ಕಾಯಕ ಪ್ರಧಾನ ಸಮುದಾಯಗಳ ಸ್ಥಿತಿ ಶೋಚನೀಯ

ದಾವಣಗೆರೆ:

     ಕುಲ ಕಸುಬುಗಳ ಆಧಾರದ ಮೇಲೆ ಜೀವನ ನಡೆಸುವ ಸಮುದಾಯಗಳ ಸ್ಥಿತಿ ಶೋಚನೀಯವಾಗಿದ್ದು, ಕಾಯಕ ಪ್ರಧಾನ ಸಮಾಜಗಳಿಗೆ ನೀಡುವ ಮಹತ್ವ ಕಡಿಮೆ ಆಗುತ್ತಿದೆ. ಅದರಲ್ಲೂ ಮಡಿವಾಳ ಸಮುದಾಯವು ಎಲ್ಲಾ ಹಂತದಲ್ಲೂ ಶೋಷಣೆಗೆ ಒಳಗಾಗುತ್ತಿದೆ ಎಂದು ಚಿತ್ರದುರ್ಗದ ಮಾಚಿದೇವ ಮಹಾಸಂಸ್ಥಾನ ಮಠದ ಬಸವ ಮಾಚೀದೇವ ಮಹಾಸ್ವಾಮಿಗಳು ಕಳವಳ ವ್ಯಕ್ತ ಪಡಿಸಿದರು.

     ನಗರದ ಹೊರ ವಲಯದಲ್ಲಿನ ಜಿಲ್ಲಾ ಪಂಚಾಯತಿ ಸಮೀಪದ ಧೋಬಿಘಾಟ್‍ನಲ್ಲಿ ಗುರುವಾರ ಮಡಿಕಟ್ಟೆ ವೃತ್ತಿ ಪರ ಸಂಘ ಹಾಗೂ ಜಿಲ್ಲಾ ಮಡಿವಾಳ ಮಾಚಿದೇವ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ 9ನೇ ವರ್ಷದ ಶ್ರೀ ಬನ್ನಿ ಮಹಾಂಕಾಳಿ ಪೂಜಾ ಮಹೋತ್ಸವದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

      12ನೇ ಶತಮಾನದಲ್ಲಿ ಕಾಯಕ ಸಮಾಜಗಳಿಗೆ ಮಹತ್ವ ನೀಡಲಾಗುತ್ತಿತ್ತು. ಶ್ರೀಮಂತಿಕೆ ಹಣವಂತಿಕೆ ಇತರೆ ಪದವಿಗಳು ಅನುಭವ ಮಂಟಪದಲ್ಲಿ ಇರಲಿಲ್ಲ. ಕಾಯಕವೇ ಅಲ್ಲಿ ಗುರುತರವಾದ ಹುದ್ದೆಯಾಗಿತ್ತು. ಇಂತಹ ಅನುಭವ ಮಂಟಪದಲ್ಲಿ 770 ಶರಣ ಶರಣೆಯರು ಬೆಳೆದು ವಿಶ್ವಕ್ಕೆ ಹೊಸ ಸಂಪ್ರದಾಯ ಹಾಕಿಕೊಟ್ಟರು. ಆದರೆ ಇಂದು ಅಂತಹ ಕಾಯಕ ಪ್ರಧಾನ ಸಮುದಾಯಗಳಿಗೆ ಮಹತ್ವ ನೀಡಲಾಗುತ್ತಿಲ್ಲ ಎಂದರು.

      12ನೇ ಶತಮಾನದಲ್ಲಿ ಶರಣರು ಬರೆದ ವಚನಗಳು ಇಡೀ ಮನುಜ ಕುಲಕ್ಕೆ ಆದರ್ಶ. ಕೇವಲ ಒಂದು ವಚನದ ಆಧಾರದ ಮೇಲೆ ನೂರಾರು ಡಿಗ್ರಿ, ಸಾವಿರಾರು ಡಾಕ್ಟರೇಟ್‍ಗಳನ್ನು ಪಡೆಯಬಹುದು. ಅಂತಹ ಮೌಲ್ಯಯುತ ವಚನಗಳ ಬಗ್ಗೆ ನಾವೆಲ್ಲ ತಿಳಿಯಬೇಕಿದೆ. ಆಧುನೀಕರಣದ ಭರದಲ್ಲಿ ಕುಲ ಕಸುಬುಗಳು ನಶಿಸುತ್ತಿದ್ದು, ಕುಲದ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಮುದಾಯಗಳು ಇನ್ನು ಕಲವೇ ವರ್ಷಗಳಲ್ಲಿ ಬೀದಿಗೆ ಬರಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಆತಂಕ ವ್ಯಕ್ತ ಪಡಿಸಿದರು

      ಮುಂಬರುವ ದಿನಗಳಲ್ಲಿ ಶಿಕ್ಷಣದ ಮೂಲಕವೇ ನಮ್ಮ ಅಸ್ತಿತ್ವ ಕಂಡುಕೊಳ್ಳಬೇಕಿದೆ. ಉತ್ತಮ ಶಿಕ್ಷಣ ಪಡೆಯುವ ಮೂಲಕ ಉತ್ತಮ ದಾರಿಗಳನ್ನು ಆಯ್ಕೆ ಮಾಡಿಕೊಂಡು ಮುಂದಿನ ಪೀಳಿಗೆಗೆ ಉತ್ತಮ ಮಾರ್ಗದರ್ಶನ ನೀಡಬೇಕಿದೆ. ಅಪ್ಪ ಹಾಕಿದ ಆಲದ ಮರ ಎಂದು ಜೋತು ಬೀಳದೆ ನಮ್ಮದೇ ಕುಲ ಕಸುಬನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡದೆ ವಿವಿಧ ಕ್ಷೇತ್ರಗಳಲ್ಲಿ ಬೆಳೆಯುವಂತೆ ಪ್ರೋತ್ಸಾಹಿಸಬೇಕೆಂದರು.

      ನಗರ ಪಾಲಿಕೆ ಸದಸ್ಯ, ಸಮಾಜ ಮುಖಂಡ ಆವರಗೆರೆಯ ಹೆಚ್.ಜಿ.ಉಮೇಶ್ ಮಾತನಾಡಿ, ಕಾಯಕ ಮಾಡಿಕೊಂಡು ಜೀವನ ಸಾಗಿಸುವ ಕೆಳವರ್ಗದ ಸಮುದಾಯಗಳು ದುಶ್ಚಟಕ್ಕೆ ಬಲಿಯಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿವೆ. ಅಲ್ಲದೇ ಸಮಾಜದಲ್ಲಿ ಯಾರಾದರೂ ಉನ್ನತ ಮಟ್ಟಕ್ಕೆ ಬೆಳೆಯುತ್ತಾರೆ ಎಂದರೆ ಅವರನ್ನು ಬೆಳೆಯಲು ಬಿಡದೇ ಏಡಿಗಳಂತೆ ಕಾಲು ಎಳೆಯುವ ಕೆಲಸ ಮಾಡುತ್ತಾರೆ. ಇದು ನಿಲ್ಲಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಕಾರಣ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದು ಹೇಳಿದರು.

      ಮಹೋತ್ಸವದಲ್ಲಿ ಶ್ರೀ ಮಡಿವಾಳ ಮಾಚಿದೇವ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ನಾಗೇಂದ್ರಪ್ಪ, ಪತ್ರಕರ್ತ ಎಂ.ವೈ.ಸತೀಶ್, ಡೈಮಂಡ್ ಮಂಜುನಾಥ್, ಸಮಾಜದ ಮುಖಂಡ ಶಿವಾನಂದಪ್ಪ, ಜಿಲ್ಲಾ ಮಡಿವಾಳ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮಡಿವಾಳ, ಕಬಡ್ಡಿ ಕ್ರೀಡಾ ಪಟು ಎಂ.ಎಲ್.ಸ್ವಾತಿ ಇದ್ದರು. ಇದೇ ವೇಳೆ ನವೆಂಬರ್‍ನಲ್ಲಿ ಮಲೇಷಿಯಾದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಕುಂಬಳೂರು ಗ್ರಾಮದ ಸ್ವಾತಿ ಎಂ.ಎಲ್ ಇವರನ್ನು ಸನ್ಮಾನಿಸಲಾಯಿತು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link