ಕನಕದಾಸರ ಕೀರ್ತನೆಗಳು ಪ್ರೇರಣಾ ಶಕ್ತಿಯಾಗಿವೆ : ಶಾಸಕ ಟಿ.ರಘುಮೂರ್ತಿ.

ಚಳ್ಳಕೆರೆ

    ಸಮಾಜದಲ್ಲಿ ಆಳಾವಾಗಿ ಬೇರೂರಿದ್ದ ಜಾತಿ ಪದ್ದತಿ, ಅಸಮಾನತೆಗೆ ತಮ್ಮದೇಯಾದ ಕೀರ್ತನೆಗಳ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದವರಲ್ಲಿ ಕನಕದಾಸರು ಅಗ್ರಗಣ್ಯರು. ಅವರ ಕೀರ್ತನೆಗಳು ಎಲ್ಲಾ ವರ್ಗದ ಜನರಲ್ಲಿ ಹೊಸ ಆತ್ಮವಿಶ್ವಾಸವನ್ನು ಹುಟ್ಟು ಹಾಕಿ ಬದಲಾವಣೆಯತ್ತ ಹೆಜ್ಜೆ ಹಾಕಲು ಸಹಕಾರಿಯಾಯಿತು ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

    ಅವರು, ಶುಕ್ರವಾರ ಇಲ್ಲಿನ ಕುರುಬರ ಹಾಸ್ಟಲ್ ಆವರಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಕುರುಬ ಸಮಾಜದ ಹಲವಾರು ಸಂಘಟನೆಗಳು ಹಮ್ಮಿಕೊಂಡಿದ್ದ 532ನೇ ಕನಕ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಕುರುಬ ಸಮಾಜಕ್ಕೆ ರಾಜಕೀಯ ಶಕ್ತಿಯನ್ನು ತುಂಬಿದ ಧೀಮಂತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಕನಕದಾಸರ ಆದರ್ಶಗಳ ಪರಿಪಾಲನೆಯಲ್ಲಿ ಯಶಸ್ವಿಯಾಗಿದ್ಧಾರೆ.

    ಅವರೂ ಸಹ ತಮ್ಮ ಅಧಿಕಾರದ ಅವಧಿಯಲ್ಲಿ ಯಾವುದೇ ಜಾತಿಗಳಿಗೆ ಮನ್ನಣೆ ನೀಡದೆ ಸಮಾನತೆಯನ್ನೇ ಆಧಾರವಾಗಿಟ್ಟುಕೊಂಡು ಶ್ರಮಿಸಿದವರು. ಅವರ ಅವಧಿಯಲ್ಲಿ ನಗರದಲ್ಲಿ ಕನಕ ಭವನ ನಿರ್ಮಾಣಕ್ಕೆ 2 ಕೋಟಿ ಹಣ ಮಂಜೂರಾಗಿತ್ತು. ಈಗಾಗಲೇ 1 ಕೋಟಿ ಬಿಡುಗಡೆಯಾಗಿ, ಕಾಮಗಾರಿ ಅಪೂರ್ಣವಾಗಿದ್ದು, ಸರ್ಕಾರದೊಂದಿಗೆ ಚರ್ಚಿಸಿ 1 ಕೋಟಿ ಹಣವನ್ನು ಯಾವುದೇ ಮೂಲದಿಂದಾದರು ಬಿಡುಗಡೆಗೊಳಿಸಿ ಬರುವ ವರ್ಷ ಕನಕಜಯಂತಿಯನ್ನು ನೂತನ ಕನಕ ಭವನದಲ್ಲಿ ಆಚರಿಸುವಂತೆ ವ್ಯವಸ್ಥೆ ಮಾಡಲಾಗುವುದು ಎಂಬ ಭರವಸೆ ನೀಡಿದರು.

   ರೇವಣಸಿದ್ದೇಶ್ವರ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆರ್.ಮಲ್ಲೇಶಪ್ಪ ಮಾತನಾಡಿ, ಕನಕ ಭವನ ನಿರ್ಮಾಣದ ಕಾಮಗಾರಿ ಚುರುಕು ಗೊಳಿಸಬೇಕು . ಇಡೀ ಸಮುದಾಯ ಶಾಸಕರಿಗೆ ಶಕ್ತಿ ತುಂಬಲು ಸಿದ್ದವಿದೆ. ಕಳೆದ ಹಲವಾರು ವರ್ಷಗಳಿಂದ ನಮ್ಮ ಸಮುದಾಯ ಶಾಸಕರಿಗೆ ಹೆಚ್ಚು ಬೆಂಬಲ ನೀಡುತ್ತಾ ಬಂದಿದೆ. ಸಮಾಜದ ಹಿರಿಯರು ಕುರುಬ ಸಮಾಜಕ್ಕೆ ಉತ್ತಮ ಮೌಲ್ಯವುಳ್ಳ ಆಸ್ತಿ ಮಾಡಿದ್ದು ಅದರ ಸಂರಕ್ಷಣೆಯ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

    ವೃತ್ತ ನಿರೀಕ್ಷ ಈ.ಆನಂದ ಮಾತನಾಡಿ, ಮಕ್ಕಳಲ್ಲಿ ಸಂಸ್ಕಾರವನ್ನು ತುಂಬುವಂತಹ ಕಾರ್ಯ ನಡೆಯಬೇಕು. ಯಾವ ವಿದ್ಯಾರ್ಥಿ ಶೈಕ್ಷಣಿಕವಾಗಿ ಪರಿವರ್ತನೆ ಹೊಂದುತ್ತಾನೋ ಅಂತಹ ವಿದ್ಯಾರ್ಥಿ ಸಮಾಜದ ಬದಲಾವಣೆಗೆ ಶ್ರಮವಹಿಸುತ್ತಾನೆ. ಮನೆಯಲ್ಲಿ ಹಿರಿಯರು ಇದ್ದರೆ ಮಾತ್ರ ರಾಮಾಯಣ, ಮಹಾಭಾರತ, ಕನಕದಾಸ ವಾಣಿಯನ್ನು ತಿಳಿಸಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹಿರಿಯರಿಂದ ಮಾರ್ಗದರ್ಶನ ಪಡೆಯುವವರ ಸಂಖ್ಯೆ ಕ್ಷೀಣಿಸಿ ಸಂಸ್ಕಾರ ವಂಚಿತರಾಗುತ್ತಿದ್ದೇವೆ ಎಂದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಕತ್ತಲು ತುಂಬಿದ ಜಗತ್ತಿಗೆ ಬೆಳಕು ಮಾತ್ರ ನ್ಯಾಯವನ್ನು ಒದಗಿಸಬಲ್ಲದು. ಅದೇ ರೀತಿ ಸಮಾಜದಲ್ಲಿ ತುಂಬಿದ್ದ ಅಜ್ಞಾನ ಹಾಗೂ ಮೂಡ ನಂಬಿಕೆಗಳಿಗೆ ಜ್ಞಾನದ ಸ್ಪರ್ಧವನ್ನು ನೀಡಿದವರು ಕನಕದಾಸರು ಎಂದರು.

     ಉಪನ್ಯಾಸ ನೀಡಿದ ಉತ್ಸವ ಸಮಿತಿಯ ಅಧ್ಯಕ್ಷ ಪ್ರೊ.ಎಂ.ಶಿವಲಿಂಗಪ್ಪ ಮಾತನಾಡಿ, 500 ವರ್ಷಗಳ ಹಿಂದೆಯೇ ಕನಕದಾಸರು ಈ ಸಮಾಜದ ಬಗ್ಗೆ ಸಕರಾತ್ಮಕ ಚಿಂತನೆಯನ್ನು ನಡೆಸಿದ್ದರು. ಸಾಹಿತ್ಯದ ಮೂಲಕ ಸಮಾಜದ ಪರಿವರ್ತನೆಯಲ್ಲಿ ಯಶಸ್ಸನ್ನು ಕಂಡವರು. ಜ್ಞಾನ ಮತ್ತು ಸಾಹಿತ್ಯವನ್ನು ಸಮಾಜದ ಹಿತಕ್ಕಾಗಿ ಉತ್ತಮವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು. ಸ್ವಾರ್ಥರಹಿತ ಸಮಾಜದ ನಿರ್ಮಾಣಕ್ಕೆ ತಮ್ಮ ಬದುಕನ್ನೇ ಮೀಸಲಿಟ್ಟವರು ಕನಕದಾಸರು. ಅವರ ಮೂರು ಕೃತಿಗಳು ಸಮಾಜದ ಪರಿವರ್ತೆನೆಗೆ ನಾಂದಿಯಾದವು ಎಂದರು.

      ಇದೇ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಶೇ.85ರಷ್ಟು ಅಂಕಗಳಿಸಿದ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕನಕ ನೌಕರರ ಸಂಘದ ವತಿಯಿಂದ ಪ್ರತಿಭಾಪುರಸ್ಕಾರವನ್ನು ಹಮ್ಮಿಕೊಂಡಿದ್ದು, ಶಾಸಕ ಟಿ.ರಘುಮೂರ್ತಿ ಹಾಗೂ ಗಣ್ಯರು ನಡೆಸಿಕೊಟ್ಟರು. ಕಾರ್ಯಕ್ರಮಕ್ಕೂ ಮುನ್ನ ಶಾಸಕ ಟಿ.ರಘುಮೂರ್ತಿ ಕನಕ ಜಯಂತಿ ಅದ್ದೂರಿ ಮೆರವಣಿಗೆಗೆ ಇಲ್ಲಿನ ಕಂಬಳಿ ಮಾರುಕಟ್ಟೆಯಲ್ಲಿ ಚಾಲನೆ ನೀಡಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಸಮಾಜದ ನೂರಾರು ಜನರು ಆಕರ್ಷಕ ಮೆರವಣಿಗೆ ನಡೆಸಿದರು.

      ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ, ಸದಸ್ಯರಾದ ಉಮಾಜನಾರ್ಥನ್, ರಂಜಿತಾ, ಜಿ.ವೀರೇಶ್, ಕೆ.ತಿಪ್ಪೇಸ್ವಾಮಿ, ಎಂ.ಒ.ಶಿವಮ್ಮ, ನಗರಸಭಾ ಸದಸ್ಯರಾದ ಕವಿತಾ, ಸುಮಾ, ಎಂ.ಜೆ.ರಾಘವೇಂದ್ರ, ರಮೇಶ್‍ಗೌಡ, ಎಂ.ಸಾವಿತ್ರಿ, ಸಮಾಜದ ಮುಖಂಡರಾದ ದೊಡ್ಡ ಉಳ್ಳಾರ್ತಿ ಕರಿಯಣ್ಣ, ಬಿ.ಎಸ್.ಅನುಸೂಯಮ್ಮ, ಸೂರನಹಳ್ಳಿ ಕೆ.ಜಗದೀಶ್, ಎಂ.ಪಾತಲಿಂಗಪ್ಪ, ಚಂದ್ರಶೇಖರ್, ನಾಗಲಕ್ಷ್ಮಮ್ಮ ಮುಂತಾದವರು ಉಪಸ್ಥಿತರಿದ್ದರು. ಪುಟ್ಟ ಬಾಲಕ ಶಶಾಂಕ್ ಕನಕವೇಷದಾರಿಯಾಗಿ ಗಮನ ಸೆಳೆದರು. ಶಿಕ್ಷಕ ಸುಭ್ರಮಣ್ಯಶಾಸ್ತ್ರಿ ನಾಡಗೀತೆ ಹಾಡಿದರು. ಕನಕ ನೌಕರರ ಸಂಘದ ಅಧ್ಯಕ್ಷ ಎಲ್.ರುದ್ರಮುನಿ ಸ್ವಾಗತಿಸಿದರು, ಶಿಕ್ಷಕ ಸದಾಶಿವ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap