ಕಾಮಗಾರಿ ಕೈಗೊಳ್ಳುವಲ್ಲಿ ಇಂಜಿನಿಯರುಗಳಿಂದ ವಿಳಂಬ: ಡಾ.ಶಾಲಿನಿ ರಜನೀಶ್

ತುಮಕೂರು

     ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಲು ಇಂಜಿನಿಯರುಗಳು ವಿಳಂಬ ಮಾಡಿರುವುದರಿಂದ ಪ್ರಗತಿ ಸಾಧನೆಯಲ್ಲಿ ಹಿನ್ನಡೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್ ಅಸಮಾಧಾನ ವ್ಯಕ್ತಪಡಿಸಿದರು.

      ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ಕೆಲ್ಯಾಡ್ಸ್ ಯಡಿ ಆವರಣ ಗೋಡೆ, ಶಾಲಾ ಕಟ್ಟಡ ನಿರ್ಮಾಣ/ ದುರಸ್ತಿ, ರಸ್ತೆ, ಆರ್‍ಓ ಪ್ಲಾಂಟ್, ಸಮುದಾನ ಭವನ, ಬಸ್‍ಶೆಟ್ಟರ್, ಡಯಾಲಿಸಿಸ್ ಕೇಂದ್ರ, ದೇವಸ್ಥಾನಗಳ ದುರಸ್ತಿ, ಮತ್ತಿತರ ಸಣ್ಣಪುಟ್ಟ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದ್ದು, ಅಧಿಕಾರಿ/ಇಂಜಿನಿಯರುಗಳು ನಿಗಧಿತ ಅವಧಿಯೊಳಗೆ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸುತ್ತಿಲ್ಲ.

        ಕಾರಣ ಕೇಳಿದರೆ ಇಲ್ಲಸಲ್ಲದ ನೆಪಗಳನ್ನು ಹೇಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಕಾಮಗಾರಿ ಪೂರ್ಣಗೊಳಿಸದೆ ಇರುವುದರಿಂದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಒಟ್ಟು 946 ಕೋಟಿ ರೂ. ಹಣ ಖರ್ಚಾಗದೆ ಬಾಕಿ ಉಳಿದಿದೆ. ಸದರಿ ಕಾಮಗಾರಿಗಳ ಪ್ರಗತಿ ಮೇಲೆ ಕಣ್ಣಿಡಲು “ವರ್ಕ್‍ಸಾಫ್ಟ್” ಎಂಬ ತಂತ್ರಾಂಶವನ್ನು ಹೊಸದಾಗಿ ಸೃಜಿಸಲಾಗಿದ್ದು, ಶಾಸಕರ ನಿಧಿಯಡಿ ಕೈಗೊಳ್ಳಲಾಗುವ ಕಾಮಗಾರಿಗಳ ಪ್ರಗತಿಯನ್ನು ಕಡ್ಡಾಯವಾಗಿ ಅಧಿಕಾರಿಗಳು ಈ ತಂತ್ರಾಂಶದಲ್ಲಿ ಅಪ್‍ಲೋಡ್ ಮಾಡಬೇಕು ಎಂದು ಸೂಚನೆ ನೀಡಿದರು.

         ಕಾಮಗಾರಿ ಅನುಷ್ಟಾನಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವ ಮಾಹಿತಿಗೂ ಸಭೆಗೆ ತರುವ ಮಾಹಿತಿಗೂ ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಇದರಿಂದಲೇ ಯೋಜನೆಯ ಪ್ರಗತಿಯನ್ನು ಪಾರದರ್ಶಕವಾಗಿ ವರ್ಕ್‍ಸಾಫ್ಟ್ ತಂತ್ರಾಂಶದಲ್ಲಿ ಅಪ್‍ಲೋಡ್ ಮಾಡಲು ಗೊಂದಲ ನಿರ್ಮಾಣವಾಗುತ್ತಿದೆ.

      ಶಾಸಕರ ನಿಧಿಯಡಿ ಯಾವುದೇ ಕಾಮಗಾರಿಗಳು ವೇಗವಾಗಿ ನಡೆಯುತ್ತಿಲ್ಲವೆಂಬ ಆರೋಪಗಳು ಕೇಳಿಬರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕೆಲ್ಯಾಡ್ಸ್ ಮಾರ್ಗಸೂಚಿಯನ್ವಯ ಯಾವುದೇ ಕಾಮಗಾರಿಗಳನ್ನು ಶಾಸಕರು ಪ್ರಸ್ತಾಪಿಸಿದರೆ ಗರಿಷ್ಠ 2 ವರ್ಷದೊಳಗೆ ಪೂರ್ಣಗೊಳಿಸಬೇಕು. ಕಾಮಗಾರಿಯನ್ನು 2 ವರ್ಷದೊಳಗೆ ಕೈಗೆತ್ತಿಕೊಳ್ಳದೆ ಪೂರ್ಣಗೊಳಿಸದಿದ್ದಲ್ಲಿ ಅನುದಾನ ರದ್ದಾಗುತ್ತದೆ ಎಂದು ಅಧಿಕಾರಿಗಳ ಗಮನಕ್ಕೆ ತಂದರು.

       ಯಾವುದೇ ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಿದಲ್ಲಿ 30 ದಿನಗಳೊಳಗಾಗಿ ಜಿಲ್ಲಾಧಿಕಾರಿಗಳು ಆಡಳಿತಾತ್ಮಕ ಅನುಮೋದನೆ ನೀಡಬೇಕು. ಶಾಸಕರ ನಿಧಿಯಡಿ ಕೈಗೊಳ್ಳುವ 5 ಲಕ್ಷ ರೂ.ಗಳ ಅಂದಾಜು ವೆಚ್ಚದೊಳಗಿನ ಕಾಮಗಾರಿಗಳಿಗೆ ಟೆಂಡರ್ ಕರೆಯುವ ಅಗತ್ಯವಿರುವುದಿಲ್ಲ. ಕಾಮಗಾರಿಯ ಅಂದಾಜು ಮೊತ್ತ 5 ಲಕ್ಷ ರೂ.ಗಳೊಳಗಿದ್ದರೆ ಗರಿಷ್ಠ 60 ದಿನಗಳೊಳಗಾಗಿ ಪೂರ್ಣಗೊಳಿಸಬೇಕೆಂಬ ನಿಯಮವಿದೆ. ಅಧಿಕಾರಿಗಳು ಕಟ್ಟುನಿಟ್ಟಾಗಿ ಈ ನಿಯಮವನ್ನು ಪಾಲಿಸಬೇಕೆಂದು ಅವರು ಸೂಚಿಸಿದರು.

       ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಮಾತನಾಡಿ ಜಿಲ್ಲೆಯಲ್ಲಿ 2009-10 ರಿಂದ 2018-19ರ ಅಂತ್ಯದವರೆಗೆ ಒಟ್ಟು 1600 ಕಾಮಗಾರಿಗಳು ಬಾಕಿಯಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಈ ಎಲ್ಲಾ ಕಾಮಗಾರಿಗಳು ಬಾಕಿ ಉಳಿದಿರುವ ಹಳೆಯ ಕಾಮಗಾರಿಗಳಾಗಿದ್ದು, 1 ವಾರದೊಳಗೆ ಸದರಿ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಕೆ ಹಾಗೂ ಆಡಳಿತಾತ್ಮಕ ಅನುಮೋದನೆಗೆ ಕ್ರಮವಹಿಸಲಾಗುವುದು. ಎಲ್ಲಾ ಅನುಷ್ಠಾನಾಧಿಕಾರಿಗಳಿಗೆ ವರ್ಕ್‍ಸಾಫ್ಟ್ ತಂತ್ರಾಂಶಕ್ಕೆ ಮಾಹಿತಿ ಅಪ್‍ಲೋಡ್ ಮಾಡಲು ಈಗಾಗಲೇ ಪಾಸ್‍ವರ್ಡ್ ನೀಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

      ನಂತರ ಮಾತನಾಡಿದ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲೆಯಲ್ಲಿ ಶಾಸಕರ ನಿಧಿಯಡಿ ಕೈಗೊಂಡಿರುವ ಕಾಮಗಾರಿಗಳ ಪ್ರಗತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳನ್ನು ಮಾಹಿತಿ ಕೇಳಿದಾಗ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‍ಕುಮಾರ್ ಅವರು ಕೆಲ್ಯಾಡ್ಸ್ ಸಾಮಾನ್ಯ ಕೋಟಾದಡಿ 446 ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಲಾಗಿದ್ದು, 347 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ.

       ಅದೇ ರೀತಿ ಎಸ್‍ಸಿಪಿ ಕೋಟಾದಡಿ 72 ಕಾಮಗಾರಿಗಳಿಗೆ ಕ್ರಿಯಾಯೋಜನೆ ತಯಾರಿಸಿ 60 ಕಾಮಗಾರಿಗಳಿಗೆ ಅನುಮೋದನೆ ಹಾಗೂ ಟಿಎಸ್‍ಪಿ ಕೋಟಾದಡಿ 32 ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸಿ 41 ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ 550 ಕಾಮಗಾರಿಗಳ ಕ್ರಿಯಾಯೋಜನೆ ತಯಾರಿಸಿ 448 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ.

       ಈ ಪೈಕಿ 2009 ರಿಂದ 2019ರವರೆಗೆ ಬಾಕಿಯಿರುವ 550 ಕಾಮಗಾರಿಗಳನ್ನು ಕೈಗೊಳ್ಳಲು 1723.22ಲಕ್ಷ ರೂ.ಗಳ ಅಂದಾಜುಪಟ್ಟಿ ತಯಾರಿಸಲಾಗಿದ್ದು, ಈಗಾಗಲೇ 327.06ಲಕ್ಷ ರೂ.ಗಳನ್ನು ಕಾಮಗಾರಿ ಕೈಗೊಳ್ಳುವ ಅನುಷ್ಟಾನ ಏಜೆನ್ಸಿಗಳಿಗೆ ಪಾವತಿಸಲಾಗಿದೆ. ಉಳಿದಂತೆ 1396.18 ಲಕ್ಷ ರೂ.ಗಳ ಪಾವತಿ ಮಾಡಬೇಕಾಗಿದೆ. ಅಲ್ಲದೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿರುವ ಒಟ್ಟು 448 ಕಾಮಗಾರಿಗಳಿಗೆ 1078.57 ಲಕ್ಷ ರೂ.ಗಳ ಅಂದಾಜು ಪಟ್ಟಿ ತಯಾರಿಸಿದ್ದು, ಈವರೆಗೆ 6ಲಕ್ಷ ರೂ.ಗಳನ್ನು ಪಾವತಿಸಲಾಗಿದೆ. ಉಳಿದಂತೆ 1072.57ಲಕ್ಷ ರೂ.ಗಳನ್ನು ಪಾವತಿ ಮಾಡಬೇಕಾಗಿದೆ ಎಂದು ತಿಳಿಸಿದರು.

        ಜಿಲ್ಲೆಯಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿವಿಧ ಕಾಮಗಾರಿ ಕೈಗೊಳ್ಳಲು ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗ, ಲೋಕೋಪಯೋಗಿ ಇಲಾಖೆ, ನಿರ್ಮಿತಿ ಕೇಂದ್ರ, ಪಾಲಿಕೆ, ಕೆಆರ್‍ಐಡಿಎಲ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಗಳನ್ನು ಏಜೆನ್ಸಿಗಳನ್ನಾಗಿ ನೇಮಿಸಲಾಗಿದೆ. ಜಿಲ್ಲೆಗೆ 2008 ರಿಂದ 2019ರ ಆರ್ಥಿಕ ವರ್ಷದ ಅಂತ್ಯದವರೆಗೆ ಒಟ್ಟು 7788 ಕಾಮಗಾರಿಗಳಿಗೆ ಮಂಜೂರಾತಿ ದೊರೆತಿದೆ. ಇದರಲ್ಲಿ 6145 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಹಾಗೂ 1105 ಕಾಮಗಾರಿಗಳು ಪ್ರಗತಿ ಹಂತದಲ್ಲಿದ್ದು, 538 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

        ನಂತರ ಕಾರ್ಯದರ್ಶಿಗಳು ಮಾತನಾಡುತ್ತಾ ವಿಧಾನಸಭಾ ಕ್ಷೇತ್ರವಾರು ಪ್ರಗತಿಯನ್ನು ಪರಿಶೀಲಿಸುತ್ತಾ, ಕಾಮಗಾರಿ ಕೈಗೊಳ್ಳಲು ಅನುಷ್ಟಾನಾಧಿಕಾರಿಗಳು ಯಾವುದೇ ನೆಪ ಹೇಳಬಾರದು. ನಿವೇಶನ ಸಮಸ್ಯೆ, ತಕರಾರು ಮತ್ತಿತರ ಸಣ್ಣ ವಿಷಯಗಳಿಗೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದೆ ಬಾಕಿ ಉಳಿಸಿಕೊಳ್ಳುವುದಾದರೆ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತದೆ.

      ಶಾಸಕರಿಗೆ ಅಸಮಾಧಾನವಾಗುವ ಸಾಧ್ಯತೆ ಇರುತ್ತದೆ. ಕಾಮಗಾರಿ ಕೈಗೊಂಡ ಖರ್ಚು-ವೆಚ್ಚ ತೋರಿಸದೆ ಅನುದಾನದ ಶೇ.75ರಷ್ಟು ಹಣ ಖರ್ಚು ಮಾಡದಿದ್ದರೆ ಸರ್ಕಾರದಿಂದ ಉಳಿದ ಕಂತಿನ ಶೇ. 25ರಷ್ಟು ಹಣ ಬಿಡುಗಡೆಯಾಗುವುದಿಲ್ಲ. ಇದರಿಂದ ಸ್ಥಳೀಯ ಶಾಸಕರಿಗೆ ನಷ್ಟ ಉಂಟಾಗುತ್ತದೆ. ಈ ನಷ್ಟವನ್ನು ಯಾರು ಭರಿಸುತ್ತಾರೆ. ಈ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ಅಧಿಕಾರಿಗಳು ಸೂಕ್ಷ್ಮತೆಯಿಂದ ಕೆಲಸ ಮಾಡಬೇಕು.

       ಶಾಸಕರು ಕಾಮಗಾರಿ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಿದ 30 ದಿನಗಳೊಳಗಾಗಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು. ಕಾರಣಾಂತರಗಳಿಂದ ಕಾಮಗಾರಿ ಕೈಗೊಳ್ಳಲು ಸಾಧ್ಯವಗದಿದ್ದ ಸಂದರ್ಭದಲ್ಲಿ ಸೂಕ್ತ ಕಾರಣ ನೀಡಿ ಶಾಸಕರಿಗೆ ಸ್ಪಷ್ಟನೆ ನೀಡಬೇಕು. ವರ್ಷಗಟ್ಟಳೆ ಕಾಮಗಾರಿ ಕೈಗೊಳ್ಳದೆ ಬಾಕಿ ಉಳಿಸಿದಲ್ಲಿ ಶಾಸಕರ ನಿಧಿಯಡಿ ಕಾಮಗಾರಿ ಕೈಗೊಳ್ಳುವ ಸದುದ್ದೇಶ ನೆರವೇರುವುದಿಲ್ಲ.

      ಕಾಮಗಾರಿ ಪ್ರಗತಿ ಸಾಧಿಸದೆ ಉದಾಸೀನ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ನಿರ್ದಿಷ್ಟ ಪ್ರಗತಿ ಸಾಧಿಸಲು “ಸಕಾಲ” ಮಾದರಿಯನ್ನು ಅನುಸರಿಸಬೇಕು. ಇಂಜಿನಿಯರುಗಳು ಕೇಂದ್ರಸ್ಥಾನದಲ್ಲಿದ್ದು, ಕಾಮಗಾರಿಗಳನ್ನು ಪೂರ್ಣ ಗೊಳಿಸಬೇಕು . ಹೊಣೆಗಾರಿಕೆ ಅರ್ಥ ಮಾಡಿಕೊಳ್ಳಬೇಕು. ವರ್ಕ್‍ಸಾಫ್ಟ್ ಅಂಕಿ-ಅಂಶಗಳನ್ನು “ಸಕಾಲ” ಪದ್ಧತಿಗೆ ಅಳವಡಿಸಿದಾಗಲೇ ಪ್ರಗತಿ ಕುಂಠಿತವಾಗಿರುವ ಬಗ್ಗೆ ಮಾಹಿತಿ ದೊರೆಯುತ್ತದೆ. ಇದರಿಂದ ನಿರ್ಲಕ್ಷವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದರು.

      ಜಿಲ್ಲೆಯಲ್ಲಿ 11 ವಿಧಾಸಭಾ ಕ್ಷೇತ್ರಗಳಿರುವುದರಿಂದ ಒತ್ತಡ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಶಾಸಕರ ನಿಧಿಯಡಿ ಕೈಗೊಳ್ಳಲಾಗುವ ಕಾಮಗಾರಿಗೆ ಸಂಬಂಧಿಸಿದಂತೆ ಹಣ ಪಾವತಿ ಮಾಡುವ ಅಧಿಕಾರವನ್ನು ಅಪರ ಜಿಲ್ಲಾಧಿಕಾರಿಗಳಿಗೆ ವಹಿಸಬೇಕೆಂದು ಜಿಲ್ಲಾಧಿಕಾರಿ ಕಾರ್ಯದರ್ಶಿಗಳಲ್ಲಿ ಮನವಿ ಮಾಡಿದಾಗ ಶಾಲಿನಿ ರಜನೀಶ್ ಸಮ್ಮತಿ ಸೂಚಿಸಿದರು.

      ಕುಡಿಯುವ ನೀರಿನ ಯೋಜನೆ ಕಾಮಗಾರಿ ಪ್ರಗತಿ ಪರಿಶೀಲಿಸಿದ ಕಾರ್ಯದರ್ಶಿಗಳು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ 106 ಗ್ರಾಮಗಳಲ್ಲಿ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಕೊಳವೆಬಾವಿಗಳ ಮರುಪೂರಣ ಕೆಲಸಗಳನ್ನು ಕೈಗೊಳ್ಳಲಾಗಿದೆಯೇ ಎಂದು ಸಭೆಗೆ ಮಾಹಿತಿ ಕೇಳಿದಾಗ ಜಿಲ್ಲಾಧಿಕಾರಿಗಳು ಮಾತನಾಡಿ, ಮಧುಗಿರಿಯಲ್ಲಿ ಮಳೆ ನೀರು ಕೋಯ್ಲು ಪದ್ಧತಿ ಅಳವಡಿಕೆಗೆ ಕ್ರಮ ಕೈಗೊಂಡು ಯಶಸ್ವಿಯಾಗಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೂ ಈ ಪದ್ಧತಿ ಅಳವಡಿಕೆಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

       ಶಾಸಕರ ನಿಧಿಯಡಿ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಮಣ್ಣು ಪರೀಕ್ಷೆ, ನೀರಿನ ಗುಣಮಟ್ಟ ಪರೀಕ್ಷೆಯನ್ನು ಕೈಗೊಳ್ಳಲು ಎಲ್ಲಾ ಇಲಾಖೆಗಳ ಕಾರ್ಯಪಾಲಕ ಇಂಜಿನಿಯರ್‍ಗಳ ಕಛೇರಿಯಲ್ಲಿ ಪ್ರಯೋಗಾಲಯಗಳನ್ನು ಸ್ಥಾಪಿಸಬೇಕೆಂದು ನಿರ್ದೇಶನ ನೀಡಿದರು. ಸಭೆಯಲ್ಲಿ ಯೋಜನಾನುಷ್ಟಾನಾಧಿಕಾರಿಗಳು, ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap