ದಾವಣಗೆರೆ:
ಕಾರ್ಮಿಕರಿಗೆ ಅನ್ಯಾಯವಾದ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಿ, ಸಲಹೆ-ಮಾರ್ಗದರ್ಶನ ಪಡೆಯುವ ಮೂಲಕ ನ್ಯಾಯವನ್ನು ಪಡೆಯಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಂಬಾದಾಸ್ ಜಿ. ಕುಲಕರ್ಣಿ ಕರೆ ನೀಡಿದರು.
ನಗರದ ಹಳೇ ನ್ಯಾಯಾಲಯಗಳ ಆವರಣದಲ್ಲಿರುವ ಎಡಿಆರ್ ಕಟ್ಟಡದಲ್ಲಿ ಬುಧವಾರ ನೆರಳು ಬೀಡಿ ಕಾರ್ಮಿಕರ ಯೂನಿಯನ್, ಕರ್ನಾಟಕ ಗಾರ್ಮೆಂಟ್ಸ್ ವರ್ಕರ್ಸ್ ಯೂನಿಯನ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ವಕೀಲರ ಸಂಘದಿಂದ ವಿಶ್ವ ಕಾರ್ಮಿಕ ದಿನಾಚರಣೆ ಪ್ರಯುಕ್ತ ಕಾರ್ಮಿಕರಿಗಾಗಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಮಿಕರಿಗೆ ಯಾವುದೇ ರೀತಿಯ ಕಾನೂನು ತೊಡಕುಗಳಾಗುವ ಸಂದರ್ಭದಲ್ಲಿ ಹಾಗೂ ಕಾರ್ಮಿಕ ಇಲಾಖೆಯಿಂದ ಯಾವುದಾದರು ಅನ್ಯಾಯವಾದ ವೇಳೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಿ, ಸಲಹೆ-ಮಾರ್ಗದರ್ಶನ ಪಡೆಯುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಹಾಗೂ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಪ್ರತಿಯೊಬ್ಬ ಕಾರ್ಮಿಕರು ಸಹ ಕಾರ್ಮಿಕರ ಪರವಾಗಿ ಕಾನೂನುಗಳ ಬಗ್ಗೆ ಹಾಗೂ ಸರ್ಕಾರಿ ಸೌಲಭ್ಯಗಳ ಬಗ್ಗೆ ಅರಿವು ಹೊಂದುವ ಮೂಲಕ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಲು ಶ್ರಮಿಸಬೇಕೆಂದು ಸಲಹೆ ನೀಡಿದರು.
ಧರ್ಮ, ಜಾತಿ, ವರ್ಗ, ಭಾಷೆ, ಗಡಿಗಳನ್ನು ದಾಟಿ ಜಗತ್ತಿನಾದ್ಯಂತ ಎಲ್ಲಾ ಕಾರ್ಮಿಕರು ಒಗ್ಗೂಡಿ ಕಾರ್ಮಿಕ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ನಡೆಸಿ, ಹುತಾತ್ಮರಾದವರನ್ನು ಸ್ಮರಿಸುವುದರ ಜೊತೆಗೆ ಹಕ್ಕುಗಳ ಪ್ರತಿಪಾದನೆಗೆ ಕಾರ್ಮಿಕರ ದಿನಾಚರಣೆ ಸೂಕ್ತ ವೇದಿಕೆಯಾಗಿದೆ ಎಂದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಸಾಬಪ್ಪ ಮಾತನಾಡಿ, ದೇಶದಲ್ಲಿ ಅಸಂಘಟಿತ ಕಾರ್ಮಿಕರ ಸಂಖ್ಯೆ ಬಹಳ ದೊಡ್ಡದಿದೆ. ಆದರೆ, ಇವರು ಬಹುತೇಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹೀಗಾಗಿ ಅಸಂಘಟಿತ ಕಾರ್ಮಿಕರು ಸಂಘಟಿತರಾಗುವ ಮೂಲಕ ಹಕ್ಕುಗಳನ್ನು ಪ್ರತಿಪಾದಿಸಿ, ಸೌಲಭ್ಯ ಪಡೆಯಬೇಕೆಂದು ಕಿವಿಮಾತು ಹೇಳಿದರು.
ಸಹಾಯಕ ಕಾರ್ಮಿಕ ಆಯುಕ್ತ ಮಹಮ್ಮದ್ ಜಹೀರ್ ಬಾಷಾ ಮಾತನಾಡಿ, ಬಡತನ ಹಾಗೂ ಅನಕ್ಷರತೆಯ ಕಾರಣದಿಂದ ಬಹುತೇಕ ಕಾರ್ಮಿಕರು ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಕಾರ್ಮಿಕ ಇಲಾಖೆ ಕಾರ್ಮಿಕರ ಹಿತ ಕಾಯುವಲ್ಲಿ ಕಟಿಬದ್ದವಾಗಿದೆ ಎಂದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್.ಅರುಣಕುಮಾರ್ ಮಾತನಾಡಿ, 1886ರ ಮೇ 1 ರಂದು ಚಿಕಾಗೋ ನಗರದಲ್ಲಿ ನಡೆದ ಕಾರ್ಮಿಕ ಹೋರಾಟದಲ್ಲಿ ಹುತಾತ್ಮರಾದ ಸ್ಮರಣಾರ್ಥ ಮೇ 1 ರಂದು ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಕಾರ್ಮಿಕರ ಹಕ್ಕುಗಳನ್ನು ಪಡೆಯಲು ಜಗತ್ತಿನ ಎಲ್ಲಾ ಕಾರ್ಮಿಕರು ಹೋರಾಟ ನಡೆಸಬೇಕಾಗಿದೆ. ಬಂಡವಾಳಶಾಹಿಗಳು ದುಡಿಯುವ ವರ್ಗದ ಬೇವರಿನ ಶ್ರಮವನ್ನು ಲಾಭವಾಗಿ ಪಡೆಯುವ ಮೂಲಕ ದಿನೇ, ದಿನೇ ಶ್ರೀಮಂತರಾಗುತ್ತಿದ್ದಾರೆ. ಆದರೆ, ಕಾರ್ಮಿಕರ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ.
ಈ ತಾರತಮ್ಯ ತೊಲಗಬೇಕಾದರೆ ಕಾರ್ಮಿರು ಐಕ್ಯ ಹೋರಾಟ ನಡೆಸಬೇಕೆಂದು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್, ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾಖಾನಂ, ಕರ್ನಾಟಕ ಗಾರ್ಮೆಂಟ್ಸ್ ವರ್ಕರ್ಸ್ ಯೂನಿಯನ್‍ನ ಕಾರ್ಯದರ್ಶಿ ಎಂ.ಕರಿಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
