ಚಿತ್ರದುರ್ಗ:
ಮಾಡುವ ಕೆಲಸದಲ್ಲಿ ನೀಯತ್ತು, ಪ್ರಾಮಾಣಿಕತೆ, ಶ್ರದ್ದೆಯಿದ್ದರೆ ಒಂದಲ್ಲ ಒಂದು ದಿನ ಉನ್ನತ ಹುದ್ದೆ ಸಿಕ್ಕೆ ಸಿಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ಕೆ.ಜಗದೀಶ್ ತಮ್ಮ ಅನುಭವವನ್ನು ಹಂಚಿಕೊಂಡರು.
ಕರ್ನಾಟಕ ರಾಜ್ಯ ನಾಗರೀಕರ ಹಿತರಕ್ಷಣಾ ವೇದಿಕೆಯಿಂದ ಪತ್ರಕರ್ತರ ಭವನದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪ್ರೀತಿ ಸ್ನೇಹ ಬೇರೆ ಎಲ್ಲಿಯೋ ಹುಡುಕಾಡಿದರೆ ಸಿಗುವುದಿಲ್ಲ. ನಮ್ಮಲ್ಲಿಯೇ ಕಂಡುಕೊಳ್ಳಬೇಕು. ನಮ್ಮದು ಬಡ ಕುಟುಂಬ. ನಾನು ಎಂ.ಬಿ.ಬಿ.ಎಸ್.ಓದುವುದು ಸುಲಭವಾಗಿರಲಿಲ್ಲ. ಇಂದು ಈ ಸ್ಥಿತಿಯಲ್ಲಿರಲು ನನ್ನ ತಾಯಿ ಕಾರಣ ಎಂದು ದುಃಖತಪ್ತರಾದರು. ಅದಕ್ಕಾಗಿ ತಂದೆ-ತಾಯಿ, ಗುರು-ಹಿರಿಯರು, ಹುಟ್ಟಿದ ಸ್ಥಳವನ್ನು ಯಾರು ಮರೆಯಬಾರದು. ಕೆಲವರು ಉನ್ನತ ಸ್ಥಾನಕ್ಕೆ ಹೋದ ಕೂಡಲೆ ಹಿಂದಿನದನ್ನು ಮರೆತು ಅಪ್ಪ-ಅಮ್ಮನನ್ನು ಅನಾಥಾಶ್ರಮಕ್ಕೆ ಸೇರಿಸುತ್ತಾರೆ. ಅವರೆಲ್ಲಾ ಮನುಷ್ಯರಾ ಎಂದು ಖಾರವಾಗಿ ಪ್ರಶ್ನಿಸಿದರು.
ಕೇವಲ ನಾನು ಐದು ಸಾವಿರ ರೂಪಾಯಿಯಲ್ಲಿ ಎಂ.ಬಿ.ಬಿ.ಎಸ್.ಪದವಿ ಪಡೆದೆ. ದೇಶ-ವಿದೇಶಗಳಲ್ಲಿ ವೈದ್ಯನಾಗಿ ಸೇವೆ ಸಲ್ಲಿಸಿದ್ದೇನೆ. ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯನಾಗಿ, ಜಿಲ್ಲಾ ಶಸ್ತ್ರಚಿಕಿತ್ಸಕನಾಗಿ ಕೆಲಸ ಮಾಡಿದಾಗ ಕೆಲವೊಮ್ಮೆ ಅನೇಕ ಅಪವಾಧಗಳನ್ನು ಎದುರಿಸಬೇಕಾಯಿತು.
ನೇರ, ನಿಷ್ಟುರವಾಗಿ ಮಾತನಾಡಿ ಸೇವೆಯಲ್ಲಿ ತೊಂದರೆ ಅನುಭವಿಸಿದ್ದೇನೆ. ನಾನು ಎಂದಿಗೂ ಹಿಂದುಳಿದವನು, ಕೆಳಜಾತಿಯವನು ಅಂದುಕೊಂಡಿಲ್ಲ. ಎಲ್ಲರಂತೆ ನನಗೂ ದೇವರು ಬುದ್ದಿಕೊಟ್ಟಿದ್ದಾನೆ. ಬಳಸಿಕೊಂಡು ಜೀವನದಲ್ಲಿ ಮೇಲೆ ಬರಬೇಕು. ಜೋಗಿ ಜನಾಂಗದವರು, ಅಲೆಮಾರಿಗಳು, ಅರೆಅಲೆಮಾರಿಗಳು, ಸುಡುಗಾಡು ಸಿದ್ದರು ಇವರುಗಳ್ಯಾರು ಕೀಳರಿಮೆಯಿಟ್ಟುಕೊಳ್ಳಬೇಡಿ. ನಿಮ್ಮಲ್ಲಿರುವ ಪ್ರತಿಭೆಯಿಂದ ಸಾಧನೆ ಮಾಡಿ ಎಂದು ತಿಳಿಸಿದರು.
ಇನ್ನು ಒಂದು ವರ್ಷ ನಾಲ್ಕು ತಿಂಗಳ ಸೇವಾವಧಿಯಲ್ಲಿ ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ಆರಂಭ ಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದ ಡಾ.ಕೆ.ಜಗದೀಶ್ ನಿವೃತ್ತಿಯ ನಂತರ ಇಲ್ಲಿಯೇ ವಾಸವಾಗಿ ಸೇವೆ ಮಾಡುತ್ತೇನೆ ಎಂದು ವಾಗ್ದಾನ ಮಾಡಿದರು.
ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ನ್ಯಾಯವಾದಿ ಹಾಗೂ ಕರ್ನಾಟಕ ರಾಜ್ಯ ನಾಗರೀಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಕೆ.ರಹಮತ್‍ವುಲ್ಲಾ ಶ್ರಮ, ಶ್ರದ್ದೆ, ಗುರು-ಹಿರಿಯರ ಆಶೀರ್ವಾದದಿಂದ ಡಾ.ಕೆ.ಜಗದೀಶ್ ಇಂದು ಆರೋಗ್ಯ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿದ್ದಾರೆ. ಇನ್ನು ಉನ್ನತ ಹುದ್ದೆಯನ್ನು ಅಲಂಕರಿಸಲಿ ಎಂದು ಶುಭ ಹಾರೈಸಿದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡುತ್ತ ಶಿಕ್ಷಣ ಯಾರ ಸ್ವತ್ತು ಅಲ್ಲ. ಶ್ರದ್ದೆಯಿಂದ ಶ್ರಮಪಟ್ಟು ಓದಿದರೆ ಎಂತಹ ಉನ್ನತ ಹುದ್ದೆಗಾದರೂ ಏರಬಹುದು ಎನ್ನುವುದಕ್ಕೆ ಡಾ.ಕೆ.ಜಗದೀಶ್‍ರವರೆ ಸಾಕ್ಷಿ. ರಾಮಾಯಣ, ಮಹಾಭಾರತ ಬರೆದವರು ತಳಸಮುದಾಯದವರು. ಜೋಗಿ ಸಮುದಾಯದವರು ಸಾಮಾನ್ಯರಲ್ಲ. ಶಿವನ ಆರಾಧಕರು. ಹಾಗಾಗಿ ನಿಮ್ಮಲ್ಲಿ ಯಾರು ಕೀಳರಿಮೆ ಇಟ್ಟುಕೊಳ್ಳಬೇಡಿ ಎಂದು ಜೋಗಿ, ಅಲೆಮಾರಿ, ಅರೆಅಲೆಮಾರಿ ಜನಾಂಗಕ್ಕೆ ಕರೆ ನೀಡಿದರು.
ಬುದ್ದ, ಬಸವ, ಅಂಬೇಡ್ಕರ್ ಆದರ್ಶವನ್ನು ಜೀವನದಲ್ಲಿ ಪಾಲಿಸಿ ಒಂದಲ್ಲ ಒಂದು ದಿನ ನಿಮಗೆ ಶ್ರೇಯಸ್ಸು ಸಿಗುತ್ತದೆ. ಬರದನಾಡು ಚಿತ್ರದುರ್ಗದಲ್ಲಿ ಆದಷ್ಟು ಬೇಗ ಮೆಡಿಕಲ್ ಕಾಲೇಜು ಆರಂಭಿಸಿ ಎಂದು ಡಾ.ಕೆ.ಜಗದೀಶ್‍ರವರಲ್ಲಿ ಮನವಿ ಮಾಡಿದ ಡಿ.ಗೋಪಾಲಸ್ವಾಮಿ ನಾಯಕ ಹಣದ ಹಿಂದೆ ಓಡಬೇಡಿ. ಶಿಕ್ಷಣವೇ ನಿಮಗೆ ಆಯುಧ. ಶಿಕ್ಷಣ, ಜ್ಞಾನದ ಹಿಂದೆ ಓಡಿ ಎಂದು ಜೋಗಿ ಸಮುದಾಯಕ್ಕೆ ಕಿವಿಮಾತು ಹೇಳಿದರು.
ಪತ್ರಕರ್ತ ನರೇನಹಳ್ಳಿ ಅರುಣ್‍ಕುಮಾರ್ ಮಾತನಾಡಿ ತಳಸಮುದಾಯದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸುವುದು ತುಂಬಾ ಅಪರೂಪ. ಅಂತಹುದರಲ್ಲಿ ಜೋಗಿ ಸಮುದಾಯದವರು ಡಾ.ಕೆ.ಜಗದೀಶ್‍ರವರ ನಿಷ್ಟೆ ಮತ್ತು ಪ್ರಾಮಾಣಿಕತೆಯನ್ನು ಗುರುತಿಸಿ ಸನ್ಮಾನಿಸುತ್ತಿರುವುದಕ್ಕೆ ಶ್ಲಾಘಿಸಿದರು.
ಜೋಗಿ ಜನಾಂಗದವರು ಶಿವನ ನೇರ ಸಂಪರ್ಕವಿಟ್ಟುಕೊಂಡು ಜ್ಞಾನ ಸಂಪಾದಿಸಿದವರು. ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿದ್ದಾರೆ. ಸರ್ಕಾರ ಗುರುತಿಸುವಲ್ಲಿ ವಿಫಲವಾಗಿದೆ. ಡಾ.ಕೆ.ಜಗದೀಶ್‍ರಂತಹವರು ಉನ್ನತ ಹುದ್ದೆಗೆ ಹೋದಾಗ ಮಾತ್ರ ತಳ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡಬಹುದು ಎಂದರು.
ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿದ್ದ ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ ಆಶೀರ್ವಚನ ನೀಡಿ ಹಿಂದುಳಿದ ಸಮಾಜಕ್ಕೆ ಸೇರಿದವರು ಉನ್ನತ ಹುದ್ದೆ ಪಡೆದರೆ ಸಮಾಜದ ಮುಖ್ಯವಾಹಿನಿಯಲ್ಲಿ ಏನೆಲ್ಲಾ ಅಭಿವೃದ್ದಿ ಕೆಲಸಗಳನ್ನು ಮಾಡಬಹುದು ಎನ್ನುವುದಕ್ಕೆ ಡಾ.ಕೆ.ಜಗದೀಶ್‍ರವರೆ ಕಾರಣ. ಸಂವಿಧಾನದಡಿ ಎಲ್ಲರಿಗೂ ಸಮಾನತೆ ಮೂಲಭೂತ ಸೌಲಭ್ಯಗಳು ದೊರಕಬೇಕಾದರೆ ದೇಶವನ್ನಾಳುವ ಜನಪ್ರತಿನಿಧಿಗಳು ಪ್ರಾಮಾಣಿಕರಾಗಿರಬೇಕು.
ಅದಕ್ಕಾಗಿ ಈ ಬಾರಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಮತವನ್ನು ಹೆಂಡ, ಸೀರೆ, ಪಂಚೆ, ಮಾಂಸಕ್ಕೆ ಮಾರಿಕೊಳ್ಳದೆ. ಯೋಗ್ಯರಿಗೆ ಮತದಾನ ಮಾಡಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಜೋಗಿ, ಅಲೆಮಾರಿ, ಅರೆಅಲೆಮಾರಿ, ಸುಡುಗಾಡು ಸಿದ್ದರು ಹಾಗೂ ಹಿಂದುಳಿದ ಸಮುದಾಯಗಳಿಗೆ ತಿಳಿಸಿದರು.
ಯುವ ವಕೀಲ ಪ್ರತಾಪ್‍ಜೋಗಿ, ನಗರಸಭೆ ಸದಸ್ಯ ನಸ್ರುಲ್ಲಾ, ಹನೀಫ್, ಮಮತ, ಬಸವರಾಜ್ ಜೋಗಿ, ಸಿದ್ದರಾಜಜೋಗಿ, ಮಂಜುನಾಥಜೋಗಿ, ತಿಪ್ಪೇಸ್ವಾಮಿಜೋಗಿ, ಅಂಜಿನಪ್ಪಜೋಗಿ, ಕೃಷ್ಣಮೂರ್ತಿ ಜೋಗಿ, ಯುವ ನ್ಯಾಯವಾದಿ ಅಶೋಕ್ ಬೆಳಗಟ್ಟ ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ