ಕನ್ನಡ ಬದುಕಿನ ಭಾಷೆಯಾಗಲಿ: ಡಾ. ಬರಗೂರು ರಾಮಚಂದ್ರಪ್ಪ

ತುಮಕೂರು

     ಕನ್ನಡದ ಸಮಸ್ಯೆ ಎಂಬುದು ಕೇವಲ ಭಾಷೆ ಸಮಸ್ಯೆಯಲ್ಲ, ಅದು ಕನ್ನಡಿಗರ ಸಾಮಾಜಿಕ, ಆರ್ಥಿಕ ಸಮಸ್ಯೆಯೂ ಹೌದು. ಕನ್ನಡಿಗರನ್ನು ಉಳಿಸಿದರೆ, ಕನ್ನಡ ಉಳಿಯುತ್ತದೆ. ಕನ್ನಡವನ್ನು ಬದುಕಿನ ಭಾಷೆಯಾಗಿ ಮಾಡುವುದು ಹೇಗೆ ಎಂದು ಸರ್ಕಾರ ಚಿಂತನೆ ಮಾಡಿ ಕಾರ್ಯರೂಪಕ್ಕೆ ತರಬೇಕು ಎಂದು ಹಿರಿಯ ಸಾಹಿತಿ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಸಲಹೆ ಮಾಡಿದರು.

     ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ಪರಿಷತ್ತಿನ ಸುವರ್ಣ ಮಹೋತ್ಸವ ಸಂಭ್ರಮ ಸಮಾರಂಭ ಹಾಗೂ ನಗರದ ಕನ್ನಡ ಭವನದ ನೆಲ ಅಂತಸ್ತಿನಲ್ಲಿ ನಿರ್ಮಾಣವಾಗಿರುವ ಸುವರ್ಣ ಸಾಹಿತ್ಯ ಸಭಾಂಗಣ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಭಾಷೆ ಉಳಿಸುವುದೆಂದರೆ ಆ ಭಾಷೆ ಮಾತನಾಡುವ ಜನರನ್ನು ಉಳಿಸುವುದು ಮುಖ್ಯ, ಭಾಷೆ ಉಳಿಯುವುದು ಆ ಜನರಿಂದ ಎಂದರು.

     ಕನ್ನಡ ಭಾಷೆಯ ಉಳಿವು ಬೆಳೆವು ಶಿಕ್ಷಣ, ಸಾಮಾಜಿಕ, ಆರ್ಥಿಕ ಸ್ಥಿತಿಗೆ ಸಂಬಂಧಿಸಿದೆ. ಮೊದಲು ಆ ಭಾಷೆಯ ಶಿಕ್ಷಣ, ನಂತರ ಆ ಭಾಷಿಕರಿಗೆ ಉದ್ಯೋಗ ಆನಂತರ ಆಡಳಿತ ಕ್ಷೇತ್ರದಲ್ಲಿ ಕನ್ನಡ ಉಳಿಸಲು ಸಾಧ್ಯವಾದರೆ ಕನ್ನಡ ಉಳಿಯುತ್ತದೆ. ಸರ್ಕಾರ ಶೈಕ್ಷಣಿಕ ಸ್ವಾಯತತ್ತತೆ ಮತ್ತು ಶೈಕ್ಷಣಿಕ ಸಮಾನತೆ ಕಾಪಾಡಿಕೊಳ್ಳಬೇಕು. ಶಿಕ್ಷಣ ಪರವಾದ ಆ ಮೂಲಕ ಕನ್ನಡ ಪರವಾದ ಸರ್ಕಾರ ಹಾಗೂ ಅಧಿಕಾರಿಗಳು ಜವಾಬ್ದಾರಿ ಹೊಂದಬೇಕು ಎಂದರು.

     ಈಗ ಸರ್ಕಾರ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭಿಸಲು ಮುಂದಾಗಿದೆ. ಈ ಪ್ರಯತ್ನ ಬೇರೆಲ್ಲಿಯಾದರೂ ನಡೆದಿದೆಯೆ ಎಂಬ ಅಧ್ಯಯನವನ್ನು ಇಲಾಖೆ ಅಧಿಕಾರಿಗಳು ಮಾಡಿದ್ದಾರೆಯೆ? ಒಂದು ಸಾವಿರ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ತೆರೆದರೆ ಇತರೆ ವಿದ್ಯಾರ್ಥಿಗಳಲ್ಲಿ ಅಸಮಾನತೆ ಮೂಡಿಸಿದಂತಾಗುವುದಿಲ್ಲವೆ, ಸರ್ಕಾರಿ ಶಾಲೆಗಳಲ್ಲಿ ಎಲ್‍ಕೆಜಿ ಆರಂಭಿಸಿದರೆ ಈಗಿರುವ ಅಂಗನವಾಡಿಗಳನ್ನು ರೂಪಾಂತರಿಸಬೇಕಲ್ಲವೆ? ಹೊಸ ಮಾಧ್ಯಮದ ಪಠ್ಯಕ್ರಮ ಸಿದ್ಧವಾಗಿದೆಯೆ, ಪಾಠ ಹೇಳುವ ಪರಿಣಿತ ಶಿಕ್ಷಕರಿಗೆ ತರಬೇತಿ ನೀಡಲಾಗಿದೆಯೆ ಯಾವುದಕ್ಕೂ ಪೂರ್ವ ಸಿದ್ಧತೆ ಇಲ್ಲ ಎಂದು ಡಾ. ಬರಗೂರು ರಾಮಚಂದ್ರಪ್ಪ ಹೇಳಿದರು.

      ಶಿಕ್ಷಣ ಕ್ಷೇತ್ರದ ಸ್ವಾಯತ್ತತೆ ನಾಶಪಡಿಸಲು ನಮ್ಮ ರಾಜ್ಯ ಸರ್ಕಾರ ಸಿದ್ಧವಾಗಿದೆ. ಇದು ಸಾಲದೆಂಬಂತೆ ಕೇಂದ್ರ ಸರ್ಕಾರವೂ ರಾಜ್ಯ ಸರ್ಕಾರದ ಶೈಕ್ಷಣಿಕ ಸ್ವಾತಂತ್ರ ಕಸಿಯುತ್ತಿದೆ. ನೀಟ್ ಪರೀಕ್ಷಾ ಪದ್ಧತಿ ಆರಂಭಿಸಿ, ಬಡವರಿಗೆ ವೈದ್ಯಕೀಯ ಶಿಕ್ಷಣ ದೊರೆಯದಂತೆ ಕೇಂದ್ರ ಸರ್ಕಾರ ಮಾಡಿದೆ. ಇದರ ಜೊತೆ ಮೊರಾರ್ಜಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆ, ಅಂಬೇಡ್ಕರ್ ವಸತಿ ಶಾಲೆ ಹೀಗೆ ವಿವಿಧ ರೂಪದಲ್ಲಿ ಶಿಕ್ಷಣ ವ್ಯವಸ್ಥೆ ಜಾರಿ ತಂದು ಸರ್ಕಾರ ಸಮಾನತೆ ಇಲ್ಲದ ಶಿಕ್ಷಣ ವ್ಯವಸ್ಥೆಗೆ ಕಾರಣವಾಗಿದೆ. ಕನಿಷ್ಟ ಒಂದರಿಂದ ಹತ್ತನೇ ತರಗತಿವರೆಗಾದರೂ ಸಮಾನ ಶಿಕ್ಷಣ ನೀಡುವಂತಹ ವ್ಯವಸ್ಥೆ ಬರಬೇಕು ಎಂದು ಆಶಿಸಿದರು.

       ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಗೆ ಮೂಲ ಕಾರಣ ನಾಲ್ವಡಿ ಕೃಷ್ಣರಾಜ ಒಡೆಯರ್. ಕನ್ನಡ ಪರವಾದ ಸ್ವಾಯತ್ತತೆ ಸಂಸ್ಥೆ ಸ್ಥಾಪಿಸಬೇಕೆಂದು ಹಿಡುಗಂಟು ಇಟ್ಟು ನೆರವಾದ ಒಡೆಯರ್ ಅವರ ಆಶಯವನ್ನು ಕಾರ್ಯರೂಪಕ್ಕೆ ತಂದವರು ವಿಶ್ವೇಶ್ವರಯ್ಯನವರು. ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಡ ಮತ್ತು ಕಡ್ಡಾಯ ಶಿಕ್ಷಣದ ಬಗ್ಗೆ ಕಾಳಜಿವಹಿಸಿದ್ದರು. 1913ರಲ್ಲೇ ಎಲ್ಲಾ ಜಾತಿಯವರೂ ಶಿಕ್ಷಣ ಕಲಿಯಬೇಕು ಎಂದು ಸಂಕಲ್ಪ ಮಾಡಿ ಆಗ 11 ಸಾವಿರ ರಾತ್ರಿ ಶಾಲೆಗಳನ್ನು ತೆರೆದು ಜನ ಸಾಮಾನ್ಯರ ಮಕ್ಕಳೂ ಶಿಕ್ಷಣ ಕಲಿಯಲು ಅವಕಾಶ ಮಾಡಿಕೊಟ್ಟಿದ್ದರು. ಒಡೆಯರ್ ಇಂತಹ ದಾಖಲೆ ಮಾಡಿದರು ಎಂದರು.

       ಆಳಲು ಬಂದವರನ್ನು ಅರಗಿಸಿಕೊಂಡು ತನ್ನದಾಗಿಸಿಕೊಳ್ಲುವ ಶಕ್ತಿ ಕನ್ನಡಕ್ಕಿದೆ. ಕನ್ನಡಿಗರನ್ನ ಆರ್ಥಿಕವಾಗಿ ಸಾಮಾಜಿಕವಾಗಿ ಉಳಿಸಿದರೆ ಅವರು ಕನ್ನಡ ಉಳಿಸುತ್ತಾರೆ. ಅಂತಹ ಕೆಲಸವನ್ನು ಸರ್ಕಾರ, ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳು ಮಾಡಬೇಕು ಎಂದು ಬರಗೂರು ರಾಮಚಂದ್ರಪ್ಪ ಮನವಿ ಮಾಡಿದರು.

       ಜಿಲ್ಲಾ ಲೇಖಕರ ಪುಸ್ತಕದ ಕಣಜ ಉದ್ಘಾಟಿಸಿದ ತುಮಕೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ. ವೈ ಎಸ್ ಸಿದ್ದೇಗೌಡರು ಮಾತನಾಡಿ, ಜಾಗತೀಕರಣದ ಪರಿಣಾಮ ಪ್ರಾದೇಶಿಕ ಭಾಷೆಗಳ ಮೇಲು ಬೀರಿದೆ. ಮಾತೃ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು ಎಂದರು.

       ಅಂತರಾಷ್ಟ್ರೀಯ ಭಾಷೆಗಳ ಪ್ರಬಾವದಿಂದ ಪ್ರಾದೇಶಿಕ ಭಾಷೆಗಳು ಕಳೆದು ಹೋಗುವ ಆತಂಕವಿದೆ. ಬದಲಾವಣೆ ಜಗದ ನಿಯಮವಾದರೂ ನಮ್ಮ ಬಾಷೆ, ನಮ್ಮತನ ಉಳಿಸಿಕೊಂಡು ಹೋಗಬೇಕಾಗಿದೆ ಎಂದು ಹೇಳಿದರು.

      ತುಮಕೂರು ನಗರ ಪಾಲಿಕೆ ಆಯುಕ್ತ ಭೂಪಾಲನ್ ಅವರು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಿ, ಕನ್ನಡದಂತಹ ಪ್ರಾಂತ ಭಾಷೆಗಳ ಅಭಿವೃದ್ಧಿಗೆ ಜಾಗೃತಿ ಮುಡಬೇಕು. ಮಾತೆ, ಮಾತೃ ಭಾಷೆ, ಮಾತೃ ಭೂಮಿ ಕಾಪಾಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

     ಕನ್ನಡ ಭವನ ಕಟ್ಟಡ ಸಮಿತಿ ಅಧ್ಯಕ್ಷರೂ ಆದ ಪ್ರಜಾಪ್ರಗತಿ ಸಂಪಾದಕ ಎಸ್ ನಾಗಣ್ಣನವರು ಮಾತನಾಡಿ, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕನ್ನಡ ಭವನ ನಿರ್ಮಾಣಕ್ಕೆ ಅಪೆಕ್ಸ್ ಬ್ಯಾಂಕಿನಿಂದ ಕೆ ಎನ್ ರಾಜಣ್ಣನವರು 50 ಲಕ್ಷ ಹಾಗೂ ಮಧುಗಿರಿ ಕನ್ನಡ ಭವನಕ್ಕೆ 50 ಲಕ್ಷ ನೀಡಿ ನೆರವಾದರು ಎಂದು ಸ್ಮರಿಸಿದರು.

       ಸುಸಜ್ಜಿತ ಕನ್ನಡ ಭವನದಲ್ಲಿ ಗ್ರಂಥಾಲಯ, ಡಿಜಿಟಲ್ ಲೈಬ್ರರಿ, ಅತಿಥಿಗಳ ವಾಸ್ತವ್ಯದ ಕೊಠಡಿಗಳು ಇವೆ ಜೊತೆಗೆ ಈಗ ಸುವರ್ಣ ಸಾಹಿತ್ಯ ಸಭಾಂಗಣ ನಿಮಾಣವಾಗಿದೆ ಈ ಎಲ್ಲವನ್ನೂ ಸಮರ್ಪಕವಾಗಿ ನಿರ್ವಹಣೆ ಮಾಡಿಕೊಂಡು ಹೋಗಲಿ ಎಂದು ಆಶಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಬಾ ಹ ರಮಾಕುಮಾರಿ ಸಮಾರಂಭದ ಅಧ್ಯಕ್ಷತೆವಹಿಸಿದ್ದರು.

      ಹಿರಿಯ ಸಾಹಿತಿ ಡಾ. ಕವಿತಾಕೃಷ್ಣ, ಪ್ರೇಮಾ ಮಲ್ಲಣ್ಣ, ಪರಿಷತ್ತಿನ ಕೋಶಾಧ್ಯಕ್ಷ ಬಿ ಮರುಳಯ್ಯ, ಕಾರ್ಯದರ್ಶಿಗಳಾದ ರಾಕ್‍ಲೈನ್ ರವಿಕುಮಾರ್, ಹೆಚ್. ಗೋವಿಂದಯ್ಯ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಡಿ ರಾಜಶೇಖರ್ ಮೊದಲಾದವರು ಭಾಗವಹಿಸಿದ್ದರು.
ಈ ವೇಳೆ ಜಿಲ್ಲಾ ಲೇಖಕರ ಮಾಹಿತಿ ಕೋಶ ಬಿಡುಗಡೆಯಾಯಿತು. ಕಸಾಪ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಹಿರಿಯ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap