ಕಸಾಪ ಸಂಸ್ಥಾಪನಾ ದಿನಾಚರಣೆ: ಮಹನೀಯರ ಸ್ಮರಣೆ

ತುಮಕೂರು

      ಕನ್ನಡ ಸಾಹಿತ್ಯ ಪರಿಷತ್ತಿಗೆ 105 ವರ್ಷಗಳ ಸಂಭ್ರಮ. ಕನ್ನಡ ನಾಡು, ನುಡಿ, ಸಂಸ್ಕೃತಿ ರಕ್ಷಣೆಗಾಗಿ 1915ರಲ್ಲಿ ಆಗಿನ ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಳಜಿ ವಹಿಸಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಪರಿಷತ್ ಸಂಸ್ಥಾಪನೆ ಗೊಳ್ಳಲು ಪ್ರಮುಖ ಕಾರಣರಾಗಿದ್ದರು. ಆಗಿನಿಂದ ಈಗಿನವರೆಗೂ ಹಲವು ಮಹನೀಯರು ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿ ಕನ್ನಡ ನಾಡು, ನುಡಿ ಬೆಳವಣಿಗೆಗೆ ನೆರವಾಗಿದ್ದಾರೆ.

       ಕನ್ನಡಕ್ಕಾಗಿ ದುಡಿದವರನ್ನು ಸ್ಮರಿಸುವ ಕಾರ್ಯಕ್ರಮವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತಾಲ್ಲೂಕು ಹಾಗೂ ನಗರ ಘಟಕಗಳ ಆಶ್ರಯಲ್ಲಿ ನಗರದ ಕನ್ನಡ ಭವನದಲ್ಲಿ ಸಾಹಿತ್ಯ ಪರಿಷತ್ತಿನ 105ನೇ ಸಂಸ್ಥಾಪನಾ ದಿನ ಆಚರಿಸಲಾಯಿತು.

      ಸಮಾರಂಭದ ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ ಹ ರಮಾಕುಮಾರಿ ಮಾತನಾಡಿ, ಕಲೆ, ಸಾಹಿತ್ಯ, ಸಂಗೀತ, ನಾಟಕಗಳಿಂದಲೂ ಕನ್ನಡ ಉಳಿದಿದೆ. ಪರಿಷತ್ತು ಪ್ರಕಟಿಸಿರುವ, ಬೇರೆಲ್ಲೂ ಸಿಗದ ಪುಸ್ತಕಗಳು ಇಲ್ಲಿನ ಗ್ರಂಥಾಲಯದಲ್ಲಿ ಸಿಗುತ್ತವೆ. ಸಂಶೋಧಕರು, ಸಾಹಿತ್ಯಾಸಕ್ತರು ಬಂದು ಇದರ ಸದುಪಯೋಗಪಡಿಸಿಕೊಳ್ಳಬಹುದು ಎಂದು ಹೇಳಿದರು.

        ಇದೇ ಮೇ 12ಕ್ಕೆ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಸ್ತಿತ್ವಕ್ಕೆ ಬಂದು 50 ವರ್ಷವಾಗುತ್ತದೆ. ಪರಿಷತ್ತಿನಿಂದ ಸುವರ್ಣ ಮಹೋತ್ಸವ ಆಚರಿಸಲಾಗುತ್ತದೆ. ಕನ್ನಡ ಭವನದ ನೆಲ ಅಂತಸ್ತಿನ ಸಭಾಂಗಣ ಸಿದ್ಧವಾಗಿದ್ದು ಅದಕ್ಕೆ ಸುವರ್ಣ ಸಭಾಂಗಣ ಎಂದು ನಾಮಕರಣ ಮಾಡಲಾಗುತ್ತದೆ ಎಂದರು.

       ಸಾಹಿತ್ಯ ಸಮ್ಮೇಳನಗಳನ್ನು ಉತ್ಸವ, ಜಾತ್ರೆ ಎಂದು ಅಲ್ಲಗಳೆಯಬಾರದು. ಅಲ್ಲಿ ಸೇರುವ ಜನ ಕನ್ನಡದ ಶಕ್ತಿ ತೋರಿಸುತ್ತದೆ ಎಂದರು.

       ತುಮಕೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ನಾಗಭೂಷಣ್ ಬಗ್ಗನಡು ಕಾರ್ಯಕ್ರಮ ಉದ್ಘಾಟಿಸಿ, ಸ್ವಾತಂತ್ರ್ಯ ಪೂರ್ವದಲ್ಲಿ ಕನ್ನಡ ಭಾಷಿಕರು ಬೇರೆ ಭಾಷೆ ಆಡಳಿತ ಅಧೀನದಲ್ಲಿದ್ದರು. ಈ ಸಂಕಟದಿಂದ ಹೊರಬರಲು ಕನ್ನಡ ಭಾಷೆ, ಪ್ರದೇಶ, ಸಂಸ್ಕೃತಿಯನ್ನು ಒಗ್ಗೂಡಿಸುವ, ಅದರ ಅಸ್ಮಿತೆಯನ್ನು ರಕ್ಷಿಸಿಕೊಳ್ಳುವ ಪರಿಸ್ಥಿತಿ ಎದುರಾಗಿತ್ತು, ಆ ವೇಳೆ ಕನ್ನಡ ಕಟ್ಟು ಕಾರ್ಯಕ್ಕೆ ನೆರವಾಗಿದ್ದು ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಈ ವೇಳೆ ಪ್ರಮುಖವಾಗಿ ನೆನೆಯಬೇಕು ಎಂದು ಹೇಳಿದರು.

       ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಮಾಜಿಕ ಚಳುವಳಿಯ ಹರಿಕಾರರು, ಎಲ್ಲಾ ಊರುಗಳಲ್ಲಿ ಪ್ರಜಾಪ್ರಭುತ್ವದ ಗೌರವ ಸೃಷ್ಠಿಸಿದವರು. ರಾಜ್ಯಕ್ಕೆ ಬೇಕಾದ ಕಾರ್ಯಗಳು ಪ್ರಭುತ್ವದ ತೀರ್ಮಾನ ಆಗಬಾರದು, ಸಾರ್ವಜನಿಕ ಪ್ರತಿನಿಧಿಗಳು ಚರ್ಚಿಸಬೇಕು ಎನ್ನುವ ಕಾರಣಕ್ಕೆ 1909ರಲ್ಲಿ ಜನಪ್ರತಿನಿಧಿ ಸಮಿತಿ ರಚಿಸಿದ್ದರು. ಶಾಹು ಮಹಾರಾಜರನ್ನು ಬಿಟ್ಟರೆ ಪ್ರಜಾಪ್ರಭುತ್ವದೊಳಗೆ ರಾಜ್ಯಭಾರ ಮಾಡಿದ ಎರಡನೇ ರಾಜ ನಾಲ್ವಡಿ ಒಡೆಯರ್ ಎಂದ ಅವರು, ಆ ಕಾಲಕ್ಕೇ ಒಡೆಯರ್ ಸಾಮಾಜಿಕ ಅನಿಷ್ಠಗಳನ್ನು ನಿಷೇಧಿಸಿದರು. ದೇಶದಲ್ಲಿ ಸಂವಿಧಾನ ರಚನೆ ಆಗುವ ಮೊದಲೇ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದರು ಎಂದರು.

       ಕನ್ನಡ ನಾಡಿಗೆ ಒಡೆಯರರ ಅವರ ಕೊಡುಗೆ ಅಪಾರ. ಕೈಗಾರಿಕೆ, ವಿದ್ಯೆ, ವ್ಯವಸಾಯಕ್ಕೆ ಆದ್ಯತೆ ನೀಡಿದ್ದ ಅವರು, ಮೈಸೂರು ಸಂಸ್ಥಾನದಲ್ಲಿ ಬೃಹತ್ ಕೈಗಾರಿಕೆ ಸ್ಥಾಪನೆ ಮಾಡಬೇಕು ಎಂದು ಭದ್ರಾವತಿಯ ಕಾಗದದ ಕಾರ್ಖಾನೆ, ಶಿವನಸಮುದ್ರ ಜಲ ವಿದ್ಯುತ್ ಘಟಕ ಸ್ಥಾಪಿಸಿದರು. ರಾಜ್ಯದಲ್ಲಿ ಒಂದು ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇಕೆಂಬ ಆಶಯದ ಫಲವಾಗಿ ಮೈಸೂರು ವಿಶ್ವವಿದ್ಯಾಲಯ ಆರಂಭ ಮಾಡಿದರು.

        ಕನ್ನಡ ಭಾಷೆ, ಸಾಹಿತ್ಯ, ಸಂಸ್ಕತಿ ರಕ್ಷಿಸಲು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ 1915ರಂದು ಕನಾಟಕ ಸಾಹಿತ್ಯ ಪರಿಷತ್ ಸ್ಥಾಪನೆಯಾಗಲು ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಯತ್ನಿಸಿದರು. ಹೆಚ್ ವಿ ನಂಜುಂಡಯ್ಯನವರ ಅಧ್ಯಕ್ಷತೆಯಲ್ಲಿ ನಾಲ್ಕು ದಿನ ಕಾಲ ನಡೆದ ಸಭೆಯಲ್ಲಿ ಸಾಹಿತ್ಯ ಪರಿಷತ್ ಸ್ಥಾಪನೆಗೆ ತೀರ್ಮಾನಿಸಲಾಯಿತು. ಆ ಸಭೆಯೇ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನವಾಗಿ ಆರಂಭವಾಯಿತು ಎಂದು ಹೇಳಿದರು.

       ಅದಾಗಿ 1920ರಲ್ಲಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ಅರಸು ಮನೆತನಕ್ಕೆ ಉಳಿಸಿ, ಉಪಾಧ್ಯಕ್ಷ ಸ್ಥಾನವನ್ನು ಚುನಾವಣೆ ಮೂಲಕ ಆಯ್ಕೆ ಮಾಡುವ ವ್ಯವಸ್ಥೆ ಆರಂಭವಾಯಿತು. ದೇಶದಲ್ಲಿ ಚುನಾವಣೆ ಅಂದರೇನು ಎಂದು ಗೊತ್ತಿಲ್ಲದ ಕಾಲದಲ್ಲಿ ಮೊದಲ ಬಾರಿಗೆ ಚುನಾವಣೆಯನ್ನು ಮೈಸೂರು ಅರಸರು ಚಾಲನೆಗೆ ತಂದರು. ಡಿ ವಿ ಗುಂಡಪ್ಪ ಪರಿಷತ್ತಿನ ಅಧ್ಯಕ್ಷರಾದ ಕಾಲದಲ್ಲಿ ಮೈಸೂರು ಪ್ರಾಂತ್ಯಕ್ಕೆ ಸೀಮಿತವಾಗಿದ್ದ ಪರಿಷತ್ ಅನ್ನು ಬೇರೆ ಪ್ರಾಂತಗಳಲ್ಲೂ ಶಾಖೆಗಳನ್ನು ತೆರೆಯುವ ಕೆಲಸ ಮಾಡಿದರು.

        ಬಿ ಎಂ ಶ್ರೀಕಂಠಯ್ಯ ಪರಿಷತ್ ಅಧ್ಯಕ್ಷರಾದ ಮೇಲೆ ಪರಿಷತ್ತಿಗೆ ಸಾಹಿತ್ಯ ಸ್ಪರ್ಶ ತುಂಬುವ ಕೆಲಸ ಮಾಡಿದರು ಎಂದು ಡಾ. ನಾಗಭೂಷನ್ ಬಗ್ಗನಡು ಹೇಳಿದರು.ಕನ್ನಡಿಗರಲ್ಲದೆ ವಿದೇಶಿ ವಿದ್ವಾಂಸರು ಕನ್ನಡ ಕಟ್ಟುವ ಕೆಲಸವನ್ನು ಸತತವಾಗಿ, ಗಂಭೀರವಾಗಿ ಮಾಡಿದರು. ಕ್ರಿಶ್ಚಿಯನ್ ಮಿಷನರಿಗಳೂ ಕನ್ನಡ ಸಾಹಿತ್ಯ ಚರಿತ್ರೆ ಬೆಳೆಯಲು ಸಹಕಾರಿಯಾದರು ಎಂದು ಕನ್ನಡಕ್ಕಾಗಿ ಶ್ರಮಿಸಿದವರ ಸೇವೆ ಸ್ಮರಿಸಿದರು.

        ತುಮಕೂರು ವಿಶ್ವ ವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ವೆಂಕಟರೆಡ್ಡಿ ರಾಮರೆಡ್ಡಿ ಮಾತನಾಡಿ, ಸಾಹಿತ್ಯ ಸಮ್ಮೇಳನಗಳು ಉತ್ಸವಗಳಾಗದೆ, ಅಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಸರ್ಕಾರದ ಮಟ್ಟದಲ್ಲಿ ಕಾರ್ಯರೂಪಕ್ಕೆ ಬರಲು ಒತ್ತಡ ತರುವ ಕೆಲಸ ಆಗಬೇಕು ಎಂದರು.

       ಆದುವರೆಗೆ ಕರ್ನಾಟಕ ಸಾಹಿತ್ಯ ಪರಿಷತ್ ಎಂದಿದ್ದನ್ನು ಬಿ ಎಂ ಶ್ರೀಕಂಠಯ್ಯನವರು ಅಧ್ಯಕ್ಷರಾಗಿದ್ದಾಗ 1938ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಎಂದು ನಾಮಕರಣ ಮಾಡಲಾಯಿತು. ನಾಲ್ವರು ಆಜೀವ ಸದಸ್ಯರಿಂದ ಆರಂಭವಾದ ಪರಿಷತ್ ಇಂದು ಎರಡೂವರೆ ಲಕ್ಷಕ್ಕೂ ಹೆಚ್ಚು ಆಜೀವ ಸದಸ್ಯರನ್ನು ಹೊಂದಿ ಬೆಳೆಯುತ್ತಿದೆ. ಈವರೆಗೆ 84 ಅಖಿಲ ಭಾತರ ಸಾಹಿತ್ಯ ಸಮ್ಮೇಳನಗಳು ನಡೆದು ಸಾಹಿತ್ಯ ಚಟುವಟಿಕೆಗಳು ವ್ಯಾಪಕಗೊಳ್ಳುತ್ತಿವೆ ಎಂದು ಹೇಳಿದರು.ತುಮಕೂರು ತಾಲ್ಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಶೈಲಾ ನಾಗರಾಜ್, ನಗರ ಪರಿಷತ್ ಅಧ್ಯಕ್ಷೆ ಅನ್ನಪೂರ್ಣ ವೆಂಕಟನಂಜಪ್ಪ ಭಾಗವಹಿಸಿದ್ದರು. ಕವಯತ್ರಿ ರಂಗಮ್ಮ ಹೊದೇಕಲ್ ಕಾರ್ಯಕ್ರಮ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap