ಹರಿಹರ :
ನಗರದ ಹರಹರೇಶ್ವರ ಕಟ್ಟಡ ಕಾರ್ಮಿಕರ ಸಂಘದಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಟ್ಟಡ ಕಾರ್ಮಿಕರು ಪ್ರತಿಭಟನಾ ಮೆರವಣಿಗೆ ನಡೆಸಿ, ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿಯವರಿಗೆ ತಹಸೀಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಯಿತು.
ಶ್ರೀ ಹರಿಹರೇಶ್ವರ ಕಟ್ಟಡ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಹದಿಮೂರು ವಿವಿಧ ಸಂಘಗಳು ಸೊಮವಾರ ನಗರದ ಶ್ರೀ ಹರಿಹರೇಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಗಾಂಧಿ ವೃತ್ತದಲ್ಲಿ ಕೆಲ ಸಮಯ ಮಾನವ ಸರಪಳಿ ನಿರ್ಮಿಸಿ ನಂತರ ಸರ್ಕಾರಕ್ಕೆ ತಮ್ಮ ವಿವಿಧ ಹದಿನಾಲ್ಕು ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ವಿಜಯಕುಮಾರ್ ಅವರಿಗೆ ಅರ್ಪಿಸಿದರು.
ಮನವಿ ಅರ್ಪಿಸುವ ಸಂದರ್ಭದಲ್ಲಿ ಕಾರ್ಮಿಕ ಮುಖಂಡರುಗಳು ಮಾತನಾಡಿ, ಕಾರ್ಮಿಕ ಕಲ್ಯಾಣ ಮಂಡಳಿಯ ಉಸ್ತುವಾರಿ ಹೊಂದಿರುವ ಆಮ್ಲಾನ್ ಆದಿತ್ಯ ಬಿಸ್ವಾಸ್ ಎನ್ನುವ ಐಎಎಸ್ ಅಧಿಕಾರಿಯು ಕಾರ್ಮಿಕ ಕಲ್ಯಾಣ ಮಂಡಳಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದು,ಮಂಡಳಿಯ ನಿಯಮಾವಳಿಗಳನ್ನು ಗಾಳಿಗೆ ತೂರಿ ಕಾರ್ಮಿಕರಲ್ಲದ ನಕಲಿ ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ನೀಡಿದ್ದಾರೆ.
ಅಲ್ಲದೆ ಐಕ್ಯೂ ಬಿಸಿನೆಸ್ ಸೆಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಎನ್ನುವ ಖಾಸಗಿ ಸಂಸ್ಥೆಗೆ ಕಾರ್ಮಿಕರ ನೋಂದಣಿ ಮಾಡಲು
ಆದೇಶಿಸಿ,ಕಾರ್ಮಿಕರ ಪ್ರತಿ ಕಾಡು9ಗಳಿಗೆ ರೂಪಾಯಿ ಐವತ್ತು ರಂತೆ ಧನ ಪಡೆಯಲು ಅನುಮತಿಯನ್ನು ನೀಡಿ,ಕಾರ್ಮಿಕರ ಕಲ್ಯಾಣ ಮಂಡಳಿಯ ಹಣವನ್ನು ಕೊಳ್ಳೆ ಹೊಡೆಯುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಇತ್ತೀಚೆಗೆ ಪ್ರಾರಂಭಿಸಿದ ಕಾರ್ಮಿಕರ ಶ್ರಮ ಸಮರ್ಥ ಯೋಜನೆಯ ಫಲಾನುಭವಿಗಳಿಗೆ ನೀಡುವ ಕಿಟ್ ಗಳಿಗೆ 20ಸಾವಿರ ರೂ ಎಂದು ಲೆಕ್ಕದಲ್ಲಿ ತೋರಿಸಿ ಕೇವಲ 5-6 ಸಾವಿರ ರೂಗಳ ಕಿಟ್ಗಳನ್ನು ಫಲಾನುಭವಿಗಳಿಗೆ ನೀಡಿರುತ್ತಾರೆ.ಇದರ ಉಸ್ತುವಾರಿಯನ್ನು ಸಹ ಬಾಸ್ ಎನ್ನುವ ಖಾಸಗಿ ಸಂಸ್ಥೆಗೆ ನೀಡಿ, ಮುಂಗಡವಾಗಿ ಐದು ಕೋಟಿಗಳಿಗೂ ಹೆಚ್ಚಿನ ಹಣವನ್ನು ಕೊಳ್ಳೆ ಹೊಡೆಯುವ ಹುನ್ನಾರ ನಡೆಸಿದ್ದಾರೆ.
ಇದಲ್ಲದೆ ಅನಿಲ ಭಾಗ್ಯ ಯೋಜನೆಯಡಿಯಲ್ಲಿ ಸುಮಾರು 66 ಕೋಟಿ ರೂಗಳನ್ನು ಆಹಾರ ಇಲಾಖೆಗೆ ನೀಡಿ ಕಾರ್ಮಿಕ ಮಂಡಳಿಯ ಹಣವನ್ನು ಕೊಳ್ಳೆ ಹೊಡೆಯುವ ವ್ಯವಸ್ಥಿತ ಸಂಚನ್ನು ನಡೆಸುತ್ತಿದ್ದಾರೆ.ಈ ರೀತಿಯ ಅವ್ಯವಹಾರ ನಡೆಸಿರುವ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರನ್ನು ವಜಾಗೊಳಿಸಿ ತನಿಖೆ ನಡೆಸಲು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹರಿಹರ ತಾಲೂಕಿನ ಬಡಗಿ ಕಾರ್ಮಿರು, ಸಣ್ಣ ಕೈಗಾರಿಕೆ, ಬಾರ್ ಬೆಂಡರ್, ಅರ್ಥ್ ವರ್ಕರ್ಸ್, ಮಿಕ್ಸರ್ ಮತ್ತು ಕಾಂಕ್ರೀಟ್ ಬ್ಯಾಚ್, ಪ್ಲಂಬರ್, ಎಲೆಕ್ಟ್ರಿಕ್, ಇಟ್ಟಿಗೆ ಕಾರ್ಮಿಕರು, ಕಲ್ಲು ಒಡೆಯುವ, ಶೀಟ್ ಸೆಂಟ್ರಿಂಗ್, ಹಮಾಲರು, ಕಟ್ಟಡ ಕಾರ್ಮಿಕರು ಹಾಗೂ ಗ್ರಾಮೀಣ ಪ್ರದೇಶದ ಎಲ್ಲ ಕಟ್ಟಡ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಈ ವೇಳೆ ಕಾರ್ಮಿಕ ಮುಖಂಡರುಗಳಾದ ಎಂ.ಎಚ್. ಭೀಮಣ್ಣ, ಗುರಪ್ಪ ಶಿವಳ್ಳಿ, ಎಸ್.ಬಿ.ಹನುಮಂತಪ್ಪ, ಅಂಜಿನಪ್ಪ, ರೇವಣ್ಣಪ್ಪ,ಎಸ್. ಬೀರಪ್ಪ,ಹಮೀದ್ ,ಎಚ್. ಮಹೇಶಪ್ಪ, ಪರುಶರಾಮ್,ರಾಜಪ್ಪಇಟಿಗುಡಿ ಹಾಗೂ ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ