ಚಿತ್ರದುರ್ಗ:
ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್‍ಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಕೆಲಸ ಮಾಡುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿ.ಡಿ.ಓ.ಗಳಿಗೆ ತಾಲೂಕು ಪಂಚಾಯಿತಿ ನೂತನ ಅಧ್ಯಕ್ಷ ಡಿ.ಎಂ.ಲಿಂಗರಾಜ್ ಸೂಚಿಸಿದರು.
ತಾಲೂಕಿನ 38 ಗ್ರಾ.ಪಂ.ಅಧ್ಯಕ್ಷರು, ಪಿ.ಡಿ.ಓ.ಗಳು ಹಾಗೂ ತಾ.ಪಂ.ಸಿಬ್ಬಂದಿಗಳಿಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಪ್ರಥಮ ಸಭೆ ನಡೆಸಿದ ಅಧ್ಯಕ ಡಿ.ಎಂ.ಲಿಂಗರಾಜ್ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಭೀಕರ ಬರಗಾಲ ಎದುರಾದಾಗಲೆಲ್ಲ ಟ್ಯಾಂಕರ್‍ಗಳಲ್ಲಾದರೂ ಜನರಿಗೆ ಕುಡಿಯುವ ನೀರನ್ನು ಪೂರೈಸಲಾಗಿದೆ. ಎಲ್ಲಾ ಸೌಲಭ್ಯಗಳನ್ನು ಪಂಚಾಯಿತಿ ನೀಡಿದಾಗ ಗ್ರಾಮಸ್ಥರ ಮನವೊಲಿಸಿ ಕಂದಾಯ ವಸೂಲಿ ಮಾಡಿ ಎಂದು ಅಧ್ಯಕ್ಷರು ಮತ್ತು ಪಿ.ಡಿ.ಓ.ಗಳಿಗೆ ತಾಕೀತು ಮಾಡಿದರು.
ಮಳೆ-ಬೆಳೆಯಿಲ್ಲದೆ ಬರಗಾಲವಿರುವುದರಿಂದ ಕಡ್ಡಾಯವಾಗಿ ಕಂದಾಯ ವಸೂಲಿ ಮಾಡಬೇಡಿ. ಬದಲಾಗಿ ಗ್ರಾಮೀಣ ಜನರ ಮನವೊಲಿಸಿ ವಿಶ್ವಾಸಕ್ಕೆ ತೆಗೆದುಕೊಂಡು ಕಂದಾಯ ಸಂಗ್ರಹಿಸಿ. ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಕುಡಿಯುವ ನೀರು ಪೂರೈಸಿರುವ ಬಿಲ್ ಕೊಟ್ಟಿಲ್ಲ ಎಂದು ಸಭೆಯಲ್ಲಿ ದೂರು ಹೇಳುವುದು ಸಹಜ. ಕೇವಲ ಎರಡು ಪಂಚಾಯಿತಿ ಕೊಟ್ಟಿಲ್ಲ ಅಂದರೆ 36 ಪಂಚಾಯಿತಿಗಳ ಬಿಲ್ ಪೆಂಡಿಂಗ್ ಇದೆ. ಇದರಿಂದ ಬೇರೆ ಪಂಚಾಯಿತಿಗಳಿಗೆ ತೊಂದರೆಯಾಗುತ್ತಿರುವುದನ್ನು ಸರಿಪಡಿಸಿಕೊಳ್ಳಿ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ತಾ.ಪಂ.ಅಧ್ಯಕ್ಷರು ಹಾಗೂ ನನ್ನ ಗಮನಕ್ಕೆ ತಾರದೆ ಯಾರು ಟ್ಯಾಂಕರ್‍ಗಳ ಮೂಲಕ ನೀರು ಪೂರೈಸಬೇಡಿ. ಕುಡಿಯುವ ನೀರು ಪೂರೈಕೆ ಜವಾಬ್ದಾರಿಯನ್ನು ವಾಟರ್ ಸಪ್ಲೈ ಇಂಜಿನಿಯರ್‍ಗೆ ವಹಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಟ್ಯಾಂಕರ್‍ನಿಂದ ನೀರು ಪೂರೈಸಿರುವುದಕ್ಕೆ ಮುಂದೆ ಜಿ.ಪಿ.ಎಸ್.ಫೋಟೋ ಕಡ್ಡಾಯವಾಗಿರಬೇಕು. ಇಲ್ಲದಿದ್ದರೆ ಬಿಲ್ ಪಾವತಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣನಾಯ್ಕ ನೀರು ಪೂರೈಕೆಗೆ ಸಂಬಂಧಿಸಿದಂತೆ ಸದ್ಯದಲ್ಲಿಯೇ ಅರ್ಧ ಹಣವನ್ನು ಬಿಡುಗಡೆ ಮಾಡಲಾಗುವುದು. ಬಾಕಿ ಹಣವನ್ನು ನಂತರ ನೀಡುವುದಾಗಿ ಭರವಸೆ ಕೊಟ್ಟರು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲವು ಗ್ರಾ.ಪಂ.ಗಳಲ್ಲಿ ಕನಿಷ್ಟ ಮಾನವ ದಿನಗಳ ಕೂಲಿ ಕೆಲಸವನ್ನು ನೀಡುತ್ತಿಲ್ಲ. ಇಡೀ ರಾಜ್ಯದಲ್ಲಿಯೇ ಚಿತ್ರದುರ್ಗ ಅತ್ಯಂತ ಹಿಂದಿದೆ. ಗ್ರಾ.ಪಂ.ಅಧ್ಯಕ್ಷರು ಹಾಗೂ ಪಿ.ಡಿ.ಓ.ಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಎನ್.ಆರ್.ಇ.ಜಿ.ಯಲ್ಲಿ ಐದು ಲಕ್ಷ ಮಾನವ ದಿನಗಳಾಗಬೇಕು ಎಂದು ಎಚ್ಚರಿಸಿದರು.
ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿಯೂ ಬಿಲ್ ಕಲೆಕ್ಟರ್‍ಗಳದ್ದೇ ದೊಡ್ಡ ಸಮಸ್ಯೆ ಎಂದು ಬಹುತೇಕ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು ಸಭೆಯಲ್ಲಿ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಾಗ ಕೂನಬೇವು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆಲವು ಪಂಚಾಯಿತಿಗಳಲ್ಲಿ ಪಿ.ಡಿ.ಓ., ಅಧ್ಯಕ್ಷರುಗಳನ್ನು ಬದಲಾಯಿಸುವಷ್ಟು ಪ್ರಭಾವಿ ಬಿಲ್‍ಕಲೆಕ್ಟರ್‍ಗಳಿದ್ದಾರೆ ಎಂದು ಧ್ವನಿಗೂಡಿಸಿದರು.
ಗ್ರಾಮದಲ್ಲಿ ಯಾರು ಪಂಚಾಯಿತಿಗೆ ಕಂದಾಯ ಕಟ್ಟುವುದಿಲ್ಲ. ಮನೆ ಬಾಗಿಲಿಗೆ ಹೋಗಿ ಕೇಳಿದರೆ ನಿಮ್ಮ ಪಂಚಾಯಿತಿಯಿಂದ ನಮಗೆ ಯಾವ ಸೌಲಭ್ಯ ನೀಡಿದ್ದೀರೆಂದು ನಿಮಗೆ ಕಂದಾಯ ಪಾವತಿಸಬೇಕು ಎಂದು ಪಂಚಾಯಿತಿಯ ಸಿಬ್ಬಂದಿಗಳನ್ನು ದಬಾಯಿಸಿ ಕಳಿಸುತ್ತಿದ್ದಾರೆ. ಮೊಬೈಲ್‍ಗೆ ಕರೆನ್ಸಿ ಹಾಕಿಕಿಸಿಕೊಳ್ತಾರೆ, ಬೈಕ್‍ಗಳಿಗೆ ಪೆಟ್ರೋಲ್ ಹಾಕಿಸಲು ಕೈಯಲ್ಲಿ ಕಾಸಿದೆ.
ಎಲ್ಲಾ ರೀತಿಯ ಎಂಜಾಯ್ ಮಾಡಲು ಯಾವ ಬರಗಾಲವೂ ಇಲ್ಲ. ಅದೇ ಗ್ರಾಮ ಪಂಚಾಯಿತಿಗೆ ಕಂದಾಯ ಕಟ್ಟಿ ಎಂದು ಅಂಗಲಾಚಿದರೂ ಯಾರು ಕೈಯಿಂದ ಕಾಸು ಬಿಚ್ಚುವುದಿಲ್ಲ. ಬಿಲ್ ಕಲೆಕ್ಟರ್‍ಗಳು ನಮ್ಮ ಹಿಡಿತದಲ್ಲಿಲ್ಲ ಎಂದು ದೂರಿದಾಗ ಬಿಲ್ ಕಲೆಕ್ಟ್‍ರ್‍ಗಳು ಆಡಿದ್ದೆ ಆಟ. ಹೂಡಿದ್ದೆ ಲಗ್ಗೆ ಎನ್ನುವುದಾದರೆ ಅಧ್ಯಕ್ಷರು, ಪಿ.ಡಿ.ಓ.ಗಳು ಇರುವುದು ಏಕೆ. ತಾಲೂಕು ಪಂಚಾಯಿತಿಯಾದರೂ ಏಕಿರಬೇಕು ಎಂದು 38 ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳ ವಿರುದ್ದ ತಾ.ಪಂ.ಅಧ್ಯಕ್ಷರು ಗರಂ ಆದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








