ದಾವಣಗೆರೆ:
ತಿಳುವಳಿಕೆಯ ಕೊರತೆ ಇರುವ ಕಾರ್ಮಿಕರನ್ನು ಮಾಲೀಕರು ನಿತ್ಯವೂ ಶೋಷಿಸುತ್ತಲೇ ದಿನೇ, ದಿನೇ ಶ್ರೀಮಂತರಾಗುತ್ತಿದಾರೆಂದು ಎಸ್‍ಯುಸಿಐಸಿ ರಾಜ್ಯ ಸಮಿತಿ ಸದಸ್ಯ ಸುನೀತ್‍ಕುಮಾರ್ ಅವರು ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ರೋಟರಿ ಬಾಲಭವನದಲ್ಲಿ ಬುಧವಾರ ಎಸ್‍ಯುಸಿಐ ಕಮ್ಯುನಿಷ್ಟ್ ಪಕ್ಷ ಹಾಗೂ ಎಐಯುಟಿಯುಸಿ ಜಿಲ್ಲಾ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ಮುಖ್ಯಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಅವರು, ತಿಳುವಳಿಕೆಯ ಕೊರತೆ ಇರುವ ಹಾಗೂ ಸಂಘಟನೆ ಮತ್ತು ಹೋರಾಟದ ಮನೋಭಾವವಿಲ್ಲದ ಕಾರ್ಮಿಕರನ್ನು ಮಾಲೀಕರು ನಿತ್ಯವೂ ಶೋಷಣೆ ಶೋಷಣೆ ಮಾಡುತ್ತಾ ಬರುವ ಮೂಲಕ ದಿನೇದಿನೇ ತಮ್ಮ ಸಂಪತ್ತನ್ನು ವೃದ್ಧಿಸಿಕೊಳ್ಳುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಕನಿಷ್ಠ ಕರುಣೆಯೂ ಇಲ್ಲದ ಮಾಲೀಕರಿಗೆ ಕಾರ್ಮಿಕರ ಶಕ್ತಿ ಮಾತ್ರ ಬೇಕಾಗಿದೆ. ದಿನದ ಎಷ್ಟು ಗಂಟೆಯಾದರೂ, ಎಷ್ಟು ದಿನವಾದರೂ ಮಾಲೀಕ ಪುಡಿ ಗಾಸು ಚೆಲ್ಲಿ ಕಾರ್ಮಿಕರಿಂದ ಕೆಲಸ ಮಾಡಿಸಿಕೊಳ್ಳುತ್ತಾರೆ. ಆದರೆ, ಪ್ರತಿ ಸಮಾಜಿಕ ಸಂಪತ್ತಿನ ಉತ್ಪಾದನೆಯ ಹಿಂದೆ ಶ್ರಮಿಕ ಶಕ್ತಿ ಅಡಗಿದ್ದು, ಶ್ರಮಿಕರ ಬದುಕು ಮಾತ್ರ ಇಂದಿಗೂ ಶೋಚನೀಯ ಸ್ಥಿತಿಯಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಂಡವಾಳಶಾಯಿಗಳು, ಕಾರ್ಖಾನೆಗಳು, ಯಂತ್ರಗಳಷ್ಟೇ ಇದ್ದರೆ, ಯಾವುದೇ ಸಂಪತ್ತು ಉತ್ಪಾದನೆಯಾಗಲು ಸಾಧ್ಯವೇ ಇಲ್ಲ. ಯಾವುದೇ ಒಂದು ಉತ್ಪನ್ನ ತಯಾರಿಸಬೇಕಾದರೆ, ಕಾರ್ಮಿಕರ ಶಕ್ತಿ ಅತ್ಯವಶ್ಯವಾಗಿ ಬೇಕಾಗಿದೆ. ಕಾರ್ಮಿಕರು ತಮ್ಮ ಶ್ರಮಶಕ್ತಿಯನ್ನು ವಿನಿಯೋಗಿಸಿ ಸಮಾಜಕ್ಕೆ ಸಾಮಾಜಿಕ ಸಂಪತ್ತು ಉತ್ಪಾದಿಸಿ ಕೊಡುತ್ತಿದ್ದಾರೆ. ಆದರೆ, ಕಾರ್ಮಿಕರ ಶ್ರಮಕ್ಕೆ ಫಲವಾಗಿ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಆರೋಪಿಸಿದರು.
ದಿನದಲ್ಲಿ 8 ಗಂಟೆ ಕೆಲಸ, 8 ಗಂಟೆ ವಿಶ್ರಾಂತಿ ಹಾಗೂ ಇನ್ನುಳಿದ 8 ಗಂಟೆ ತಮ್ಮ ಸಾಮಾಜಿಕ ಬದುಕಿಗೆ ಬೇಕೆಂಬ ಪ್ರಜ್ಞೆ ಮೂಡಿದ ಕಾರ್ಮಿಕರು, ತಮ್ಮನ್ನು ಜೀತದಾಳುಗಳಿಗಿಂತಲೂ ಕೀಳಾಗಿ ದುಡಿಸಿಕೊಳ್ಳುವ ದುಷ್ಟ ಮಾಲೀಕರ ವಿರುದ್ಧ 1886ರ ಮೇ 1ರಂದು ಅಮೇರಿಕಾದ ಚಿಕಾಗೋ ನಗರದಲ್ಲಿ ಬೃಹತ್ ಹೋರಾಟ ನಡೆಸಿದರು. ಅಂದು ಹೊತ್ತಿದ ಕಾರ್ಮಿಕರ ಹೋರಾಟದ ಕಿಡಿ ಇಂದಿಗೂ ಆರಿಲ್ಲ.
ಆದ್ದರಿಂದಲೇ ಮೇ 1 ಕೆಂಪು ದಿನ, ಕಾರ್ಮಿಕರ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ದುಡಿಯುವ ವರ್ಗದ ಪ್ರತಿಯೊಬ್ಬರೂ ಕಾರ್ಮಿಕರ ಹಕ್ಕು ಹಾಗೂ ಹೋರಾಟಗಳ ಕುರಿತು ಅರಿಯಬೇಕು. ಇಡೀ ಜಗತ್ತಿನಲ್ಲಿ ಜಾತಿ, ಮತ, ಪಂಥಗಳ ಭೇದ ಮರೆತು ಆಚರಿಸುವ ದಿನ ಯಾವುದಾದರು ಇದ್ದರೇ, ಅದು ಮೇ ದಿನಾಚರಣೆ, ಕಾರ್ಮಿಕ ದಿನಾಚರಣೆ ಮಾತ್ರ.
ಎರಡು ನೂರು ವರ್ಷಗಳ ಕಾಲ ನಮ್ಮನ್ನಾಳಿದ ಸೂರ್ಯ ಮೂಳಗದ ಸಾಮ್ರಾಜ್ಯವೆಂದೇ ಖ್ಯಾತಿ ಪಡೆದಿದ್ದ ಬ್ರಿಟನ್, ನಮ್ಮ ವೈರಿ ದೇಶ ಪಾಕಿಸ್ತಾನ ಸೇರಿದಂತೆ ಎಲ್ಲಾ ರಾಷ್ಟ್ರಗಳಲ್ಲೂ ಎಲ್ಲಾ ರೀತಿಯ ಭೇದ ಮರೆತು ಇಂದು ಕಾರ್ಮಿಕ ದಿನಾಚರಣೆ ಆಚರಿಸುತ್ತಿದ್ದಾರೆ. ಇದಕ್ಕೆ ಕಾರ್ಮಿಕರ ಸಂಘಟಿತ ಹೋರಾಟವೇ ಮುಖ್ಯ ಕಾರಣವಾಗಿದ್ದು, ಕಾರ್ಮಿಕರು ತಮ್ಮ ಹಕ್ಕು, ಸೌಲಭ್ಯಗಳನ್ನು ಪಡೆಯಲು ಸಂಘಟಿತ ಹೋರಾಟ ನಡೆಸಬೇಕೆಂದು ಕರೆ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ಎಐಯುಟಿಯುಸಿ ಜಿಲ್ಲಾ ಸಂಘಟನಾಕಾರ ತಿಪ್ಪೇಸ್ವಾಮಿ ಅಣಬೇರು, ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ, ದಿನಕ್ಕೆ 8 ಗಂಟೆ ಕೆಲಸಕ್ಕಾಗಿ ಕಾರ್ಮಿಕ ಸಂಘಟನೆಗಳು ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಿವೆ. ಇದರ ಫಲವಾಗಿ ಹಲವು ಕಾರ್ಮಿಕ ಪರ ಕಾಯ್ದೆಗಳು ಜಾರಿಗೆ ಬಂದಿವೆ. ಆದರೆ, ಕೈಗಾರಿಕೆಗಳ ಮಾಲೀಕರು ಕಾನೂನುಗಳನ್ನು ಸರಿಯಾಗಿ ಪಾಲಿಸದೇ, ಕಾರ್ಮಿಕರನ್ನು ವಂಚಿಸಿಕೊಂಡು ಬಂದಿದ್ದಾರೆ. ಇವರಿಗೆ ಆಳುವ ಸರ್ಕಾರಗಳು ಸಹ ಕುಮ್ಮಕ್ಕು ನೀಡುತ್ತಲೇ ಬಂದಿವೆ ಎಂದು ಆರೋಪಿಸಿದರು.
ಆಳುವ ಸರ್ಕಾರಗಳಿಗೆ ಹಾಗೂ ಕೈಗಾರಿಕೆಗಳ ಮಾಲೀಕರಿಗೆ ಚುರುಕು ಮುಟ್ಟಿಸಬೇಕಾದರೆ, ದುಡಿಯುವ ವರ್ಗದ ಜನರು ಸಂಘಟಿತರಾಗಿ ಒಗ್ಗೂಡುವ ಮೂಲಕ ಐಕ್ಯ ಹೋರಾಟ ಕಟ್ಟುವ ಮೂಲಕ ಬಲಿಷ್ಠರಾಗಬೇಕೆಂದು ಕರೆ ನೀಡಿದರು. ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕುಕ್ಕುವಾಡ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ವಸತಿ ನಿಲಯ ಕಾರ್ಮಿಕರ ಸಂಘದ ಸ್ವಾಮಿಲಿಂಗಪ್ಪ, ರಾಜ್ಯ ಸಂಯುಕ್ತ ಆಶಾಕಾರ್ಯಕರ್ತೆಯರ ಸಂಘದ ಅನಿತಾ, ಹೊರಗುತ್ತಿಗೆನೌಕರರ ಸಂಘದ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.