ಜು.26 ,27 ರಂದು ಕಾರ್ಗಿಲ್ ವಿಜಯೋತ್ಸವ

ದಾವಣಗೆರೆ:

    ಪ್ರೇರಣಾ ಯುವ ಸಂಸ್ಥೆ ವತಿಯಿಂದ ನಾಳೆ (ಜು.26) ಹಾಗೂ ನಾಡಿದ್ದು (ಜು.27ರಂದು) ನಗರದಲ್ಲಿ 20ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಎಸ್.ಟಿ.ವೀರೇಶ ತಿಳಿಸಿದರು.ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಗಿಲ್ ವಿಜಯೋತ್ಸವದ ಕಾರ್ಯಕ್ರಮದ ಅಂಗವಾಗಿ ನಾಳೆ (ಜು.26ರಂದು) ಬೆಳಗ್ಗೆ 10 ಗಂಟೆಗೆ ನಗರದ ಅಭಿನವ ರೇಣುಕ ಮಂದಿರದಿಂದ ಬೃಹತ್ ಬುಲೆಟ್ ಬೈಕ್ ರ್ಯಾಲಿ ಏರ್ಪಡಿಸಲಾಗಿದ್ದು, ರ್ಯಾಲಿಗೆ ಹಿರಿಯ ನಿವೃತ್ತ ಯೋಧರು ಚಾಲನೆ ನೀಡಲಿದ್ದಾರೆಂದು ಹೇಳಿದರು.

     ಜು.27ರಂದು ಬೆಳಗ್ಗೆ 11 ಗಂಟೆಗೆ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ದೇಶಭಕ್ತಿ ಗೀತೆಗಳ ನೃತ್ಯ ಸ್ಪರ್ಧೆ ನಡೆಯಲಿದೆ. ಸಂಜೆ 5.30ಕ್ಕೆ ವಿಜಯೋತ್ಸವ ಹಾಗೂ ಹುತಾತ್ಮರಿಗೆ ಗೌರವಾರ್ಪಣೆಯ ಸಾರ್ವಜನಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ ಆದರ್ಶ ಗೋಖಲೆ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿವೃತ್ತ ಸೈನಿಕರು ಭಾಗವಹಿಸುವರು.

       ಕಾರ್ಯಕ್ರಮಕ್ಕೆ ಸಾರ್ವಜನಿಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಅವರು ಮನವಿ ಮಾಡಿದರು.
1999ರಲ್ಲಿ ಪಾಕಿಸ್ತಾನದ ಸೈನಿಕರು ಭಾರತದ ಗಡಿಯನ್ನು ದಾಟಿ, ದೇಶದ ಭೂಭಾಗ ಆಕ್ರಮಿಸಿಕೊಂಡು ಅಟ್ಟಹಾಸ ಮೆರೆದಿದ್ದರು. ಆ ಸಂದರ್ಭದಲ್ಲಿ ಭಾರತೀಯ ಸೈನಿಕರು ನುಸುಳುಕೋರರನ್ನು ಹೊಡೆದೋಡಿಸಲು ಆಪರೇಷನ್ ವಿಜಯ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ್ದರು.

      1800 ಅಡಿ ಎತ್ತರದ ಜಗತ್ತಿನ ಅತೀ ಅಪಾಯಕಾರಿ ಯುದ್ಧಭೂಮಿಗಳಲ್ಲಿ ಒಂದಾದ ಕಾರ್ಗಿಲ್ ಯುದ್ಧದಲ್ಲಿ ಭಾರತದ 600ಕ್ಕೂ ಅಧಿಕ ವೀರ ಸೈನಿಕರು ಹುತಾತ್ಮರಾಗಿ, 1200ಕ್ಕೂ ಹೆಚ್ಚು ಮಂದಿ ಅಂಗವಿಕಲರಾಗಿದ್ದರು. ಇಂತಹ ವೀರ ಸೈನಿಕರ ತ್ಯಾಗ, ಬಲಿದಾನ ನೆನಪಿಸಿಕೊಳ್ಳುವ ಜೊತೆಗೆ ಅಭಿನಂದನೆ ಅರ್ಪಿಸುವ ಉದ್ದೇಶದಿಂದ ಕಾರ್ಗಿಲ್ ವಿಜಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಯೋಗೇಶ, ಬಸವರಾಜ, ಶ್ರೀಧರ, ಮೋಹನ ಕುಮಾರ, ರಾಕೇಶ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap