ಚಿತ್ರದುರ್ಗ:
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ, ಕನ್ನಡ ನಾಡು, ನುಡಿ, ನೆಲ, ಜಲದ ರಕ್ಷಣೆ, ಸರೋಜಿನಿ ಮಹಿಷಿ ವರದಿ ಜಾರಿಗೆ ತರುವುದು ಸೇರಿದಂತೆ ವಿವಿದ ಬೇಡಿಕೆಗಳ ಈಡೇರಿಕೆಗಾಗಿ ಮತ್ತೊಮ್ಮೆ ಗೋಕಾಕ್ ಮಾದರಿ ಚಳುವಳಿ ಆರಂಭಿಸಿ ಅದರ ನೇತೃತ್ವವನ್ನು ವಹಿಸುವಂತೆ ನಟ ಶಿವರಾಜ್‍ಕುಮಾರ್‍ಗೆ ಕದಂಬ ಸೈನ್ಯ ಕನ್ನಡ ಸಂಘಟನೆಯಿಂದ ಗುರುವಾರ ಪತ್ರ ಕಳಿಸುವ ಮೂಲಕ ಅಂಚೆ ಚಳುವಳಿ ನಡೆಸಲಾಯಿತು.
ಪ್ರಧಾನ ಅಂಚೆ ಕಚೇರಿಯಲ್ಲಿ ಪತ್ರ ಚಳುವಳಿ ಆರಂಭಿಸಿದ ಕದಂಬ ಸೈನ್ಯ ಕನ್ನಡ ಸಂಘಟನೆಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಮಾತನಾಡಿ ಕಳೆದ ನಲವತ್ತು ವರ್ಷಗಳ ಹಿಂದೆ ಕನ್ನಡದ ಉಳಿವಿಗಾಗಿ ನಡೆದ ಗೋಕಾಕ್ ಚಳುವಳಿಯಲ್ಲಿ ಪದ್ಮಭೂಷಣ ಡಾ.ರಾಜ್ ಕುಮಾರ್‍ರವರು ಪಾಲ್ಗೊಂಡು ರಾಜ್ಯಾದ್ಯಂತ ಸಂಚರಿಸಿ ಕನ್ನಡಿಗರಲ್ಲಿ ಸಂಚಲನ ಮೂಡಿಸಿದ್ದರು. ಈಗ ಅಂತಹುದೆ ಚಳುವಳಿ ಮತ್ತೆ ರಾಜ್ಯದಲ್ಲಿ ಆರಂಭಗೊಂಡಾಗ ಮಾತ್ರ ಕನ್ನಡಿಗರು ಕನ್ನಡವನ್ನು ಉಳಿಸಲು ಸಾಧ್ಯ. ಹಾಗಾಗಿ ಚಳುವಳಿಗೆ ಧುಮುಕುವಂತೆ ಪತ್ರ ರವಾನಿಸುವ ಮೂಲಕ ನಟ ಶಿವರಾಜ್‍ಕುಮಾರ್‍ಗೆ ಆಹ್ವಾನ ನೀಡುತ್ತಿದ್ದೇವೆ ಎಂದರು.ಎಸ್.ತಿಮ್ಮಯ್ಯ ಮ್ಯಾಕ್ಲೂರಹಳ್ಳಿ, ಆರ್.ಸಂತೋಷ್, ಆರ್.ಶ್ರೀನಿವಾಸ್ ಪತ್ರ ಚಳುವಳಿಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ