4 ಕೋಟಿ ರೂ. ವೆಚ್ಚದಲ್ಲಿ ಕಾರ್ಮಿಕ ಭವನ ನಿರ್ಮಾಣ

ತುಮಕೂರು

     ಕಾರ್ಮಿಕರ ಸುರಕ್ಷತಾ ದೃಷ್ಟಿಯಿಂದ ಮತ್ತು ಕಾರ್ಮಿಕರ ಹಿತಾಸಕ್ತಿಯ ಉದ್ದೇಶದಿಂದ 4 ಕೋಟಿ ರೂ. ವೆಚ್ಚದಲ್ಲಿ ಕಾರ್ಮಿಕ ಭವನ ನಿರ್ಮಾಣ ಮಾಡಲಾಗುತ್ತದೆ ಎಂದು ಸಂಸದ ಎಸ್.ಪಿ.ಮುದ್ದಹನುಮೆಗೌಡ ತಿಳಿಸಿದರು.

      ನಗರದ ವಿಶ್ವವಿದ್ಯಾನಿಲಯ ಆವರಣದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸುರಕ್ಷತಾ ಸಂಸ್ಥೆ, ರಾಷ್ಟ್ರೀಯ ಸುರಕ್ಷತಾ ಪರಿಷತ್, ಬಾಯ್ಲರ್‍ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ 48 ನೆ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದವರು.

        ಕಾರ್ಮಿಕರ ಸುರಕ್ಷತೆ, ಆರೋಗ್ಯ ಮತ್ತು ಪರಿಸರ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಕಾರ್ಮಿಕರ ಹಿತಾಸಕ್ತಿ ದೇಶದ ಆರ್ಥಿಕ ಸದೃಢತೆಯ ದೃಷ್ಟಿಯಿಂದ ಅತ್ಯವಶ್ಯಕವಾಗಿದ್ದು, ತುಮಕೂರಿನಲ್ಲಿ 4 ಕೋಟಿ ರೂ. ವೆಚ್ಚದ ಕಾರ್ಮಿಕ ಭವನ ನಿರ್ಮಾಣ ಮಾಡಲಾಗುತ್ತದೆ. ಈ ಬಗ್ಗೆ ಕಾರ್ಮಿಕ ಸಚಿವರ ಜೊತೆಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

       ಕಾರ್ಮಿಕರ ಸುರಕ್ಷತಾ ವಿಚಾರದಲ್ಲಿ ಕಂಪನಿಗಳು ಯಾವುದೆ ರಾಜಿ ಮಾಡಿಕೊಳ್ಳಬಾರದು. ಉದ್ದಿಮೆದಾರರು ಕನಿಷ್ಠ ಸುರಕ್ಷತಾ ಕ್ರಮಗಳನ್ನು ಕಾರ್ಮಿಕರಿಗೆ ಒದಗಿಸಲೇಬೇಕು. ಈ ನಿಟ್ಟಿನಲ್ಲಿ ಕಾರ್ಮಿಕರ ಮತ್ತು ಜಿಲ್ಲೆಯ ಜನತೆಯ ಹಿತದೃಷ್ಟಿಯಿಂದ ತುಮಕೂರಿನಲ್ಲಿ ದೊಡ್ಡ ಹೈಟೆಕ್ ಇಎಸ್‍ಐ ಆಸ್ಪತ್ರೆಯನ್ನು ನಿರ್ಮಾಣ ಮಾಡಲಿದ್ದೇವೆ. ಕಾರ್ಖಾನೆಗಳಲ್ಲಿ ಕಾರ್ಮಿಕರಿಗೆ ಸುರಕ್ಷತಾ ವಿಧಾನಗಳ ಬಗ್ಗೆ ತರಬೇತಿ ನೀಡದಿರುವುದು, ಸುರಕ್ಷತಾ ವಿಧಾನ ಪಾಲಿಸದಿರುವುದು, ಸುರಕ್ಷತಾ ಸಾಧನ- ಸಲಕರಣೆ ನೀಡದಿರುವುದು ಹಾಗೂ ಕಾರ್ಮಿಕರ ಅತಿಯಾದ ಆತ್ಮ ವಿಶ್ವಾಸ ಅಪಘಾತಕ್ಕೆ ಕಾರಣವಾಗುತ್ತದೆ. ಹೀಗಾಗಿ ಕಂಪನಿಯಲ್ಲಿ ದುಡಿಯುವ ಕಾರ್ಮಿಕರಿಗೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.

       ತುಮಕೂರಿನ ಮೆ. ಕರ್ನ್ ಲೇಬರ್ಸ್ ಪ್ರೈವೆಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಉವೆ ಜಾರ್ಜ್ ಫಿಶರ್ ಮಾತನಾಡಿ, ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಆರೋಗ್ಯ ಮತ್ತು ರಕ್ಷಣೆ ಅತ್ಯವಶ್ಯಕವಾಗಿದೆ. ಯಾವುದೇ ಅಪಘಾತ, ಅವಘಡ ಸಂಭವಿಸದಂತೆ ಮುಂಜಾಗ್ರತಾ ಕ್ರಮ ವಹಿಸಬೇಕಿದೆ. ಅಪಘಾತಗಳು ನಡೆದಾಗ ರಕ್ಷಣೆ ಮಾಡುವುದರ ಬಗ್ಗೆ ಚಿಂತನೆ ಮಾಡುವುದರ ಬದಲಾಗಿ ಸುರಕ್ಷತಾ ಕ್ರಮಗಳನ್ನು ಅಳವಡಿಸಕೊಳ್ಳುವುದು ಉತ್ತಮ. ಈ ಹಿನ್ನೆಲೆಯಲ್ಲಿ ಕಾರ್ಖಾನೆಗಳ ಆಡಳಿತ ಮಂಡಳಿ ಕಾರ್ಮಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಕಾರ್ಮಿಕರ ರಕ್ಷಣೆಗೆ ಇರುವ ನೀತಿ-ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

         ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಕಂಪನಿ, ಕಾರ್ಖಾನೆಗಳ ಮುಖ್ಯ ಉದ್ದೇಶ ಕೇವಲ ಲಾಭಕ್ಕೆ ಮಾತ್ರ ಸೀಮಿತವಾಗಬಾರದು. ಬದಲಾಗಿ ಕಂಪನಿಯಲ್ಲಿ ದುಡಿಯುತ್ತಿರುವ ಕಾರ್ಮಿಕರ ಸುರಕ್ಷತೆಯ ಬಗ್ಗೆ ಹೆಚ್ಚು ಗಮನಹರಿಸಬೇಕು. ಯಾವುದೇ ಅವಘಡ ಸಂಭವಿಸದಂತೆ ಮುಂಜಾಗ್ರತೆಯಾಗಿ ಸುರಕ್ಷತಾ ಸಲಕರಣೆಗಳನ್ನು ಒದಗಿಸಬೇಕು ಎಂದರಲ್ಲದೆ, ತುಮಕೂರು ಜಿಲ್ಲೆ ಮುಂದಿನ ದಿನಗಳಲ್ಲಿ ದೊಡ್ಡ ಕೈಗಾರಿಕಾ ಹಬ್ ಆಗಿ ನಿರ್ಮಾಣವಾಗಲಿದೆ. ಆ ಮೂಲಕ ಜಿಲ್ಲೆಯ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಲಿದೆ. ಇದರ ಜೊತೆಗೆ ಈಗ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಸೂಕ್ತ ಭದ್ರತೆ ಅವಶ್ಯಕವಿದ್ದು, ಆಡಳಿತ ಮಂಡಳಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಆಗ ಮಾತ್ರ ಕಾರ್ಮಿಕರ ಮತ್ತು ಕುಟುಂಬದ ರಕ್ಷಣೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

       ಪ್ರಾಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ರಾಜ್ಯ ಸುರಕ್ಷತಾ ಸಂಸ್ಥೆಯ ಕಾರ್ಯದರ್ಶಿ ಹಾಗೂ ಕಾರ್ಖಾನೆ, ಬಾಯ್ಲರ್‍ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ನಿರ್ದೇಶಕರಾದ ಎಸ್.ಪಾಲಯ್ಯ ಮಾರ್ಚ್ 4 ಅನ್ನು ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯಾಗಿ ಆಚರಿಸುತ್ತೇವೆ. ಕಾರ್ಮಿಕರ ಸುರಕ್ಷತೆಯನ್ನು ಕಾಪಾಡುವುದನ್ನೇ ಪ್ರಮುಖ ಉದ್ದೇಶವಾಗಿಟ್ಟುಕೊಂಡು 1966 ರ ಮಾರ್ಚ್ 4 ರಂದು ಸ್ಥಾಪನೆ ಮಾಡಲಾಯಿತು. ಈ ಸಂಸ್ಥೆಯು ಒಂದು ಸ್ವಯಂ ಸ್ವಾಯತ್ತ ಸಂಸ್ಥೆಯಾಗಿದ್ದು, 1971 ರಿಂದ ಪ್ರತಿವರ್ಷ ರಾಷ್ಟ್ರೀಯ ಸುರಕ್ಷತಾ ಪರಿಷತ್ತಿನ ಸ್ಥಾಪನಾ ದಿನದ ಗೌರವಾರ್ಥವಾಗಿ ರಾಷ್ಟ್ರಾದ್ಯಂತ ವಿವಿಧ ಮಟ್ಟದಲ್ಲಿ ರಾಷ್ಟ್ರೀಯ ಸುರಕ್ಷತಾ ದಿನವನ್ನಾಚರಣೆ ಮಾಡಲಾಗುತ್ತಿದೆ ಎಂದರು.

      ದೇಶದ ಸಂವಿಧಾನದ ಪ್ರಕಾರ ಪ್ರತಿಯೊಬ್ಬ ಕಾರ್ಖಾನೆ ಉದ್ದಿಮೆದಾರರು ಕಾರ್ಮಿಕರ ಯೋಗಕ್ಷೇಮ ಕಾಪಾಡುವುದು ಪ್ರಮುಖ ಕರ್ತವ್ಯವಾಗಿದೆ. ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ಕಾರ್ಮಿಕರ ಸ್ಥಿತಿಗತಿಗಳನ್ನು ಅವಲೋಕಿಸಿದಾಗ ಕಾರ್ಖಾನೆಗಳಲ್ಲಿ ನೇಮಕಗೊಂಡ ಬಹುತೇಕ ಮಂದಿ ಕಾರ್ಮಿಕರು ಶೋಷಣೆಗೆ ಒಳಪಟ್ಟಿರುವುದು ಹಾಗೂ ಬಾಲ ಕಾರ್ಮಿಕರನ್ನು ತೊಡಗಿಸಿಕೊಂಡಿರುವುದು ತಿಳಿದು ಬಂದಿದ್ದು, ಇಂತಹ ಕಾರ್ಮಿಕರಿಗೆ ಕನಿಷ್ಠ ಸುರಕ್ಷತೆಯನ್ನು ಕೂಡ ಒದಗಿಸದೇ ಇರುವುದು ಶೋಚನೀಯ ಎಂದರು.

         ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ, ನ್ಯಾಷನಲ್ ಸೇಫ್ಟಿ ಕೌನ್ಸಿಲ್‍ನ ಕರ್ನಾಟಕ ಶಾಖೆಯ ಅಧ್ಯಕ್ಷರಾದ ಗುಂಡಪ್ಪ, ಮ್ಯಾನ್ ಅಂಡ್ ಹುಮೆಲ್ ಪ್ರೈವೇಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ರಾಂಧವ, ಟಿಮೆಕ್ ಇಂಡಸ್ಟ್ರಿಯಲ್ ಸಿಸ್ಟಂಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರಾದ ಹೇಮಂತ್‍ಜೋಶಿ, ಕಾರ್ಖಾನೆಗಳ ಉಪ ನಿರ್ದೇಶಕರ ಕಚೇರಿಯ ಕಾರ್ಯನಿರ್ವಾಹಕ ಮತ್ತು ಆಡಳಿತ ಸಹಾಯಕ ಎಂ.ಸಿ.ನರಸಿಂಹಯ್ಯ, ಸ್ವಾಸ್ಥ್ಯ ಇಲಾಖೆಯ ಅಪರ ನಿರ್ದೇಶಕ ಬಿ.ವಿ.ರವಿಕುಮಾರ್, ಆರ್.ಕೆ.ಪಾರ್ಥಸಾರಥಿ, ಗುಂಡಪ್ಪ, ಬಸವರಾಜು, ಡಿ.ಜಗದೀಶ್, ಗೋವಿಂದರಾಜು ಉಪಸ್ಥಿತರಿದ್ದರು.

       ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕ ಎನ್.ಎಸ್.ಗೋವಿಂದರಾಜು ಅವರು ರಚಿಸಿದ ಕಾರ್ಮಿಕ ಬಾಂಧವ್ಯಗಳ ಯಶಸ್ವಿ ನಿರ್ವಹಣೆ ಎಂಬ ಪುಸ್ತಕವನ್ನು ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ಸುರಕ್ಷತಾ ಸಂಸ್ಕøತಿಯನ್ನು ಬೆಳೆಸಿ ಮತ್ತು ಉಳಿಸಿ ಎಂಬ ಧ್ಯೇಯ ವಾಕ್ಯದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ವಿವಿಧ ಕಂಪನಿಗಳಿಗೆ ಪ್ರಶಸ್ತಿ ಪ್ರದಾನ:
         ಉತ್ಕೃಷ್ಟ ಮಟ್ಟದ ಸುರಕ್ಷತಾ ಪದ್ಧತಿಗಳನ್ನು ಅನುಸರಿಸುತ್ತಿರುವ ಮತ್ತು ಉತ್ತಮ ಕಾರ್ಯಕ್ಷಮತೆಯಿಂದ ಬಾಯ್ಲರುಗಳನ್ನು ನಿರ್ವಹಿಸುತ್ತಿರುವ ಕಾರ್ಖಾನೆಗಳನ್ನು ಗುರುತಿಸಿ ರಾಜ್ಯ ಮಟ್ಟದ ಸುರಕ್ಷತಾ ಪ್ರಶಸ್ತಿಗಳನ್ನು ಸಮಾರಂಭದಲ್ಲಿ ನೀಡಲಾಯಿತು. ಜೊತೆಗೆ ಉತ್ತಮ ಕಾರ್ಮಿಕ ಪ್ರಶಸ್ತಿ, ಕಾರ್ಮಿಕ ಸೇವಾರತ್ನ ಪ್ರಶಸ್ತಿ ಹಾಗೂ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು.

ಒಂದೇ ಸೂರಿನಡಿ ಕಾರ್ಮಿಕರು, ಅಧಿಕಾರಿಗಳು, ಆಡಳಿತ ಮಂಡಳಿ:

         ತುಮಕೂರು ವಿಶ್ವವಿದ್ಯಾನಿಲಯದ ಶ್ರೀ ಶಿವಕುಮಾರಮಹಾಸ್ವಾಮಿಗಳ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಅಂಗವಾಗಿ ಸಾಕಷ್ಟು ಮಂದಿ ಕಾರ್ಮಿಕರು ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಕಂಪನಿಗಳ ಆಡಳಿತ ಮಂಡಳಿಯವರು ಒಂದೇ ಸೂರಿನಡಿ ಭೇಟಿಯಾದರು.

          ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಬೇಕಾದ ಸೌಲಭ್ಯಗಳು, ಸುರಕ್ಷತೆಯ ಬಗ್ಗೆ ಅವರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಪ್ರಾಂಗಣದಲ್ಲಿ ವಿವಿಧ ಕಂಪನಿಗಳ ಮಳಿಗೆಗಳನ್ನು ತೆರೆಯಲಾಗಿದ್ದು, ಕಾರ್ಮಿಕರಿಗೆ ಅವಶ್ಯಕವಿರುವ ಸುರಕ್ಷತಾ ಪರಿಕರಗಳ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು.

           ಜೊತೆಗೆ ಕಾರ್ಮಿಕರು ಬಳಸುವ ಪಾದರಕ್ಷೆಗಳಲ್ಲಿ ವಿವಿಧ ಬಗೆಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಅದೇ ರೀತಿ ತುಮಕೂರಿನ ಫುಡ್‍ಪಾರ್ಕ್‍ನ ಮಳಿಗೆಯನ್ನು ತೆರೆಯಲಾಗಿದ್ದು ಅಲ್ಲಿ ತಯಾರು ಮಾಡಲಾಗುವ ಆಹಾರ ಪದಾರ್ಥಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಬಾಯ್ಲರ್ ಕೆಲಸಕ್ಕೆ ಸಂಬಂಧಿಸಿದ ಪರಿಕರಗಳು, ಗ್ಲೌಸ್‍ಗಳು, ಮಾಸ್ಕ್ ಸೇರಿದಂತೆ ಇನ್ನಿತರ ಪರಿಕರಗಳ ಪ್ರದರ್ಶನದ ಜೊತೆಗೆ ಅದರ ಸಂಪೂರ್ಣ ಮಾಹಿತಿ ತಿಳಿಸುತ್ತಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap