ಬೆಂಗಳೂರು
ರೆಸಾರ್ಟ್ ನಲ್ಲಿ ಬಳ್ಳಾರಿ ಶಾಸಕರ ಗಲಾಟೆ ಪ್ರಕರಣದಲ್ಲಿ ಆರೋಪಿಯಾಗಿ ತಲೆ ಮರೆಸಿಕೊಂಡಿರುವ ಕಂಪ್ಲಿ ಶಾಸಕ ಗಣೇಶ್ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರತ್ಯಕ್ಷರಾಗಿದ್ದಾರೆ.
ಫೇಸ್ ಬುಕ್ ನ ತಮ್ಮ ಖಾತೆಯಲ್ಲಿ ಹಲ್ಲೆ ಘಟನೆ ಬಗ್ಗೆ ಸ್ಪಷ್ಟೀಕರಣ ನೀಡುವ ಮೂಲಕ ಘಟನೆಯಲ್ಲಿ ತಮ್ಮದೇನು ತಪ್ಪಿಲ್ಲವೆಂದು ಕಂಪ್ಲಿ ಕ್ಷೇತ್ರದ ಮತದಾರರು ಹಾಗೂ ಬಳ್ಳಾರಿ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.ಆನಂದ್ ಸಿಂಗ್ ಮೇಲೆ ತಾವು ಹಲ್ಲೆ ನಡೆಸಿಲ್ಲ ಬದಲಿಗೆ ಆನಂದ್ ಸಿಂಗ್ ಅವರೇ ನನ್ನ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಕಂಪ್ಲಿ ಶಾಸಕ ಗಣೇಶ್ ಆರೋಪಿಸಿದ್ದಾರೆ.
ರೆಸಾರ್ಟ್ ನಲ್ಲಿ ನಡೆದ ಗಲಾಟೆಯಲ್ಲಿ ನನ್ನದೇನು ತಪ್ಪಿಲ್ಲ :
ಖಾಸಗಿ ರೆಸಾರ್ಟ್ ನಲ್ಲಿ ತಾವು ಮತ್ತು ಆನಂದ್ ಸಿಂಗ್ ಪಾರ್ಟಿ ಮಾಡಿದ್ದು ನಿಜ. ಬಳಿಕ ಆನಂದ್ ಸಿಂಗ್ ಅವರ ಕೊಠಡಿಗೆ ನನ್ನನ್ನು ಕರೆದೊಯ್ದರು. ತಡರಾತ್ರಿ 2.30 ವರೆಗೂ ಸಹ ಮಾತುಕಥೆ ನಡೆಸಿ, ನನ್ನನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದರು. ತಮ್ಮಿಂದಲೇ ರಾಜಕೀಯವಾಗಿ ಮೇಲೆ ಬಂದಿದ್ದೀಯ. ತುಕಾರಾಮ್ ಅವರನ್ನು ಸಚಿವರನ್ನಾಗಿ ಮಾಡಲು ದೆಹಲಿಗೆ ಹೋಗಿದ್ದೀಯಾ ಎಂದು ಬೈಯ್ದಿದ್ದಲ್ಲದೆ ತಮಗೆ ಒದ್ದಿರುವುದಾಗಿ ಗಣೇಶ್ ಆರೋಪಿಸಿದ್ದಾರೆ.
ಕಳೆದ ಬಾರಿ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ತನ್ನನ್ನು ಸೋಲಿಸಿದವರು ಆನಂದ್ ಸಿಂಗ್, ನನ್ನನ್ನು ಆರ್ಥಿಕವಾಗಿ ಮುಗಿಸಿ ಹಣಕ್ಕಾಗಿ ಇತರರ ಮುಂದೆ ಬೇಡುವಂತೆ ಮಾಡುವುದು ಆನಂದ್ ಸಿಂಗ್ ಉದ್ದೇಶವಾಗಿದೆ. ಅಷ್ಟೇ ಅಲ್ಲದೆ ತಮ್ಮನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆಸಿದ್ದಾರೆ. ಆನಂದ್ ಸಿಂಗ್ ಬೆಂಬಲಿರಿಂದ ತಮಗೆ ಪ್ರಾಣ ಬೆದರಿಕೆ ಇರುವುದಾಗಿಯೂ ಜಾಲ ತಾಣದಲ್ಲಿ ಹೇಳಿಕೊಂಡಿದ್ದಾರೆ.
ಇವೆಲ್ಲಾ ಘಟನಾವಳಿ ಬಳಿಕ ಭೀಮಾ ನಾಯಕ್ ಕೊಠಡಿ ತೋರಿಸುವಂತೆ ಒತ್ತಾಯಿಸಿದರು. ಅಲ್ಲಿ ಕರೆದೊಯ್ದ ಬಳಿಕ ಗಲಾಟೆ ತಾರಕಕ್ಕೇರಿತು. ಆಗ ಭೀಮಾನಾಯಕ್ ಮೇಲೆ ಹಲ್ಲೆಗೆ ಯತ್ನಿಸಿದಾಗ ತಡೆಯಲು ಹೋದ ತಮ್ಮ ಮೇಲೂ ಹೂಕುಂಡದಿಂದ ಹಲ್ಲೆ ನಡೆಸಿ, ಬೆರಳು ಮುರಿಯುವ ಯತ್ನ ನಡೆಸಿದರೆಂದು ಗಣೇಶ್ ಆರೋಪಿಸಿದ್ದಾರೆ.
ಆನಂದ್ ಸಿಂಗ್ ಮೇಲೆ ಯಾರೂ ಹಲ್ಲೆ ನಡೆಸಿಲ್ಲ. ಅವರೇ ಬಾತ್ ರೂಮಿನಲ್ಲಿ ಕುಸಿದು ಬಿದ್ದು ಮುಖಕ್ಕೆ, ಬೆನ್ನಿಗೆ, ಹೊಟ್ಟೆಗೆ ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿದ್ದಾರೆ. ಪ್ರಕರಣದಲ್ಲಿ ತಮ್ಮದೇನು ತಪ್ಪಿಲ್ಲ. ತಾವು ಕ್ಷೇತ್ರ ಬಿಟ್ಟು ಎಲ್ಲೂ ಹೋಗುವುದಿಲ್ಲ, ಕ್ಷೇತ್ರದ ಅಭಿವೃದ್ದಿ ನನ್ನ ಗುರಿ ಮತ್ತು ಆದ್ಯತೆ ಎಂದು ವಿವರವಾಗಿ ಹೇಳಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ