ಕಾರ್ಮಿಕರ ಮೇಲೆ ಗುಲಾಮಗಿರಿ ಪದ್ದತಿಗೆ ಬಿಡೆವು

ಚಿತ್ರದುರ್ಗ:

     ದೇಶಕ್ಕೆ ಅನ್ನ ನೀಡುವ ರೈತ, ದುಡಿಯುವ ಕಾರ್ಮಿಕ ವರ್ಗ ಹಾಗೂ ಮಹಿಳೆಯರನ್ನು ವಿರೋಧಿಸುವ ಯಾವ ಸರ್ಕಾರವನ್ನು ಅಧಿಕಾರದಲ್ಲಿ ಇರಲು ನಾವು ಬಿಡುವುದಿಲ್ಲ ಎಂದು ಎ.ಐ.ಟಿ.ಯು.ಸಿ.ರಾಜ್ಯ ಮಂಡಳಿ ಪ್ರಧಾನ ಕಾರ್ಯದರ್ಶಿ ಡಿ.ಎ.ವಿಜಯಭಾಸ್ಕರ್ ಕೋಮುವಾದಿ ಬಿಜೆಪಿ.ಯನ್ನು ಎಚ್ಚರಿಸಿದರು.

      ಎ.ಐ.ಟಿ.ಯು.ಸಿ. ಜಿಲ್ಲಾ ಕಾರ್ಮಿಕರ ಸಾಮೂಹಿಕ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ದಾವಣಗೆರೆ ರಸ್ತೆಯಲ್ಲಿರುವ ಎ.ಐ.ಟಿ.ಯು.ಸಿ. ಕಚೇರಿ ಮುಂಭಾಗ ಬುಧವಾರ ನಡೆದ ಮೇ 1 ಹಾಗೂ ಹುತಾತ್ಮರ 42 ನೇ ಕಾರ್ಮಿಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

        ನೂರು ವರ್ಷಗಳ ಇತಿಹಾಸವಿರುವ ಕಾರ್ಮಿಕರ ಹೋರಾಟದ ಫಲವಾಗಿ ವಾಜಪೇಯಿ, ಮನಮೋಹನ್‍ಸಿಂಗ್, ನರಸಿಂಹರಾವ್‍ರವರು ಅಧಿಕಾರ ಕಳೆದುಕೊಂಡು ಪ್ರಧಾನಿ ಹುದ್ದೆಯಿಂದ ಕೆಳಗಿಳಿದರು. ಈಗಿನ ಪ್ರಧಾನಿ ನರೇಂದ್ರಮೋದಿ ಕೂಡ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸೋತು ಅಧಿಕಾರವನ್ನು ಕಳೆದುಕೊಳ್ಳುವುದರಲ್ಲಿ ಅನುಮಾನವಿಲ್ಲ. ಬಿಜೆಪಿ.ಗೆ ನೂರು ಸೀಟು ಬರಲ್ಲ ಎಂದು ಕೆಲವು ಸಮೀಕ್ಷೆಗಳು ಹೇಳಿವೆ. ಗುಲಾಮಗಿರಿ ಪದ್ದತಿಯನ್ನು ದೇಶದ ಕಾರ್ಮಿಕರ ಮೇಲೆ ಹೇರಲು ನಾವುಗಳು ಬಿಡುವುದಿಲ್ಲ.

        ಕೋಮುವಾದಿ ಬಿಜೆಪಿ. ಮುಸಲ್ಮಾನರು ಹಾಗೂ ಹಿಂದುಳಿದವರನ್ನು ದ್ವೇಷಿಸುವುದೇ ದೇಶಪ್ರೇಮ ಎಂದುಕೊಂಡಿದೆ. ಒಂದುವರೆ ಸಾವಿರ ರೈತರ ಭೂಮಿಯನ್ನು ಕಿತ್ತುಕೊಂಡು ಮೋದಿ ಅಂಬಾನಿಗೆ ನೀಡಿದ್ದಾರೆ. ಐದುನೂರು ಹಾಗೂ ಒಂದು ಸಾವಿರ ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ್ದರಿಂದ ಉದ್ಯಮಿಗಳು, ಬಂಡವಾಳಶಾಹಿಗಳು, ರಿಯಲ್ ಎಸ್ಟೇಟ್ ದಂಧೆ ನಡೆಸುವವರು ಡಾಲರ್, ಕರೆನ್ಸಿ, ಚಿನ್ನದ ರೂಪದಲ್ಲಿ ಕಪ್ಪು ಹಣವನ್ನು ಬಿಳಿ ಹಣವನ್ನಾಗಿಸಿಕೊಂಡಿರುವುದು ಬಿಟ್ಟರೆ ಬಡವರಿಗೆ ಇದರಿಂದ ಯಾವ ಲಾಭವೂ ಆಗಿಲ್ಲ ಎಂದು ಮೋದಿ ಏಕಚಕ್ರಾಧಿಪತ್ಯ ನಡೆಯನ್ನು ಖಂಡಿಸಿದರು.

       ವಿದೇಶಗಳಲ್ಲಿರುವ ಕಪ್ಪು ಹಣವನ್ನು ತಂದು ದೇಶದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ರೂ.ಗಳನ್ನು ಜಮಾ ಮಾಡುವುದಾಗಿ ಬಡವರನ್ನು ನಂಬಿಸಿ ಕೊನೆಗೆ ಮೋದಿ ನೋಟುಗಳ ಚಲಾವಣೆಯನ್ನು ರದ್ದುಪಡಿಸಿದ್ದರಿಂದ ಪೊಲೀಸ್ ಲಾಠಿ ಚಾರ್ಜ್ ಆಯಿತು, ಬೆಳಗಿನಿಂದ ಸಂಜೆಯತನಕ ಬ್ಯಾಂಕ್ ಎದುರು ಕ್ಯೂನಲ್ಲಿ ನಿಂತು ಸತ್ತವರು ಬಡವರು. ಮಧ್ಯಮ ವರ್ಗದವರು ಮಾತ್ರ. ಶ್ರೀಮಂತರು ಯಾರು ಬ್ಯಾಂಕಿನ ಮುಂದೆ ಹಣಕ್ಕಾಗಿ ಸಾಲಿನಲ್ಲಿ ನಿಲ್ಲಲಿಲ್ಲ. ಜಿ.ಎಸ್.ಟಿ.ಜಾರಿಯಿಂದ ವಿವಿಧ ವಲಯಗಳಲ್ಲಿ ಹನ್ನೆರಡು ಕೋಟಿಗೂ ಹೆಚ್ಚು ಉದ್ಯೋಗಗಳನ್ನು ಕಳೆದುಕೊಳ್ಳಬೇಕಾಯಿತು. ಅಂಬಾನಿ, ಅದಾನಿ ಪರವಾಗಿರುವ ಮೋದಿರವರ ಫಸಲ್‍ಭೀಮ ಯೋಜನೆ ರಫೇಲ್ ಹಗರಣಕ್ಕಿಂತಲೂ ಮಿಗಿಲಾದುದು ಎಂದು ಕಿಡಿ ಕಾರಿದರು.

      ಉದಾರಿಕರಣ, ಜಾಗತೀಕರಣ, ಖಾಸಗಿಕರಣವನ್ನು ಜಾರಿಗೆ ತಂದಿದ್ದು, ಕಾಂಗ್ರೆಸ್ ಪಕ್ಷ. ಹಾಗಾಗಿ ಯಾರೆ ಕಾರ್ಮಿಕರ ವಿರೋಧಿ ನೀತಿ ಅನುಸರಿಸಲಿ ಅವರನ್ನು ಅಧಿಕಾರದಲ್ಲಿ ಕೂರಲು ಬಿಡುವುದಿಲ್ಲ. ದೇಶದಲ್ಲಿ ಇದುವರೆವಿಗೂ ಮೂರು ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 1991 ರಿಂದ ಇಲ್ಲಿಯವರೆಗೆ ಇಪ್ಪತ್ತು ರಾಷ್ಟ್ರೀಯ ಮುಷ್ಕರಗಳನ್ನು ಮಾಡಿದ್ದೇವೆ. ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ದಬ್ಬಾಳಿಕೆ ಮಾಡಲು ಹೊರಟಿರುವ ಮೋದಿಯನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಿ ರೈತ, ಕಾರ್ಮಿಕರ ಹಾಗೂ ಮಹಿಳೆಯರ ಪರವಾಗಿರುವ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬುದು ನಮ್ಮ ಹೋರಾಟದ ಮೂಲ ಉದ್ದೇಶ ಎಂದು ಹೇಳಿದರು.
ರಸ್ತೆ ಅಗಲೀಕರಣದ ಹೆಸರಿನಲ್ಲಿ ಮರ-ಗಿಡಗಳನ್ನು ಕಡಿಯುವುದು ಸರಿಯಲ್ಲ. ಇದರಿಂದ ಸಕಾಲಕ್ಕೆ ಮಳೆ-ಬೆಳೆಯಾಗದೆ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಲಿದೆ. ಇದರ ವಿರುದ್ದವೂ ನಮ್ಮ ಹೋರಾಟ ನಡೆಯಲಿದೆ ಎಂದರು.

       ಎ.ಪಿ.ಎಂ.ಸಿ.ಹಮಾಲರ ಸಂಘದ ಅಧ್ಯಕ್ಷ ಕಾಂ.ಬಿ.ಬಸವರಾಜ್ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೊದಲಿನಿಂದಲೂ ಕಾರ್ಮಿಕರನ್ನು ಕಡೆಗಣಿಸುತ್ತಲೆ ಬರುತ್ತಿವೆ. ಕಾರ್ಮಿಕ ಕಾಯಿದೆಗೆ ತಿದ್ದುಪಡಿ ತರಲು ಹೊರಟಿರುವ ಪ್ರಧಾನಿ ಮೋದಿರವರಿಗೆ ಈ ಬಾರಿಯ ಚುನಾವಣೆಯಲ್ಲಿ ದೇಶದ ಜನ ತಕ್ಕಪಾಠ ಕಲಿಸಲಿದ್ದಾರೆ. ಅಭಿವೃದ್ದಿ ಹೆಸರಿನಲ್ಲಿ ಗಿಡ-ಮರಗಳನ್ನು ಕಡಿಯುತ್ತಿರುವುದಿಂದ ಬರಗಾಲ ಎದುರಾಗಿದೆ. ಕಾರ್ಮಿಕರು ಇದರ ವಿರುದ್ದವೂ ಹೋರಾಡಬೇಕಿದೆ ಎಂದು ಕರೆ ನೀಡಿದರು.
ಎ.ಐ.ಟಿ.ಯು.ಸಿ.ಜಿಲ್ಲಾ ಗೌರವಾಧ್ಯಕ್ಷ ಕಾಂ.ಸಿ.ವೈ.ಶಿವರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು.

      ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು, ಎ.ಐ.ಕೆ.ಎಸ್.ರಾಜ್ಯ ಮಂಡಳಿ ರಾಜ್ಯಾಧ್ಯಕ್ಷ ಕಾಂ.ದೊಡ್ಡುಳ್ಳಾರ್ತಿ ಕರಿಯಣ್ಣ, ಎ.ಐ.ಟಿ.ಯು.ಸಿ.ಹಿರಿಯ ಮುಖಂಡ ಕಾಂ.ಜಯರಾಂರೆಡ್ಡಿ, ಕಾಂ.ಟಿ.ಆರ್.ಉಮಾಪತಿ, ಕಾಂ.ಎಂ.ಟಿ.ಜಯದೇವಮೂರ್ತಿ, ಕಾಂ.ಜಾಫರ್‍ಷರೀಫ್, ಕಾಂ.ಎಸ್.ಸಿ.ಕುಮಾರ್, ಕಾಂ.ಕೆ.ಎನ್.ರಮೇಶ್, ಕಾಂ.ಅಮೀನಾಬಿ ವೇದಿಕೆಯಲ್ಲಿದ್ದರು. ಕೆ.ಕೆ.ಎನ್.ಎಸ್.ಎಸ್ .ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್, ಜಮುನಾಬಾಯಿ ಸೇರಿದಂತೆ ಜಿಲ್ಲಾ ಕಾರ್ಮಿಕರ ಸಾಮೂಹಿಕ ಸಂಘಟನೆಗಳ ನೂರಾರು ಕಾರ್ಮಿಕರು ಮೇ ದಿನಾಚರಣೆಯಲ್ಲಿ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap