ಲೋಕ ಕಲ್ಯಾಣಕ್ಕಾಗಿ ದಾಸನಾದ ಕನಕ

ದಾವಣಗೆರೆ

      ಸಮಾಜ ವಿಜ್ಞಾನಿ, ರಾಜಕೀಯ ಮತ್ತು ಆಧ್ಯಾತ್ಮ ಚಿಂತಕರಾಗಿದ್ದ ಕನಕ ಲೋಕ ಕಲ್ಯಾಣಕ್ಕಾಗಿ ದಾಸರಾದರು ಎಂದು ಡಿ.ಆರ್.ಎಂ ವಿಜ್ಞಾನ ಕಾಲೇಜಿನ ಉಪನ್ಯಾಸಕ ಡಾ.ವಡ್ನಾಳ್.ಜಿ.ರುದ್ರೇಶ್ ಬಣ್ಣಿಸಿದರು.ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ದಾಸಶ್ರೇಷ್ಠ ಕನಕದಾಸರ ಸರಳ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾ ನೀಡಿದ ಅವರು, 15ನೇ ಶತಮಾನದಲ್ಲಿ ಜನಿಸಿದ ಕನಕದಾಸರು ಪಾಳೇಗಾರ ವೃತ್ತಿ ಹೊಂದಿದ್ದರು. ಆದರೆ, ಶಸ್ತ್ರಾಸ್ತ್ರಗಳನ್ನು ಮನುಷ್ಯ ಕುಲಕ್ಕೆ ಮಾರಕ ಎಂಬುದನ್ನು ಅರಿತು ಅವುಗಳನ್ನು ತ್ಯಜಿಸಿದ ಮಹಾನ್ ಮಾನವತಾವಾದಿ ಎಂದು ವಿಶ್ಲೇಷಿಸಿದರು.

       ಜಾತಿ ಮತ್ತು ಧರ್ಮಗಳಲ್ಲಿ ಮನೆ ಮಾಡಿದ್ದ ಅಂಧಕಾರವನ್ನು ಸಮಾಜದಿಂದ ತೊಲಗಿಸಲು ಪಾಳೆಗಾರಿಕೆಯನ್ನು ಬಿಟ್ಟು, ಆಳವಾದ ಅನುಭವ ಹೊಂದುವ ಮೂಲಕ ಸಮಾಜ ಕಟ್ಟುವ ಕೆಲಸ ಮಾಡಿದ್ದರು. ಕನಕದಾಸರು ಬರೆದಿರುವ ಪ್ರತಿಯೊಂದು ಕೃತಿಗಳು, ಸರ್ವಕಾಲಕ್ಕೂ ಪೂರಕವಾಗಿವೆ ಎಂದರು.

      ರಾಗಿಯನ್ನು ತಳಸಮುದಾಯಗಳ ಪ್ರತಿನಿಧಿಯನ್ನಾಗಿ ಹಾಗೂ ಭತ್ತವನ್ನು ಮೇಲ್ವರ್ಗದ ಪ್ರತಿನಿಧಿಯನ್ನಾಗಿ ಬಿಂಬಿಸಿದ ಕನಕದಾಸರು ತಮ್ಮ ರಾಮ ಧಾನ್ಯ ಚರಿತೆಯ ಮೂಲಕ ಸಮಾಜದಲ್ಲಿ ನೆಲೆಸಿದ್ದ ಮೇಲು-ಕೀಳು, ತಾರತಮ್ಯವನ್ನು ಹೋಗಲಾಡಿಸುವ ಪ್ರಯತ್ನವನ್ನು ಅಂದೇ ಮಾಡಿದ್ದರು. ಆದರೆ, ಇಂದಿಗೂ ಸಮಾಜದಲ್ಲಿ ಮೇಲು-ಕೀಳು ಮನೆ ಮಾಡಿರುವುದು ಅತ್ಯಂತ ವಿಪರ್ಯಾಸದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

      ಕನಕದಾಸರು ಮೋಹನತರಂಗಿಣಿ ಮತ್ತು ಹರಿಭಕ್ತಸಾರ ಕೃತಿಗಳ ಮೂಲಕ ಜನರಲ್ಲಿ ಭಕ್ತಿಯ ಕುರಿತು ತಿಳುವಳಿಕೆ ನೀಡಿ, ನಾನು ಎಂಬ ಅಹಂಕಾರ ಇಲ್ಲದಿದ್ದರೆ ನಾವು ಸಹ ಸ್ವರ್ಗಕ್ಕೆ ಹೊಗಬಹುದು ಎಂಬುದನ್ನು ಸಮಾಜಕ್ಕೆ ತಿಳಿಸಿಕೊಟ್ಟ ಮಹಾನ್ ದಾರ್ಶನಿಕರಾಗಿದ್ದಾರೆ. ಅಲ್ಲದೇ, ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಕನಕದಾಸರಿಗೆ ಪ್ರವೇಶ ನೀಡದ ಸಂದರ್ಭದಲ್ಲಿ ‘ಬಾಗಿಲನ್ನು ತೆರೆದು ದರುಶನವ ಕೊಡೋ ಹರಿಯೇ…’ ಎಂಬ ಪ್ರಾರ್ಥನೆಯನ್ನು ಮಾಡುವ ಮೂಲಕ ಶ್ರೀಕೃಷ್ಣನೇ ತಿರುಗಿ ದರುಶನ ನೀಡಿದಂತೆ ಮಾಡಿ, ಕನಕನ ಕಿಂಡಿ ಉದ್ಭವಿಸಿದ ಹಾಗೂ ಕೇಶವನ ಪ್ರತಿಷ್ಟಾಪನೆ, ಮದ್ಯವನ್ನು ಜೇನುತುಪ್ಪವಾಗಿಸಿದ ಪವಾಡ ಪುರುಷರಾಗಿದ್ದಾರೆ ಎಂದು ಸ್ಮರಿಸಿದರು.

      ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೇರಿದಂತೆ ಸಮಾಜದ ಮುಖಂಡರು, ಅಧಿಕಾರಿಗಳು ಕನಕದಾಸರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸುವ ಮೂಲ ಗೌರವ ಸಮರ್ಪಿಸಿದರು.ಕಾರ್ಯಕ್ರಮದಲ್ಲಿ ಜಿ.ಪಂ.ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಕುರುಬರ ಸಮಾಜದ ಜಿಲ್ಲಾಧ್ಯಕ್ಷ ಕೆಂಗೋ ಹನುಮಂತಪ್ಪ, ಕುರುಬ ಸಮಾಜದ ಮುಖಂಡರಾದ ಬಳ್ಳಾರಿ ಷಣ್ಮುಖಪ್ಪ, ಬಿ.ಹೆಚ್.ಹನುಮಂತಪ್ಪ, ಹೆಚ್.ಬಿ.ಗೋಣೆಪ್ಪ, ಪಿ.ರಾಜಕುಮಾರ್, ಬಿ.ಲಿಂಗರಾಜ, ರೈತ ಮುಖಂಡ ಬಲ್ಲೂರು ರವಿಕುಮಾರ್, ಪ್ರಭಾರ ಅಪರ ಜಿಲ್ಲಾಧಿಕಾರಿ ಜಿ.ನಜ್ಮಾ, ಎಎಸ್‍ಪಿ ರಾಜೀವ್, ತಹಶೀಲ್ದಾರ್ ಸಂತೋಷ್‍ಕುಮಾರ್, ಚುನಾವಣಾ ತಹಶೀಲ್ದಾರ್ ಪ್ರಸಾದ್, ಜಿ.ಪಂ ಉಪ ಕಾರ್ಯದರ್ಶಿ ಆನಂದ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ದಿವಾಕರ ರೆಡ್ಡಿ ಇತರೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap