ಚಳ್ಳಕೆರೆ
ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ವಿಶೇಷ ಸ್ಥಾನಮಾನವನ್ನು ಕಳೆದ ಹಲವಾರು ವರ್ಷಗಳಿಂದಲೂ ನೀಡಲಾಗುತ್ತಿದೆ. ಮಹಿಳೆಯರ ಬಗ್ಗೆ ಪೂಜ್ಯಭಾವನೆ ಇಂದು ಸಹ ಮುಂದುವರೆದಿದೆ. ಆದರೆ, ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಮಹಿಳೆಯನ್ನು ಹಿಂಸಿಸುವ ಅಮಾನುಷವಾಗಿ ಹತ್ಯೆ ಮಾಡುವ ಪ್ರವೃತಿ ಮುಂದುವರೆದಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾನೂನು ಕಾರ್ಯನಿರ್ವಹಿಸಬೇಕಿದೆ ಎಂದು ನಗರದ ಖ್ಯಾತ ವಕೀಲೆ ಮಧುಮತಿಶಿವಕುಮಾರ್ ತಿಳಿಸಿದರು.
ಅವರು ಸೋಮವಾರ ಇಲ್ಲಿನ ತ್ಯಾಗರಾಜನಗರದಲ್ಲಿರುವ ಲಯನ್ಸ್ ಕ್ಲಬ್‍ನಲ್ಲಿ ಮಹಿಳಾ ಸಮೂಹ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಇಂದು ಮಹಿಳೆ ತನ್ನದೇಯಾದ ಶಕ್ತಿಯನ್ನು ಬೆಳೆಸಿಕೊಂಡಿದ್ದಾಳೆ. ಎಲ್ಲಾ ರಂಗದಲ್ಲೂ ತನ್ನ ಛಾಪನ್ನು ಮೂಡಿಸಿದ್ದಾಳೆ. ಭಾರತೀಯ ಸೈನ್ಯದಲ್ಲಿ ವಾಯುಪಡೆಯಲ್ಲೂ ಸಹ ಕಾರ್ಯನಿರ್ವಹಿಸುತ್ತಿದ್ದಾಳೆ. ರಾಷ್ಟ್ರ ಮಟ್ಟದಲ್ಲಿ ಚಿಂತಿಸುವುದಾದರೆ ನಮ್ಮ ರಕ್ಷಣಾ ಮಂತ್ರಿ ಮಹಿಳೆಯೇ ಆಗಿದ್ಧಾಳೆ. ನಾವು ಮಹಿಳೆಯರು ಹೆಚ್ಚು ತಿಳಿದುಕೊಳ್ಳದೆ ಹಿಂದುಳಿದಿದ್ದೇವೆ.
ಪ್ರತಿನಿತ್ಯ ನಡೆಯುವ ವಿವಿಧ ಮಹಿಳಾ ಸಂಘಗಳ ಕಾರ್ಯಚಟುವಟಿಕೆಗಳ ಬಗ್ಗೆ ನಾವೆಲ್ಲರೂ ಗಮಹರಿಸಬೇಕಿದೆ. ಮಹಿಳೆ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಮಹಿಳೆ ಮೇಲಿನ ಗೌರವ ಮತ್ತಷ್ಟು ಹೆಚ್ಚುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅನ್ನಪೂರ್ಣ ಪ್ರಕಾಶ್ ಮಾತನಾಡಿ, ನಮ್ಮ ರಾಷ್ಟ್ರದ ಇತಿಹಾಸವನ್ನು ಅವಲೋಕಿಸಿದಾಗ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ವಿಶೇಷವಾದ ಕೊಡುಗೆ ನೀಡಿದ ಅನೇಕ ಮಹಿಳೆಯರು ನಮಗೆ ಆದರ್ಶವಾಗುತ್ತಾರೆ. ಧಾರ್ಮಿಕ ಕ್ಷೇತ್ರದಲ್ಲಿ ಶಿವರಣೆ ಅಕ್ಕಮಹಾದೇವಿ, ಶಾರದ ದೇವಿ, ಶೌರ್ಯದಲ್ಲಿ ಕಿತ್ತೂರುರಾಣಿ ಚನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಸಾಧನೆಯಲ್ಲಿ ಕಲ್ಪನಾ ಚಾಲ್ವಾ, ಸಾಮಾಜಿಕ ಸೇವೆಯಲ್ಲಿ ಮದರ್ ತೇರಸರವರ ಕೊಡುಗೆಯನ್ನು ಎಂದೂ ಮರೆಯಲಾಗದು ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಸಂಘದ ಕಾರ್ಯದರ್ಶಿ ಚಂದ್ರಕಲಾಹನುಮಂತಪ್ಪ, ಚನ್ನಮ್ಮರಾಜಶೇಖರಪ್ಪ, ನಗರಸಭಾ ಮಾಜಿ ಸದಸ್ಯೆ ಎಸ್.ಜಾನಕಿ, ಪಿಎಲ್‍ಡಿ ಮಾಜಿ ನಿರ್ದೇಶಕಿ ಸುಭದ್ರಮಂಜುನಾಥ, ಚಿತ್ರಲಿಂಗಪ್ಪ, ಸುಧಾಪ್ರಭು ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
