ದಾವಣಗೆರೆ:
ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಸ್ಪರ್ಧಿಸಬೇಕೆಂದು 22 ಕೆರೆಗಳ ಏತ ನೀರಾವರಿ ಯೋಜನೆ ವ್ಯಾಪ್ತಿಯ ಗ್ರಾಮಗಳ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ಎನ್.ಕೊಟ್ರೇಶ ನಾಯ್ಕ, ಮಲ್ಲಿಕಾರ್ಜುನ್ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಸಿರಿಗೆರೆ ತರಳಬಾಳು ಜಗದ್ಗುರುಗಳ ಮಾರ್ಗದರ್ಶನದಲ್ಲಿ ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಲು ಸ್ವಂತ ಖರ್ಚಿನಲ್ಲಿ ಮೂರು ಪಂಪ್‍ಸೆಟ್ ಅಳವಡಿಸುವ ಮೂಲಕ ಕೆರೆಗಳು ನೀರು ಕಾಣುವಂತೆ ಮಾಡಿದ್ದರು. ಆದ್ದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಎಸ್.ಎಸ್.ಮಲ್ಲಿಕಾರ್ಜುನ್ ಪರ ನಿಲ್ಲಲು ಈ ಭಾಗದ ಗ್ರಾಮಸ್ಥರು ನಿರ್ಧರಿಸಿದ್ದಾರೆಂದು ಮಾಹಿತಿ ನೀಡಿದರು.
ಮಲ್ಲಿಕಾರ್ಜುನ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ 22 ಕೆರೆಗಳಿಗೆ ನೀರು ತುಂಬಿಸಲು ಸಾಕಷ್ಟು ಶ್ರಮ ವಹಿಸಿದ್ದರು. ಕಾಮಗಾರಿ ಕಳಪೆಯಾಗಿದ್ದರೂ ತುಂಗಭದ್ರಾ ನದಿಯಿಂದ ಸ್ವಂತ ಖರ್ಚಿನಲ್ಲಿ ಪಂಪ್‍ಸೆಟ್ ಮೋಟಾರ್ ಮೂಲಕ ಕೆರೆಗಳಿಗೆ ನೀರು ಹರಿಸಿದ್ದರು. 22 ಕೆರೆಗಳ ಏತ ನೀರಾವರಿ ಯೋಜನೆಗೆ ಹೆಚ್ಚುವರಿಯಾಗಿ ಇನ್ನೊಂದು ಕೆರೆ ಸೇರಿಸಿ 23 ಕೆರೆಗಳಿಗೆ ನೀರು ತುಂಬಿಸಲು ಸಂಕಲ್ಪಿಸಿದ್ದರು.
ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಲೋಕಸಭಾ ಚುನಾವಣಾ ಕಣಕ್ಕಿಳಿಯಬೇಕೆಂಬುದು ನಮ್ಮ ಆಗ್ರಹವಾಗಿದ್ದು, ಅದು ಸಾಧ್ಯವಾಗದಿದ್ದರೆ ಅವರು ಹೇಳುವ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆಂದು ಹೇಳಿದರು.2017ರಲ್ಲಿ ನದಿಯಲ್ಲಿ ನೀರಿಲ್ಲದ ಸಂದರ್ಭದಲ್ಲೂ ಸುಮಾರು 80 ದಿನಗಳ ಕಾಲ ಎಲ್ಲ ಕೆರೆಗಳಿಗೆ ನೀರು ಹರಿಸುವಲ್ಲಿ ಮಲ್ಲಿಕಾರ್ಜುನ್ ಯಶಸ್ವಿಯಾಗಿದ್ದರು. ಅಲ್ಲದೆ, ಹೊಳೆಗೆ ಅಡ್ಡಲಾಗಿ ಬ್ಯಾರೇಜ್ ಮಂಜೂರು ಮಾಡಿಸಿದ್ದರು.
ಆದರೆ ಕಳೆದ ಮಳೆಗಾಲದಲ್ಲಿ ಜಲಾಶಯ ತುಂಬಿ, ನದಿಯಲ್ಲಿ ಯಥೇಚ್ಛವಾಗಿ ನೀರು ಹರಿದರೂ ಕೆರೆಗಳಿಗೆ ಮಾತ್ರ ನೀರು ಬಂದಿಲ್ಲ. ಮಾಯಕೊಂಡ ಹಾಗೂ ಜಗಳೂರು ಶಾಸಕರ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ. ಆದ್ದರಿಂದ ರೈತಪರ ಕಾಳಜಿ ಇರುವ ಎಸ್.ಎಸ್.ಮಲ್ಲಿಕಾರ್ಜುನ್‍ಗೆ ಪಕ್ಷಾತೀತವಾಗಿ ಏತ ನೀರಾವರಿ ಕೆರೆ ವ್ಯಾಪ್ತಿಯ ರೈತರು ಬೆಂಬಲಿಸಲಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಪಿಎಂಸಿ ಉಪಾಧ್ಯಕ್ಷ ಎಸ್.ಕೆ.ಚಂದ್ರಶೇಖರ, ಬಸವರಾಜಪ್ಪ, ಶಂಭುಲಿಂಗಪ್ಪ, ಪ್ರಕಾಶ, ಜ್ಞಾನೇಶ, ದ್ಯಾಮಣ್ಣ, ಹೇಮಂತ ರಾಜ್, ಶಿವಣ್ಣ, ತಿಪ್ಪೇಸ್ವಾಮಿ, ಸಿದ್ದೇಶ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








