ಶಿರಾ:
ಮಳೆ ಹೋಗಿ ಮುಗಿಲು ಸೇರಿದೆ, ನಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಜನ ಹಪಹಪಿಸುವಂತಹ ಪರಿಸ್ಥಿತಿ ನಿರ್ಮಾಣಗೊಳ್ಳುವ ಸಾದ್ಯತೆಗಳೇ ಹೆಚ್ಚಾಗಿರುವಾಗ ಅಧಿಕಾರಿಗಳಾದ ನೀವುಗಳು ಈ ಬಗ್ಗೆ ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಳ್ಳದೆ ಕೈಚೆಲ್ಲಿ ಕೂತಿದ್ದು ಪರಿಸ್ಥಿತಿ ಹೀಗೆಯೇ ಮುಂದುವರೆದರೆ ನಿಮ್ಮ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಶಾಸಕ ಬಿ.ಸತ್ಯನಾರಾಯಣ್ ಸಣ್ಣ ನೀರಾವರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪ್ರಸಂಗ ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆಯಿತು.
ಸೋಮವಾರದಂದು ಶಾಸಕ ಬಿ.ಸತ್ಯನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಕೈಗೊಳ್ಳಲಾಗಿತ್ತು. ಸದರಿ ಸಭೆಯು ಆರಂಭಗೊಂಡ ಕೂಡಲೆ ಸಣ್ಣ ನೀರಾವರಿ ಇಲಾಖೆಯ ಸಮಗ್ರ ಚಟುವಟಿಕೆ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕುರಿತು ಶಾಸಕರು ಸಮಗ್ರವಾದ ಮಾಹಿತಿ ಕೋರಿದರು.
ಶಿರಾ, ಕಳ್ಳಂಬೆಳ್ಳ ಕೆರೆಗೆ ಹೇಮಾವತಿಯ ನೀರನ್ನು ಪೂರೈಸಿಕೊಳ್ಳಲಾಗುತ್ತಿದ್ದು ಹರಿಯುವ ನೀರಿನ ಪ್ರಮಾಣ ಕಡಿಮೆಯಾದರೂ ಶಿರಾ ಕೆರೆಯನ್ನು ತುಂಬಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ತಾಲ್ಲೂಕಿನ ಸುಮಾರು 56 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವಾದಾಗಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಾದ ನೀವುಗಳೇ ಮಾಹಿತಿ ನೀಡಿದ್ದು ಈ ಸಮಸ್ಯೆಯ ನಿವಾರಣೆಗೆ ಯಾವ ಕ್ರಮ ಕೈಗೊಂಡಿದ್ದೀರಿ? ಎಂದು ಪ್ರಶ್ನಿಸಿದರು.
ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು 2017-18ರಲ್ಲಿ ಯಾವುದೇ ಕ್ರಿಯಾ ಯೋಜನೆಗೆ ಅನುದಾನ ಬಂದಿಲ್ಲ. ಈ ಹಿಂದೆ ನೂತನ 45 ಕೊಳವೆ ಬಾವಿ ಕೊರೆಯಲಾಗಿದ್ದು ಅವುಗಳಿಗೆ ಪಂಪು-ಮೋಟಾರ್ ಅಳವಡಿಸಬೇಕು ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದರಲ್ಲದೆ ಅನುದಾನ ಬರುತ್ತದೆ, ಕ್ರಮ ಕೈಗೊಳ್ಳಲಾಗುತ್ತದೆ, ಸಮಸ್ಯೆ ಇರುವ ಕಡೆ ಸಮಸ್ಯೆ ಬಗೆಹರಿಸುತ್ತೇನೆ ಎಂಬ ಅಧಿಕಾರಿಗಳ ಮಾತಿಗೆ ಕುಪಿತಗೊಂಡ ಜಿ.ಪಂ. ಅಧ್ಯಕ್ಷೆ ಶ್ರೀಮತಿ ಲತಾ ರವಿಕುಮಾರ್ ಸೇರಿದಂತೆ ಕೆಲ ಜಿ.ಪಂ. ಸದಸ್ಯರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ತಾಲ್ಲೂಕಿನ ಹುಲಿಕುಂಟೆ ಹೋಬಳಿಯಲ್ಲಿ ವ್ಯಾಪಕವಾದ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಭಾಗವೊಂದಕ್ಕೆ 25 ಕೊಳವೆ ಬಾವಿಗಳು ಬೇಕಿದೆ. ಕುರುಬರರಾಮನಹಳ್ಳಿಯಲ್ಲಿ ಓವರ್ ಹೆಡ್ ಟ್ಯಾಂಕ್ ಇದೆ ಆದರೆ ಈತನಕವೂ ಪೈಪ್‍ಲೈನ್ ವ್ಯವಸ್ಥೆ ಸರಿಪಡಿಸಲು ಆಗಿಲ್ಲ. ಬರಗೂರಿನಲ್ಲೂ ನೀರಿನ ಸಮಸ್ಯೆ ಇದ್ದು ಅವಶ್ಯವಿದ್ದೆಡೆ ಹೆಚ್ಚಿನ ಕೊಳವೆ ಬಾವಿಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಎಂದು ಜಿ.ಪಂ. ಸದಸ್ಯ ರಾಮಕೃಷ್ಣ ಹೇಳಿದರು.
ಗ್ರಾಮಗಳಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿದ ಕೂಡಲೇ ಪೈಪ್‍ಲೈನ್, ಕೊಳವೆ ಬಾವಿ, ವಿದ್ಯುತ್ ಸಂಪರ್ಕ ಎಲ್ಲವನ್ನೂ ಸಿದ್ಧತೆ ಮಾಡಿಕೊಳ್ಳದೆ ಕೇವಲ ಟ್ಯಾಂಕ್ ನಿರ್ಮಿಸಿ ಕೈತೊಳೆದುಕೊಂಡರೆ ಪ್ರಯೋಜನವಾದರೂ ಏನು?. ಇಂತಹ ಹತ್ತಾರು ನಿದರ್ಶನಗಳು ತಾಲ್ಲೂಕಿನಲ್ಲಿದ್ದು ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ ಕೈಚೆಲ್ಲಿ ಕೂತಿದೆ ಎಂದು ಸ್ಥಾಯಿ ಸಮಿತಿಯ ಅಧ್ಯಕ್ಷ ತಿಮ್ಮಣ್ಣ ಆರೋಪಿಸಿದರು.
ಬರ ಪರಿಹಾರದ ಸಿದ್ಧತೆ:
ತಾಲ್ಲೂಕಿನಲ್ಲಿ ಚದುರಿದಂತೆ ಮಳೆಯಾದ ಸಂದರ್ಬದಲ್ಲೂ ರೈತರು 21450 ಹೆಕ್ಟೇರ್ ಬಿತ್ತನೆ ಮಾಡಿದ್ದಾರೆ. ಕೇವಲ 523 ಮಿ.ಮೀ. ಮಳೆ ಈವರೆಗೆ ಬಂದಿದ್ದು ಜೂನ್‍ನಲ್ಲಿ ಹೆಚ್ಚು ಮಳೆ ಬಂದ ನಂತರ ಕಳೆದ 3 ತಿಂಗಳಿಂದಲೂ ಮಳೆಯೇ ಸರಿಯಾಗಿ ಆಗಿಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕ ರಂಗನಾಥ್ ಸಭೆಗೆ ಮಾಹಿತಿ ನೀಡಿದರು.
ತಾಲ್ಲೂಕಿನ ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ಬರ ಪರಿಹಾರದ ಜೆಂಟಿ ಸರ್ವೇ ಮಾಡಲಾಗಿದ್ದು ಈ ಪೈಕಿ 14 ಕೋಟಿ 55 ಲಕ್ಷ ರೂಗಳ ಬರ ಪರಿಹಾರದ ಅಂದಾಜನ್ನು ತಯಾರಿಸಿ ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ. ಹಿಂಗಾರಿ ಬಿತ್ತನೆಗಾಗಿ ಜೋಳ, ಕಡಲೆ ಸೇರಿದಂತೆ ವಿವಿಧ ಧಾನ್ಯಗಳ ಬಿತ್ತನೆ ಬೀಜಗಳನ್ನು ಸಂಗ್ರಹಿಸಿಡಲಾಗಿದೆ ಎಂದು ಕೃಷಿ ಅಧಿಕಾರಿ ಹೇಳಿದರು.
ಪಶುಭಾಗ್ಯ ನೆನೆಗುದಿಗೆ:
ತಾಲ್ಲೂಕಿನಲ್ಲಿ ಕಳೆದ 217-18ನೇ ಸಾಲಿನಲ್ಲಿ ಪಶುಭಾಗ್ಯ ಯೋಜನೆಯಡಿಲ್ಲಿ 275 ಮಂದಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಸದರಿ ಪಟ್ಟಿಯನ್ನು ಹಾಗೂ ಸಬ್ಸಿಡಿ ಹಣವನ್ನು ಒಂದೇ ಬ್ಯಾಂಕಿಗೆ ನೀಡಲಾದ ಪರಿಣಾಮ ಸದರಿ ಬ್ಯಾಂಕು ಸಾಲ ಮಂಜೂರು ಮಾಡುವಲ್ಲಿ ವಿಳಂಭ ಮಾಡಿದೆ ಈ ಕಾರಣದಿಂದ ಫಲಾನುಭವಿಗಳ ವ್ಯಾಪ್ತಿಯ ಬ್ಯಾಂಕುಗಳಿಗೆ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಶು ಇಲಾಖೆಯ ಅಧಿಕಾರಿ ರಂಗನಾಥ್ ಹೇಳಿದರು.
ಮುಂಬರುವ ದಿನಗಳು ಕಡು ಬೇಸಿಗೆಯ ದಿನಗಳಾಗಲಿದ್ದು ಈ ಕೂಡಲೇ ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ. ಸರ್ಕಾರದಿಂದ ಅನುದಾನ ಬರುವುದನ್ನೇ ಕಾಯುತ್ತಾ ಕೂತರೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವುದಿಲ್ಲ. ಈ ಕೂಡಲೇ ಟಾಸ್ಕ್‍ಪೋರ್ಸ್ ಅಡಿಯಲ್ಲಿ ಮುಂದಿನ ಕ್ರಮಗಳನ್ನು ಕೈಗೊಳ್ಳಿ ಎಂದು ಶಾಸಕರು ಸಲಹೆ ನೀಡಿದರು.
ಗೋಶಾಲೆ ಆರಂಭಕ್ಕೆ ಒತ್ತಾಯ:
ಮಳೆ ಸಮರ್ಪಕವಾಗಿ ಬಾರದ ಪರಿಣಾಮ ತಾಲ್ಲೂಕಿನಲ್ಲಿ ರಾಸುಗಳಿಗೆ ಮೇವಿನ ಅಭಾವ ತಲೆದೋರಲಿದ್ದು ಈ ಕೂಡಲೇ ಗೋಶಾಲೆ ಆರಂಭಿಸಲು ಕ್ರಮ ಕೈಗೊಳ್ಳುವಂತೆ ತಾ.ಪಂ. ಉಪಾಧ್ಯಕ್ಷ ರಂಗನಾಥಗೌಡ ಸಲಹೆ ನೀಡಿದರು. ರೈತರಿಗೆ ಮೇವಿನ ಬೀಜಗಳನ್ನು ಬಿತ್ತಲು ನೀಡಲಾಗಿದ್ದು. ಈ ನಡುವೆ ಒಂದೆರಡು ತಿಂಗಳಿಗಾಗುವಷ್ಟು ಮೇವನ್ನು ರೈತರು ಸಂಗ್ರಹಿಸಿಟ್ಟುಕೊಂಡಿದ್ದಾರೆ. ನಂತರ ಮೇವಿನ ಅಭಾವ ತಲೆದೋರಲಿದ್ದು ಇದಕ್ಕೆ ಗೋಶಾಲೆ ಆರಂಭಿಸಲು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಪಶುಪಾಲನಾ ಇಲಾಖಾಧಿಕಾರಿ ಸಭೆಗೆ ತಿಳಿಸಿದರು.
ಯಾವುದೇ ಪ್ರಗತಿ ಪರಿಶೀಲನಾ ಸಭೆಗೆ ಆಯಾ ಇಲಾಖೆಯ ಮೇಲಾಧಿಕಾರಿಗಳೇ ಪಾಲ್ಗೊಳ್ಳಬೇಕೆಂಬ ಕಟ್ಟುನಿಟ್ಟಿನ ಆದೇಶವಿದ್ದಾಗ್ಯೂ ಮೇಲಾಧಿಕಾರಿಗಳು ಬಾರದೆ ತಮ್ಮ ಕೆಳಗಿನ ಮತ್ತೋರ್ವ ಅಧಿಕಾರಿಯನ್ನು ಸಭೆಗೆ ಕಳುಹಿಸಿ ಇಕ್ಕಟ್ಟಿನ ಸ್ಥಿತಿಯಿಂದ ನುಣುಚಿಕೊಳ್ಳುವ ಪರಿಪಾಠ ಇಲ್ಲಿನ ತಾ.ಪಂ. ಸಭೆಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ.
ಸೋಮವಾರ ನಡೆದ ಸಭೆಯಲ್ಲೂ ಕೂಡಾ ಇಲಾಖೆಯ ಮೇಲಾಧಿಕಾರಿಗಳು ಬಾರದೆ ಅದೇ ಇಲಾಖೆಯ ಮತ್ತೋರ್ವ ಅಧಿಕಾರಿಗಳು ಸಭೆಯಲ್ಲಿ ಬಂದು ಕೂತಿದ್ದರು. ಶಾಸಕರು ಸಭೆಯನ್ನು ನಡೆಸುವ ಮದ್ಯೆ ಬಹುತೇಕ ಇಲಾಖಾಧಿಕಾರಿಗಳು ಗೈರಾಗಿ ಮತ್ತೋರ್ವ ಅಧಿಕಾರಿಯನ್ನು ತಮ್ಮ ಪರವಾಗಿ ಕಳಿಸಿದ್ದು ಬೆಳಕಿಗೆ ಬಂದಾಗ ಶಾಸಕರು ಕೆಂಡಾ ಮಂಡಲವಾದರು. ಆರೋಗ್ಯ ಇಲಾಖೆ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ಅವರ ಪರವಾಗಿ ಬಂದು ಕೂತ ಇಲಾಖಾಧಿಕಾರಿಗಳನ್ನು ಶಾಸಕರು ಸಭೆಯಿಂದ ಹೊರಗೆ ಕಳಿಸುವ ಮೂಲಕ ಸದರಿ ಸಭೆಯಲ್ಲಿ ಹೊಸ ಮುನ್ನುಡಿಯೊಂದನ್ನು ಬರೆದು ಖುದ್ದು ಆಯಾ ಇಲಾಖೆಯ ಅಧಿಕಾರಿಗಳೇ ಮುಂದಿನ ಸಭೆಯಲ್ಲಿ ಹಾಜರಾಗಬೇಕು. ಹಾಜರಾಗದಿದ್ದಲ್ಲಿ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದೆಂದು ಸೂಚನೆ ನೀಡಿದರು.
ಜಿ.ಪಂ. ಅಧ್ಯಕ್ಷೆ ಶ್ರೀಮತಿ ಲತಾ ರವಿಕುಮಾರ್, ತಾ.ಪಂ. ಅಧ್ಯಕ್ಷೆ ಶ್ರೀಮತಿ ಹಂಸವೇಣಿ ಶ್ರೀನಿವಾಸ್, ತಾ.ಪಂ. ಉಪಾಧ್ಯಕ್ಷ ರಂಗನಾಥಗೌಡ, ಸ್ಥಾಯಿ ಸಮಿತಿಯ ಅಧ್ಯಕ್ಷ ತಿಮ್ಮಣ್ಣ, ಜಿ.ಪಂ. ಸದಸ್ಯರಾದ ರಾಮಕೃಷ್ಣ, ಜಯಪ್ರಕಾಶ್, ಶ್ರೀಮತಿ ಗಿರಿಜಮ್ಮ ಶ್ರೀರಂಗಪ್ಪ ಯಾದವ್, ಲಕ್ಷ್ಮೀದೇವಮ್ಮ ನರಸಿಂಹಮೂರ್ತಿ, ತಹಶೀಲ್ದಾರ್ ಸಿದ್ಧಲಿಂಗ ರೆಡ್ಡಿ, ತಾ.ಪಂ. ಇ.ಓ. ಮೋಹನ್ ಸೇರಿದಂತೆ ಅನೇಕ ಪ್ರಮುಖರು ಸಭೆಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ