ಕಾವೇರಿ ಆನ್ಲೈನ್ ಸೇವೆ ಪ್ರಾರಂಭ

ಬೆಂಗಳೂರು

       ರಾಜ್ಯಾದ್ಯಂತ ಇನ್ನು ಮುಂದೆ ಜಮೀನು, ನಿವೇಶನ, ಆಸ್ತಿ ನೋಂದಣಿ ಕಾರ್ಯವನ್ನು ಆನ್‍ಲೈನ್ ಮೂಲಕ ಸುಲಭವಾಗಿ ಮಾಡಿಸಿಕೊಳ್ಳಬಹುದು.

       ಕಾವೇರಿ ಹೆಸರಿನ ಅಂತರ್ಜಾಲಕ್ಕೆ ಹೋಗಿ ಅಗತ್ಯದ ಮಾಹಿತಿಗಳನ್ನು ಪಡೆದು ಆನ್‍ಲೈನ್ ಮೂಲಕವೇ ಅದನ್ನು ಉಪನೋಂದಣಾಧಿಕಾರಿಗಳಿಗೆ ರವಾನಿಸಿದರೆ ನೋಂದಣಿ ದಿನಾಂಕವನ್ನು ನಿಗದಿಪಡಿಸಿಕೊಂಡು ಮಾರಾಟಗಾರರು-ಖರೀದಿ ಮಾಡುವವರು ಒಂದೇ ದಿನದಲ್ಲಿ ನೋಂದಣಿ ಕಾರ್ಯವನ್ನು ಪೂರ್ಣಗೊಳಿಸಿಕೊಳ್ಳಬಹುದಾಗಿದೆ.

       ವಿಧಾನಸೌಧದಲ್ಲಿಂದು ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಭಿವೃದ್ಧಿ ಪಡಿಸಿರುವ ಕಾವೇರಿ-ಆನ್‍ಲೈನ್ ಸೇವೆಗಳಿಗೆ ಚಾಲನೆ ನೀಡಿದರು.

        ಇದುವರೆಗೆ ಜಮೀನು, ನಿವೇಶನ, ಆಸ್ತಿಖರೀದಿ ಸೇರಿದಂತೆ ಹಲವು ಕಾರ್ಯಗಳಿಗೆ ನೋಂದಣಿ ಮಾಡಿಸಬೇಕೆಂದರೆ ಸಂಬಂಧಪಟ್ಟಕಛೇರಿಗೆ ಹಲವು ಬಾರಿ ಅಲೆಯಬೇಕಾಗುತ್ತಿತ್ತು. ಯಾಕೆಂದರೆ ಇದೇ ಕೆಲಸಕ್ಕೆ ಐವತ್ತು, ಅರವತ್ತು ಜನ ಬಂದಾಗ ಸಮಸ್ಯೆ ಉಲ್ಬಣವಾಗುತ್ತಿತ್ತು.

        ಹೀಗಾಗಿ ಇನ್ನು ಮುಂದೆ ಕಾವೇರಿ ವೆಬ್ ಸೈಟ್ ಅನ್ನು ಕಂದಾಯ ಇಲಾಖೆ ಆರಂಭಿಸಿದ್ದು, ಈ ವೆಬ್ ಸೈಟ್‍ಗೆ ಹೋದರೆ ಸದರಿ ಜಮೀನು, ನಿವೇಶನ, ಆಸ್ತಿಯ ಸರ್ಕಾರಿ ಮಾರ್ಗಸೂಚಿ ಮೌಲ್ಯದ ವಿವರ ದೊರೆಯುತ್ತದೆ.

         ಹೀಗೆ ಸಿಗುವ ವಿವರವನ್ನು ಪಡೆದು ಆನ್‍ಲೈನ್‍ನಲ್ಲಿ ಸಂಬಂಧಪಟ್ಟ ಆಸ್ತಿಯ ವಿವರ ದಾಖಲಿಸಿ, ಅದರ ನೋಂದಣಿಗೆ ತಗಲುವ ವೆಚ್ಚವನ್ನೂ ಭರಿಸಿ ಸದರಿ ವಿವರವನ್ನು ಉಪನೋಂದಣಾಧಿಕಾರಿಗಳಿಗೆ ಕಳಿಸಬೇಕು. ಅವರು ಅದನ್ನು ಪರಿಶೀಲಿಸಿ ಆಸ್ತಿ ನೋಂದಣಿಗೆ ದಿನವನ್ನು ನಿಗದಿ ಮಾಡುತ್ತಾರೆ.

          ಅವರು ನಿಗದಿ ಮಾಡಿದ ದಿನದಂದು, ನಿರ್ದಿಷ್ಟ ಸಮಯಕ್ಕೆ ಹೋದರೆ ಕೆಲವೇ ಹೊತ್ತಿನಲ್ಲಿ ನೋಂದಣಿ ಕಾರ್ಯ ಪೂರ್ಣವಾಗುತ್ತದೆ. ಆ ಮೂಲಕ ಸಮಯದ ಉಳಿತಾಯವೂ ಆಗುತ್ತದೆ.

          ಇದೇ ರೀತಿ ಮನೆ ಬಾಡಿಗೆ ಪತ್ರ, ಗುತ್ತಿಗೆ ಆಧಾರದ ಪತ್ರ, ವಿವಿಧ ಪ್ರಮಾಣ ಪತ್ರಗಳನ್ನು ಆನ್‍ಲೈನ್ ಮೂಲಕವೇ ಸ್ಟ್ಯಾಂಪ್ ಪೇಪರ್ ಡೌನ್ ಲೋಡ್ ಮಾಡಿಕೊಂಡು ಕೆಲಸ ಸುಲಭಗೊಳಿಸಿಕೊಳ್ಳಬಹುದು. ಇಪ್ಪತ್ತು ರೂಪಾಯಿಯಿಂದ ಹಿಡಿದು ನೂರು ರೂಪಾಯಿಗಳ ಮೌಲ್ಯದ ತನಕ ಸ್ಟ್ಯಾಂಪ್ ಪೇಪರ್‍ಗಳನ್ನು ಈ ರೀತಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

          ಹೀಗೆಯೇ ವಿವಾಹವನ್ನು ಯಾವ ವ್ಯಾಪ್ತಿಯ ಕಛೇರಿಯಲ್ಲಿ ನೋಂದಣಿ ಮಾಡಿಸಬಹುದು ಎಂಬುದರಿಂದ ಹಿಡಿದು ಒಟ್ಟು 9 ಬಗೆಯ ಸೇವೆಗಳನ್ನು ಆರಂಭಿಸಲಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ತಕ್ಷಣದಿಂದಲೇ ಇವು ಜಾರಿಗೆ ಬರಲಿದೆ. ನಂತರ ಇದು ರಾಜ್ಯಾದ್ಯಂತ ಆರಂಭಗೊಳ್ಳಲಿದೆ.

           ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಮಾತನಾಡಿ, ಮಧ್ಯ ವರ್ತಿಗಳ ಹಾವಳಿ ತಪ್ಪಿಸಲು ಆನ್ ಲೈನ್ ಸೇವೆ ಉಪಯುಕ್ತವಾಗಿದೆ. ಜನಸಾಮಾನ್ಯರಿಗೆ ಸುಗಮ ಆಡಳಿತ ನೀಡಲು ಇದು ಪರಿಣಾಮಕಾರಿ ಮಾಧ್ಯಮವಾಗಿದೆ ಎಂದರು.

            ಸಾಲ ಮನ್ನಾ ಕುರಿತ ಮಾಹಿತಿ ಕೂಡ ಆನ್‍ಲೈನ್‍ನಲ್ಲೇ ಲಭ್ಯವಾಗಲಿದ್ದು, ಬೆರಳ ತುದಿಯಲ್ಲೇ ಜನರಿಗೆ ಸೇವೆ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

            ಕಂದಾಯ ಸಚಿವ ದೇಶಪಾಂಡೆ ಮಾತನಾಡಿ, ಆನ್‍ಲೈನ್ ಮೂಲಕ ಲಭ್ಯವಿರುವ 9 ಸೇವೆಗಳು ಮೊದಲ ಹಂತದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಗೆ ಬರಲಿದ್ದು ಶೀಘ್ರದಲ್ಲೇ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದರು.

            ಕಂದಾಯ ಸಚಿವ ಆರ್.ವಿ.ದೇಶಪಾಂಡೆ,ಮಾಜಿ ಸಚಿವ ರೋಷನ್ ಬೇಗ್,ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link