
ಅಲ್ಲದೆ ಈ ಹಿಂದೆ ಶಾಸಕರಾಗಿದ್ದ ಜೆಡಿಎಸ್ ಸುರೇಶ್‍ಬಾಬು ಅವರು ಉಪ್ಪಾರ ಸಮುದಾಯ ಭವನಕ್ಕೆ ಒಂದೇಒಂದು ರೂಪಾಯಿ ಅನುದಾನ ಕೊಟ್ಟಿಲ್ಲ. ಹಾಗಾಗಿ ಈ ಚುನಾವಣೆಯಲ್ಲಿ ಉಪ್ಪಾರರು ದೇವೇಗೌಡರಿಗೆ ಒಂದೇ ಒಂದು ಮತ ಹಾಕದಂತೆ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರಿಗೆ ಮತ ಹಾಕುವಂತೆ ಕರೆ ನೀಡಿದರು.
ಭಗೀರಥ ಯುವ ವೇದಿಕೆ ಅಧ್ಯಕ್ಷ ಗುರುಪ್ರಸಾದ್ ಅವರು ಮಾತನಾಡಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಉಪ್ಪಾರ ಸಮಾಜದ ಮಠಕ್ಕೆ 2 ಕೋಟಿ ರೂ. ಬಿಡುಗಡೆ ಮಾಡಿದ್ದರು. ಆದರೆ ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರೂ ಮಠಕ್ಕೆ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ.
ಹಾಗಾಗಿ ದೇವೇಗೌಡರಿಗೆ ಮತ ಹಾಕುವಂತೆ ಕರೆ ನೀಡಿರುವ ಕಲ್ಲೇಶ್ ಅವರು ಉಪ್ಪಾರ ಸಮಾಜಕ್ಕೆ ದೇವೇಗೌಡರ ಕೊಡುಗೆ ಏನೆಂದು ಹೇಳಬೇಕು. ತಮ್ಮ ರಾಜಕೀಯ ಸ್ವಾರ್ಥದಿಂದ ಉಪ್ಪಾರ ಸಮಾಜದಲ್ಲಿ ರಾಜಕಾರಣ ತಂದಿರುವುದು ಅಪರಾಧವಾಗಿದ್ದು ಸಮಾಜದ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು.
ತಾಲೂಕು ಉಪ್ಪಾರ ಸಂಘದ ಕಾರ್ಯದರ್ಶಿ ಜಗದೀಶ್, ಸಹಕಾರ್ಯದರ್ಶಿ ಬಳ್ಳೆಕಟ್ಟೆಅನಂತಸ್ವಾಮಿ, ನಿರ್ದೇಶಕರುಗಳಾದ ಡಿ.ಎಚ್.ಕರಿಯಪ್ಪ, ಸಿ.ಜೆ.ಶಾಂತಕುಮಾರ್, ನಾಗರಾಜು, ಭಗೀರಥ ಯುವ ವೇದಿಕೆಯ ಮಂಜುನಾಥ್, ತಾಪಂ ಮಾಜಿ ಉಪಾಧ್ಯಕ್ಷ ಎಚ್.ಜಯಣ್ಣ, ಜಿಪಂ ಮಾಜಿ ಸದಸ್ಯೆ ಲಕ್ಷ್ಮೀಅಂದಾನಪ್ಪ, ಗ್ರಾಪಂ ಮಾಜಿ ಉಪಾಧ್ಯಕ್ಷ ರಂಗಪ್ಪ, ಪಪಮ ಸದಸ್ಯ ಕೋಳಿಶ್ರೀನಿವಾಸ್, ಗ್ರಾಪಂ ಮಾಜಿ ಸದಸ್ಯ ರೇವಣ್ಣ, ಗ್ರಾಪಂ ಸದಸ್ಯ ತೊರೆಮನೆ ಸುಂದರೇಶ್, ಮುಖಂಡರಾದ ಸುವರ್ಣಮ್ಮ, ಉಮೇಶ್, ಬಸವರಾಜು, ಮೀನಿನರಮೇಶ್, ದೇವರಬಸವರಾಜು, ಈಶಣ್ಣ, ಧರಣೀಶ್, ಮಹೇಶ್, ಪುಟ್ಟಸ್ವಾಮಿ ಮತ್ತಿತರರು ಇದ್ದರು.