ತಿಪಟೂರು
ಕಲ್ಪತರುನಾಡು ತಿಪಟೂರು ಕಂಡ ಕನಸನ್ನು ಕರುಣಿಸಿ ಸಾಕಾರಗೊಳಿಸುವ ಜ್ಞಾನದ ಬೀಡು ಎಂದು ಶ್ರೀ ಅಭಿನವ ಸಿದ್ದಲಿಂಗೇಶ್ವರ ರುದ್ರಮುನಿ ಸ್ವಾಮೀಜಿಗಳು ತಿಳಿಸಿದರು.
ನಗರದ ಗುರುಕುಲಾನಂದಾಶ್ರಮದಲ್ಲಿ ಲಿಂ.ಜಗದ್ಗುರು ಪಟ್ಟದ ಕರಿಬಸವದೇಶಿಕೇಂದ್ರ ಮಹಾಸ್ವಾಮಿಗಳವರ 108ನೇ ಸಂಸ್ಮರಣೆ ಹಾಗೂ ಶ್ರೀ ಇಮ್ಮಡಿಕರಿಬಸವದೇಶಿಕೇಂದ್ರ ಸ್ವಾಮೀಜಿಯವರ 22ನೇ ಪೀಠಾರೋಹಣ, ಶರಣ ಧರ್ಮ ಚಿಂತನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಹಿರೇಮಠ ಪಂಪಸಾಗರದ ಶ್ರೀಗಳಾದ ಶ್ರೀ ಅಭಿನವ ಸಿದ್ದಲಿಂಗೇಶ್ವರ ರುದ್ರಮುನಿಸ್ವಾಮೀಜಿಗಳು, ಕಲ್ಪತರು ನಾಡು ಕಲೆ, ಸಾಹಿತ್ಯ, ವಿದ್ಯಾಭ್ಯಾಸಕ್ಕೆ ಸಂಸ್ಕತಿಗೆ ಹೆಸರಾದ ಬೀಡು ಎಂದು ಹೇಳಿದ್ದಲ್ಲದೆ, ಕಣ್ಣು ಕಾಲಿದ್ದವರು ಕಾಶಿಯನ್ನು ನೋಡಬೇಕು, ಕಣ್ಣು-ಕಾಲಿಲ್ಲದವರು ಗದುಗಿನ ತೋಟರಾಧ್ಯರ ಸನ್ನಿಧಿಗೆ ಹೋಗಬೇಕು. ಆದರೆ ಕಲ್ಪತರು ನಾಡಾದ ತಿಪಟೂರು ಒಮ್ಮೆಯಾದರು ನೋಡಬೇಕೆಂದರು. ಆದರೆ ಶರಣರು, ತತ್ವಜ್ಞಾನಿಗಳು ನಮಗೆ ನೀಡಿರುವ ಕೊಡುಗೆಗಳು, ಅವರ ತಿಳಿನುಡಿಗಳ ಹೊತ್ತಿಗೆಗಳನ್ನು, ಗ್ರಂಥಗಳನ್ನು ಪೂಜಿಸಲು ಇಟ್ಟು ಬರಿ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡುತ್ತೇವೆ, ಇದು ತಪ್ಪಬೇಕು ಮತ್ತು ಇಂತಹ ಧರ್ಮಚಿಂತನಾ ಸಮಾರಂಭಗಳು ಹೆಚ್ಚುಹೆಚ್ಚು ನಡೆದು ಜನರಿಗೆ ಅರಿವು ಮೂಡಿಸುವಂತಿರಬೇಕೆಂದರು.
ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ವಹಿಸಿದ್ದ ಶ್ರೀ ಇಮ್ಮಡಿ ಕರಿಬಸವ ದೇಶಿಕೇಂದ್ರ ಮಹಾಸ್ವಾಮೀಜಿಗಳು ಮಾತನಾಡುತ್ತಾ, ಶ್ರೀಗಳು ಜೀವನದ ಸಾರ್ಥಕತೆಗೆ ಸತ್ಯ, ಅಹಿಂಸೆಯ ಜೊತೆ ಶರಣರ ತತ್ವಾದರ್ಶಗಳು ಅವಶ್ಯಕವಾಗಿದ್ದು, ಇದರಿಂದ ಮಾನವ ಪರಿಪೂರ್ಣ ಜೀವನಕ್ಕೆ ಸಹಕಾರಿಯಾಗಲಿದೆ. ಜ್ಞಾನ ಸುಖ ಶಾಂತಿ, ನೆಮ್ಮದಿಗಳು ನಮ್ಮೊಳಗೆ ಇದ್ದು ಅದನ್ನು ಅಂತರ್ಮುಖಿಗೊಳಿಸುವ ಮೂಲಕ ನಿಮ್ಮನ್ನು ನೀವು ಕಂಡುಕೊಳ್ಳುವುದರಿಂದ ವ್ಯಕ್ತಿತ್ವ ಶ್ರೀಮಂತವಾಗುತ್ತದೆ ಎಂದರು.
ಬದರಿಕಾಶ್ರಮದ ಶ್ರೀ ಓಂಕಾರಾನಂದ ಸ್ವಾಮೀಜಿ ಮಾತನಾಡಿ, ಮಕ್ಕಳು ತಮ್ಮ ತಂದೆತಾಯಿ ಪರಿಸರವನ್ನು ನೋಡಿ ಎಲ್ಲವನ್ನು ಕಲಿಯುತ್ತವೆ. ನಾವು ಹೇಗೆಬೇಕೋ ಹಾಗೆ ಇದ್ದು ಮಕ್ಕಳಿಗೆ ಸಂಸ್ಕøತಿಯನ್ನು ಕಲಿಸಲು ಸಾಧ್ಯವಿಲ್ಲ. ಮೊದಲು ನಾವು ಸಂಸ್ಕಾರವಂತರಾದರೆ ಮಕ್ಕಳು ಸಹ ಸಂಸ್ಕಾರವಂತರಾಗುತ್ತಾರೆ. ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿ ಸಿಗಬೇಕಾದರೆ ಮನುಷ್ಯ ಮಾನವೀಯ ಮೌಲ್ಯ, ಧಾರ್ಮಿಕ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕಿದೆ. ಮನುಷ್ಯನಾಗಿ ಹುಟ್ಟಿದ ಮೇಲೆ ಕೇವಲ ಕ್ಷಣಿಕ ಸುಖದ ವ್ಯಾಮೋಹಕ್ಕೆ ಒಳಗಾಗದೆ ದಾನ, ಧರ್ಮದಂತಹ ಸಾಮಾಜಿಕ ಕಳಕಳಿಯ ಕೆಲಸ ಮಾಡಿ ಸಮಾಜಕ್ಕೆ ತಮ್ಮದೆ ಆದ ಕೊಡುಗೆ ನೀಡಬೇಕಿದೆ ಎಂದರು.
ಮಾಜಿ ಸಂಸದರಾದ ಜಿ.ಎಸ್. ಬಸವರಾಜು ಗುರುಕುಲಶ್ರೀ ತ್ರೈಮಾಸಿಕ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಿದರು.
ಗುರುಕುಲಶ್ರೀ ಗೌರವ : ನಾಡು-ನುಡಿಗೆ ಅನುಪಮ ಸೇವೆ ಸಲ್ಲಿಸಿರುವ ಸಾಧಕ ಮಹನೀಯರಿಗೆ ಶ್ರೀಸಂಸ್ಥಾನದ ವತಿಯಿಂದ ಪ್ರತಿವರ್ಷ ಕೊಡಮಾಡುವ ‘ಗುರುಕುಲಶ್ರೀ’ ಗೌರವವನ್ನು ಕಲ್ಪತರು ವಿದ್ಯಾಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ಪ್ರಾಂಶುಪಾಲರಾದ ಜೆ.ಆರ್. ಮಹಾಲಿಂಗಯ್ಯನವರ ಧರ್ಮಪತ್ನಿ ಪ್ರೊ.ಎಂ. ಸುಜಯ ಮಹಾಲಿಂಗಯ್ಯ ಅವರಿಗೆ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ವಿ. ಉಮೇಶ್ ಯುವ ಸಾಧಕರಿಗೆ ಪ್ರತಿಭಾ ಪುರಸ್ಕಾರ ನೀಡಿದರು. ಸಮಾರಂಭದಲ್ಲಿ ಶಾಸಕ ಬಿ.ಸಿ ನಾಗೇಶ್, ವರಲಕ್ಷ್ಮಿ ಆನಂದರಾಜ್, ಕನ್ನಡ ಸಾಹಿತ್ಯ ಪರಿಷತ್ತಿನ ಕೆ. ಬಾಲಕೃಷ್ಣ, ಸಿದ್ದಲಿಂಗಶಾಸ್ತ್ರಿ, ಸೇರಿದಂತೆ ಮಠದ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ