ದಾವಣಗೆರೆ:
ಕಾಂಗ್ರೆಸ್ ಮುಕ್ತ ಭಾರತದ ಜೊತೆಗೆ, ರಾಜ್ಯವನ್ನು ಕಣ್ಣೀರು (ಜೆಡಿಎಸ್) ಮುಕ್ತ ಕರ್ನಾಟಕವನ್ನಾಗಿಸಲು ಕಾರ್ಯಕರ್ತರು ಸಂಕಲ್ಪ ಮಾಡಬೇಕೆಂದು ದಾವಣಗೆರೆ ಲೋಕಸಭಾ ಕ್ಷೇತ್ರ ಚುನಾವಣಾ ಉಸ್ತುವಾರಿ ಆಯನೂರು ಮಂಜುನಾಥ್ ಕರೆ ನೀಡಿದರು.ನಗರದ ರೇಣುಕಾ ಮಂದಿರದಲ್ಲಿ ಭಾನುವಾರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನಲ್ಲಿಯೇ ಭಾರತಕ್ಕೆ ಘನತೆ ಬರುವಂತೆ ಮಾಡಿದ ಪ್ರಧಾನಿ ಮೋದಿ ಅವರ ಕೈ ಬಲಪಡಿಸಲು ಕಾಂಗ್ರೆಸ್ ಮುಕ್ತ ದೇಶದ ಜೊತೆ, ಜೊತೆಗೆ ಕಣ್ಣೀರು (ಜೆಡಿಎಸ್) ಮುಕ್ತ ಕರ್ನಾಟಕ ಮಾಡಲು ನಮ್ಮ ಕಾರ್ಯಕರ್ತರು ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.
55 ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದರೂ, ಏನೊಂದು ಅಭಿವೃದ್ಧಿ ಕಾರ್ಯ ಮಾಡದ ಕಾಂಗ್ರೆಸ್ ಪಕ್ಷವನ್ನು ಹಾಗೂ ಪದೇ ಪದೇ ಕಣ್ಣೀರು ಹಾಕುವ ಮೂಲಕ ರಾಜ್ಯದ ಜನತೆಗೆ ಮೋಸ ಮಾಡುತ್ತಿರುವ ಕಣ್ಣೀರಿನ (ಜೆಡಿಎಸ್) ಪಕ್ಷವನ್ನೂ ಹುಡುಕಲು ಸಿಗದಂತೆ ಮಾಡುವ ಮೂಲಕ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ 22 ಜನ ಬಿಜೆಪಿ ಸಂಸದರನ್ನು ಸಂಸತ್ಗೆ ಕಳುಹಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕೈಬಲ ಪಡಿಸಬೇಕೆಂದು ಮನವಿ ಮಾಡಿದರು.
ಒಂದು ವೆಳೆ ಕಾವೇರಿ ನೀರು ಬತ್ತಿದರೂ ಸಹ, ದೇವೇಗೌಡರ ಕುಟುಂಬದ ಕಣ್ಣೀರು ಬತ್ತುವುದಿಲ್ಲ. 60 ವರ್ಷಗಳ ಕಾಲ ಹಾಸನ ಜಿಲ್ಲೆ ಜನರು ಗೌಡರನ್ನು ಉಳಿಸಿಕೊಂಡಿದ್ದಾರೆ. ಆದರೆ, ಗೌಡರು ಮಾತ್ರ ಕುಟುಂಬದ ಸದಸ್ಯರನ್ನು ಬೆಳೆಸಿದರೇ ಹೊರತು, ಬೇರೆ ಯಾರನ್ನೂ ಬೆಳೆಸಲಿಲ್ಲ ಎಂದು ಗೌಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ದೇಶದಲ್ಲಿರುವ ಗಂಟು ಕಳ್ಳರನ್ನು ನಿರ್ಮೂಲನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರತಿಷ್ಠಾಪಿಸುವ ಚುನಾವಣೆ ಇದಾಗಿದೆ. ಈ ದೇಶದ ಸಂಪತ್ತು, ಹಣವನ್ನು ಹೊಡೆದು ತಿನ್ನುವರಿಗೆ ಬಗ್ಗು ಬಡೆಯುವ ಏಕೈಕ ನಾಯಕ ನರೇಂದ್ರ ಮೋದಿ. ಹೀಗಾಗಿ, ಅವರನ್ನು ಈ ದೇಶದ ಪ್ರಧಾನಿಯನ್ನಾಗಿಸಿದರೆ ದೇಶ ಮತ್ತಷ್ಟು ಅಭಿವೃದ್ಧಿಯತ್ತ ಸಾಗುವುದಲ್ಲದೇ ಪ್ರಪಂಚದಲ್ಲಿ ಮಾನ್ಯತೆ ದೊರೆಯಲಿದೆ ಎಂದು ಹೇಳಿದರು.
ಭ್ರಷ್ಟಾಚಾರ, ಸ್ವಾರ್ಥದ ರಾಜಕಾರಣಿಗಳಿಗೆ ಬುದ್ದಿ ಕಲಿಸಲು ಮೋದಿಯೇ ಸಮರ್ಥ ನಾಯಕರಾಗಿದ್ದಾರೆ. ಸ್ವಾರ್ಥ ಇಲ್ಲದೇ ನಿಸ್ವಾರ್ಥಿಗಳಾಗಿ ದೇಶಕ್ಕೆ ಪ್ರಪಂಚದಲ್ಲೇ ಒಂದು ವಿಶಿಷ್ಟ ಸ್ಥಾನ ಮಾನ ಕಲ್ಪಿಸಿದ ಪ್ರಧಾನಿ ಮೋದಿ ಅವರ ಬೆಂಬಲ ಕೊಡಬೇಕಾದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ಹೇಳಲಾಗುತ್ತಿರುವ ಸಂಸದ ಜಿ.ಎಂ. ಸಿದ್ದೇಶ್ವರ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಭಾರತ ಮಾತೆಯ ಪಕ್ಷದಲ್ಲಿ ನಿಜವಾಗಿಯೂ ಈಗ ಸಿಂಹ ನಿಂತಿದೆ. ಮಾತೆಗೆ ಘನತೆ-ಗೌರವ ತಂದು ಕೊಟ್ಟಂತಹ ಏಕೈಕ ಪ್ರಧಾನ ಮಂತ್ರಿ ಎಂದರೆ ಅವರು ನರೇಂದ್ರ ಮೋದಿ ಮಾತ್ರ. ನೆರೆಯ ಪಾಕಿಸ್ತಾನಕ್ಕೆ ಸರ್ಜಿಕಲ್ ಸ್ಟೈಕ್ ಕೊಟ್ಟು, ಪ್ರಪಂಚವನ್ನೇ ಭಾರತದ ಮಿತ್ರರನ್ನಾಗಿ ಮಾಡಿಕೊಂಡ ಕೀರ್ತಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಎನ್ನುವುದನ್ನು ಯಾರೂ ಮರೆಯಬಾರದು ಎಂದ ಅವರು, ಭ್ರಷ್ಟರಿಗೆ, ಟೆರರಿಸ್ಟ್ಗಳಿಗೆ ನಡುಕ ಹುಟ್ಟಿಸಬಲ್ಲ ತಾಕತ್ತು ಇರುವುದು ಪ್ರಧಾನಿ ಮೋದಿಗೆ ಮಾತ್ರ. ಆದ್ದರಿಂದ ಪ್ರಧಾನಿ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕೆಂಬುದು ದೇಶದ ಜನರ ಅಪೇಕ್ಷೆಯಾಗಿದೆ ಎಂದರು.
ಮೋದಿ ಪದೇಪದೇ ವಿದೇಶಕ್ಕೆ ಹೋಗುತ್ತಾರೆಂದು ಟೀಕಿಸುವವರಿಗೆ ಮೊನ್ನೆ ತಕ್ಕ ಉತ್ತರ ಸಿಕ್ಕಂತಾಗಿದೆ. ಭಾರತ ಗಡಿ ಉಲ್ಲಂಘಿಸಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದರೂ ಯಾವೊಂದು ದೇಶವು ಉಲ್ಲಂಘನೆ ಕುರಿತು ಮಾತನಾಡಲಿಲ್ಲ. ಇದೇ ಮೋದಿಯವರ ತಾಕತ್ತು. ಪಾಕಿಸ್ತಾನಕ್ಕೆ ಬಡಿದಂತೆ ಕಾಂಗ್ರೆಸ್ಗೂ ಮೇಲಿಂದ ಕೆಳಗೆ, ಕೆಳಗಿನಿಂದ ಮೇಲೆ ಬಡಿದೋಡಿಸಬೇಕೆಂದು ಹೇಳಿದರು.
ಮೋದಿ ಟೀ ಮಾರಿ ಮೇಲೆ ಬಂದರೆ, ಕಾಂಗ್ರೆಸ್ನವರು ದೇಶದ ಸಂಪತ್ತನ್ನು ಮಾರಿ ಮೇಲೆ ಬಂದರು. ಇನ್ನಷ್ಟು ದಿನ ಕಾಂಗ್ರೆಸ್ಗೆ ಅವಕಾಶ ನೀಡಿದ್ದರೆ ಸಂಪೂರ್ಣ ದೇಶವನ್ನೇ ಮಾರಿಬಿಡುತ್ತಿದ್ದರು ಎಮದು ಗೇಲಿ ಮಾಡಿದರು.ಸಂಸದ ಜಿ.ಎಂ. ಸಿದ್ದೇಶ್ವರ್ ಮಾತನಾಡಿ, ನಾನು ನಿಮ್ಮ ಸೇವಕನಾಗಿದ್ದೇನೆ. ನೀವು (ಮತದಾರರು) ನಮ್ಮ ಮಾಲೀಕರು. ಕಳೆದ ಮೂರು ಬಾರಿಯೂ ಅಲ್ಪ ಮತದಲ್ಲಿ ಆರಿಸಿತಂದಿದ್ದೀರಿ. ಈ ಬಾರಿ ಹೆಚ್ಚಿನ ಅಂತರದಲ್ಲಿ ಗೆಲ್ಲಿಸುವ ಮೂಲಕ ಮುಂದಿನ 5 ವರ್ಷಗಳಲ್ಲಿ ಸ್ಮಾರ್ಟ್ಸಿಟಿ ನಿರ್ಮಾಣ, ಅಮೃತ್ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಸಮಗ್ರ ಅಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಹಿಂದೆ ಕಾಂಗ್ರೆಸ್ ಪಕ್ಷಿದಿಂದ ಟಿಕೇಟ್ ತಲರು ಹರಸಾಹಸ ಪಡಬೇಕಿತ್ತು. ಆದರೆ, 2014ರ ನಂತರ ನರೇಂದ್ರ ಮೋದಿಯವರು ರಾಷ್ಟ್ರ ರಾಜಕಾರಣಕ್ಕೆ ಬಂದ ನಂತರ ದೇಶದ ಚಿತ್ರಣವೇ ಬದಲಾಗಿದೆ.
ಹೀಗಾಗಿ ಈಗ ಕಾಂಗ್ರೆಸ್ಸಿನಲ್ಲಿ ಅಭ್ಯರ್ಥಿಯಾಗಲು ಹಿಂದೆಮುಂದೆ ಯೋಚಿಸುವಂತಾಗಿದೆ ಎಂದು ಲೇವಡಿ ಮಾಡಿದರು.
ದಕ್ಷಿಣ ವಿಧಾನಸಭಾ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷ ಪೈ.ರಾಜನಹಳ್ಳಿ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ ರವೀಂದ್ರನಾಥ್, ಯುವಮುಖಂಡ ಎಚ್.ಎಸ್. ನಾಗರಾಜ್, ಬಿಜೆಪಿ ಮುಖಂಡರಾದ ಅಣಬೇರು ಜೀವನ್ಮೂರ್ತಿ, ಬಿ. ರಮೇಶ್ನಾಯ್ಕ, ಪಿ.ಸಿ. ಶ್ರೀನಿವಾಸ್, ಮಟ್ಟಿಕಲ್ ಕರಿಬಸಪ್ಪ, ವೈ.ಮಲ್ಲೇಶ್, ಎಲ್.ಡಿ. ಗೋಣೆಪ್ಪ, ದೇವಿರಮ್ಮ, ಹೇಮಂತ್ಕುಮಾರ್, ಹೆಚ್.ಎಂ.ರುದ್ರಮುನಿಸ್ವಾಮಿ, ಆರ್.ಪ್ರತಾಪ್, ಪ್ರದೀಪ್ಕುಮಾರ್, ಶಿವನಗೌಡ ಪಾಟೀಲ, ಎಚ್.ಕೆ. ಬಸವರಾಜ್, ನಾಗಣ್ಣ, ವೀರೇಂದ್ರ ಪಾಟೀಲ್, ರುದ್ರೇಗೌಡ, ಕೊಳೆನಹಳ್ಳಿ ಸತೀಶ್, ಎ.ಬಿ. ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು. ಆನೇಕಲ್ ಬಸವರಾಜ್ ಸ್ವಾಗತಿಸಿದರು. ನಾಗರತ್ನ ಪ್ರಾರ್ಥಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








