ಕಾರ್ನಾಡರ ಸಾಹಿತ್ಯ ಸಂವೇದನೆ ಹಿರಿದು

ತಿಪಟೂರು :

     ನಾಟಕಕಾರ ಗಿರೀಶ್ ಕಾರ್ನಾಡ್ ಅವರ ಸಾಹಿತ್ಯದಿಂದ ಕನ್ನಡ ಸಾರಸ್ವತ ಲೋಕ ಶ್ರೀಮಂತಗೊಂಡಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ. ಬಾಲಕೃಷ್ಣ ತಿಳಿಸಿದರು.

     ತಾಲ್ಲೂಕು ನಿವೃತ್ತ ನೌಕರರ ಸಂಘದಿಂದ ನಡೆದ ಗಿರೀಶ್ ಕಾರ್ನಾಡ್ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಕಾರ್ನಾಡರು ನಾಟಕಕಾರ, ಸಾಹಿತಿ, ನಟ, ನಿರ್ದೇಶಕ ಹಾಗೂ ಹೋರಾಟಗಾರರಾಗಿ ಈ ನಾಡನ್ನು ಸಮೃದ್ಧಗೊಳಿಸಲು ಯತ್ನಿಸಿದ್ದರು. ಯುವಕರಲ್ಲಿ ವೈಚಾರಿಕೆ ಪ್ರಜ್ಞೆಯನ್ನು ಬೆಳೆಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರು. ಸಿದ್ಧಾಂತ ಮತ್ತು ತಾತ್ವಿಕ ನೆಲೆಯಲ್ಲಿ ಅವರ ಸಾಹಿತ್ಯ ಕೃಷಿ ವಿಶ್ವ ಶ್ರೇಷ್ಠತೆ ಪಡೆದಿದೆ. ವೈದಿಕ ಮನಸ್ಥಿತಿಗಳು ಸಮಾಜದ ಸಾಮರಸ್ಯವನ್ನು ಹಾಳು ಮಾಡುವ ಹುನ್ನಾರವನ್ನು ಕಟುವಾಗಿ ವಿರೋಧಿಸಿದ್ದರು ಎಂದು ತಿಳಿಸಿದರು.

      ಲೇಖಕ ದಿಬ್ಬದಹಳ್ಳಿ ಶಾಮಸುಂದರ್ ಮಾತನಾಡಿ, ಕಾರ್ನಾಡರ ನಾಟಕಗಳ ಬಗ್ಗೆ ದೊಡ್ಡ ಕುತೂಹಲವೇ ಸೃಷ್ಟಿಯಾಗಿದ್ದ ಕಾಲವಿತ್ತು. ನಾಟಕಗಳ ಮೂಲಕ ಹೊಸ ಸಮಾಜಕ್ಕೆ ದಿಕ್ಕು ತೋರಿಸುವ ಕ್ರಮವನ್ನು ಅವರು ಅರಗಿಸಿಕೊಂಡಿದ್ದರು. ಮನಸ್ಸನ್ನು ಸಂಸ್ಕಾರಗೊಳಿಸಿ ವಿಕೃತ ಚಿಂತನೆಗಳಿಂದ ದೂರವಿಡುವ ಮನಸ್ಥಿತಿಯನ್ನು ರೂಪಿಸಿದ್ದರು. ಪೂರ್ವಗ್ರಹ ಪೀಡಿತ ಧೋರಣೆಗಳಿಂದ ಯುವ ಜನರನ್ನು ದಿಕ್ಕು ತಪ್ಪಿಸುವ ಸಂಘಟನೆಗಳ ವಿರುದ್ಧ ದೊಡ್ಡ ದನಿ ಎತ್ತಿ ಜಾಗೃತಿ ಮೂಡಿಸಿದ್ದರು ಎಂದರು.

       ಪ್ರಾಚಾರ್ಯ ಎಂ.ಡಿ. ಶಿವಕುಮಾರ್ ಮಾತನಾಡಿ, ಕಾರ್ನಾಡರ ಸಾಹಿತ್ಯ ಕನ್ನಡಕ್ಕೆ ಮಾತ್ರ ಸೀಮಿತವಾಗದೆ ಹಲವು ಭಾಷೆಗಳ ಮೇಲೆ ಪ್ರಭಾವ ಬೀರಿದ್ದವು. ಸಾಹಿತಿಯ ಜತೆಗೆ ಸದಾ ಚಳುವಳಿ, ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದ ಅವರ ಸಾಮಾಜಿಕ ಕಾಳಜಿ ಅನುಕರಣೀಯ ಎಂದರು.

       ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪರಮೇಶ್ವರಯ್ಯ ಮಾತನಾಡಿ, ಚರಿತ್ರೆ ಮತ್ತು ಪುರಾಣದ ಆಕರಗಳನ್ನು ಸಮಾಕಾಲೀನ ನಾಟಕದ ವಸ್ತುವಾಗಿ ಇಳಿಸಿ ವಿಸ್ತೃತ ಚರ್ಚೆಗೆ ಅವಕಾಶಗಳನ್ನು ಕಲ್ಪಿಸಿದ್ದರು. ಚರಿತ್ರೆಯ ಸಂಘರ್ಷದ ಮೂಲಕ ಹೊಸ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು ಎಂದರು. ನಿವೃತ್ತರ ಸಂಘದ ಬಸವರಾಜು, ಪರಶುರಾಮ ನಾಯಕ್, ಮಲ್ಲಪ್ಪಚಾರ್, ಕಸಾಪ ಕಾರ್ಯದರ್ಶಿ ದಯಾನಂದ್, ಜಗದೀಶ್, ಶಿವಕುಮಾರ್, ನಿಜಗುಣ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link