ದಾವಣಗೆರೆ:
ರಾಜ್ಯದ ಯುವಕರು ಸೈನ್ಯದಿಂದ ವಿಮುಖರಾಗಿ, ಇತರೆ ಹುದ್ದೆಗಳ ಬೆನ್ನು ಬಿದ್ದಿರುವುದು ದೇಶದ ದೌರ್ಭಾಗ್ಯವಾಗಿದೆ ಎಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.ನಗರದ ಜಯದೇವ ವೃತ್ತದಲ್ಲಿ ಶುಕ್ರವಾರ ಸಂಜೆ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಹುತಾತ್ಮ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಹುತಾತ್ಮ ಯೋಧರು ಮತ್ತು ಪೊಲೀಸರ ಕುಟುಂಬ ವರ್ಗದವರಿಗಾಗಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಉತ್ತರ ಪ್ರದೇಶ, ಬಿಹಾರ ರಾಜ್ಯಗಳ ಯುವಕರು ಸೈನ್ಯಕ್ಕೆ ಸೇರಲು ಹೆಚ್ಚು ಉತ್ಸುಕರಾಗಿರುತ್ತಾರೆ. ಆದರೆ, ನಮ್ಮ ಕರ್ನಾಟಕದಿಂದ ಸೈನ್ಯಕ್ಕೆ ಸೇರಿ ಸೇವೆ ಸಲ್ಲಿಸುವ ಯುವಕರ ಸಂಖ್ಯೆ ದಿನೇ, ದಿನೇ ಕ್ಷೀಣಿಸುತ್ತಿದೆ. ನಮ್ಮ ನಾಡಿನ ಯುವಕರು ಡಾಕ್ಟರ್, ಎಂಜಿನಿಯರ್ ಆಗಬೇಕೆಂಬ ಮನೋಭಾವ ಹೊಂದಿರುವುದು ಸರಿಯಲ್ಲ ಎಂದರು.
ಒಂದು ಕಾಲದಲ್ಲಿ ಕರ್ನಾಟಕದ ಬೆಳಗಾವಿ, ಮಡಿಕೇರಿ ಮತ್ತು ದಾವಣಗೆರೆಯ ತೋಳಹುಣಸೆ ಗ್ರಾಮದ ಯುವಕರು ಸೈನ್ಯಕ್ಕೆ ಸೇರಲು ಹಾತೋರೆಯುತ್ತಿದ್ದರು. ಆದರೆ, ಈಗ ಸೈನ್ಯದಲ್ಲಿ ಸೇರಿ ದೇಶ ಸೇವೆ ಮಾಡುವ ಮನೋಭಾವದಿಂದ ಯುವಕರು ವಿಮುಖರಾಗಿತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂದು ಭಾರತದ 140 ಕೋಟಿ ಜನರು ಶಾಂತಿ, ನೆಮ್ಮದಿಯಿಂದ ಜೀವನ ನಡೆಸುತ್ತಿರುವುದಕ್ಕೆ. ದೇಶದ ಗಡಿ ಭಾಗಗಳಲ್ಲಿ ಚಳಿ, ಮಳೆ, ಗಾಳಿಯನ್ನೂ ಲೆಕ್ಕಿಸದೇ ಸೇವೆ ಮಾಡುತ್ತಿರುವ ದೇಶಪ್ರೇಮಿ ಸೈನಿಕರ ತ್ಯಾಗ, ಬಲಿದಾನದಿಂದ ಎನ್ನುವುದನ್ನು ಯಾರೂ ಮರೆಯಕೂಡದು. ಅಂತಹ ಸೈನಿಕರನ್ನು ಮತ್ತು ಪೊಲೀಸರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕೆಂದು ಪ್ರತಿಪಾಸಿದರು.
ಹುಟ್ಟಿದ ಮೇಲೆ ಮನುಷ್ಯನಿಗೆ ಸಾವು ಎಂದಿಗೂ ತಪ್ಪುವುದಿಲ್ಲ. ಆದರೆ, ಅದು ಮನೆಗೆ ಸೀಮಿತವಾದರೆ, ಅದಕ್ಕೆ ಅರ್ಥವಿಲ್ಲ. ಸಾರ್ವಜನಿರ ಬದುಕಿಗಾಗಿ ಜೀವನ ಮುಡುಪಾಗಿಡುವುದರಿಂದ ಬರುವ ಸಾವು ಸಾರ್ಥಕತೆಯಿಂದ ಕೂಡಿರುತ್ತದೆ. ಸೈನಿಕರು ಹಾಗೂ ಪೊಲೀಸ್ ಇಲಾಖೆಯಲ್ಲಿ ಜನರಿಗಾಗಿ ಜೀವನ ಬಿಟ್ಟವರನ್ನು ಮಾತ್ರ ‘ಹುತಾತ್ಮರು’ ಎನ್ನುತ್ತವೆ. ಇದು ಸಾರ್ಥಕ ಬದುಕಿಗೆ ಸಲ್ಲುವ ಗೌರವವಾಗಿದೆ ಎಂದರು.
ಶತೃ ರಾಷ್ಟ್ರ ಪಾಕಿಸ್ತಾನವು ಭಯೋತ್ಪಾದನೆಯ ಮೂಲಕ ಹಿಂಬಾಗಿಲಿನಿಂದ ಭಾರತದ ಮೇಲೆ ದಾಳಿ ಮಾಡುತ್ತಿದೆ. ಪಾಕಿಸ್ತಾನ ಎರಡು ಬಾರಿ ಯುದ್ದ ಮಾಡಿ ಸೋಲು ಕಂಡಿದ್ದರೂ ಸಹ ಅದು ತನ್ನ ಬಂಡತನ, ಹುಚ್ಚುತನ ಬಿಟ್ಟಿಲ್ಲ ಎಂದರು.ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೂ ಹುತಾತ್ಮರಾದ 6 ಜನ ಸೈನಿಕರು ಹಾಗೂ ಓರ್ವ ಪೊಲೀಸ್ ಕುಟುಂಬಕ್ಕೆ ಸನ್ಮಾನ ಮಾಡುತ್ತಿರುವುದು ಪ್ರಶಂಸನೀಯ ಕಾರ್ಯವಾಗಿದೆ. ಸಾಮಾನ್ಯ ಜನರು ನೆಮ್ಮದಿಯಿಂದ ಇದ್ದಾರೆ ಎಂದರೆ, ಅದು ಯೋಧರ ತ್ಯಾಗ, ಬಲಿದಾನವೇ ಕಾರಣ ಎಂದರು.
ಸಾರ್ವಜನಿಕರಿಗೆ ಸೈನಿಕರ ಮತ್ತು ಪೊಲೀಸ್‍ರ ಮೇಲಿನ ಗೌರವ ಯಾವುದೇ ಕಾರಣಕ್ಕೂ ಕಡಿಮೆ ಆಗಬಾರದು. ಆದರೆ, ಇತ್ತೀಚಿನ ದಿನಗಳಲ್ಲಿ ಅವರ ಮೇಲೆ ಎಲ್ಲೋ ಒಂದೆಡೆ ತಾತ್ಸಾರ ಮನೋಭಾವನೆ ಉಂಟಾಗುತ್ತಿದೆ ಎಂಬ ಅನುಮಾನ ಕಾಡುತ್ತಿದೆ. ಸೈನಿಕರು, ಪೊಲೀಸರು ಜನರ ನೆಮ್ಮದಿಗಾಗಿಯೇ ಬದುಕುತ್ತಿದ್ದಾರೆ ಎನ್ನುವುದನ್ನು ಯಾರೂ ಸಹ ಮರೆಯ ಬಾರದು ಎಂದು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಪ್ರತಿಯೊಬ್ಬರಲ್ಲೂ ದೇಶ ಪ್ರೇಮ ಮತ್ತು ದೇಶ ಭಕ್ತಿ ಇರಬೇಕು. ಅದನ್ನು ಇಂಥ ಕಾರ್ಯಕ್ರಮಗಳ ಮೂಲಕ ಮೂಡಿಸುವ ಪ್ರಯತ್ನ ಪೊಲೀಸ್ ಇಲಾಖೆ ಮಾಡುತ್ತಿದೆ. ಅದರಲ್ಲೂ ಯುವಕರು ಸೈನಿಕರನ್ನು ಮತ್ತು ಪೊಲೀಸರನ್ನು ಗೌರವಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪೊಲೀಸ್ ಇಲಾಖೆಯಿಂದ ಪ್ರತಿವರ್ಷ ಅ.21ಕ್ಕೆ ಹುತಾತ್ಮ ದಿನಾಚರಣೆ ಆಚರಿಸಲಾಗುತ್ತದೆ. ನಗರದ ಪೊಲೀಸ್ ಮೀಸಲು ಪಡೆ ಮೈದಾನದಲ್ಲಿ ಅಂದು ಅಚರಿಸಲಾಗುವುದು. ಅದಕ್ಕೂ ಮುನ್ನಾ ಸಾರ್ವತ್ರಿಕವಾಗಿ ಹುತಾತ್ಮ ದಿನಾಚರಣೆ ಆಚರಿಸಬೇಕು ಎಂಬುದು ಸರ್ಕಾರದ ಆಗಿರುವುದರಿಂದ ಹುತಾತ್ಮ ಯೋಧರು ಮತ್ತು ಪೊಲೀಸ್ ಸಿಬ್ಬಂದಿಯ ಕುಟುಂಬ ವರ್ಗವನ್ನು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಡಿವೈಎಸ್‍ಪಿ ಮಂಜುನಾಥ ಗಂಗಲ್ ಉಪಸ್ಥಿತರಿದ್ದರು. ಹೆಚ್ಚುವರಿ ಎಸ್‍ಪಿ ರಾಜೀವ್ ವಂದಿಸಿದರು. ಇದೇ ಸಂದರ್ಭದಲ್ಲಿ ಪೊಲೀಸ್ ಬ್ಯಾಂಡ್ ತಂಡ ದೇಶಭಕ್ತಿ ಗೀತೆಗಳನ್ನು ನುಡಿಸಿ, ಹುತಾತ್ಮರಿಗೆ ಗೌರವ ಸಲ್ಲಿಸಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ