ಕೊರಟಗೆರೆ
ಗ್ರಾಮೀಣ ಪ್ರದೇಶದ ಯುವಕರು ಕನ್ನಡ ನಾಡು ನುಡಿಯ ಹಬ್ಬ ಮಾಡುತ್ತಿದ್ದಾರೆ. ಪಟ್ಟಣ ಮತ್ತು ನಗರ ಪ್ರದೇಶದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮಗಳು ಇತ್ತೀಚಿನ ದಿನಗಳಲ್ಲಿ ಕುಂಟಿತವಾಗಿದೆ ಎಂದು ಕೊರಟಗೆರೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪವನಕುಮಾರ್ ವಿಷಾದ ವ್ಯಕ್ತಪಡಿಸಿದರು.
ತಾಲ್ಲೂಕಿನ ಕೋಳಾಲ ಹೋಬಳಿ ನೀಲಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ದೊಡ್ಡಪಾಲನಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ತೃತೀಯ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಯುವಕರಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಯಶಸ್ವಿಯಾಗಿದೆ. ನಮ್ಮ ನಾಡಿನ ಯುವಕರು ಸೈನಿಕರಂತೆ ನಾಡಿನ ಪರವಾಗಿ ಒಟ್ಟಾಗಿ ಕೆಲಸ ಮಾಡಬೇಕು. ಕನ್ನಡ ಭಾಷೆಯ ವಿಚಾರವಾಗಿ ರಾಜ್ಯ ಸರಕಾರ ಬೇರೆ ರಾಜ್ಯದ ಹಾಗೇ ಕಟ್ಟುನಿಟ್ಟಿನ ಬಳಕೆಯ ಬಗ್ಗೆ ಕ್ರಮ ಕೈಗೊಂಡು ನೆಲಜಲ ಮತ್ತು ಭಾಷೆಯನ್ನು ರಕ್ಷಣೆ ಮಾಡುವ ಕೆಲಸ ಮಾಡಬೇಕು ಎಂದು ಹೇಳಿದರು.
ನೀಲಗೊಂಡನಹಳ್ಳಿ ಗ್ರಾಪಂ ಸದಸ್ಯ ಉಮೇಶ್ ಮಾತನಾಡಿ, ನಮ್ಮ ದೇಶದ ಗಡಿಯಲ್ಲಿ ಸೈನಿಕರು ದೇಶವನ್ನು ರಕ್ಷಣೆ ಮಾಡುವ ರೀತಿಯಲ್ಲಿ ಕರ್ನಾಟಕದ ಗ್ರಾಮೀಣ ಪ್ರದೇಶದ ಯುವಕರು ನಮ್ಮ ನಾಡಿನ ನೆಲೆ, ಜಲ ಮತ್ತು ಭಾಷೆಯನ್ನು ಕಾಯುವ ಕೆಲಸ ಮಾಡುತ್ತಿದ್ದಾರೆ. ಕನ್ನಡ ನಾಡಿನ ಪ್ರತಿ ಜಿಲ್ಲೆಯಲ್ಲಿ ಕನ್ನಡ ಭಾಷೆಯ ಬಳಕೆಯ ಬಗ್ಗೆ ಸರಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡಿದರು.
ದೊಡ್ಡಪಾಲನಹಳ್ಳಿ ಕರವೇ ಗ್ರಾಮ ಘಟಕದ ಅಧ್ಯಕ್ಷ ಕಿರಣಕುಮಾರ್ ಮಾತನಾಡಿ, ನಮ್ಮ ಗ್ರಾಮದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಿರಿಯರು ಮತ್ತು ಯುವಕರ ಸಹಕಾರ ಸಲಹೆಯಿಂದ ಯಶಸ್ವಿಯಾಗಿದೆ. ಕರುನಾಡಿನ ರಕ್ಷಣೆ ಮತ್ತು ನೆಲ, ಜಲ, ಭಾಷೆಯ ವಿಚಾರವಾಗಿ ನಾವೆಲ್ಲರು ಒಟ್ಟಾಗಿ ಹೋರಾಟ ನಡೆಸುವ ಅಗತ್ಯವಿದೆ ಎಂದು ತಿಳಿಸಿದರು.
ವಾರ್ಷಿಕೋತ್ಸವ ಸಮಾರಂಭದಲ್ಲಿ ಬುರುಗನಹಳ್ಳಿ ಗ್ರಾಮದ ಮಾಜಿ ಸೈನಿಕ ವೀರಭದ್ರಯ್ಯನಿಗೆ ದೊಡ್ಡಪಾಲನಹಳ್ಳಿ ಗ್ರಾಮ ಘಟಕದ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದರು. ಇದೇ ವೇಳೆಯಲ್ಲಿ ತುಮಕೂರು ಶಂಕರ್ ಆರ್ಕೇಸ್ಟ್ರಾ ಕಾರ್ಯಕ್ರಮದ ಮೂಲಕ ಕನ್ನಡಪರ ಹಾಡುಗಳನ್ನು ಹಾಡಿ ಮನರಂಜನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ತಾಪಂ ಸದಸ್ಯ ಬೋರಣ್ಣ, ಗ್ರಾಪಂ ಸದಸ್ಯ, ನಳಿನರಾಜಣ್ಣ, ಮುತ್ತರಾಮಯ್ಯ, ಅಶ್ವತ್ಥಮ್ಮ, ಕಾಮಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಕಂಪ್ಲಯ್ಯ, ಮುಖಂಡರಾದ ಚಂದ್ರಯ್ಯ, ಮುರಳಿಧರ, ನಂದೀಶ್, ಶೆಟ್ಟಳ್ಳಯ್ಯ, ಸಿದ್ದಗಂಗರಾಜು, ಅಶೋಕ, ರಮೇಶ್, ಬಸವರಾಜು, ಮಂಜುನಾಥ, ಸುರೇಶ್, ಕುಮಾರ್, ದೇವರಾಜು, ಹರೀಶ್, ಶಿವಕುಮಾರ್ ಸೇರಿದಂತೆ ಇತರರು ಇದ್ದರು.