ಕನ್ನಡ ಸಾಂಸ್ಕೃತಿಕ ಲೋಕ ಮನಮೂಲ ಸಂಸ್ಕೃತಿ ಬೆಳಸಿಕೊಳ್ಳಬೇಕು : ಬರಗೂರು ರಾಮಚಂದ್ರಪ್ಪ

ತುಮಕೂರು
 
   ಕನ್ನಡದ ಸಾಂಸ್ಕೃತಿಕ ಲೋಕವು ಸಮಾನತೆಯ, ಸೌಹಾರ್ದತೆಯ, ಶಾಂತಿಯ ಸಮಾಜವನ್ನು  ಕಾಣಬೇಕಾದರೆ, ಅದಕ್ಕೆ ಅಗತ್ಯವಾದ `ಮನಮೂಲ ಸಂಸ್ಕೃತಿ’ಯನ್ನು ಬೆಳೆಸಿಕೊಳ್ಳಬೇಕಾಗಿದೆ ಎಂಬ ಆಶಯವನ್ನು ಸಾಹಿತಿ, ನಾಡೋಜ ಬರಗೂರು ರಾಮಚಂದ್ರಪ್ಪ ವ್ಯಕ್ತಪಡಿಸಿದರು.
    ಶನಿವಾರ ಬೆಳಗ್ಗೆ ತುಮಕೂರು ನಗರದ ಕನ್ನಡ ಭವನದಲ್ಲಿ ಜಿಲ್ಲಾ ಮತ್ತು ತುಮಕೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಏರ್ಪಟ್ಟಿದ್ದ “ಕನ್ನಡ ರಾಜ್ಯೋತ್ಸವ ಮತ್ತು ಕಾವ್ಯೋತ್ಸವ”ವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
    ನೆಲಮೂಲ ಸಂಸ್ಕೃತಿ ಎನ್ನುತ್ತೇವೆ. ಆದರೆ ನೆಲವನ್ನು ಸಹ ಅನುಮಾನದಿಂದ ನೋಡುವ ಸನ್ನಿವೇಶ ಇಂದು ಉಂಟಾಗುತ್ತಿದೆ ಎಂದು ಮಾರ್ಮಿಕವಾಗಿ ಹೇಳಿದ ಅವರು, ಮನಮೂಲ ಎಂದರೆ ಮನಸ್ಸೇ ಮೂಲವಾಗುತ್ತದೆ. ಮನಸ್ಸಾಕ್ಷಿ ಮುಖ್ಯವಾಗುತ್ತದೆ. ಆದ್ದರಿಂದ `ಮನಮೂಲ ಸಂಸ್ಕೃತಿ’ ಪ್ರಾಮುಖ್ಯತೆ ಪಡೆಯುತ್ತದೆ ಎಂದು ನುಡಿದರು.
ನಾಶವಾದೀತು
     ನಿಜವಾದ ಕವಿ ಜನಸಮುದಾಯದ ಜೊತೆ ಸಂಬಂಧ ಇರಿಸಿಕೊಂಡಿರುತ್ತಾನೆ. ಕಾಲದಲ್ಲಿದ್ದೂ ಕಾಲವನ್ನು  ಮೀರುತ್ತಾನೆ. ಕುಲದಲ್ಲಿದ್ದೂ ಕುಲವನ್ನು ಮೀರುತ್ತಾನೆ. ಆಸ್ಥಾನದಲ್ಲಿದ್ದೂ ಸ್ವಾಭಿಮಾನ ಉಳಿಸಿಕೊಳ್ಳುತ್ತಾನೆ. ಪ್ರಭುತ್ವದ ಜೊತೆಯಿದ್ದರೂ ಅಂತರ ಕಾಯ್ದುಕೊಳ್ಳುತ್ತಾನೆ ಎಂದ ಅವರು, ಪ್ರಜಾಪ್ರಭುತ್ವದಲ್ಲಿ ಸಾಂಸ್ಕøತಿಕ ಲೋಕವು ಪ್ರಭುತ್ವದಿಂದ ಏಕಕಾಲಕ್ಕೆ ದೂರ ಮತ್ತು ಹತ್ತಿರದ ಅಂತರವನ್ನು ಜತನದಿಂದ ಕಾಯ್ದುಕೊಳ್ಳಬೇಕು. ಎಷ್ಟು ಹತ್ತಿರ ಇರಬೇಕು ಮತ್ತು ಎಷ್ಟು ದೂರ ಇರಬೇಕೆಂಬುದನ್ನು ತಾನಾಗಿಯೇ ನಿರ್ಧಾರಿಸಬೇಕು. ಇಲ್ಲದಿದ್ದರೆ ಸಾಂಸ್ಕøತಿಕ ಕ್ಷೇತ್ರ ನಾಶವಾದೀತು ಎಂದು ಎಚ್ಚರಿಸಿದರು. 
       ಕನ್ನಡದ ಕಾವ್ಯಗಳಲ್ಲಿ ಪ್ರತಿನಾಯಕತ್ವದ ಅನೇಕ ಸಂದರ್ಭಗಳನ್ನು ಕಾಣಬಹುದು. ಕನ್ನಡದ ಸ್ವಾಭಿಮಾನಕ್ಕೆ ಪೂರಕವಾದ ಪ್ರತಿನಾಯಕತ್ವದ ಗುಣವನ್ನು ನಾವು ಬೆಳೆಸಿಕೊಂಡರೆ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಮಾನತೆ ಕಾಪಾಡುವ ಆಶಯವನ್ನು ಬಿತ್ತಬಹುದು. ಅದು ಇವತ್ತಿನ ಅಗತ್ಯವೂ ಆಗಿದ್ದು, ಆ ಕೆಲಸವನ್ನು ಕನ್ನಡದ ಸ್ವಾಭಿಮಾನಕ್ಕೆ ಹಾಗೂ ಕಾವ್ಯಕ್ಕೆ ಸೇರಿಸಿಕೊಳ್ಳಬೇಕು ಎಂದು ಹೇಳಿದರು. 
ಕಾಗೆಯ ಕಾರುಣ್ಯವೇ ಆದರ್ಶ
      ಕನ್ನಡದ ಕಾವ್ಯವು ಏಕಕಾಲಕ್ಕೆ ಸ್ಥಳೀಯವಾಗಿ ಹಾಗೂ ರಾಷ್ಟ್ರೀಯವಾಗಿ ಸ್ಪಂದಿಸಿದೆ. ಜೊತೆಗೆ ಅಂತರ ರಾಷ್ಟ್ರೀಯ ವಾಗಿಯೂ ಸ್ಪಂದಿಸಿದೆ. ಕಾವ್ಯ ಕ್ಷೇತ್ರದಲ್ಲಿ ಅನುಭವದ ಜೊತೆಗೆ ಅಧ್ಯಯನದ ಬಲವೂ ಬೇಕು ಹಾಗೂ ಪರಂಪರೆಯ ಪ್ರಜ್ಞೆಯೂ ಇರಬೇಕು. ಕೋಗಿಲೆಯ ಮೊಟ್ಟೆಗೆ ಕಾವು ಕೊಟ್ಟು ಮರಿಗಳನ್ನಾಗಿ ಮಾಡುವ ಕಾಗೆಯ ಕಾರುಣ್ಯ ಈ ಹೊತ್ತಿನಲ್ಲಿ ನಮಗೆ ಆದರ್ಶವಾಗಬೇಕು ಎಂದರು. 
ರಾಜಕೀಯ ನಾಯಕತ್ವ ದುರ್ಬಲ
      ಇಂದು ಫಲಕಗಳಲ್ಲಿ ಕನ್ನಡ ಇದೆಯೇ ಎಂದು ಹುಡುಕುವವರಿದ್ದಾರೆ. ಅದರೆ ಬದುಕಿನಲ್ಲಿ ಕನ್ನಡ ಇದೆಯೇ ಎಂದು ಗಮನಿಸುವವರು ಇಲ್ಲ. ಕೇವಲ ಭಾಷೆಯನ್ನಷ್ಟೆ ಅಲ್ಲ, ಬದುಕನ್ನು ಉಳಿಸಬೇಕು. ಕನ್ನಡ ಬದುಕಿನ ಭಾಗ ಆಗಬೇಕು. ಕನ್ನಡದ ಅಭಿಮಾನವು ಅಕ್ಷರಾಭಿಮಾನವಷ್ಟೇ ಆಗದೆ, ಬದುಕಿನ ಅಭಿಮಾನವಾಗಬೇಕು. ಜಾಗತೀಕರಣ, ಜಾತೀಕರಣ, ಜಾತಿವಾದ, ಆರ್ಥಿಕ ಹಿಂಜರಿತ ಮೊದಲಾದವುಗಳಿಂದ ಬದಲಾಗಿರುವ ಇಂದಿನ ಸನ್ನಿವೇಶದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಹೇಗೆಂಬುದು ಬದಿಗೆ ಸರಿಯುತ್ತಿದೆ.
 
     ಬಹುರಾಷ್ಟ್ರೀಯ ಕಂಪನಿಗಳೇ ಎಲ್ಲವೂ ಆಗಿರುವ ಈ ಹೊತ್ತಿನಲ್ಲಿ, ರಾಜಕೀಯ ನಾಯಕತ್ವವು ನೆಪಮಾತ್ರಕ್ಕಿದ್ದು, ಆರ್ಥಿಕ ನಾಯಕತ್ವವೇ ದೇಶವನ್ನು ಆಳುವಂತಾಗಿದೆ. ಬಹುರಾಷ್ಟ್ರೀಯ ಕಂಪನಿಗಳನ್ನು ಪ್ರಶ್ನಿಸಲಾಗದಷ್ಟು ರಾಜಕೀಯ ನಾಯಕತ್ವ ದುರ್ಬಲವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಮತ್ತು ಕನ್ನಡಿಗರನ್ನು ಉಳಿಸುವುದು ಹೇಗೆ ಎಂದು ಬರಗೂರು ರಾಮಚಂದ್ರಪ್ಪ ಪ್ರಶ್ನಿಸಿದರು. 
ಅಯೋಧ್ಯ  ತೀರ್ಪು
        ಅಯೋಧ್ಯ ರಾಮಮಂದಿರ ಕುರಿತು ಸುಪ್ರಿಂ ಕೋರ್ಟ್ ತೀರ್ಪು ನೀಡಿದುದನ್ನು ಪ್ರಸ್ತಾಪಿಸಿದ ಅವರು, ಸುಪ್ರಿಂ ಕೋರ್ಟ್ ಕೊಡುವ ತೀರ್ಪೇ ಅಂತಿಮವಾದುದು. ಅದರ ಮುಂದೆ ಬೇರೆಯವರ ಇಷ್ಟ ಅಥವಾ ಇಷ್ಟವಿಲ್ಲದ್ದು ಮುಖ್ಯವಾಗುವುದಿಲ್ಲ. ಯಾವುದೇ ವಿಷಯಕ್ಕಾದರೂ ಒಂದು ಕೊನೆ ಇರಲೇಬೇಕಾಗುತ್ತದೆ. ಅಂತಿಮಗೆರೆ ಎಳೆಯಲೇಬೇಕಾಗುತ್ತದೆ. ಆದ್ದರಿಂದ ಇದನ್ನು ಒಪ್ಪಿಕೊಂಡು ಶಾಂತಿ, ಸೌಹಾರ್ದತೆ, ಸಹಿಷ್ಣುತೆಯನ್ನು ಕಾಪಾಡಿಕೊಳ್ಳಬೇಕು ಎಂದು ಕಳಕಳಿಯ ಮನವಿ ಮಾಡಿಕೊಂಡರು. 
      ಜಾತಿ-ಧರ್ಮದ ವಿಷಯದಲ್ಲಿ ಅನೇಕ ಬಾರಿ  ಸಂಘರ್ಷಗಳು ನಡೆದಿವೆ. ಆದರೆ ಈ ಸಂಘರ್ಷದ ಬಳಿಕ ಅಮಾಯಕರೇ ಸಂಕಷ್ಟಕ್ಕೀಡಾಗಿರುವುದನ್ನು ಕಾಣುತ್ತಲೇ ಬಂದಿದ್ದೇವೆ. ಅಂತಹ ಸನ್ನಿವೇಶಗಳು ಮರುಕಳಿಸಬಾರದು. ಈಗಿನ ತೀರ್ಪೆ ಒಂದು ದಾರಿದೀಪವಾಗಿ, ಇನ್ನು ಮುಂದೆ ಯಾವ ವಿವಾದಗಳೂ ಕೋರ್ಟ್ ಮೆಟ್ಟಿಲೇರದಂತೆ ಸೌಹಾರ್ದತೆಯಿಂದಲೇ ಪರಿಹಾರವಾಗುವಂತೆ ನೋಡಿಕೊಳ್ಳಬೇಕು.
        ಎಂದೋ ಆದ ಚರಿತ್ರೆಯನ್ನು ಕೆದಕುತ್ತ ಕೂರುವ ಬದಲು, ಸಮಕಾಲೀನ ಸಂಕಷ್ಟಗಳನ್ನು ನೋಡುವಂತಾಗಬೇಕು. ಇತಿಹಾಸವನ್ನು ಸಂಶೋಧಕರಿಗೆ ಬಿಟ್ಟುಬಿಡಬೇಕು. ಆ ಬಗ್ಗೆ ಚರ್ಚೆ ಆಗಲಿ. ಅಧ್ಯಯನ ಆಗಲಿ. ಆದರೆ ಧರ್ಮ, ದೇವರನ್ನು ರಾಜಕೀಯ ಕಾರಣಕ್ಕೆ ಬಳಸಿ, ಸೌಹಾರ್ದತೆ, ಶಾಂತಿಗೆ  ಧಕ್ಕೆ ತರುವುದನ್ನು ತಡೆಯಬೇಕು. ಇಲ್ಲದಿದ್ದರೆ ಎಲ್ಲ ಪ್ರಮುಖ ನಾಯಕರ ಮೂಲ ಆಶಯವಾದ ಸಮಾನತೆಯು ನೇಪಥ್ಯಕ್ಕೆ ಸರಿದುಹೋಗುತ್ತದೆ ಎಂದು ಬರಗೂರು ರಾಮಚಂದ್ರಪ್ಪ ಸೂಕ್ಷ್ಮವಾಗಿ ಎಚ್ಚರಿಸಿದರು. 
        ಸಭೆಯಲ್ಲಿ ಭೂಮಿ ಬಳಗದ ಅಧ್ಯಕ್ಷ ಜಿ.ಎಸ್.ಸೋಮಶೇಖರ್, ಸಿದ್ಧರಾಮಸೇನೆ ಅಧ್ಯಕ್ಷ ಹಾಗೂ ಹೈಕೋರ್ಟ್ ವಕೀಲ ಜಿ.ಎಸ್.ಪ್ರಸನ್ನ ಕುಮಾರ್, ಸಾಹಿತಿ ಹರಳೂರು ಶಿವಕುಮಾರ್ ಸಭೆಯಲ್ಲಿ ಮಾತನಾಡಿದರು. ತುಮಕೂರು ತಾಲ್ಲೂಕು ಕ.ಸಾ.ಪ. ಅಧ್ಯಕ್ಷೆ ಬಿ.ಸಿ.ಶೈಲಾ ನಾಗರಾಜ್ ಆಶಯ ನುಡಿಗಳನ್ನಾಡಿದರು. ಜಿಲ್ಲಾ ಕ.ಸಾ.ಪ. ಅಧ್ಯಕ್ಷೆ ಬಾ.ಹ.ರಮಾಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ನರಗನಹಳ್ಳಿ ಗಂಗಣ್ಣ, ಹೋರಾಟರಾರ ಕರಿಕೆರೆ ಪಾಲಾಕ್ಷ, ಸಮಾಜ ಸೇವಕ ಕರಿಕೆರೆ ಪಾಲಾಕ್ಷ, ಟಿ.ತೋಪಯ್ಯ, ನಿವೃತ್ತ ಪ್ರಾಚಾರ್ಯ ಬಿ.ಮರುಳಯ್ಯ, ಗೋವಿಂದಯ್ಯ ಮೊದಲಾದವರು ವೇದಿಕೆಯಲ್ಲಿದ್ದರು. ಜಿಲ್ಲಾ ಕ.ಸಾ.ಪ. ಕಾರ್ಯದರ್ಶಿ ರವಿಕುಮಾರ್ ಸ್ವಾಗತಿಸಿದರು. ಖಜಾಂಚಿ ರಂಗಮ್ಮ ಹೊದೇಕಲ್ ಕಾರ್ಯಕ್ರಮ ನಿರೂಪಿಸಿದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link