ಹರಪನಹಳ್ಳಿ
ಕಳೆದ ಫೆ.12ರಿಂದ ಮಾ.2ರವರೆಗೆ ತಾಲ್ಲೂಕು ಬಿಜೆಪಿ ಘಟಕ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳ ಅಂಗವಾಗಿ ಶನಿವಾರ `ಕಮಲ ಸಂದೇಶ್’ ಬೈಕ್ ರ್ಯಾಲಿ ನಡೆಸಲಾಯಿತು.ಪಟ್ಟಣದ ಬಸ್ ನಿಲ್ದಾಣ, ಹರಿಹರ ವೃತ್ತ, ಐಬಿ ವೃತ್ತ, ಕೊಟ್ಟೂರು ವೃತ್ತ, ಹಳೆ ಬಸ್ ನಿಲ್ದಾಣ, ಸುಣಗಾರಗೆರೆ, ಸೊಂಡರಗೆರೆ, ಸೇರಿದಂತೆ ಪಟ್ಟಣದ ವಿವಿಧೆಡೆ ನೂರಾರು ಬಿಜೆಪಿ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದರು. ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮೀತ್ ಶಾ ಪರ ಘೋಷಣೆ ಕೂಗಿದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೆ.ಲಕ್ಷ್ಮಣ ಮಾನಾಡಿ, `ನನ್ನ ಮನೆ ಬಿಜೆಪಿ ಮನೆ, ಕಮಲ ಜ್ಯೋತಿ, ಮೇರಾ ಬೂತ್ ಸಬಸೇ ಮಜಬೂತ್, ಪ್ರಧಾನ ಸೇವಕರ ರಥಯಾತ್ರೆ, ಭಾರತ ಕೀ ಮನ್ ಮೋದಿ ಕೆ ಸಾತ್, ಮನ್ ಕೀ ಬಾತ್’ ಹಾಗೂ ಕೇಂದ್ರ ಸರ್ಕಾರದ ಐದು ವರ್ಷಗಳ ಕುರಿತು ಜನಾಭಿಪ್ರಯ ಸಂಗ್ರಹ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಿ ಕೇಂದ್ರ ಸರ್ಕಾರದ ಆಡಳಿತದ ಸಾಧನೆಗಳನ್ನು ಜನರಿಗೆ ತಿಳಿಸಲಾಯಿತು’ ಎಂದರು.
ಉಪಾಧ್ಯಕ್ಷ ಮಂಜುನಾಥ್ ಕಣವಿಹಳ್ಳಿ ಮಾತನಾಡಿ, `ಕೇಂದ್ರ ಸರ್ಕಾರದ ಅವಧಿಯಲ್ಲಿ ಜಾರಿಗೊಂಡ ಜನಪರ ಯೋಜನೆಗಳ ಬಗ್ಗೆ ತಾಲ್ಲೂಕು ಬಿಜೆಪಿ ಘಟಕದಿಂದ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಾಗಿದೆ’ ಎಂದರು. ಜಿಲ್ಲಾ ಉಪಾಧ್ಯಕ್ಷ ಎಂ.ಪಿ.ನಾಯ್ಕ, ಮುಖಂಡರಾದ ನಿಟ್ಟೂರು ಸಣ್ಣಹಾಲಪ್ಪ, ಆರ್.ಲೋಕೇಶ್, ಸತ್ತೂರು ಹಾಲೇಶ್, ಆರ್.ಕರಿಗೌಡರ, ಬಾಗಳಿ ಕೊಟ್ರೇಶಪ್ಪ, ನವೀನ್ ಪಾಟೀಲ್, ಯು.ಪಿ.ನಾಗರಾಜ, ರಾಘವೇಂದ್ರ ಶೆಟ್ಟಿ, ಸಂತೋಷ, ಮಡಿವಾಳಪ್ಪ, ಕಣವಿಹಳ್ಳಿ ಹೊನ್ನಪ್ಪ, ಮದನ್ ಪೂಜಾರ, ಹಾಲೂರು ಶ್ರೀನಿವಾಸ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.