ಕನ್ನಡಭಿಮಾನವೆಂದರೆ ಗತವೈಭವದ ಕನವರಿಕೆಯಲ್ಲ : ಎಸ್. ನಾಗಣ್ಣ

ಮಿಡಿಗೇಶಿ:

       ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಕನ್ನಡ ಸಾಹಿತ್ಯ ವಿಶ್ವದ ಶ್ರೇಷ್ಟ ಸಾಹಿತ್ಯಗಳಲ್ಲೊಂದಾಗಿದೆ. ಅನೇಕ ಭಾಷೆಗಳ ಉನ್ನತ ಗ್ರಂಥಗಳು ಕನ್ನಡ ಭಾಷೆಗೆ ತರ್ಜುಮೆಗೊಳ್ಳುವ ಮೂಲಕ ಕನ್ನಡದ ಹಿರಿಮೆಯನ್ನು ಹೆಚ್ಚಿಸಿವೆ. ಕನ್ನಡ ರಾಜ್ಯೋತ್ಸವ ಆಚರಣೆಗಳು ವೈಭವೀಕರಣಗೊಳ್ಳದೆ, ಅರ್ಥವತ್ತಾದ ಕನ್ನಡ ಅನುಷ್ಟಾನದ ಕಾರ್ಯಕ್ರಮಗಳಾಗಬೇಕು .

         ಕನ್ನಡಭಿಮಾನವೆಂದರೆ ಕೇವಲ ಗತವೈಭವದ ಕನವರಿಕೆಯಲ್ಲ, ಪ್ರಸ್ತುತ ವಿದ್ಯಮಾನದ ಬಗೆಗಿನ ಚರ್ಚೆಗಳಾಗಿ ಅರ್ಥಪೂರ್ಣ ವಿದ್ವತ್ತು ಹೊರಬರಲಿ ಎಂದು ಪ್ರಜಾಪ್ರಗತಿ ದಿನಪತ್ರಿಕೆ ಸಂಪಾದಕರಾದ ಎಸ್.ನಾಗಣ್ಣ ಅಭಿಪ್ರಾಯಪಟ್ಟರು.

        ಅವರು ಮಿಡಿಗೇಶಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಯು.ಆರ್.ಎಂ.ಸ್ಪೋಟ್ಸ್ ಕ್ಲಬ್ ವತಿಯಿಂದ ಏರ್ಪಡಿಸಿದ್ದ ಪ್ರಥಮ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಗಡಿನಾಡಿನಲ್ಲಿ ಕನ್ನಡ ರಾಜ್ಯೋತ್ಸವ ಹಮ್ಮಿಕೊಂಡ ಯು.ಆರ್.ಎಂ. ಸ್ಪೋಟ್ಸ್ ಕ್ಲಬ್ ಸದಸ್ಯರ ಶ್ರಮವನ್ನು ಶ್ಲಾಘಿಸಿದ ಅವರು ಕನ್ನಡವನ್ನು ಸ್ಪಷ್ಟವಾಗಿ ಓದುವ, ಶುದ್ದವಾಗಿ ಬರೆಯುವಂತಾಗಬೇಕು. ಕನ್ನಡಿಗರು ಕನ್ನಡಾಂಬೆಯ ನೆಲ-ಜಲ ಸಂಸ್ಕøತಿಯ ಸರ್ವಸ್ವವನ್ನು ಮುಕ್ತವಾಗಿ ಅನುಭವಿಸುವಂತಾಗಬೇಕು.

          ಕನ್ನಡದಲ್ಲೇ ಕಲಿತ ಅನೇಕರು ವಿಶ್ವಮೆಚ್ಚುವ ಸಾಧನೆ ಮಾಡಿದ್ದಾರೆ. ಕನ್ನಡ ಭಾಷೆ ತಾಯಿ ಸಮಾನವಿದ್ದಂತೆ, ಮಾತೃಭಾಷೆ ಕಲಿಕೆಗೆ ಹಿಂಜರಿಕೆ ಬೇಡ, ಕನ್ನಡತನವನ್ನು ನವೆಂಬರ್ ಮಾಹೆಗೆ ಸೀಮಿತಗೊಳಿಸಿಕೊಳ್ಳುವ ಮನೋಭಾವನೆ ಸಲ್ಲದು. ವರ್ಷದ ಎಲ್ಲ ದಿನಗಳಲ್ಲೂ ಕನ್ನಡವನ್ನು ಉಸಿರಾಗಿಸಿಕೊಳ್ಳುವ ಮೂಲಕ ಕನ್ನಡದಲ್ಲಿರುವ ವಿಪುಲ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳಬೇಕೆಂದರು.

         ಮಾತೃಭಾಷೆಯಲ್ಲಿ ಪಡೆದ ಶಿಕ್ಷಣ ಧೃಢವಾಗಿದ್ದು, ಕಲಿಕೆ ಸುಲಲಿತವಾಗಲಿದೆ. ಪರಭಾಷಾ ವ್ಯಾಮೋಹಕ್ಕೆ ಬಲಿಯಾಗಿ, ಕನ್ನಡಕ್ಕೆ ಅನಾದರ ಸಲ್ಲದು. ಎಲ್ಲ ವಿಷಯಗಳು ಇಂಗ್ಲೀಷ್ ಭಾಷೆಯಲ್ಲಿ ಕಲಿತ ಇಂದಿನ ಮಕ್ಕಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇಂಗ್ಲೀಷ್ ವಿಷಯದಲ್ಲಿ ಅನುತ್ತೀರ್ಣರಾಗುತ್ತಿರುವುದು ವಿಪರ್ಯಾಸವಾಗಿದೆ. ಆದುದರಿಂದ ಕನ್ನಡವನ್ನು ಉಳಿಸಿ ಬೆಳೆಸುವ ಔದಾರ್ಯವನ್ನು ಕನ್ನಡಿಗರು ತೋರಬೇಕಿದೆ. ಭಾಷೆಯ ಬಗೆಗಿರುವ ಕ್ಲೀಷೆಯನ್ನು ಕಿತ್ತೊಗೆಯಿರಿ, ಕನ್ನಡವನ್ನು ನಿತ್ಯೋತ್ಸವವಾಗಿ ಬಳಸಿ ಬೆಳಸಿ ಎಂದು ಕರೆ ನೀಡಿದರು.

          ಪ್ರಧಾನ ಭಾಷಣಕಾರರಾಗಿ ಆಗಮಿಸಿದ್ದ ಕುಣಿಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಗೋವಿಂದರಾಯ ಮಾತನಾಡಿ ಕನ್ನಡದ ಮನಸ್ಸು, ಭಾಷೆಯ ಬಗೆಗೆ, ಇತರೆ ಭಾಷೆಗಳ ಮಧ್ಯೆ ಪ್ರತಿಕ್ರಿಯಿಸುವ ರೀತಿಯ ಸಂಕೇತವೇ ಕನ್ನಡ ರಾಜ್ಯೋತ್ಸವ. ಕನ್ನಡದ ಏಕೀಕರಣವೆಂದರೆ ಕನ್ನಡದ ಮನಸ್ಸುಗಳ ಒಗ್ಗೂಡುವಿಕೆ. ಹಳೆಯ ಪರಂಪರೆಯ ಪುನರಮನನ ಮಾಡಿಕೊಡಬೇಕು. ಕನ್ನಡ ಭಾಷೆಯು ಜೀವನದ ಗೊಂದಲಗಳನ್ನು ಪರಿಹರಿಸಿ, ಕೊರಳಿನ ಭಾಷೆಯಾಗದೇ, ಕರುಳಿನ ಭಾಷೆಯಾಗಬೇಕು.

        ಬೆಂಗಳೂರಷ್ಟೇ ಕರ್ನಾಟಕ, ಇಂಗ್ಲೀಷ್ ಬಲ್ಲವರಷ್ಟೇ ಜ್ಞಾನಿಗಳು, ಐಟಿಬಿಟಿ ಕಂಪನಿಗಳಲ್ಲಿ ದುಡಿದರಷ್ಟೇ ಉದ್ಯೋಗ ಎಂಬ ನಿಲುವು ಬದಲಾಗಿ ಕನ್ನಡವೂ ಅನ್ನ ನೀಡುವ ಸಾಮಥ್ರ್ಯ ಪಡೆಯಬೇಕು. ಕನ್ನಡ ಮತ್ತು ಕನ್ನಡಿಗರು ಅನುಭವಿಸುತ್ತಿರುವ ಅನೇಕ ಸವಾಲುಗಳಿಗೆ ದಿಟ್ಟ ಉತ್ತರ ನೀಡಿದಾಗ ಕನ್ನಡಾಂಬೆಯ ಗತವೈಭವ ಮರುಕಳಿಸಲು ಸಾಧ್ಯ. ಆದುದರಿಂದ ಕನ್ನಡದ ಕಟ್ಟಾಳುಗಳು ಕನ್ನಡದ ಅನುಷ್ಟಾನದ ಕಾವಲುಗಾರರಾಗಬೇಕು ಎಂದರು.

          ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ನರಸಿಂಹಮೂರ್ತಿ ಟಿ.ಎನ್. ಮಾತನಾಡಿ ಕನ್ನಡದ ಅಳಿವು ಉಳಿವು ಕರ್ನಾಟಕದಲ್ಲಿ ಜೀವಿಸುವವರ ಕೈಯಲ್ಲಿದೆ. ಕರ್ನಾಟಕದಲ್ಲಿದ್ದು ಕನ್ನಡದ ಅನ್ನ, ಗಾಳಿ ಸೇವಿಸುವವರೆಲ್ಲರಿಗೂ ಕನ್ನಡ ಕಡ್ಡಾಯಗೊಳಿಸಬೇಕು. ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಮಾತ್ರ ಕರ್ನಾಟಕದಲ್ಲಿ ಉದ್ಯೋಗ ಎಂಬ ನಿಲುವು ಸರ್ಕಾರದ್ದಾದಾಗ ಕನ್ನಡದ ಕಂಪು ಹೆಚ್ಚಲಿದೆ. ಪರಭಾಷೆಗಳ ದಬ್ಬಾಳಿಕೆಯನ್ನು ತಡೆಗಟ್ಟಲು ಕನ್ನಡಕ್ಕೇ ಪ್ರಥಮ ಆದ್ಯತೆ ನೀಡಬೇಕು ಎಂದರು.

         ಇದೇ ಸಂಧರ್ಭದಲ್ಲಿ ಸೈನಿಕರಾದ ಮಾರುತಿ, ನಾಗೇಶ್, ರಾಷ್ಟ್ರೀಯ ಕ್ರಿಡಾಪಟು ಲಕ್ಲೀಹಟ್ಟಿ ಮಂಜುನಾಥ್, ಅಥ್ಲೇಟಿಕ್ ಕ್ರೀಡಾಪಟು ಸೌಮ್ಯ, ಪತ್ರಕರ್ತ ಅಂಜನಪ್ಪರವರನ್ನು ಸನ್ಮಾನಿಸಲಾಯಿತು. ಕುವೆಂಪು ಶಾಲೆ, ಶಾರದಾಂಬ ವಿದ್ಯಾಮಂದಿರ, ಎಂ.ಇ.ಸ್ ಮತ್ತು ಎಸ್.ಎಲ್.ಎನ್. ಶಾಲಾ ವಿದ್ಯಾರ್ಥಿಗಳು ಸಾಂಸ್ಕತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಜನರಸ ಗಮನಸೆಳೆದರು.

        ಮುಖ್ಯ ಅತಿಥಿಗಳಾಗಿ ತಹಶಿಲ್ದಾರ್ ತಿಪ್ಪೇಸ್ವಾಮಿ, ನಿವೃತ್ತ ಪ್ರಾಂಶುಪಾಲರಾದ ಮರಿಬಸಪ್ಪ, ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕರಾದ ಪಾರ್ವತಮ್ಮ, ಶಾರದಾಂಬ ವಿದ್ಯಾಮಂದಿರದ ಕಾರ್ಯದರ್ಶಿ ಶಿವಣ್ಣ, ಎಂ.ಇ.ಎಸ್. ಶಾಲೆಯ ನಾಗರತ್ನಮ್ಮ, ನಾಗರಾಜು, ಪತ್ರಕರ್ತ ಅಂಜನಪ್ಪ ಭಾಗವಹಿಸಿದ್ದರು. ಯು.ಆರ್.ಎಂ.ಸ್ಪೋಟ್ಸ್ ಕ್ಲಬ್ ಪದಾದಿಕಾರಿಗಳಾದ ವಿಜಯನಾರಸಿಂಹ, ಮನೋಹರ ಎಂ.ಬಿ. ತಿಪ್ಪೇಸ್ವಾಮಿ, ಉಲ್ಲಾಸ್, ಭರತ್, ಶ್ರೀನಿವಾಸಲು, ಮುಖ್ಯಶಿಕ್ಷಕ ಪುಟ್ಟಲಿಂಗಪ್ಪ, ಉಪನ್ಯಾಸಕ ಶಂಭುಲಿಂಗೇಶ್ ಮತ್ತಿತರರು ಹಾಜರಿದ್ದರು. ಶಿಕ್ಷಕ ಧನಂಜಯ ಸ್ವಾಗತಿಸಿ, ಶಿಕ್ಷಕ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link