ಸ್ವಚ್ಚ ನಗರಕ್ಕಾಗಿ ಕಸ ಜಾಗೃತಿ, ಶಿಸ್ತಿನ ಕ್ರಮ ಜಾರಿಯಾಗಲಿ

ತುಮಕೂರು

      ನಿಮಗೆ ಬೇಡವಾದ, ನಿಮಗೆ ಅಸಹ್ಯವೆನಿಸುವ ನಿಮ್ಮ ಮನೆಯ ಹಸಿ ಕಸವನ್ನು ಕೇವಲ ಕಾಲುಕಸ ಎಂದು ಕಡೆಗಣಿಸಬೇಡಿ. ಬೆಳೆ ಬೆಳೆಯಲು ಈ ಕಸ ಶ್ರೇಷ್ಠ ಗೊಬ್ಬರವಾಗುತ್ತದೆ. ಕೃಷಿ ಭೂಮಿಗೆ ಬಿದ್ದ ಈ ಕಸ ರಸವಾಗುತ್ತದೆ. ಈ ಮೂಲಕ ನಿಮ್ಮ ಮನೆಯ ತ್ಯಾಜ್ಯ ಪೂಜ್ಯವಾಗುತ್ತದೆ. ಕಸವೂ ರಸವಾಗಿ ಬಳಕೆಯಾಗಲು ಸಹಕರಿಸಿ. ಮನೆ ಮುಂದೆ ಬರುವ ನಗರ ಪಾಲಿಕೆಯ ಕಸದ ಗಾಡಿಗೆ ನಿಮ್ಮ ಮನೆ ಕಸ ನೀಡಿ ಸಹಕರಿಸಿ.

      ಹೀಗೆಂದು ತುಮಕೂರು ನಗರ ಪಾಲಿಕೆಯವರು ನಿರಂತರ ಪ್ರಚಾರ ಮಾಡಿ ಜನ ಜಾಗೃತಿ ಮೂಡಿಸುತ್ತಲೇ ಇದ್ದಾರೆ, ಆದರೂ ಕಸ ಸಂಗ್ರಹಣೆ ಕಾರ್ಯ ಸಮರ್ಪಕವಾಗಿ, ಕಾಳಜಿಯಿಂದ ಆಗುತ್ತಿಲ್ಲ. ನಗರ ಸ್ವಚ್ಚತೆ, ನಾಗರೀಕರ ಆರೋಗ್ಯಕ್ಕಾಗಿ ನಗರದ ನೈರ್ಮಲ್ಯ ಕಾಪಾಡುವುದು ಎಲ್ಲರ ಜವಾಬ್ದಾರಿ. ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ, ಮನೆ ಬಾಗಿಲಿಗೆ ಬರುವ ಪಾಲಿಕೆಯ ಕಸದ ವಾಹನಗಳಿಗೆ ನೀಡಬೇಕು ಎಂದು ಪಾಲಿಕೆ ನಿಯಮ ಮಾಡಿದೆ. ಅದರ ಪಾಲನೆ ಪರಿಪೂರ್ಣವಾಗಿ ಅನುಷ್ಠಾನಗೊಳ್ಳುತ್ತಿಲ್ಲ, ಈ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಜೊತೆಗೆ ನಿರ್ಲಕ್ಷತೆ, ನಿರಾಸಕ್ತಿ ಕಾರಣ.

       ತುಮಕೂರು ನಗರದಲ್ಲಿ ಪ್ರತಿ ದಿನ ಬೆಳಿಗ್ಗೆ ಎಲ್ಲಾ ಬಡಾವಣೆಗಳ ಎಲ್ಲಾ ಮನೆಗಳ ಮುಂದೆ ನಗರ ಪಾಲಿಕೆಯ ಕಸ ಸಂಗ್ರಹಿಸುವ ವಾಹನ ಬರುತ್ತವೆ. ಸ್ವಚ್ಚತೆ ಮಹತ್ವ ಸಾರುವ, ಹಸಿ ಕಸ, ಒಣ ಕಸ ಬೇರ್ಪಡಿಸಿ ನೀಡುವಂತೆ ಧ್ವನಿವರ್ಧಕದಲ್ಲಿ ಪ್ರಚಾರ ಮಾಡುತ್ತಲೇ ಕಸದ ಟಿಪ್ಪರ್‍ಗಳು ಕಸ ಜಾಗೃತಿಯ ಉತ್ಸವದಂತೆ ಬಂದು ಮನೆ ಮುಂದೆ ನಿಲ್ಲುತ್ತವೆ. ಪ್ರತಿ ಮನೆಯವರು ಕಸದ ವಾಹನವನ್ನು ಸ್ವಾಗತಿಸಿ, ಮನೆಯ ಹಸಿ ಕಸ, ಒಣ ಕಸ ಬೇರ್ಪಡಿಸಿ ನೀಡಿ ಸಹಕರಿಸಬೇಕು. ನಿಮ್ಮ ಮನೆಯ ಕಸ ತೆಗೆದುಕೊಂಡು ಹೊರ ಸಾಗಿಸಲು ಮನೆ ಬಾಗಿಲಿಗೆ ಬರುವ ತ್ಯಾಜ್ಯ ವಾಹನದ ಸಿಬ್ಬಂದಿಯೊಂದಿಗೆ ಸ್ಪಂದಿಸಿ, ಹಸಿ, ಒಣ ಕಸ ಬೇರ್ಪಡಿಸಿ ನೀಡಿದರೆ ನಗರ ನೈರ್ಮಲ್ಯಕ್ಕೆ ಸಹಕಾರ ನೀಡಿದ ಖುಷಿ ಅನುಭವ ನಿಮ್ಮದಾಗುತ್ತದೆ.

        ಕಸ ವಿಲೇವಾರಿಗಿಂತಾ ಕಸ ಸಂಗ್ರಹಣೆಯೇ ನಗರ ಪಾಲಿಕೆಗೆ ಹೆಚ್ಚು ಸವಾಲಾದಂತಿದೆ. ಮನೆಯವರು ಒಣ ಕಸ, ಹಸಿ ಕಸ ಬೇರೆ ಮಾಡಿ ನೀಡದಿರುವುದು ವಿಲೇವಾರಿಗೆ, ಸಂಸ್ಕರಣೆಗೆ ತೊಂದರೆಯಾಗುತ್ತದೆ. ಮನೆಯಲ್ಲಿ ಪ್ರತ್ಯೇಕವಾಗಿ ಕಸ ಸಂಗ್ರಹಿಸಿಕೊಳ್ಳಲು ಪಾಲಿಕೆಯಿಂದ ಉಚಿತವಾಗಿ ಎರಡು ಡಸ್ಟ್ ಬಿನ್ ನೀಡಲಾಗಿದೆ. ಆದರೂ ಬಹಳಷ್ಟು ಜನ ಪ್ರತ್ಯೇಕ ಮಾಡುವ ಗೋಜಿಗೆ ಹೋಗುವುದಿಲ್ಲ. ಬೇರ್ಪಡಿಸದ ಕಸವನ್ನು ಪಡೆಯದೆ ಸಂಗ್ರಹಾಕಾರರು ತಿರಸ್ಕರಿಸುತ್ತಾರೆ. ಆ ವೇಳೆ ಕಸ ಸಂಗ್ರಹಣಾ ಸಿಬ್ಬಂದಿಗೂ, ನಾಗರೀಕರಿಗೂ ಜಗಳ ಆಗುತ್ತವೆ. ಕೆಲ ಬಡಾವಣೆಗಳಲ್ಲಿ ನಿತ್ಯ ಇಂತಹ ಗಲಾಟೆ ನಡೆಯುತ್ತಲೇ ಇವೆ.

        ಟಿಪ್ಪರ್ ಸಿಬ್ಬಂದಿ ಕೂಡಾ ಜನರೊಂದಿಗೆ ಸೌಜನ್ಯದಿಂದ ವರ್ತಿಸಬೇಕಾಗುತ್ತದೆ. ಕೆಲವರು ಜನರ ಮನವೊಲಿಸಿ ಹಸಿ, ಒಣ ಕಸ ಬೇರೆ ಮಾಡಿಸಿ ಪಡೆಯುತ್ತಾರೆ. ಶಿರಾ ಗೇಟ್‍ನ 3ನೇ ವಾರ್ಡಿನ ಕಸ ಸಂಗ್ರಹಾಕಾರ ಮಹದೇವ್ ಬಗ್ಗೆ ಅಲ್ಲಿನ ಜನ ಒಳ್ಳೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಜನರ ಮನವೊಲಿಸಿ, ಕಸ ಸಂಗ್ರಹಿಸುವ ಮಹದೇವ್ ಬಗ್ಗೆ ಅಲ್ಲಿನ ಜನರೂ ವಿಶ್ವಾಸದಿಂದ ಸ್ಪಂದಿಸುತ್ತಾರೆ.

ಮೂರು ಬಗೆಯ ಕಸ

       ಮನೆಗಳಲ್ಲಿ ಸಾಮಾನ್ಯವಾಗಿ ಮೂರು ಬಗೆಯ ಕಸ ಉತ್ಪತ್ತಿಯಾಗುತ್ತವೆ. ಹಸಿ ಕಸ, ಒಣ ಕಸ ಹಾಗೂ ತಿರಸ್ಕøತ ಕಸ. ಅಡುಗೆ ಮನೆ ತರಕಾರಿ ತ್ಯಾಜ್ಯ, ಪೇಪರ್ ತಟ್ಟೆ, ಸುಲಪಟ್ಟೆ ಎಲೆ, ಮೊಟ್ಟೆ ಸಿಪ್ಪೆ ಹಾಗೂ ಇತರೆ ಹಸಿ ಪದಾರ್ಥಗಳನ್ನು ಹಸಿ ಕಸ, ಪ್ಲಾಸ್ಟಿಕ್ ಕವರ್, ಹಾಲಿನ ಕವರ್, ನೀರಿನ ಬಾಟಲ್‍ಗಳು, ಎಣ್ಣೆ ಪ್ಯಾಕೆಟ್, ದಿನಸಿ ಅಂಗಡಿ, ಬೇಕರಿ ಮತ್ತು ಇತರೆ ಸ್ಥಳಗಳಲ್ಲಿ ಪ್ಲಾಸ್ಟಿಕ್ ವಸ್ತುಗಳು, ಮಾತ್ರೆ ಕವರ್‍ಗಳು ಪ್ಲಾಸ್ಟಿಕ್‍ಗೆ ಸಂಬಂಧಿಸಿದ ಎಲ್ಲ ಪದಾರ್ಥಗಳನ್ನು ಒಣ ಕಸ. ಜೊತೆಗೆ ಸ್ಯಾನಿಟರಿ ನ್ಯಾಪ್‍ಕಿನ್ಸ್, ಮಕ್ಕಳ ಡೈಪರ್‍ಗಳು ಹಾಗೂ ಆಸ್ಪತ್ರೆಗಳ ತ್ಯಾಜ್ಯ ವಸ್ತುಗಳನ್ನು ತಿರಸ್ಕøತ ಕಸವೆಂದು ಪರಿಗಣಿಸಲಾಗಿದ್ದು, ಈ ಮೂರು ಹಂತಗಳಲ್ಲಿ ಕಸ ಬೇರ್ಪಡಿಸಿ ನೀಡಿದರೆ ವಿಲೇವಾರಿ ಸುಲಭವಾಗುತ್ತದೆ. ಮನೆಯಿಂದಲೇ ಕಸ ಬೇರ್ಪಡಿಸಿ ನೀಡುವ ಮೂಲಕ ಸ್ವಚ್ಛತೆಯ ಬದ್ಧತೆಯನ್ನು ನಾಗರೀಕರು ತೋರಬೇಕಿದೆ.

ಮತ್ತಷ್ಟು ಜಾಗೃತಿ ಅಗತ್ಯ

         ಕಸ ಬೇರ್ಪಡಿಸಿ ನೀಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದನ್ನು ತಡೆಯಲು ಆಯಾ ವಾರ್ಡ್‍ಗಳ ನಗರ ಪಾಲಿಕೆ ಸದಸ್ಯರು, ಸ್ಥಳೀಯ ಸಂಘಸಂಸ್ಥೆಗಳು ಜನ ಜಾಗೃತಿ ಮಾಡಿಸಬೆಕಾಗಿದೆ. 26 ನೇ ವಾರ್ಡಿನ ಸದಸ್ಯ ಮಲ್ಲಿಕಾರ್ಜುನ್ ಅವರು ಮನೆಮನೆಗೆ ತೆರಳಿ ಪ್ರಚಾರ ಮಾಡಿ ನಾಗರೀಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ತಮ್ಮ ವಾರ್ಡಿನಲ್ಲಿ ಸ್ವಚ್ಚತೆ ಬಗ್ಗೆ ಹೆಚ್ಚು ಜಾಗೃತಿ ಮೂಡಿದೆ ಎಂದು ಮಲ್ಲಿಕಾರ್ಜುನ್ ಅಭಿಮಾನದಿಂದ ಹೇಳುತ್ತಾರೆ.

        ನಗರದ ಸ್ವಚ್ಚತೆಗೆ ಪ್ರತಿಯೊಬ್ಬರೂ ಸಹಕರಿಸಬೇಕು, ಮನೆಯಿಂದಲೇ ಸ್ವಚ್ಚತಾ ಕಾರ್ಯ ಆರಂಭವಾಗಬೇಕು ಎಂದು ಮನವಿ ಮಾಡಿದ್ದಾರೆ. ಮನೆಗಳು ಮಾತ್ರವಲ್ಲದೆ, ಹೋಟೆಲ್, ಬೀದಿವ್ಯಾಪಾರಿಗಳು, ಪಿಜಿ ಹಾಸ್ಟಲ್‍ಗಳು ಕಸವನ್ನು ಹಸಿಕಸ, ಒಣಕಸ, ತಿರಸ್ಕøತ ಕಸವನ್ನಾಗಿ ವಿಂಗಡಿಸಿ ಪಾಲಿಕೆಯ ಕಸದ ಟಿಪ್ಪರ್‍ಗಳಿಗೆ ನೀಡಬೇಕು. ಖಾಲಿ ನಿವೇಶನದ ಮಾಲೀಕರು ಅಲ್ಲಿ ಕಸ ಹಾಕದಂತೆ ಹಾಗೂ ನಿಯಮಿತವಾಗಿ ಸ್ವಚ್ಚಗೊಳಿಸಿ ಸಹಕರಿಸಬೇಕಾಗಿದೆ.

ಕಸ ಸುರಿಯುವವರಿಗೆ ದಂಡ

        ಸಾರ್ವಜನಿಕ ಸ್ಥಳಗಳಲ್ಲಿ ಕಸ ತಂದು ಸುರಿಯುವವರಿಗೆ ನಗರ ಪಾಲಿಕೆಯಿಂದ ದಂಡ ವಿಧಿಸಲಾಗುತ್ತದೆ. ಕಸ ಸುರಿಯುವವರ ಬಗ್ಗೆ ನೀಡುವ ದೂರನ್ನು ಪಾಲಿಕೆ ಅಧಿಕಾರಿಗಳನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ತೆಗೆದುಕೊಳ್ಳಬೇಕು. ಕಸವನ್ನು ತಂದು ಸುರಿಯುವವರ ಮೇಲೆ ಮಹಾನಗರ ಪಾಲಿಕೆ ತೀವ್ರ ನಿಗಾ ವಹಿಸಿದೆ. ರಾತ್ರಿ ವೇಳೆ ಕಸ ಎಸೆಯುವವರಿಗೆ ದಂಡ ಹಾಕಲಾಗಿದೆ. ವ್ಯಾಪಾರಿಗಳು ಎಲ್ಲೆಂದರಲ್ಲಿ ಕಸವನ್ನು ಸುರಿದರೆ ದಂಡದೊಂದಿಗೆ ವ್ಯಾಪಾರಕ್ಕೆ ನಿರ್ಬಂಧ ವಿಧಿಸಲಾಗುವುದು ಹಾಗೂ ಲೈಸೆನ್ಸ್ ರದ್ದುಗೊಳಿಸಲಾಗುವುದು, ಮನೆಯ ಕಸವನ್ನು ಖಾಲಿ ನಿವೇಶನ, ರಸ್ತೆ ಬದಿ, ಮರ, ಲೈಟ್‍ಕಂಬದ ಬುಡದಲ್ಲಿ ಕಸ ಹಾಕುವವರಿಗೂ ದಂಡ ವಿಧಿಸಲು ಪಾಲಿಕೆ ಆದೇಶ ಹೊರಡಿಸಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link