ತುಮಕೂರು
ನಗರದ ಉಪ್ಪಾರಹಳ್ಳಿಯಿಂದ ಗೆದ್ದಲಹಳ್ಳಿಗೆ ತೆರಳುವ ರಸ್ತೆಯಲ್ಲಿ ಸಪ್ತಗಿರಿ ಬಡಾವಣೆ 10ನೇ ಮುಖ್ಯರಸ್ತೆಯ ಬಳಿ ಮಾತಾ ಛಾರಿಟಬಲ್ ಟ್ರಸ್ಟ್‍ಗೆ ಹೋಗುವ ದಾರಿಯಲ್ಲಿ ಕಸದ ರಾಶಿಗಳು ಇದ್ದು, ಅದನ್ನು ಶೀಘ್ರವಾಗಿ ತೆರವು ಗೊಳಿಸಲಾಗುವುದು ಎಂದು ಪಾಲಿಕೆ 30ನೇ ವಾರ್ಡಿನ ಸದಸ್ಯ ವಿಷ್ಣುವರ್ಧನ್ ತಿಳಿಸಿದರು.
30ನೇ ವಾರ್ಡ್ ಬಹುದೊಡ್ಡ ವಾರ್ಡ್ ಆಗಿದೆ. ಇಲ್ಲಿ ಸುಮಾರು 9000 ಮನೆಗಳಿವೆ. ಹೆಚ್ಚಿನದಾಗಿ ವಿದ್ಯಾವಂತರು, ನೌಕರರು ಈ ವಾರ್ಡ್‍ನಲ್ಲಿ ಇದ್ದಾರೆ. ಪ್ರತಿಯೊಬ್ಬರಿಗೂ ತಮ್ಮದೆ ಆದ ಕೆಲಸ ಕಾರ್ಯಗಳು ಇರುವುದರಿಂದ ಕಸದ ವಾಹನಗಳನ್ನು 8 ಗಂಟೆಯೊಳಗೆ ಬರುವಂತೆ ಕೇಳುತ್ತಾರೆ. ಈ ವಾರ್ಡ್‍ನಲ್ಲಿ ಕಸವನ್ನು ತುಂಬಿಕೊಂಡು ಅದನ್ನು ಹನುಮಂತಪುರದಲ್ಲಿರುವ ಕಸದ ಪಾಯಿಂಟ್‍ನಲ್ಲಿನ ವಾಹನಕ್ಕೆ ಹಾಕಿ ಬರಲು 2 ಗಂಟೆಗೂ ಹೆಚ್ಚು ಕಾಲ ಸಮಯ ವ್ಯರ್ಥವಾಗುತ್ತಿದೆ. ಇದರಿಂದ ವಾರ್ಡ್‍ನಲ್ಲಿ ಸಮಸ್ಯೆ ಎದುರಾಗುತ್ತಿದೆ. ಈ ವಾರ್ಡ್‍ಗೆ ಕೇವಲ 3 ಕಸದ ಆಟೋಗಳಿದ್ದು, ಹೆಚ್ಚಿನ ಅವಶ್ಯತೆ ಇದೆ ಎಂದರು.
ಈ ಮುಂಚೆ ಉಪ್ಪಾರಹಳ್ಳಿಯ ಕೆಳಸೇತುವೆ ಬಳಿ ಇದ್ದಂತಹ ಕಸದ ಜಂಕ್ಷನ್‍ನಲ್ಲಿ ಕಸವನ್ನು ಹಾಕಿ ಅಲ್ಲಿ ಬೇರ್ಪಡಿಸಿ ಅಲ್ಲಿಂದ ಅಜ್ಜ ಗೊಂಡನಹಳ್ಳಿ ಕಸ ವಿಲೇವಾರಿ ಘಟಕಕ್ಕೆ ತೆಗದುಕೊಂಡು ಹೋಗಲಾಗುತ್ತಿತ್ತು. ಆದರೆ ಇತ್ತೀಚೆಗೆ ಸಾರ್ವಜನಿಕರ ದೂರಿನ ಮೇರೆಗೆ ಆಯುಕ್ತರು ಉಪ್ಪಾರಹಳ್ಳಿ ಸೇತುವೆ ಬಳಿಯ ಕಸದ ಜಂಕ್ಷನ್ ಅನ್ನು ವೀಕ್ಷಣೆ ಮಾಡಿ ಸಮಸ್ಯೆ ಅರಿತು ಅಲ್ಲಿನ ಪಾಯಿಂಟ್ ಅನ್ನು ತೆರವುಗೊಳಿಸಲಾಯಿತು.
ಇದರಿಂದ ಕಸವನ್ನು ವಿಂಗಡಣೆ ಮಾಡುವ ದೃಷ್ಠಿಯಿಂದ ಸಪ್ತಗಿರಿ ಬಡಾವಣೆಯ 10ನೇ ಮುಖ್ಯ ರಸ್ತೆಯ ಬಳಿ ಇದ್ದ ಖಾಲಿ ಜಾಗದಲ್ಲಿ ಪಾಯಿಂಟ್ ಮಾಡಿಕೊಳ್ಳಲಾಗಿದ್ದು, ಕೇವಲ ಎರಡು ದಿನದಿಂದ ಪಾಲಿಕೆ ವಾಹನಗಳು ನಿಲ್ಲುತ್ತಿವೆ ಎಂದು ತಿಳಿಸಿದರು.
ಕಸದ ವಾಹನಗಳು ನಿಲ್ಲುತ್ತಿರುವುದನ್ನು ನೋಡಿದ ಸ್ಥಳೀಯರು ಕಸದ ವಾಹನ ಬರದೇ ಇದ್ದಾಗ ಕಸವನ್ನು ತಂದು ಸುರಿಯಲು ಪ್ರಾರಂಭಿಸಿದ್ದಾರೆ. ಇದರಿಂದ ಕಸವು ಶೇಖರಣೆ ಆಗುತ್ತಿದೆ. ಕಸ ಇದ್ದುದರಿಂದ ಹಂದಿಗಳು ಬಂದು ವಾಸ ಮಾಡಲು ಪ್ರಾರಂಭ ಮಾಡುತ್ತಿವೆ. ಶೀಘ್ರದಲ್ಲೇ ಅಲ್ಲಿಂದ ಕಸದ ಪಾಯಿಂಟ್‍ಅನ್ನು ತೆರವು ಗೊಳಿಸಿ ಗಾರೆನರಸಯ್ಯ ಕಟ್ಟೆಯ ಬಳಿ ಎಸ್‍ಎಲ್‍ಎಲ್ ಡಾಭಾ ಹಿಂಭಾಗದಲ್ಲಿನ ಖಾಲಿ ಜಾಗದಲ್ಲಿ ಪಾಯಿಂಟ್ ಮಾಡಿಕೊಂಡು ಅಲ್ಲಿಂದ ಕಸವನ್ನು ವಿಂಗಡಣೆ ಮಾಡಿ ತೆಗದುಕೊಂಡು ಹೋಗುವ ಕೆಲಸ ಮಾಡಲು ತೀರ್ಮಾನಿಸಿದ್ದೇವೆ.
ಈ ಬಗ್ಗೆ ಆಯುಕ್ತರಿಗೆ ಬಳಿ ಒಮ್ಮೆ ಚರ್ಚಿಸಿ ಸಮಸ್ಯೆಗೆ ಶೀಘ್ರವಾಗಿ ಪರಿಹಾರ ಮಾಡುತ್ತೇವೆ ಎಂದರು.ಗೆದ್ದಲಹಳ್ಳಿ ಮುಖ್ಯರಸ್ತೆಯಲ್ಲಿ ಹಲವು ಮಾಂಸದ ಅಂಗಡಿಗಳು ಇದ್ದು, ಕೋಳಿಯ ತಾಜ್ಯ ಸೇರಿದಂತೆ ವಿವಿಧ ರೀತಿಯ ಮಾಂಸದ ತ್ಯಾಜ್ಷವನ್ನು ರಸ್ತೆಯ ಪಕ್ಕದಲ್ಲಿಯೇ ಸುರಿಯುತ್ತಿದ್ದಾರೆ ಎಂಬ ಆರೋಪ ಜನರಿಂದ ಕೇಳಿ ಬರುತ್ತಿದ್ದು, ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.
ತುಮಕೂರು ನಗರದಲ್ಲಿ ಕಸದ ಸಮಸ್ಯೆ ದಿನೆ ದಿನೆ ಹೆಚ್ಚಾಗುತ್ತಿದೆ. ಇದನ್ನು ಪರಿಹರಿಸಲು ಕೇವಲ ಪಾಲಿಕೆಯವರು ಮಾತ್ರ ಕೆಲಸ ಮಾಡಿದರೆ ಸಾಲದು ಜೊತೆಗೆ ಜನರು ಇದಕ್ಕೆ ಸಹಕರಿಸಬೇಕು,. ಕಸವನ್ನು ಮನೆಯಲ್ಲಿಯೇ ವಿಂಗಡಣೆ ಮಾಡಿ ಕಸದ ವಾಹನಗಳಿಗೆ ನೀಡಿದರೆ ಹೆಚ್ಚಿನ ತೊಂದರೆ ಆಗುವುದಿಲ್ಲ. ಈಗಾಗಲೇ 70% ರಷ್ಟು ಜನ ಕಸ ವಿಂಗಡಣೆ ಮಾಡಿ ಕೊಡುತ್ತಿದ್ದಾರೆ. ಉಳಿದ 30ರಷ್ಟು ಜನ ಕೂಡ ಕಸ ವಿಂಗಡಣೆ ಮಾಡಿಕೊಟ್ಟರೆ ಅನುಕೂಲವಾಗುತ್ತದೆ. ಆದಷ್ಟು ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ ಕಸದ ವಾಹನಗಳಿಗೆ ನೀಡಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ