ಬೆಂಗಳೂರು
ಇಡೀ ದೇಶದಲ್ಲಿಯೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸೈಬರ್ ಅಪರಾಧ ವಿಭಾಗದ ಸೈಬರ್ ಲ್ಯಾಬ್‍ನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಬಲಪಡಿಸುವ ಸಂಬಂಧ ರಾಜ್ಯ ಸರ್ಕಾರ ಇನ್ಫೋಸಿಸ್ ಪ್ರತಿಷ್ಠಾನದೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಬೆಳೆಯುತ್ತಿರುವ ಸೈಬರ್ ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕುವ, ಸೈಬರ್ ಅಪರಾಧಿಗಳನ್ನು ಬಗ್ಗು ಬಡಿಯುವ ಉದ್ದೇಶದಿಂದ ಸೈಬರ್ ಲ್ಯಾಬ್‍ನ್ನು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಇನ್ಪೋಸಿಸ್ ಸಂಸ್ಥೆ ಅಗತ್ಯ ನೆರವು ನೀಡಲಿದೆ. ಇದಕ್ಕಾಗಿ ಐದು ವರ್ಷಗಳ ಅವಧಿಗೆ 22 ಕೋಟಿ ರೂ ನೆರವು ನೀಡುತ್ತಿದ್ದು, ಅಗತ್ಯ ಬಿದ್ದರೆ ಸೈಬರ್ ತಂತ್ರಜ್ಞರನ್ನು ವಿದೇಶದಿಂದ ಕರೆಸಿಕೊಂಡು ರಾಜ್ಯದ ಸೈಬರ್ ಪೊಲೀಸರಿಗೆ ಅಗತ್ಯ ತರಬೇತಿ ದೊರಕಿಸಿಕೊಡುವುದಾಗಿ ಇನ್ಫೋಸಿಸ್ ಸಂಸ್ಥೆ ಘೋಷಿಸಿದೆ. ದೇಶದ 8 ಕಡೆಗಳಲ್ಲಿ ಸೈಬರ್ ಅಪರಾಧ ಪ್ರಯೋಗಾಲಯಗಳನ್ನು ತೆರೆಯಲಾಗಿದ್ದು, ಈ ಪೈಕಿ ಬೆಂಗಳೂರಿನ ಸೈಬರ್ ಲ್ಯಾಬ್ ಮಾತ್ರ ಕಾರ್ಯನಿರ್ವಹಿಸುತ್ತಿದೆ.
ವಿಧಾನಸೌಧದಲ್ಲಿಂದು ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ್ ಹಾಗೂ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ: ಸುಧಾಮೂರ್ತಿ ಅವರ ಸಮುಖದಲ್ಲಿ ಸೈಬರ್ ವಿಭಾಗ ಹೊಂದಿರುವ ಸಿಐಡಿ ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದರು.
ನಂತರ ಮಾತನಾಡಿದ ಡಾ: ಸುಧಾಮೂರ್ತಿ, ಸುಮಾರು 22ಕೋಟಿ ವೆಚ್ಚ ರೂಪಾಯಿ ವೆಚ್ಚದಲ್ಲಿ ಸೈಬರ್ ಲ್ಯಾಬ್‍ನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ . ಕಳೆದ 2014 ರಿಂದ ಸೈಬರ್ ಅಪರಾಧ ಪತ್ತೆಗೆ ನೆರವು ನೀಡಲಾಗುತ್ತಿದೆ. 22 ಕೋಟಿ ರೂ ಮೊತ್ತದಲ್ಲಿ ಈಗಾಗಲೇ 1.68 ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದರು.
ಪೊಲೀಸರು ರಾಜ್ಯದ ನಾಗರಿಕ ರಕ್ಷನೆಗೆ ಟೊಂಕಕಟ್ಟಿ ದುಡಿಯುತ್ತಾರೆ. ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ಪೊಲೀಸರು ಪಾತ್ರ ಅನನ್ಯ. ಇಂತಹ ಸಮುದಾಯಕ್ಕೆ ನೆರವು ನೀಡಲು ಇನ್ಪೋಸಿಸ್ ಸಂಸ್ಥೆ ಸದಾ ಸಿದ್ಧವಾಗಿರುತ್ತದೆ ಎಂದರು.
ಡಾ: ಜಿ. ಪರಮೇಶ್ವರ್ ಮಾತನಾಡಿ, ಇನ್‍ಫೋಸಿಸ್ ಹಿಂದಿನಿಂದಲೂ ಪೊಲೀಸ್ ಇಲಾಖೆಗೆ ಕಟ್ಟಡ ನಿರ್ಮಿಸಿಕೊಡುವ ಮೂಲಕ ಬೆಂಬಲ ನೀಡುತ್ತಾ ಬಂದಿದೆ. ಈಗ ಸೈಬರ್ ಲ್ಯಾಬ್, ತರಬೇತಿ ಕೇಂದ್ರ ನಿರ್ಮಿಸಲು ಮುಂದೆ ಬಂದಿರುವುದು ಇತರೆ ಕಾರ್ಪೊರೇಟ್ ಕಂಪನಿಗಳಿಗೆ ಮಾದರಿಯಾಗಿದೆ ಎಂದರು.
ಸರಕಾರ ಎಲ್ಲವನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಅನೇಕ ಕಡೆಯಿಂದ ಸಹಾಯ ಹಸ್ತ ಬೇಕಿದೆ. ಪೊಲೀಸ್ ಇಲಾಖೆಗೆ ಹೆಚ್ಚು ಸಹಾಯ ಸಿಗುತ್ತಿಲ್ಲ. ಆಯವ್ಯಯದಲ್ಲೂ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ಪೊಲೀಸರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಇನ್ನೂ ಪ್ರೋತ್ಸಾಹ ಸಿಗಬೇಕು. ಹೀಗಾಗಿ ಪೊಲೀಸ್ ಗೃಹ ಯೋಜನೆಯಡಿ ಮನೆ ಕಟ್ಟುವ ಕೆಲಸ ಶುರು ಮಾಡಿ ಮೂರನೇ ಹಂತಕ್ಕೆ ತಲುಪಿದ್ದೇವೆ. ಎಫ್‍ಐಆರ್ ದಾಖಲಾತಿ ಸೇರಿದಂತೆ ಪೊಲೀಸ್ ಇಲಾಖೆ ಸಂಪೂರ್ಣ ಆನ್‍ಲೈನ್ ತರುವ ಕೆಲಸ ಮಾಡಲಾಗುತ್ತಿದೆ. ಕರ್ನಾಟಕ ಪೊಲೀಸ್ ಇಡೀದೇಶಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಮುಂದೆ ನುಗ್ಗುತ್ತಿದೆ ಎಂದರು.
ಇನ್‍ಫೋಸಿಸ್‍ನಿಂದ ತರಬೇತಿ ಕೇಂದ್ರ ನಿರ್ಮಿಸಿ ಕೊಡಲಾಗುತ್ತಿದೆ. ಇದಕ್ಕೆ ತಾಂತ್ರಿಕ ಪರಿಣಿತರ ಅಗತ್ಯವಿದ್ದು, ಪರಿಣಿತರು ಮುಂದೆ ಬರಬೇಕು. ಸೈಬರ್ ಸಂಬಂಧಿ ಅಪರಾಧಗಳನ್ನು ಪತ್ತೆ ಹೆಚ್ಚುವ ಹಾಗೂ ಅಪರಾಧಗಳನ್ನು ತಡೆಯಲು ತಾಂತ್ರಿಕ ತರಬೇತಿ ಅತಿ ಅವಶ್ಯಕ. ಇಂತಹ ಉದ್ದೇಶಕ್ಕೆ ಸಂಸ್ಥೆ ಮುಂದಾಗಿರುವುದು ಸಂತಸ ತಂದಿದೆ ಎಂದರು.
ರಾಜ್ಯದ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು, ಪೊಲೀಸ್ ಇಲಾಖೆಗೆ ನೆರವು ನೀಡಲು ಯಾವುದೇ ಸಂಸ್ಥೆಗಳು ಮುಂದೆ ಬರುತ್ತಿಲ್ಲ. ಆದರೆ ಇನ್ಪೋಸಿಸ್ ಇದಕ್ಕೆ ಅಪವಾದವಾಗಿದೆ. ಸಂಸ್ಥೆಯ ನಿರೀಕ್ಷೆಗೂ ಮೀರಿ ನಮ್ಮ ಅಧಿಕಾರಿಗಳು ಅತ್ಯುತ್ತಮ ಕಾರ್ಯನಿರ್ವಹಣೆ ಮಾಡಲಿದ್ದಾರೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
