ಹುಳಿಯಾರು:
ಕನಕದಾಸರದು ಸುಳ್ಳು ಮತ್ತು ಸುಳ್ಳು ಸೃಷ್ಟಿಗಳ ವಿರುದ್ಧದ ಹೋರಾಟ ಎಂದು ಜಾನಪದ ಮತ್ತು ಕೃಷಿ ಬರಹಗಾರ ಪ್ರೋ.ಚಂದ್ರಶೇಖರ ನಂಗಲಿ ಅಭಿಪ್ರಾಯ ಪಟ್ಟರು.
ಹುಳಿಯಾರು ಸಮೀಪದ ಲಿಂಗಪ್ಪನಪಾಳ್ಯದಲ್ಲಿ ಶ್ರೀರಾಮ ಯುವ ಸೇನೆಯಿಂದ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ನಾವು ಜೀವನದಲ್ಲಿ ಸತ್ಯ ಯಾವುದು? ಸುಳ್ಳುಯಾವುದು? ಎಂಬುದನ್ನು ತಿಳಿಯುವುದರಲ್ಲೇ ನಮ್ಮ ಇಡೀ ಜನ್ಮವೇ ಮುಗಿಯುತ್ತದೆ. ಹುಟ್ಟಿದವರೆಲ್ಲಾ ಸಾಯಲೇಬೇಕು. ನಾವು ಸುಳ್ಳಿನಲ್ಲಿ ಬದುಕುತ್ತಿದ್ದೇವಾ? ಸತ್ಯದಲ್ಲಿ ಬದುಕುತ್ತಿದ್ದೇವಾ ಎಂಬುದೇ ತಿಳಿಯುವುದಿಲ್ಲ. ಉದಾಹರಣೆಗೆ ಇರುವೆ, ಆಮೆ, ಚಿರತೆ, ಕುದುರೆ, ಸೈಕಲ್, ಕಾರು ಇವುಗಳು ತಮ್ಮದೇ ಆದ ವೇಗದಲ್ಲಿ ಚಲಿಸುತ್ತವೆ. ಹೀಗೆ ಎಷ್ಟೋ ರೀತಿಯ ವೇಗಗಳು ನಮ್ಮ ಕಣ್ಣಿಗೆ ಕಾಣುತ್ತವೆ.
ಈ ಎಲ್ಲಾ ವೇಗಗಳು ಸತ್ಯವಾ? ಎಂದು ಪ್ರಶ್ನೆ ಹಾಕಿಕೊಂಡರೇ ಈ ಎಲ್ಲಾ ವೇಗಗಳು ಸುಳ್ಳು. ಯಾಕೆ ಸುಳ್ಳು ಎಂದರೆ ಈ ಮೇಲೆ ಹೇಳಿದ ಎಲ್ಲಾ ಚಲನಶೀಲ ಜೀವಿಗಳು, ವಸ್ತುಗಳು ಚಲಿಸುತ್ತಿರುವುದು ಒಂದೇ ಭೂಮಿಯ ಮೇಲೆ. ಭೂಮಿ ಎಷ್ಟು ವೇಗವಾಗಿ ಚಲಿಸುತ್ತಿದೆ ಎಂದರೇ ಅದು ನಮಗೆ ಗೊತ್ತೆ ಆಗುವುದಿಲ್ಲ. ಇದೇ ನಿಜವಾದ ವೇಗ, ಸತ್ಯದ ವೇಗ, ಭೂಮಿಯ ವೇಗವೇ ಸತ್ಯ. ಇನ್ನುಳಿದ ಎಲ್ಲಾ ವೇಗಗಳು ಸುಳ್ಳು ಎಂದರು.
ಈ ರೀತಿಯಲ್ಲಿ ಕನಕದಾಸರು ಸುಳ್ಳುಗಳ ವಿರುದ್ಧ, ಸುಳ್ಳು ಸೃಷ್ಟಿಗಳ ವಿರುದ್ಧ ಹೋರಾಡಿದರು. ವ್ಯಾಸಕೂಟದಲ್ಲಿ ಯಾರು ಇಲ್ಲದ ಜಾಗದಲ್ಲಿ ಬಾಳೆಹಣ್ಣು ತಿನ್ನುವ ಪರೀಕ್ಷೆ ಇದಕ್ಕೊಂದು ನಿದರ್ಶನ. ವ್ಯಾಸರ ಶಿಷ್ಯರು ವಿವಿಧ ಜಾಗಗಳಲ್ಲಿ ಬಚ್ಚಿಟ್ಟುಕೊಂಡು ಬಾಳೆಹಣ್ಣು ತಿಂದು ಬಂದರು. ಆದರೆ ಕನಕ ಬಾಳೆಹಣ್ಣನ್ನು ತಿನ್ನದೇ ಹಾಗೆಯೇ ಬಂದ. ಕಾರಣ ಆತನ ಗುರುಗಳಾದ ವ್ಯಾಸರು ದೇವರು ಸಕಲ ಚರಾಚರ ವಸ್ತುಗಳಲ್ಲೂ ಇದ್ದಾನೆ ಎಂದೂ ಉಪದೇಶಿಸಿದ್ದರು. ಹೀಗಿರುವಾಗ ಯಾರು ಇಲ್ಲದ ಜಾಗದಲ್ಲಿ ಬಾಳೆಹಣ್ಣನ್ನು ತಿನ್ನುವುದಾದರೂ ಹೇಗೆ? ಇದು ಕನಕನ ಪ್ರಶ್ನೆ, ಸತ್ಯದ ಪ್ರಶ್ನೆ. ಬಾಳೆಹಣ್ಣನ್ನು ಯಾರು ಇಲ್ಲದ ಜಾಗದಲ್ಲಿ ತಿಂದು ಬಂದೆವೆಂದ ಮಿಕ್ಕ ವಟುಗಳು ಸುಳ್ಳು ಸೃಷ್ಟಿಗಳನ್ನು ನಂಬಿದ್ದರು ಎಂದು ವಿವರಿಸಿದರು.
ಕವಿ ಬಿಳಿಗೆರೆ ಕೃಷ್ಣಮೂರ್ತಿ ಅವರು ಮಾತನಾಡಿ ಕನಕ ದಾಸರ ಹೆಸರಿನಲ್ಲಿರುವ ‘ದಾಸ’ ಪದದ ಅರ್ಥ ದಾಸ ಎಂದರೇ ಯಾವುದೋ ಒಂದು ತತ್ವಕ್ಕೆ ಗುಲಾಮರಾಗುವುದು, ಯಾವುದೋ ಒಬ್ಬ ಯಜಮಾನನಿಗೆ ತಲೆ ಬಾಗುವುದು, ಯಾವುದೋ ಒಂದು ದೇವರಿಗೆ ಅಡ್ಡ ಬೀಳುವುದಲ್ಲ. ಕನಕದಾಸ ಎನ್ನುವ ವ್ಯಕ್ತಿತ್ವವು ದಾಸ ಪ್ರಜ್ಞೆಯಲ್ಲ ಅದು ಪ್ರಭುತ್ವವನ್ನು ಪ್ರಶ್ನಿಸಿದ ಸಾಕ್ಷಿಪ್ರಜ್ಞೆ ಎಂದು ಅಭಿಪ್ರಾಯಪಟ್ಟರು.
ವರ್ತಕ ಕೆ.ಎಸ್.ನಟರಾಜ್, ಸಾಗರ್, ಶಿಕ್ಷಕರಾದ ಬೀರಪ್ಪ, ಕೃಷ್ಣಮೂರ್ತಿ, ಗ್ರಾಮದ ಹಿರಿಯರಾದ ಎಲ್.ಎಚ್.ರಾಜಣ್ಣ, ರಾಜಣ್ಣ, ಆನಂದ್, ಎಲ್.ಕೆ.ರಮೇಶ್, ನಾಗರಾಜ್, ಚುರುಮುರಿ ಮಂಜು, ವಿನಯ್, ಮೋಹನ್, ಗಜೇಂದ್ರ, ಎಲ್.ಬಿ.ಲಿಂಗರಾಜ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








